ಕೇವಲ 250 ರೂಪಾಯಿಗೆ ಕೆಲಸ ಮಾಡ್ತಿದ್ದ ಹುಡುಗ 25 ಸಾವಿರ ಕೋಟಿಗೆ ಒಡೆಯನಾಗಿದ್ದು ಹೇಗೆ?

By Santosh NaikFirst Published Oct 9, 2024, 8:35 PM IST
Highlights

ಷೇರು ಮಾರುಕಟ್ಟೆಯಲ್ಲಿ ಹಣ ಗಳಿಸುವುದಕ್ಕಿಂತ ಮುಖ್ಯವಾಗಿ ಅದರ ಮೇಲೆ ನಂಬಿಕೆ ಇಡುವುದು ಬಹಳ ಮುಖ್ಯ. ಷೇರು ಮಾರುಕಟ್ಟೆ ಮೇಲೆ ಇದ್ದ ನಂಬಿಕೆ ಹಾಗೂ ನಿಧಾನವಾಗಿ ಬೆಳೆದ ಆಸಕ್ತಿಯಿಂದ 17 ವರ್ಷದ ಹುಡುಗನೊಬ್ಬ ತನ್ನದೇ ಆದ ಬ್ರೋಕರೇಜ್‌ ಸಂಸ್ಥೆಯನ್ನು ತೆರೆದಿದ್ದು, ಮಾತ್ರವಲ್ಲದೆ ದೇಶದ ಅತ್ಯಂತ ಕಿರಿಯರ ಬಿಲಿಯನೇರ್‌ ಆದ ಸ್ಪೂರ್ತಿದಾಯಕ ಕಥೆ ಇದು.

ಬೆಂಗಳೂರು (ಅ.9): ಜೀವನದಲ್ಲಿ ಮುಂದೆ ಬರಲು ಮತ್ತು ಹಣ ಸಂಪಾದನೆ ಮಾಡಲೇಬೇಕು ಎಂದು ನಿರ್ಧಾರ ಮಾಡಿದ್ದವರಿಗೆ ಅದೃಷ್ಟ ಒಂದಲ್ಲಾ ಒಂದು ಸಮಯದಲ್ಲಿ ಖಂಡಿತವಾಗಿ ಕೈಹಿಡಿಯುತ್ತದೆ. ಬೆಂಗಳೂರಿನ 17 ವರ್ಷದ ಹುಡುಗನೊಬ್ಬನ ಜೀವನದಲ್ಲೂ ಇದೇ ರೀತಿ ಆಯಿತು. ಎಲ್ಲರಂತೆಯೇ ವಿದ್ಯಾಭ್ಯಾಸ ಮುಗಿದ ಬಳಿಕ ವೈಯಕ್ತಿಕ ಖರ್ಚುಗಳನ್ನು ನೋಡಿಕೊಳ್ಳಲು ಸಣ್ಣ-ಪುಟ್ಟ ಕೆಲಸ ಆತ ಮಾಡುತ್ತಿದ್ದ. ಒಂದೇ ಕೆಲಸದಿಂದ ಅವನ ಮನಸ್ಸು ಸಂತೃಪ್ತಿಯಾಗದೇ ಇದ್ದಾಗ ಬೇರೆ ಕಡೆ ಕೆಲಸ ಮಾಡಲು ಪ್ರಯತ್ನ ಮಾಡಿದ್ದ. ಆದರೆ ಎಲ್ಲೇ ಹೋದರೂ ಅದೇ 8 ಗಂಟೆಗಳ ಕಠಿಣ ಪರಿಶ್ರಮದ ಜೀವನ. ಆದ್ದರಿಂದ ಆ ಹುಡುಗ ಇದೆಲ್ಲವನ್ನೂ ಬಿಟ್ಟು ದೊಡ್ಡದೇನನ್ನಾದರೂ ಮಾಡಲು ನಿರ್ಧಾರ ಮಾಡಿದ್ದರು.

ಇದು ಬೆಂಗಳೂರಿನ ನಿಖಿಲ್ ಕಾಮತ್ ಅವರ ಕಥೆ, ಅವರು ಈಗ ಬ್ರೋಕರೇಜ್ ಸಂಸ್ಥೆ ಝೆರೋಧಾದ ಸಹ-ಸಂಸ್ಥಾಪಕ. ನಿಖಿಲ್ ಕಾಮತ್ ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ಕೆಲಸ ಮಾಡಲು ಪ್ರಾರಂಭ ಮಾಡಿದ್ದರು. ಅವರಿಗೆ 17 ವರ್ಷ ವಯಸ್ಸಾಗಿದ್ದಾಗ ಫುಲ್‌ ಟೈಮ್‌ ಕೆಲಸ ಆರಂಭ ಮಾಡಿದ್ದರು. ಆರಂಭದಲ್ಲಿಕೆಲಸದಲ್ಲಿಯೇ ಅವರ ದಿನದ ಹೆಚ್ಚಿನ ಸಮಯ ಹೋಗುತ್ತಿತ್ತು. ಇಡೀ ದಿನ ಮಾಡುವ ಕೆಲಸಕ್ಕೆ ಸಿಗ್ತಾ ಇದ್ದಿದ್ದು ಬರೀ 250 ರೂಪಾಯಿ. ಅದಲ್ಲದೆ, ಈ ಕೆಲಸದ ಬಳಿಕ ಅವರು ಸಂಪೂರ್ಣ ದಣಿದು ಹೋಗಿರುತ್ತಿದ್ದರು. ಎಲ್ಲೇ ಹೋಗಲು ಕೂಡ ಮನಸ್ಸಿರುತ್ತಿರಲಿಲ್ಲ. ಅದ್ದರಿಂದ ಈ ಕೆಲಸವನ್ನು ತೊರೆದು ಸ್ವಂತವಾಗಿ ಏನನ್ನಾದರೂ ಮಾಡಲು ಯೋಚನೆ ಮಾಡಿದರು.

Latest Videos

ಕೆಲಸ ಬಿಟ್ಟು ಷೇರು ವಹಿವಾಟು ಪ್ರಾರಂಭಿಸಿದರು ನಿಖಿಲ್: ಕೆಲವು ದಿನ ಕೆಲಸ ಮಾಡಿದ ನಂತರ, ನಿಖಿಲ್ ಷೇರು ಮಾರುಕಟ್ಟೆಯಲ್ಲಿ ವಹಿವಾಟು ಪ್ರಾರಂಭಿಸಿದರು. ಮೊದ ಮೊದಲಿಗೆ ಅವರಿಗೆ ಈ ಕೆಲಸ ಇಷ್ಟವಾಗಲಿಲ್ಲ. ನಿಧಾನವಾಗಿ ಅವರು ಮಾರುಕಟ್ಟೆಯ ನಾಡಿಮಿಡಿತವನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದರು. ನಿಖಿಲ್ ಈ ಕೆಲಸದಲ್ಲಿ ಸ್ವಲ್ಪ ಅನುಭವವನ್ನು ಪಡೆದಾಗ, ಅವರು ಷೇರು ವಹಿವಾಟಿನ ಕೆಲಸವನ್ನು ಮುಂದುವರಿಸಲು ಯೋಚಿಸಿದರು. ಆದರೆ ಆಗ ಅವರ ಬಳಿ ಹಣವಿರಲಿಲ್ಲ.

ತಂದೆಯ ಹಣ ಸರಿಯಾದ ಸಮಯದಲ್ಲಿ ಹೂಡಿಕೆ: ಒಂದು ಸಂದರ್ಶನದಲ್ಲಿ, ನಿಖಿಲ್ ಕಾಮತ್ ತಮ್ಮ ತಂದೆ ಒಮ್ಮೆ ತಮ್ಮ ಉಳಿತಾಣದ ಹಣವನ್ನು ನಿರ್ವಹಿಸಲು ಕೊಟ್ಟಿದ್ದರು ಎಂದು ಹೇಳಿದ್ದರು. ನಿಖಿಲ್ ಈ ಹಣವನ್ನು ತಮ್ಮ ತಂದೆಯನ್ನು ಕೇಳದೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರು. ಅದು ಅವರ ಸ್ವಂತ ಹಣವಾಗಿರಲಿಲ್ಲವಾದ್ದರಿಂದ, ಅವರ ತಂದೆಯ ಹಣವನ್ನು ಶೀಘ್ರದಲ್ಲೇ ದ್ವಿಗುಣಗೊಳಿಸುವ ಜವಾಬ್ದಾರಿ ಅವರ ಮೇಲಿತ್ತು. ಕೆಲವೇ ತಿಂಗಳುಗಳಲ್ಲಿ, ನಿಖಿಲ್ ತಮ್ಮ ತಂದೆಯ ಹಣವನ್ನು ಹಲವು ಪಟ್ಟು ಹೆಚ್ಚಿಸಿದರು. ಇದರೊಂದಿಗೆ, ಅವರು ಈಗ ಸಂಪೂರ್ಣವಾಗಿ ಷೇರು ವಹಿವಾಟಿನಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸಲು ಪ್ರಾರಂಭಿಸಿದರು.

2010ರಲ್ಲಿ ಝೆರೋದಾ ಸ್ಥಾಪನೆ: ನಿಖಿಲ್ ಕಾಮತ್ 2010 ರಲ್ಲಿ ತಮ್ಮ ಸಹೋದರ ನಿತಿನ್ ಅವರೊಂದಿಗೆ ಸೇರಿ ಷೇರು ವಹಿವಾಟು ಕಂಪನಿಯನ್ನು ಪ್ರಾರಂಭಿಸಿದರು. ಇದಕ್ಕೆ ಝೆರೋಧಾ ಎಂದು ಹೆಸರಿಟ್ಟರು.  ಕಳೆದ 14 ವರ್ಷಗಳಲ್ಲಿ, ಅವರ ಕಂಪನಿಯು ಅಗಾಧವಾಗಿ ಬೆಳೆದಿದೆ. ಇಂದು, ಕಂಪನಿಯು 10 ಮಿಲಿಯನ್ ಅಂದರೆ 1 ಕೋಟಿಗೂ ಹೆಚ್ಚು ಗ್ರಾಹಕರನ್ನು ಹೊಂದಿದೆ. ಝೆರೋಧಾ ದೇಶದ ಅತಿದೊಡ್ಡ ಬ್ರೋಕರೇಜ್ ಸಂಸ್ಥೆಗಳಲ್ಲಿ ಒಂದಾಗಿದೆ. ನಿಖಿಲ್ ಕಾಮತ್ ನಂತರ ವೈಯಕ್ತಿಕ ಹೂಡಿಕೆಗಾಗಿ ಗ್ರೂಹಾಸ್, ಫಿನ್‌ಟೆಕ್ ಇನ್‌ಕ್ಯುಬೇಟರ್ ರೈನ್‌ಮ್ಯಾಟರ್ ಮತ್ತು ರೈನ್‌ಮ್ಯಾಟರ್ ಫೌಂಡೇಶನ್ ಜೊತೆಗೆ ಹೆಡ್ಜ್ ಫಂಡ್ ಟ್ರೂ ಬೀಕನ್ ಅನ್ನು ಸ್ಥಾಪಿಸಿದರು. ರೈನ್‌ಮ್ಯಾಟರ್ ಹಣಕಾಸು ಸೇವೆಯನ್ನು ಉತ್ತೇಜಿಸುವ ಫಿನ್‌ಟೆಕ್ ಕಂಪನಿಗಳಲ್ಲಿ ಹೂಡಿಕೆ ಮಾಡುತ್ತದೆ.

ಕನ್ನಡಿಗ ಉದ್ಯಮಿ ನಿಖಿಲ್ ಜತೆ ಡೇಟಿಂಗ್ ನಲ್ಲಿರುವ ನಟಿ ರಿಯಾ ಚಕ್ರವರ್ತಿ ಮದುವೆಯಾಗೋದಿಲ್ಲವಂತೆ!

34 ನೇ ವಯಸ್ಸಿನಲ್ಲಿ ಭಾರತದ ಅತ್ಯಂತ ಕಿರಿಯ ಬಿಲಿಯನೇರ್: ಚಾಣಾಕ್ಷ ವ್ಯವಹಾರ ಮತ್ತು ಝೆರೋಧಾ ಕಂಪನಿಯಿಂದಾಗಿ, ನಿಖಿಲ್ ಕಾಮತ್ ಕೇವಲ 34 ನೇ ವಯಸ್ಸಿನಲ್ಲಿ ದೇಶದ ಅತ್ಯಂತ ಕಿರಿಯ ಬಿಲಿಯನೇರ್ ಆದರು. 2023 ರಲ್ಲಿ ಬಿಡುಗಡೆಯಾದ ಫೋರ್ಬ್ಸ್ ಪಟ್ಟಿಯಲ್ಲಿ ಅವರನ್ನು ಭಾರತದ ಅತ್ಯಂತ ಕಿರಿಯ ಬಿಲಿಯನೇರ್ ಎಂದು ಹೆಸರಿಸಲಾಗಿದೆ. ಫೋರ್ಬ್ಸ್ ಪ್ರಕಾರ, ಅವರು ಪ್ರಸ್ತುತ ವಿಶ್ವದ 1062 ನೇ ಶ್ರೀಮಂತ ವ್ಯಕ್ತಿ. ಅವರ ಒಟ್ಟು ನಿವ್ವಳ ಮೌಲ್ಯ 3.1 ಬಿಲಿಯನ್ ಡಾಲರ್ ಅಂದರೆ 25,730 ಕೋಟಿ ರೂಪಾಯಿಗಳು.

ನನ್ನ ಬಳಿ 3 ಕೋಟಿ ಇದೆ, ಎಲ್ಲಿ ಹೂಡಿಕೆ ಮಾಡಲಿ ಎಂದು ಬಾದ್‌ಶಾ ಕೇಳಿದ ಪ್ರಶ್ನೆಗೆ ನಿಖಿಲ್‌ ಕಾಮತ್‌ ಉತ್ತರ ಹೀಗಿತ್ತು..!

click me!