ಎಲ್ಲ ವಿಮಾ ಪಾಲಿಸಿದಾರರು ಏ.1ರಿಂದ ಇ-ವಿಮೆ ಮಾಡಿಸೋದು ಕಡ್ಡಾಯ. ಇದರಿಂದ ಪಾಲಿಸಿದಾರರಿಗೇನು ಪ್ರಯೋಜನ? ಇಲ್ಲಿದೆ ಮಾಹಿತಿ.
ನವದೆಹಲಿ (ಮಾ.30): ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ವಿಮಾ ಪಾಲಿಸಿಗಳ ಡಿಜಿಟಲೀಕರಣವನ್ನು ಭಾರತದ ವಿಮಾ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ (ಐಆರ್ ಡಿಎಐ) ಕಡ್ಡಾಯಗೊಳಿಸಿದೆ. ಹೀಗಾಗಿ ಎಲ್ಲ ಪಾಲಿಸಿದಾರರು ಕಡ್ಡಾಯವಾಗಿ ಇ-ವಿಮೆ ಮಾಡಿಸೋದು ಅಗತ್ಯ. ಈ ನಿಯಮ ಜೀವ, ಆರೋಗ್ಯ ಹಾಗೂ ಸಾಮಾನ್ಯ ವಿಮೆ ಸೇರಿದಂತೆ ಎಲ್ಲ ವರ್ಗದ ವಿಮಾ ಪಾಲಿಸಿಗಳಿಗೆ ಅನ್ವಯಿಸುತ್ತದೆ. ಇ-ವಿಮಾ ಖಾತೆ ಹೆಸರಿನ ಆನ್ ಲೈನ್ ಪ್ಲಾಟ್ ಫಾರ್ಮ್ ಮೂಲಕ ಜೀವ ಹಾಗೂ ಆರೋಗ್ಯ ವಿಮಾ ಪಾಲಿಸಿಗಳು ಸೇರಿದಂತೆ ವಿಮಾ ಪ್ಲ್ಯಾನ್ ಗಳನ್ನು ಎಲೆಕ್ಟ್ರಾನಿಕ್ ನಿರ್ವಹಣೆ ಮಾಡಬಹುದು. ಐಆರ್ ಡಿಎಐ ಇ-ವಿಮೆಯನ್ನು ಕಡ್ಡಾಯಗೊಳಿಸಿದೆ. ಇದು ವಿಮಾ ಪಾಲಿಸಿಗಳ ವಿತರಣೆ ಹಾಗೂ ನಿರ್ವಹಣೆಯನ್ನು ಒಳಗೊಂಡಿದೆ. ಹಾಗಾದ್ರೆ ಇ-ವಿಮೆಯಿಂದ ಪಾಲಿಸಿದಾರರಿಗೆ ಏನು ಪ್ರಯೋಜನಗಳಿವೆ?
ಪಾಲಿಸಿದಾರರ ಮೇಲೆ ಇ-ವಿಮೆ ಪರಿಣಾಮ
*ಹೆಚ್ಚಿನ ಅನುಕೂಲ: ಇದು ಗ್ರಾಹಕ ಕೇಂದ್ರೀಕೃತ ಕ್ರಮವಾಗಿದೆ ಎಂದು ವಿಮಾ ಕ್ಷೇತ್ರದಲ್ಲಿ ಅನುಭವ ಹೊಂದಿರೋರ ಅಭಿಪ್ರಾಯವಾಗಿದೆ. ಎಲೆಕ್ಟ್ರಾನಿಕ್ ನಮೂನೆಗಳ ಮೂಲಕ ಪಾಲಿಸಿದಾರರು ವಿಮಾ ಯೋಜನೆಗಳನ್ನು ಸುಲಭವಾಗಿ ನಿರ್ವಹಣೆ ಮಾಡಬಹುದು. ಇದರಿಂದ ಗ್ರಾಹಕರಿಗೆ ಅನೇಕ ಅನುಕೂಲಗಳು ಕೂಡ ಇವೆ.
ಸಂಬಂಧಕ್ಕೂ ಬಂತು ವಿಮೆ! ಸಂಗಾತಿ ಮಧ್ಯೆ ಅನ್ಯೋನ್ಯತೆ ಜೊತೆ ಆರ್ಥಿಕ ಭದ್ರತೆ ನೀಡುತ್ತೆ!
*ಸುವ್ಯವಸ್ಥಿತ ಪ್ರಕ್ರಿಯೆ: ಡಿಜಿಟಲೀಕರಣದ ಅನೇಕ ಪ್ರಯೋಜನಗಳಲ್ಲಿ ಸುವ್ಯವಸ್ಥಿತ ಪ್ರಕ್ರಿಯೆ ಕೂಡ ಸೇರಿದೆ. ಕಾಗದರಹಿತ ವ್ಯವಸ್ಥೆಯನ್ನು ಇದು ಕಲ್ಪಿಸುವ ಕಾರಣ ದಾಖಲೆಗಳು ಕಾಣಿಯಾಗುವ ಭಯವಿಲ್ಲ. ಅಲ್ಲದೆ, ವಿಳಾಸ ಅಥವಾ ಸಂಪರ್ಕ ಮಾಹಿತಿಗಳನ್ನು ಅನೇಕ ಪಾಲಿಸಿಗಳಲ್ಲಿ ಅಪ್ಡೇಟ್ ಮಾಡುವ ಪ್ರಕ್ರಿಯೆಯನ್ನು ಇದು ಸರಳಗೊಳಿಸುತ್ತದೆ.
*ಉತ್ತಮ ಸಂವಹನ ಹಾಗೂ ಕ್ಲೇಮ್ ಸೆಟ್ಲಮೆಂಟ್ : ಡಿಜಿಟಲ್ ವಿಮೆಯಿಂದ ವಿಮಾ ಸಂಸ್ಥೆ ಹಾಗೂ ಪಾಲಿಸಿದಾರರ ನಡುವಿನ ಸಂವಹನ ಉತ್ತಮಗೊಳ್ಳುತ್ತದೆ. ಅಲ್ಲದೆ, ಈ ವ್ಯವಸ್ಥೆಯಿಂದ ಕ್ಲೇಮ್ ಸೆಟ್ಲಮೆಂಟ್ ಪ್ರಕ್ರಿಯೆ ಕೂಡ ಸರಳಗೊಳ್ಳಲಿದೆ. ಪಾಲಿಸಿದಾರರು ಕ್ಲೇಮ್ ಸೆಟ್ಲಮೆಂಟ್ ಆಗಿ ಮೊದಲಿನಂತೆ ಅಲೆದಾಡಬೇಕಾದ ಅಗತ್ಯವಿಲ್ಲ. ಈ ಇಲೆಕ್ಟ್ರಾನಿಕ್ ಪ್ಲಾಟ್ ಫಾರ್ಮ್ ಹಾಗೂ ಇ-ವಿಮಾ ಖಾತೆಗಳ ಮೂಲಕ ಪಾಲಿಸಿದಾರರಿಗೆ ಹೆಚ್ಚಿನ ಅನುಕೂಲ, ಭದ್ರತೆ ಹಾಗೂ ವಿಮಾ ಸಂಸ್ಥೆಗಳ ಜೊತೆಗೆ ಉತ್ತಮ ಸಂವಹನ ಸಾಧ್ಯವಾಗಲಿದೆ.
ವಿಮೆ ಕ್ಲೈಮ್ ನಿರಾಕರಿಸಿದ್ರೆ ಇಲ್ಲಿದ ದೂರು ನೀಡಿ:
ಒಂದು ವೇಳೆ ಆರೋಗ್ಯ ವಿಮಾ ಕಂಪನಿ ಮೆಡಿಕ್ಲೈಮ್ ತಿರಸ್ಕರಿಸಿದ್ರೆ ನೋಂದಾಯಿತ ಪೋಸ್ಟ್ ಮೂಲಕ ವಿಮಾ ಕಂಪನಿಗೆ ಪತ್ರವನ್ನು ಕಳುಹಿಸಿ. ಈ ಮೂಲಕ ನಿಮ್ಮ ದೂರನ್ನು ನೀಡಬೇಕು. ಕ್ಲೈಮ್ ತಿರಸ್ಕರಿಸಿದ ಕಾರಣ ಸರಿಯಾಗಿಲ್ಲ ಎಂದು ನೀವು ಕಂಪನಿಗೆ ಹೇಳಬಹುದು. ನಿಮ್ಮ ವಿಷ್ಯದ ಪರವಾಗಿ ನೀವು ವಾದವನ್ನು ಮಂಡಿಸಬೇಕು. ನೀವು ಏಕೆ ಕ್ಲೈಮ್ ಕೇಳುತ್ತಿದ್ದೀರಿ ಹಾಗೂ ಅದು ಏಕೆ ಸರಿಯಾಗಿದೆ ಎಂಬುದನ್ನು ನೀವು ವಿವರಿಸಬೇಕಾಗುತ್ತದೆ. ನೀವು ವಿಮೆ ಪಡೆದ ಕಂಪನಿ ಜೊತೆ ನಿಮ್ಮ ದೂರಿನ ಪತ್ರ ಮತ್ತು ಇಮೇಲ್‌ನ ಪ್ರತಿಯನ್ನು ನೀವು ಐಆರ್ ಡಿಎಐ (IRDAI) ಹೈದರಾಬಾದ್‌ನ ಇಮೇಲ್ ಐಡಿ s@irdai.gov.in ಗೆ ಕಳುಹಿಸಬೇಕು. ಕ್ಲೈಮ್ ನಿರಾಕರಣೆ ನಿಮಗೆ ಏಕೆ ಸಂತೋಷ ತಂದಿಲ್ಲ ಹಾಗೂ ಏಕೆ ವಿರೋಧಿಸುತ್ತಿದ್ದೀರಿ ಎಂಬುದಕ್ಕೆ ನೀವು ದಾಖಲೆ ನೀಡಬೇಕಾಗುತ್ತದೆ.
ಏನಿದು ನಿರಾಮಯ ಆರೋಗ್ಯ ವಿಮಾ ಯೋಜನೆ? ಯಾರು ಇದರ ಪ್ರಯೋಜನ ಪಡೆಯಬಹುದು?
ನಿಮ್ಮ ಪತ್ರ ಮತ್ತು ಇಮೇಲ್ ಕಳುಹಿಸಿದ ಒಂದು ತಿಂಗಳ ನಂತರವೂ ವಿಮಾ ಕಂಪನಿಯು ನಿಮ್ಮ ಕ್ಲೈಮ್ ಅನ್ನು ಪಾವತಿಸದಿದ್ದರೆ ಅಥವಾ ಅದ್ರ ಬಗ್ಗೆ ಮಾಹಿತಿ ನೀಡದೆ ಹೋದಲ್ಲಿ ನಿಮ್ಮ ಪ್ರದೇಶದ ವಿಮಾ ಲೋಕಪಾಲ್ ಗೆ ನೀವು ದೂರು ಸಲ್ಲಿಸಬಹುದು. ಇದಕ್ಕಾಗಿ, ನೀವು ನೋಂದಾಯಿತ ಪೋಸ್ಟ್ ಮತ್ತು ಇಮೇಲ್ ಮೂಲಕ ಸರಳ ಕಾಗದದ ಮೇಲೆ ಬರೆಯುವ ಅಥವಾ ಟೈಪ್ ಮಾಡುವ ಮೂಲಕ ನಿಮ್ಮ ದೂರನ್ನು ಕಳುಹಿಸಬಹುದು. ಈ ಪತ್ರದಲ್ಲಿ ಅರ್ಜಿದಾರರ ಹೆಸರು, ಸಹಿ, ವಿಮೆಯ ಪಾಲಿಸಿ ಸಂಖ್ಯೆ, ವಿಮಾ ಹಕ್ಕು ಸಂಖ್ಯೆ ಮತ್ತು ಕ್ಲೈಮ್ ಮೊತ್ತವನ್ನು ನಮೂದಿಸಬೇಕು. ಈ ಪತ್ರದಲ್ಲಿ ಪಿನ್ ಕೋಡ್ ಸೇರಿದಂತೆ ನಿಮ್ಮ ಸಂಪೂರ್ಣ ವಿಳಾಸ, ಫೋನ್ ಸಂಖ್ಯೆ, ಇಮೇಲ್ ಐಡಿ, ವಿಮಾ ಕಂಪನಿಯ ಹೆಸರು ಮತ್ತು ಪಾಲಿಸಿ ತೆಗೆದುಕೊಂಡ ಕಚೇರಿಯ ವಿಳಾಸವನ್ನು ನೀವು ನಮೂದಿಸಬೇಕು. ಆಸ್ಪತ್ರೆಯ ಬಿಲ್ ಪ್ರತಿ, ವೈದ್ಯರ ಪ್ರಿಸ್ಕ್ರಿಪ್ಷನ್, ತನಿಖಾ ವರದಿ, ವಿಮಾ ಕಂಪನಿ ನೀಡಿದ ನಿರಾಕರಣೆ ಪತ್ರವನ್ನೂ ಲಗತ್ತಿಸಬೇಕು.