Asianet Suvarna News Asianet Suvarna News

ಅಮ್ಮಕಟ್ಟಿದ ಸಂಸ್ಥೆಗೆ ಮಗಳ ಆಸರೆ; ಬ್ಲಾಕ್ ಪ್ರಿಂಟಿಂಗ್ ಉದ್ಯಮಕ್ಕೆ ಮೆರುಗು ನೀಡಿದ ಬೆಂಗಳೂರಿನ 'ತರಂಗಿಣಿ'

ಇನ್ ಸ್ಟಾಗ್ರಾಮ್ ಬಳಕೆದಾರರಿಗೆ ಬೆಂಗಳೂರಿನ ತರಂಗಿಣಿ ಸ್ಟುಡಿಯೋಸ್ ಚಿರಪರಿಚಿತ. ಫ್ಯಾಷನ್ ಪ್ರಿಯರಿಗೆ ಈ ಸಂಸ್ಥೆಯ ಹ್ಯಾಂಡ್ ಬ್ಲಾಕ್ ಪ್ರಿಂಟೆಂಡ್ ಬಟ್ಟೆಗಳು ಇಷ್ಟವಾಗದೆ ಇರದು. 45  ವರ್ಷಗಳ ಹಿಂದೆ ಲಕ್ಷ್ಮೀ ಶ್ರೀವತ್ಸ  ಪ್ರಾರಂಭಿಸಿದ ಈ ಉದ್ಯಮವನ್ನು ಇಂದು ಅವರ ಮಗಳು ಪದ್ಮಿನಿ ಗೋವಿಂದ್ ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. 

Daughter Leaves US Job Keeps Moms 45Year Organic Printed Fabrics Legacy Alive anu
Author
First Published Oct 13, 2023, 3:32 PM IST

ಬೆಂಗಳೂರು (ಅ.13): ಬ್ಲಾಕ್ ಪ್ರಿಟಿಂಗ್ ಹೊಂದಿರುವ ಸೀರೆಗಳು, ಉಡುಗೆಗಳು ಸದಾ ಟ್ರೆಂಡ್ ನಲ್ಲಿರುತ್ತವೆ. ಬ್ಲಾಕ್ ಪ್ರಿಟಿಂಗ್ ಅಜ್ಜಿಯಂದಿರಿಗೆ ಮಾತ್ರವಲ್ಲ, ಅವರ ಮೊಮ್ಮಕ್ಕಳಿಗೂ ಇಷ್ಟವಾಗೋದರಲ್ಲಿ ಸಂಶಯವೇ ಇಲ್ಲ. ಬೆಂಗಳೂರು ಕೂಡ ಒಂದು ಕಾಲದಲ್ಲಿ ಬ್ಲಾಕ್ ಪ್ರಿಟಿಂಗ್ ಗೆ ಜನಪ್ರಿಯತೆ ಗಳಿಸಿತ್ತು. ಅನೇಕ ಹ್ಯಾಂಡ್ ಬ್ಲಾಕ್ ಪ್ರಿಂಟಿಂಗ್ ಉದ್ಯಮಗಳನ್ನು ಹೊಂದಿತ್ತು. ಆದರೆ, ಕಾಲಕ್ರಮೇಣ ಹೊಸ ತಂತ್ರಜ್ಞಾನ ಹಾಗೂ ಜನರ ಅಭಿರುಚಿ ಬದಲಾದ ಕಾರಣ ಹ್ಯಾಂಡ್ ಬ್ಲಾಕ್ ಪ್ರಿಂಟ್ ಹೊಂದಿರುವ ಬಟ್ಟೆಗಳಿಗೆ ಬೇಡಿಕೆ ತಗ್ಗಿತು. ಹಾಗೆಯೇ ದೊಡ್ಡ ಉದ್ಯಮಗಳ ಮುಂದೆ ಹ್ಯಾಂಡ್ ಬ್ಲಾಕ್ ಪ್ರಿಂಟಿಂಗ್ ಕಿರು ಉದ್ಯಮಗಳು ಸೊರಗಿ ಬಾಗಿಲು ಮುಚ್ಚಿಕೊಂಡವು. ಆದರೆ, ಒಂದು ಸಂಸ್ಥೆ ಮಾತ್ರ ಎಲ್ಲ ಸ್ಪರ್ಧೆ, ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಇಂದಿಗೂ ಕಾರ್ಯನಿರ್ವಹಿಸುತ್ತಿದೆ. ಅದೇ ತರಂಗಿಣಿ ಸ್ಟುಡಿಯೋಸ್. 45  ವರ್ಷಗಳ ಹಿಂದೆ ತಾಯಿ ಪ್ರಾರಂಭಿಸಿದ ಈ ಉದ್ಯಮವನ್ನು ಇಂದು ಮಗಳು ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ಇನ್ ಸ್ಟಾಗ್ರಾಮ್ ಬಳಕೆದಾರರಿಗೆ ಬೆಂಗಳೂರಿನ ಈ ತರಂಗಿಣಿ ಸ್ಟುಡಿಯೋಸ್ ಚಿರಪರಿಚಿತ. ಲಕ್ಷ್ಮೀ ಶ್ರೀವತ್ಸ ಅವರು ಕಟ್ಟಿದ ಈ ಸಂಸ್ಥೆಯನ್ನು ಮಗಳು ಪದ್ಮಿನಿ ಗೋವಿಂದ್ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. 

ತರಂಗಿಣಿಗಾಗಿ ಅಮೆರಿಕ ಬಿಟ್ಟು ಬಂದ ಪದ್ಮಿನಿ
ಬೆಂಗಳೂರು ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್ ನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿರುವ ಪದ್ಮಿನಿ, ಆ ಬಳಿಕ ಸ್ನಾತಕೋತ್ತರ ಪದವಿ ಪಡೆಯಲು ಅಮೆರಿಕಕ್ಕೆ ತೆರಳುತ್ತಾರೆ. ಆ ಬಳಿಕ ಅಲ್ಲೇ ಉದ್ಯೋಗ ಗಿಟ್ಟಿಸಿಕೊಳಳುವ ಅವರು, ಕಾರ್ಪೋರೇಟ್ ಜಗತ್ತಿನಲ್ಲಿ ಸುಮಾರು 18 ವರ್ಷಗಳ ಕಾಲ ಕಾರ್ಯನಿರ್ವಹಿಸುತ್ತಾರೆ. ಆದರೆ, ಅಮೆರಿಕದಲ್ಲಿದ್ದರೂ ಅವರ ಮನಸ್ಸು ಮಾತ್ರ ತಾಯಿ ಕಟ್ಟಿದ ಸಂಸ್ಥೆ ತರಂಗಿಣಿ ಸುತ್ತಲೇ ಸುತ್ತುತ್ತಿತ್ತು. ಹೀಗಾಗಿ ತಾಯಿ ಅಮೆರಿಕಕ್ಕೆ ಬಂದಾಗಲೆಲ್ಲ ಪದ್ಮಿನಿ ಅವರನ್ನು ಟೆಕ್ಸ್ ಟೈಲ್ಸ್ ಗೆ ಸಂಬಂಧಿಸಿದ ವರ್ಕ್ ಶಾಪ್ ಗಳಿಗೆ ಕರೆದುಕೊಂಡು ಹೋಗುತ್ತಿದ್ದರು.ಅಲ್ಲದೆ, ಆಸಕ್ತ ಜವಳಿ ಉದ್ಯಮಿಗಳನ್ನು ಅವರ ಸ್ಟುಡಿಯೋಗೆ ಪರಿಚಯಿಸುತ್ತಿದ್ದರು. ಆದರೆ, ಆಗ ಅವರು ಬಟ್ಟೆಗಳನ್ನು ರಫ್ತು ಮಾಡಲು ಪ್ರಾರಂಭಿಸಿರಲಿಲ್ಲ. 2007ರಲ್ಲಿ ಪದ್ಮಿನಿ ಅವರ ತಾಯಿ ಲಕ್ಷ್ಮೀ ಅವರ ಆರೋಗ್ಯ ಹದಗೆಡುತ್ತದೆ. ಹೀಗಾಗಿ 2008ರಲ್ಲಿ ಪದ್ಮಿನಿ ಪತಿ ಹಾಗೂ ಇಬ್ಬರು ಪುತ್ರರ ಜೊತೆಗೆ  ಭಾರತಕ್ಕೆ ಹಿಂತಿರುಗುತ್ತಾರೆ. 2011ರಲ್ಲಿ ಲಕ್ಷ್ಮೀ ಶ್ರೀವತ್ಸ ವಿಧಿವಶರಾಗುತ್ತಾರೆ. 

ಪರಿಸರಸ್ನೇಹಿ ಫೂಟ್ ವೇರ್ ಸ್ಟಾರ್ಟ್ ಅಪ್ ಪ್ರಾರಂಭಿಸಿದ ಗುಜರಾತಿನ ಅಣ್ಣ-ತಂಗಿ; ಕಬ್ಬಿನ ಸಿಪ್ಪೆ ಶೂಗೆ ಭಾರೀ ಬೇಡಿಕೆ

ಕುಸಿಯುತ್ತಿದ್ದ ತರಂಗಿಣಿಯನ್ನು ಮತ್ತೆ ನಿಲ್ಲಿಸಿದರು
ಪದ್ಮಿನಿ ಭಾರತಕ್ಕೆ ಹಿಂತಿರುಗಿದ ಸಮಯದಲ್ಲಿ ತರಂಗಿಣಿ ಪರಿಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿತು. ಸಂಸ್ಥೆ ನಿಲ್ಲಿಸುವ ಮಟ್ಟಕ್ಕೆ ಬಂದಿತ್ತು. ಸೀರೆ ವಿಶೇಷ ಸಂದರ್ಭಗಳಿಗಷ್ಟೇ ಸೀಮಿತವಾಗಿತ್ತು. ಇನ್ನು ಬ್ಲಾಕ್ ಪ್ರಿಂಟಿಂಗ್ ಗಿಂತ ಮಷಿನ್ ಪ್ರಿಂಟಿಂಗ್ ಅಗ್ಗವಾಗಿತ್ತು. ಇಂಥ ವಾತಾವರಣದಲ್ಲಿ ಸಂಸ್ಥೆಯನ್ನು ಮತ್ತೆ ಹಾದಿಗೆ ತರೋದು ಸವಾಲಿನ ಕೆಲಸವೇ ಆಗಿತ್ತು. ಆಮೊದಲ ಎರಡು ವರ್ಷ ತುಂಬಾ ಶ್ರಮಪಡಬೇಕಾಯಿತು. ಆದರೆ, ಇಂದು ಸಂಸ್ಥೆ ಸಾಕಷ್ಟು ಜನಪ್ರಿಯತೆ ಗಳಿಸಿದೆ. ಗೃಹಾಲಂಕಾರ ಹಾಗೂ ಇತರ ಸುಸ್ಥಿರ ಫ್ಯಾಷನ್ ಬ್ರ್ಯಾಂಡ್ ಗಳನ್ನು ತರಂಗಿಣಿ ವಿದೇಶಗಳಿಗೆ ರಫ್ತು ಕೂಡ ಮಾಡುತ್ತಿದೆ. ವಿವಿಧ ಗಾರ್ಮೆಂಟ್ ಬ್ರ್ಯಾಂಡ್ ಗಳು ಹಾಗೂ ರಫ್ತು ಮಾಡುವ ಕೆಲವು ಗಾರ್ಮೆಂಟ್ ಸಂಸ್ಥೆಗಳೊಂದಿಗೆ ದೇಶಾದ್ಯಂತ ತರಂಗಿಣಿ ಒಪ್ಪಂದ ಮಾಡಿಕೊಂಡಿದೆ. ಇಂದು ತರಂಗಿಣಿ ಭಾರತದಲ್ಲೇ ಅತೀಹೆಚ್ಚು ವುಡ್ ಬ್ಲಾಕ್ಸ್ ಸಂಗ್ರಹ ಹೊಂದಿರುವ ಸಂಸ್ಥೆಯಾಗಿದೆ. 

ಟೆಕ್‌ ಉದ್ಯಮಕ್ಕೆ ಸೆಡ್ಡು ಹೊಡೆದ 16 ವರ್ಷದ ಭಾರತೀಯ ಬಾಲೆ, 100 ಕೋಟಿ ಮೌಲ್ಯದ ಕಂಪೆನಿ ಒಡತಿ!

ಭಾರತ ಮಾತ್ರವಲ್ಲದೆ, ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾ, ಪಾಶ್ಚಿಮಾತ್ಯ ಯುರೋಪ್ ಹಾಗೂ ಜಪಾನ್ ಗಳಲ್ಲಿ ಕೂಡ ತರಂಗಿಣಿ ಗ್ರಾಹಕರನ್ನು ಹೊಂದಿದೆ. ಪುಟ್ಟ ತೋಟದಲ್ಲಿ ಎರಡು ಟೇಬಲ್ ಗಳಲ್ಲಿ 5 ಕಲಾಕಾರರ ತಂಡದೊಂದಿಗೆ ಪ್ರಾರಂಭವಾದ ತರಂಗಿಣಿ ಇಂದು ದೇಶ, ವಿದೇಶಗಳಲ್ಲಿ ಹೆಸರು ಗಳಿಸಿದೆ. ಜವಳಿ ಉದ್ಯಮ ಜಗತ್ತು  ಪುರುಷರ ಪ್ರಾಬಲ್ಯದಲ್ಲೇ ಇರುವಾಗ ಮಹಿಳೆಯರಿಬ್ಬರು ಒಂದು ಸಂಸ್ಥೆಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕಟ್ಟಿ ಬೆಳೆಸೋದು ನಿಜಕ್ಕೂ ಸುಲಭದ ಕೆಲಸವಾಗಿರಲಿಲ್ಲ. 

Follow Us:
Download App:
  • android
  • ios