ದಿನಕ್ಕೆ 20ರೂ. ವೇತನ ಗಳಿಸುತ್ತಿದ್ದ ಯುವತಿಯೊಬ್ಬಳು ಜ್ಯುವೆಲ್ಲರಿ ಬ್ರ್ಯಾಂಡ್ ವೊಂದನ್ನು ಹುಟ್ಟು ಹಾಕಿ ಆ ಕ್ಷೇತ್ರದಲ್ಲಿ ಯಶಸ್ಸು ಗಳಿಸೋದು ಖಂಡಿತಾ ಸುಲಭವಲ್ಲ.ಆದರೆ, ಚಿನು ಕಲಾ ಅದನ್ನು ಸಾಧಿಸಿ ತೋರಿಸಿದ್ದಾರೆ. ಅವರು ಪ್ರಾರಂಭಿಸಿದ ರುಬನ್ಸ್ ಅಕ್ಸೆಸೇರಿಸ್' ಇಂದು ಜನಪ್ರಿಯ ಜ್ಯುವೆಲ್ಲರಿ ಬ್ರ್ಯಾಂಡ್ ಆಗಿದ್ದು,40 ಕೋಟಿ ರೂ. ವಹಿವಾಟು ನಡೆಸುವ ಕಂಪನಿಯಾಗಿ ಬೆಳೆದು ನಿಂತಿದೆ.
Business Desk: ಬದುಕು ಯಾವ ಕ್ಷಣದಲ್ಲಿ ಬೇಕಾದರೂ ತಿರುವು ತೆಗೆದುಕೊಳ್ಳಬಹುದು. ಆ ಒಂದು ತಿರುವು ಬದುಕಿನ ಪಯಣದ ಸ್ವರೂಪವನ್ನೇ ಬದಲಾಯಿಸಿ ಬಿಡಬಲ್ಲದು. ಜೀವನದಲ್ಲಿ ಏನೋ ಇಲ್ಲದವರು ಮುಂದೊಂದು ದಿನ ಕುಬೇರರಾದ ಕಥೆ ಸಿನಿಮಾದಲ್ಲಷ್ಟೇ ಅಲ್ಲ, ನಿಜ ಜೀವನದಲ್ಲೂ ನಡೆದಿರೋದಕ್ಕೆ ಅನೇಕ ನಿದರ್ಶನಗಳು ಸಿಗುತ್ತವೆ. ಅಂಥ ಅಪರೂಪದ ಕಥೆಗಳ ಸಾಲಿಗೆ ಚಿನು ಕಲಾ ಅವರ ಕಥೆ ಕೂಡ ಸೇರುತ್ತದೆ. ಅಷ್ಟೇ ಅಲ್ಲ, ಇವರ ಕಥೆ ಓದಿದವರ ಮನಸ್ಸಲ್ಲಿ ಸಾಧಿಸುವ ಸ್ಫೂರ್ತಿಯನ್ನು ಕೂಡ ಹುಟ್ಟಿಸುತ್ತದೆ. ಚಿನು ಕಲಾ ಜನಪ್ರಿಯ ಫ್ಯಾಷನ್ ಜ್ಯುವೆಲ್ಲರಿ ಬ್ರ್ಯಾಂಡ್ 'ರುಬನ್ಸ್ ಅಕ್ಸೆಸೇರಿಸ್' ನಿರ್ದೇಶಕಿ. ಚಿನು ಕಲಾ ಅವರ ಬದುಕು ಕಷ್ಟಗಳು ಹಾಗೂ ಹೋರಾಟಗಳಿಂದ ತುಂಬಿತ್ತು. ಆದರೆ, ಕಠಿಣ ಪರಿಶ್ರಮ ಒಬ್ಬ ವ್ಯಕ್ತಿಯನ್ನು ಬದುಕಿನ ಯಾವುದೇ ಸಂಕಷ್ಟದ ಪರಿಸ್ಥಿತಿಯಿಂದ ಹೊರತರಬಲ್ಲದು ಎಂಬುದಕ್ಕೆ ಚಿನು ಕಲಾ ಅವರಿಗಿಂತ ಉತ್ತಮ ನಿದರ್ಶನ ಬೇರೆ ಬೇಕಿಲ್ಲ. ಕೇವಲ 15ನೇ ವಯಸ್ಸಿನಲ್ಲಿ ಯಾವುದೋ ಚಿಕ್ಕ ವೈಮನಸ್ಸಿನ ಕಾರಣಕ್ಕೆ ಮನೆ ಬಿಟ್ಟು ಹೊರಟ ಹುಡುಕಿ ಮುಂದೆ ಅನೇಕ ಸಂಕಷ್ಟಗಳನ್ನು ಎದುರಿಸಬೇಕಾಯಿತು. ಆದರೆ, ಎಲ್ಲೂ ಎದೆಗುಂದದೆ ಮುನ್ನಡೆದ ಈಕೆ ಇಂದು 40 ಕೋಟಿ ರೂ. ವಹಿವಾಟು ನಡೆಸುವ ಕಂಪನಿ ಒಡತಿ.
ಸೇಲ್ಸ್ ಗರ್ಲ್ ಆಗಿ ದಿನಕ್ಕೆ 20ರೂ. ದುಡಿಮೆ
ಮುಂಬೈ ಸೇಂಟ್ ಜೋಸೆಫ್ ಸ್ಕೂಲ್ ನಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ಚಿನು ಕಲಾ ಕುಟುಂಬ ಸದಸ್ಯರ ಜೊತೆಗಿನ ಚಿಕ್ಕ ಜಗಳವೊಂದರ ಕಾರಣದಿಂದ ಮನೆ ತೊರೆದರು. ಆ ಸಮಯದಲ್ಲಿ ಅವರ ಬಳಿ ಕೇವಲ 300ರೂ. ಹಾಗೂ ಬಟ್ಟೆಗಳನ್ನು ತುಂಬಿದ ಬ್ಯಾಗ್ ಅಷ್ಟೇ ಇತ್ತು. ಮುಂಬೈ ರೈಲ್ವೆ ನಿಲ್ದಾಣದಲ್ಲಿ ಎರಡು ದಿನಗಳನ್ನು ಕಳೆದ ಅವರು, ಆ ಬಳಿಕ ಸೇಲ್ಸ್ ಗರ್ಲ್ ಆಗಿ ಕೆಲಸ ಆರಂಭಿಸಿದರು. ದಿನಕ್ಕೆ ಕೇವಲ 20ರೂ. ವೇತನ ಸಿಗುತ್ತಿತ್ತು. ಮನೆ ಮನೆಗೆ ಅಲೆದು ಚಾಕು ಹಾಗೂ ಇನ್ನಿತರ ಅಡುಗೆ ಉಪಕರಣಗಳನ್ನು ಮಾರಾಟ ಮಾಡುತ್ತಿದ್ದ ಚಿನು, ಆ ಸಮಯದಲ್ಲಿ ಜನರಿಂದ ಸಾಕಷ್ಟು ಬೈಗುಳ ಕೂಡ ಕೇಳಬೇಕಾಗಿತ್ತು. ಆ ಸಮಯದಲ್ಲಿ ವಾಷ್ ರೂಮ್ ಹಾಗೂ ಅಡುಗೆ ಕೋಣೆ ಇಲ್ಲದ ಒಂದು ಹಾಲ್ ನಲ್ಲಿ ಅನೇಕ ಹುಡುಗಿಯರ ಜೊತೆಗೆ ವಾಸಿಸಿದ್ದರು.
ಡಿಜಿಟಲ್ ವೆಬ್‌ಸೈಟ್ ಸ್ಥಾಪಿಸಿ ಫೋರ್ಬ್ಸ್ ಗುರುತಿಸಿದ ಭಾರತದ ಮಹಿಳಾ ಉದ್ಯಮಿ ಆಸ್ತಿ ಮೌಲ್ಯ 24,980 ಕೋಟಿ ರೂ!
ಮಾಡೆಲಿಂಗ್ ಕ್ಷೇತ್ರಕ್ಕೆ ಎಂಟ್ರಿ
ಆ ಬಳಿಕ ಮಾಡೆಲಿಂಗ್ ಕ್ಷೇತ್ರ ಪ್ರವೇಶಿಸಿದ ಚಿನು ಕಲಾ, 2007ರಲ್ಲಿ ಗ್ಲ್ಯಾಡ್ ಡ್ರಾಗ್ಸ್ ಮಿಸೆಸ್ ಇಂಡಿಯಾ ಬ್ಯೂಟಿ ಪೆಗೆಂಟ್ ನಲ್ಲಿ ಭಾಗವಹಿಸಿ ಟಾಪ್ 10 ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು. 'ಮಾಡೆಲಿಂಗ್ ನಿಂದ ನಾನು ಸಾಕಷ್ಟು ಹಣ ಗಳಿಸಿದೆ. ಆದರೆ, ಇದು ನನ್ನ ಕೆರಿಯರ್ ಆಗಿಲ್ಲ ಎಂಬುದು ನನಗೆ ತಿಳಿದಿತ್ತು' ಎನ್ನುತ್ತಾರೆ ಚಿನು.
ರುಬನ್ಸ್ ಅಕ್ಸೆಸೇರಿಸ್ ಪ್ರಾರಂಭಿಸಿದ ಚಿನು ಕಲಾ
ಮಾಡೆಲಿಂಗ್ ತನ್ನ ಕ್ಷೇತ್ರವಲ್ಲ ಎಂಬುದು ಚಿನು ಕಲಾ ಅವರಿಗೆ ತಿಳಿಯಲು ಜಾಸ್ತಿ ಸಮಯ ಹಿಡಿಯಲಿಲ್ಲ. ಹೀಗಾಗಿ ಅವರು ಸ್ವಂತ ಉದ್ಯಮ ಪ್ರಾರಂಭಿಸುವ ಯೋಚನೆ ಮಾಡಿದರು. 2014ರಲ್ಲಿ ಚಿನು ಕಲಾ ತಮ್ಮ ಸ್ವಂತ ಕಂಪನಿ ರುಬನ್ಸ್ ಅಕ್ಸೆಸೇರಿಸ್ ಪ್ರಾರಂಭಿಸಿದರು. ಕೇವಲ 3ಲಕ್ಷ ರೂ. ಹೂಡಿಕೆಯೊಂದಿಗೆ ಪ್ರಾರಂಭವಾದ ಈ ಕಂಪನಿ ಇಂದು 40 ಕೋಟಿ ರೂ. ವಹಿವಾಟು ನಡೆಸುತ್ತಿದೆ. ಬೆಂಗಳೂರಿನ ಮಾಲ್ ವೊಂದರಲ್ಲಿ ಪುಟ್ಟ ಕಿಯೋಸ್ಕದೊಂದಿಗೆ ಉದ್ಯಮ ಪ್ರಾರಂಭಿಸಿದರು. ಆರಂಭದಲ್ಲಿ ಅವರೊಬ್ಬರೆ ಗ್ರಾಹಕರನ್ನು ನಿರ್ವಹಣೆ ಮಾಡುತ್ತಿದ್ದರು. ರುಬನ್ಸ್ ಆಭರಣಗಳು ನಿಧಾನವಾಗಿ ಜನರಿಗೆ ಇಷ್ಟವಾಗಲು ಪ್ರಾರಂಭಿಸಿದವು. 2018ರ ವೇಳೆಗೆ ರುಬನ್ಸ್ ಬೆಂಗಳೂರಿನಲ್ಲಿ ಎರಡು, ಹೈದರಾಬಾದ್ ನಲ್ಲಿ ಎರಡು ಹಾಗೂ ಕೊಚ್ಚಿಯಲ್ಲಿ ಒಂದು ಶಾಪ್ ಗಳನ್ನು ಹೊಂದಿದೆ.ಕೋವಿಡ್ ಸಮಯದಲ್ಲಿ ಆನ್ ಲೈನ್ ಮಾರಾಟ ಪ್ರಾರಂಭಿಸಿದ ಕಾರಣ ರುಬನ್ಸ್ ಉತ್ಪನ್ನಗಳ ಮಾರಾಟದಲ್ಲಿ ಏರಿಕೆ ಕಂಡುಬಂತು.
ಅಮ್ಮಕಟ್ಟಿದ ಸಂಸ್ಥೆಗೆ ಮಗಳ ಆಸರೆ; ಬ್ಲಾಕ್ ಪ್ರಿಂಟಿಂಗ್ ಉದ್ಯಮಕ್ಕೆ ಮೆರುಗು ನೀಡಿದ ಬೆಂಗಳೂರಿನ 'ತರಂಗಿಣಿ'
2014ರಲ್ಲಿ ಅಮಿತ್ ಅವರನ್ನು ವಿವಾಹವಾದ ಚಿನು ಕಲಾ ಅವರಿಗೆ ಒಬ್ಬಳು ಮಗಳಿದ್ದಾಳೆ. ಅವರ ಪತಿ ಅಮಿತ್ ಕೂಡ ರುಬನ್ಸ್ ನಿರ್ದೆಶಕರಾಗಿದ್ದಾರೆ. ಬೆಂಗಳೂರಿನ ಫೋನಿಕ್ಸ್ ಮಾಲ್ ಸಮೀಪ 5,000 ಚದರ ಅಡಿ ವಿಸ್ತೀರ್ಣದ ಮನೆಯಲ್ಲಿ ಚಿನು ಕಲಾ ತಮ್ಮ ಪತಿಯೊಂದಿಗೆ ವಾಸವಿದ್ದಾರೆ.