ಷೇರುಪೇಟೆ ಮೇಲೆ ಮಾರಕ ಕೊರೋನಾ ದಾಳಿ

By Kannadaprabha NewsFirst Published Feb 29, 2020, 7:37 AM IST
Highlights

ಕೊರೋನಾ ಸೋಂಕು ಜಾಗತಿಕ ಆರ್ಥಿಕ ಹಿಂಜರಿತಕ್ಕೆ ಕಾರಣವಾಗಬಹುದು ಎಂಬ ಆತಂಕದ ನಡುವೆಯೇ, ಭಾರತ ಸೇರಿದಂತೆ ಜಗತ್ತಿನ ಬಹುತೇಕ ಷೇರುಪೇಟೆಗಳು ದಾಖಲೆ ಪ್ರಮಾಣದ ಕುಸಿತ ಕಂಡಿವೆ. 

ಮುಂಬೈ (ಫೆ.29): ವಿಶ್ವದಾದ್ಯಂತ 2900ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿರುವ ಕೊರೋನಾ ಸೋಂಕು ಜಾಗತಿಕ ಆರ್ಥಿಕ ಹಿಂಜರಿತಕ್ಕೆ ಕಾರಣವಾಗಬಹುದು ಎಂಬ ಆತಂಕದ ನಡುವೆಯೇ, ಭಾರತ ಸೇರಿದಂತೆ ಜಗತ್ತಿನ ಬಹುತೇಕ ಷೇರುಪೇಟೆಗಳು ಶುಕ್ರವಾರ ದಾಖಲೆ ಪ್ರಮಾಣದ ಕುಸಿತ ಕಂಡಿವೆ. ಹೂಡಿಕೆದಾರರ ಸಂಪತ್ತು ಕ್ಷಣಾರ್ಧದಲ್ಲಿ ಭಾರೀ ಪ್ರಮಾಣದಲ್ಲಿ ಕರಗಿ ಹೋಗಿದೆ.

ಶುಕ್ರವಾರ ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್‌ 1448 ಅಂಕಗಳ ಕುಸಿತ ಕಂಡು 38,297 ಅಂಕಗಳಲ್ಲಿ ಮುಕ್ತಾಯವಾಗಿದೆ. ಇದು ಮುಂಬೈ ಷೇರುಪೇಟೆಯ ಇತಿಹಾಸದಲ್ಲೇ ಎರಡನೇ ದೈನಂದಿನ ಗರಿಷ್ಠ ಇಳಿಕೆಯಾಗಿದೆ. ಈ ಹಿಂದೆ 2015ರ ಆ.24ರಂದು 1624 ಅಂಕಗಳ ಕುಸಿತ ಕಂಡಿದ್ದು ಈವರೆಗಿನ ದಾಖಲೆಯಾಗಿದೆ. ಒಂದು ಹಂತದಲ್ಲಿ ಸೆನ್ಸೆಕ್ಸ್‌ 1767 ಅಂಕಗಳವರೆಗೆ ಕುಸಿತ ಕಂಡಿತ್ತಾದರೂ, ಕೊನೆಗೆ ಅಲ್ಪ ಚೇತರಿಕೆ ಕಂಡು 1448 ಅಂಕಗಳಲ್ಲಿ ಮುಕ್ತಾಯವಾಗಿ ಹೂಡಿಕೆದಾರರಲ್ಲಿ ಕಣ್ಣೀರು ತರಿಸಿದೆ. ಇನ್ನು ನಿಫ್ಟಿಕೂಡ 431 ಅಂಕಗಳ ಕುಸಿತ ಕಂಡು 11201 ಅಂಕಗಳಲ್ಲಿ ಮುಕ್ತಾಯವಾಗಿದೆ. ಲೋಹ, ಮಾಹಿತಿ ತಂತ್ರಜ್ಞಾನ, ಕೈಗಾರಿಕೆ, ಇಂಧನ, ಹಣಕಾಸು, ಆಟೋಮೊಬೈಲ್‌, ಬ್ಯಾಂಕಿಂಗ್‌ ವಲಯದ ಷೇರುಗಳು ಭಾರೀ ಇಳಿಕೆ ಕಂಡಿವೆ.

37 ದೇಶಗಳಿಗೆ ವ್ಯಾಪಿಸಿದ ಕೊರೋನಾ...

ಮುಂಬೈ ಷೇರುಪೇಟೆಯಲ್ಲಿ ನೋಂದಾಯಿತವಾಗಿರುವ ಷೇರುಗಳ ಪೈಕಿ ಶುಕ್ರವಾರ 2011 ಷೇರುಗಳ ಮೌಲ್ಯ ಇಳಿಕೆ ಕಂಡರೆ, 456 ಕಂಪನಿಗಳ ಷೇರುಗಳು ಮಾರುಕಟ್ಟೆಯ ಸೆಳೆತವನ್ನೂ ಮೀರಿ ಮೇಲಕ್ಕೆ ಏರಿವೆ. 153 ಕಂಪನಿಗಳ ಷೇರು ಮೌಲ್ಯ ಯಥಾಸ್ಥಿತಿಯಲ್ಲಿದೆ.

5.45 ಲಕ್ಷ ಕೋಟಿ ಸಂಪತ್ತು ಮಾಯ:

ಸೆನ್ಸೆಕ್ಸ್‌ನ ಭಾರೀ ಇಳಿಕೆ ಕ್ಷಣಾರ್ಧದಲ್ಲಿ ಹೂಡಿಕೆದಾರರ ಸಂಪತ್ತನ್ನು 5.45 ಲಕ್ಷ ಕೋಟಿ ರು.ನಷ್ಟುಕರಗಿಸಿದೆ. ಶುಕ್ರವಾರ ಷೇರುಪೇಟೆ ಆರಂಭದ ವೇಳೆ ಷೇರುಪೇಟೆಯಲ್ಲಿ ನೊಂದಾಯಿತ ಎಲ್ಲಾ ಕಂಪನಿಗಳ ಷೇರುಗಳ ಮೌಲ್ಯ 1,52,40,024 ಕೋಟಿ ರು. ಇತ್ತು. ಮುಕ್ತಾಯದ ವೇಳೆಗೆ ಅದು 1,46,94,571 ಕೋಟಿ ರು.ಗೆ ಇಳಿದಿದೆ. ಇನ್ನು ಈ ವಾರದಲ್ಲಿ ಸೆನ್ಸೆಕ್ಸ್‌ ಒಟ್ಟಾರೆ 2872 ಅಂಕಗಳ ಇಳಿಕೆ ಕಂಡಿದೆ. ಈ ಅವಧಿಯಲ್ಲಿ ಹೂಡಿಕೆದಾರರ ಸಂಪತ್ತು 12 ಲಕ್ಷ ಕೋಟಿ ರು.ನಷ್ಟುಇಳಿದಿದೆ.

ರು. ಮೌಲ್ಯ 60 ಪೈಸೆ ಕುಸಿತ

ಮುಂಬೈ: ದೇಶೀಯ ಮಾರುಕಟ್ಟೆಯಲ್ಲಿ ಷೇರುಗಳ ನಿರಂತರ ಮಾರಾಟ ಹಾಗೂ ವಿದೇಶಿ ನಿಧಿಯ ಹೊರ ಹರಿವು ಪರಿಣಾಮ ಡಾಲರ್‌ ಎದುರು ರುಪಾಯಿ ಮೌಲ್ಯ 60 ಪೈಸೆಯಷ್ಟುಕುಸಿತ ಕಂಡಿದೆ. ಈ ಪರಿಣಾಮ ಪ್ರತಿ ಡಾಲರ್‌ ಎದುರು ರುಪಾಯಿ ಮೌಲ್ಯವು 72.21 ರು.ಗೆ ಇಳಿಕೆ ಕಂಡಿದೆ.

ಕಚ್ಚಾತೈಲ ದರ ಇಳಿಕೆ: ಇದೇ ವೇಳೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಪ್ರತಿ ಬ್ಯಾರಲ್‌ಗೆ ಶೇ.3.38ರಷ್ಟುಕುಸಿದು 49.98 ಡಾಲರ್‌ಗೆ ತಲುಪಿದೆ.

click me!