ಚಿನ್ನದ ದರ ಇದೇ ಮೊದಲ ಬಾರಿಗೆ 70,000 ರೂ. ಗಡಿ ದಾಟುವ ಮೂಲಕ ಸಾರ್ವಕಾಲಿಕ ಏರಿಕೆ ಕಂಡಿದೆ. ಈ ಮೂಲಕ ಚಿನ್ನ ಖರೀದಿಸೋರಿಗೆ ಆಘಾತ ಉಂಟು ಮಾಡಿದೆ.
Business Desk: ಕೆಲವು ಮೆಟ್ರೋ ನಗರಗಳಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 70,000 ರೂ. ಗಡಿ ದಾಟುವ ಮೂಲಕ ಹೊಸ ದಾಖಲೆ ಬರೆದಿದೆ. ಇದರಲ್ಲಿ ಜಿಎಸ್ ಟಿ ಹಾಗೂ ಆಮದು ಶುಲ್ಕ ಕೂಡ ಸೇರಿದೆ. ಗುಡ್ ಫ್ರೈಡೇ ಹಿನ್ನೆಲೆಯಲ್ಲಿ ಮಲ್ಟಿ ಕಮೋಡಿಟಿ ಎಕ್ಸ್ ಚೇಂಜ್ (ಎಂಸಿಎಕ್ಸ್) ಮುಚ್ಚಿದ್ದರೂ ಕೂಡ ಸ್ಥಳೀಯ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 70,000ರೂ. ಗಡಿ ದಾಟಿದೆ. ಇನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸ್ ಗೆ 2,236 ಯುಎಸ್ ಡಿಗೆ ಏರಿಕೆಯಾಗುವ ಮೂಲಕ ಹೊಸ ದಾಖಲೆ ಬರದಿದೆ. ಇದೇ ಮೊದಲ ಬಾರಿಗೆ ಚಿನ್ನದ ಬೆಲೆ ಸಾರ್ವಕಾಲಿಕ ಏರಿಕೆ ಕಂಡಿದೆ. ಕೇವಲ ಒಂದು ವಾರದ ಹಿಂದೆ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸ್ ಗೆ 2,200 ಅಮೆರಿಕನ್ ಡಾಲರ್ ಗಡಿದಾಟಿತ್ತು. ಈ ಏರಿಕೆ ಮಾರ್ಚ್ ನಲ್ಲಿ ಶೇ. 9.3 ಗಳಿಕೆ ದಾಖಲಿಸಿದೆ. ಇದು 2020ರ ಜುಲೈ ತಿಂಗಳ ಬಳಿಕದ ಅತ್ಯಧಿಕ ಮಾಸಿಕ ಏರಿಕೆಯಾಗಿದೆ.
ಸೋಮವಾರ ಚಿನ್ನದ ದರ $30-40ರಷ್ಟು ಇನ್ನಷ್ಟು ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಭಾರತೀಯ ಬುಲಿಯನ್ ಹಾಗೂ ಜ್ಯುವೆಲ್ಲರಿ ಅಸೋಸಿಯೇಷನ್ ರಾಷ್ಟ್ರೀಯ ಕಾರ್ಯದರ್ಶಿ ಸುರೇಂದ್ರ ಮೆಹ್ತಾ ತಿಳಿಸಿದ್ದಾರೆ. ಚೀನಾ ಹಾಗೂ ಇತರ ಕೇಂದ್ರೀಯ ಬ್ಯಾಂಕುಗಳ ಚಿನ್ನದ ಖರೀದಿಯಲ್ಲಿ ಏರಿಕೆಯಾದ ಬೆನ್ನಲ್ಲೇ ಈ ಹೆಚ್ಚಳವಾಗಿದೆ ಎಂದು ಅವರು ತಿಳಿಸಿದ್ದಾರೆ.ಕಳೆದ ವರ್ಷ ಅಂದ್ರೆ 2023ರ ಮಾರ್ಚ್ 29ರಂದು ಚಿನ್ನದ ದರ 10 ಗ್ರಾಂಗೆ 61,000ರೂ. ಇತ್ತು. ಈ ಮೂಲಕ ಚಿನ್ನದ ಮೇಲಿನ ಹೂಡಿಕೆ ಶೇ.15.5ರಷ್ಟು ರಿಟರ್ನ್ಸ್ ನೀಡಿದೆ.
ಸಾರ್ವಕಾಲಿಕ ಏರಿಕೆ ಕಂಡ ಚಿನ್ನದ ದರ;ಇನ್ನಷ್ಟು ಏರುತ್ತಾ ಬಂಗಾರದ ಬೆಲೆ? ಈಗ ಖರೀದಿಸೋದಾ, ಕಾದು ನೋಡೋದಾ?
ಅಮೆರಿಕದ ಫೆಡರಲ್ ಬ್ಯಾಂಕ್ ಇತ್ತೀಚೆಗೆ ಪ್ರಕಟಿಸಿದ ತನ್ನ ವಿತ್ತೀಯ ನೀತಿಯಲ್ಲಿ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡದಿದ್ದರೂ 2024ರೊಳಗೆ ಮೂರು ಬಾರಿ ಕಡಿತಗೊಳಿಸುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ ಬೆನ್ನಲ್ಲೇ ಚಿನ್ನದ ದರ ಏರಿಕೆಯ ಹಾದಿ ಹಿಡಿದಿದೆ. ಡಾಲರ್ ಮೌಲ್ಯ ಕುಸಿತಕೊಂಡಿರುವ ಕಾರಣ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಡಾಲರ್ ಹಾಗೂ ಚಿನ್ನದ ಬೆಲೆಗೆ ಸಂಬಂಧವಿದೆ. ಡಾಲರ್ ಮೌಲ್ಯದಲ್ಲಿ ಏರಿಕೆಯಾದ್ರೆ ಚಿನ್ನದ ಬೆಲೆ ತಗ್ಗುತ್ತದೆ. ಹಾಗೆಯೇ ಡಾಲರ್ ಮೌಲ್ಯ ಇಳಿಕೆಯಾದ್ರೆ ಚಿನ್ನದ ಬೆಲೆ ಏರಿಕೆಯಾಗುತ್ತದೆ.
ಕೋವಿಡ್ ಸಮಯದಲ್ಲಿ ಚಿನ್ನದ ಬೆಲೆ ಏರಿಕೆ ಕಂಡಿದ್ದರೂ ಆ ಬಳಿಕ ಇಳಿಕೆ ದಾಖಲಿಸಿತ್ತು. ಆದರೆ, 2023ರಲ್ಲಿ ಏರಿಕೆಯ ಹಾದಿ ಹಿಡಿದಿತ್ತು. ಈಗಾಗಲೇ ತಿಳಿಸಿದಂತೆ ಚಿನ್ನದ ಬೆಲೆಗೂ ಡಾಲರ್ ಮೌಲ್ಯಕ್ಕೂ ಸಂಬಮಧವಿದೆ. ಅಮೆರಿಕದ ಫೆಡರಲ್ ಬ್ಯಾಂಕ್ ಈ ವರ್ಷ ಬಡ್ಡಿದರದಲ್ಲಿ ಮೂರು ಬಾರಿ ಕಡಿತ ಮಾಡುವ ನಿರೀಕ್ಷೆಯಿರುವ ಕಾರಣ ಚಿನ್ನದ ಬೆಲೆ ಇನ್ನಷ್ಟು ಏರಿಕೆ ಕಾಣುವ ಸಾಧ್ಯತೆಯಿದೆ ಅನ್ನೋದು ತಜ್ಞರ ಅಭಿಪ್ರಾಯ. ಜಾಗತಿಕ ಮಾರುಕಟ್ಟೆ ಪರಿಸ್ಥಿತಿ ಗಮನಿಸಿದರೆ 2024ನೇ ಸಾಲಿನಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಈಗಾಗಲೇ ಅನೇಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
79 ರೂಪಾಯಿಯಿಂದ 68 ಸಾವಿರದವರೆಗೆ, ಸ್ವಾತಂತ್ರ್ಯದ ನಂತರ ದೇಶದಲ್ಲಿ 10 ಗ್ರಾಮ್ ಚಿನ್ನದ ಬೆಲೆ ಬದಲಾಗಿದ್ದೆಷ್ಟು?
ಮಾರುಕಟ್ಟೆ ಅರಿತುಕೊಳ್ಳಿ
ಚಿನ್ನದ ಮೇಲೆ ಹೂಡಿಕೆ ಮಾಡೋರು ಮಾರುಕಟ್ಟೆಯಲ್ಲಿನ ಟ್ರೆಂಡ್ ಗಮನಿಸೋದು ಅಗತ್ಯ. ಯಾವೆಲ್ಲ ಅಂಶಗಳು ಚಿನ್ನದ ಬೆಲೆ ಮೇಲೆ ಪರಿಣಾಮ ಬೀರುತ್ತವೆ ಎಂಬುದನ್ನು ಅರಿಯೋದು ಅಗತ್ಯ. ಜಾಗತಿಕ ಆರ್ಥಿಕಾ ಪರಿಸ್ಥಿತಿಗಳು, ಮಾರುಕಟ್ಟೆ ಪರಿಸ್ಥಿತಿ, ಡಾಲರ್ ಮೌಲ್ಯ ಸೇರಿದಂತೆ ಅನೇಕ ಅಂಶಗಳನ್ನು ಗಮನಿಸೋದು ಅಗತ್ಯ. ಇನ್ನು ಮದುವೆ, ಹಬ್ಬಗಳು ಅಥವಾ ಜಾಗತಿಕ ಆರ್ಥಿಕ ಅನಿಶ್ಚಿತತೆಗಳು ಚಿನ್ನದ ಬೇಡಿಕೆ ಹೆಚ್ಚಿಸುವ ಕಾರಣ ಬೆಲೆಯಲ್ಲಿ ಏರಿಕೆಯಾಗುತ್ತದೆ ಕೂಡ. ಹೀಗಾಗಿ ಈ ಎಲ್ಲ ಅಂಶಗಳನ್ನು ಗಮನಿಸೋದು ಅಗತ್ಯ.