ಶಾಕ್ ನಂ3: ನಿಮಗೆ ನಿತ್ಯವೂ ಬೇಕಾದ ವಸ್ತುವಿನ ಬೆಲೆ ಏರಿದೆ!

By Suvarna NewsFirst Published Jan 2, 2020, 2:22 PM IST
Highlights

ಹೊಸ ವರ್ಷದ ಎರಡನೇ ದಿನವೂ ಬೆಲೆ ಏರಿಕೆಯ ಶಾಕ್| ಅತ್ಯಂತ ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆ ಸಂಭವ| ಗ್ರಾಹಕ ಸರಕುಗಳ ಬೆಲೆಗಳಲ್ಲಿ ಭಾರೀ ಏರಿಕೆ ಸಂಭವ| ಹಾಲು, ಸೂರ್ಯಕಾಂತಿ ಎಣ್ಣೆ,  ಗೋಧಿ, ಸಕ್ಕರೆಯಂತಹ ಕಚ್ಚಾ ಸಾಮಾಗ್ರಿಗಳ ದರ ಹೆಚ್ಚಳ| ಬ್ರಿಟಾನಿಯಾ, ಐಟಿಸಿ, ನೆಸ್ಲೆ ಕಂಪನಿಗಳ ಉತ್ಪನ್ನಗಳ ಬೆಲೆ ಏರಿಕೆ| ಬೆಲೆ ಹೆಚ್ಚಳ ಅಥವಾ ಪ್ಯಾಕ್ ಗಾತ್ರವನ್ನು ಕಡಿಮೆ ಮಾಡುವ ಸಂಭವ| ಹಾಲಿನ ಉತ್ಪನ್ನಗಳ ಬೆಲೆಯಲ್ಲಿ ಶೇ. 35ರಷ್ಟು ಹೆಚ್ಚಳ| ಆಹಾರ ಹಣದುಬ್ಬದರದ ಪರಿಣಾಮವಾಗಿ ಬೆಲೆ ಏರಿಕೆ ಅನಿವಾರ್ಯ ಕ್ರಮ| 

ನವದೆಹಲಿ(ಜ.02): ಹೊಸ ವರ್ಷದ ಆರಂಭಗೊಂಡ ಬೆನ್ನಲ್ಲೇ ಬೆಲೆ ಏರಿಕೆಯ ಪರ್ವವೂ ಶುರುವಾದಂತಿದೆ. ನಿನ್ನೆ(ಜ.01)ಯಷ್ಟೇ ರೆಲ್ವೇ ಟಿಕೆಟ್, ಅಡುಗೆ ಅನಿಲಗಳ ಬೆಲೆ ಏರಿರುವ ಬೆನ್ನಲ್ಲೇ, ಇಂದು ಗ್ರಾಹಕ ಸರಕುಗಳ ಬೆಲೆಗಳಲ್ಲಿ ಏರಿಕೆಯಾಗಲಿದೆ.

ಬ್ರಿಟಾನಿಯಾ, ಐಟಿಸಿ, ನೆಸ್ಲೆಯಂತಹ ಗ್ರಾಹಕ ಸರಕು ಕಂಪನಿಗಳು ತಮ್ಮ ಉತ್ಪನ್ನಗಳ ಬೆಲೆ ಏರಿಸಲು ಮುಂದಾಗಿದ್ದು, ಗ್ರಾಹಕರ ಜೇಬಿಗೆ ಮತ್ತಷ್ಟು ಕತ್ತರಿ ಬೀಳುವುದು ಸಿದ್ಧವಾಗಿದೆ. 

ಹಾಲು, ಸೂರ್ಯಕಾಂತಿ ಎಣ್ಣೆ,  ಗೋಧಿ, ಸಕ್ಕರೆಯಂತಹ ಕಚ್ಚಾ ಸಾಮಾಗ್ರಿಗಳ ದರ ಹೆಚ್ಚಾಗಿದ್ದು, ಈ ಕಂಪನಿಗಳು ತಮ್ಮ ಉತ್ಪನ್ನಗಳ ಬೆಲೆ ಹೆಚ್ಚಳ ಮಾಡಬಹುದು ಅಥವಾ ಪ್ಯಾಕ್ ಗಾತ್ರವನ್ನು ಕಡಿಮೆ ಮಾಡುವ ಸಾಧ್ಯತೆ ದಟ್ಟವಾಗಿದೆ.

ಈ ಕುರಿತು ಮಾಹಿತಿ ನೀಡಿರುವ ನೆಸ್ಲೆ ಇಂಡಿಯಾ ಮ್ಯಾನೇಜಿಂಗ್ ಡೈರೆಕ್ಟರ್ ಸೂರ್ಯ ನಾರಾಯಣ, ಕಚ್ಚಾ ಸಾಮಗ್ರಿಗಳ ಬೆಲೆ ಹಾಗೂ ಮಾರುಕಟ್ಟೆ ನೀತಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಇಡೀ ವರ್ಷಕ್ಕಾಗುವಷ್ಟು ಶಾಕ್ ಒಂದೇ ದಿನದಲ್ಲಿ: ಹ್ಯಾಪಿ(?) ನ್ಯೂ ಇಯರ್ ಎಂದ ಮೋದಿ ಸರ್ಕಾರ!

ಆಹಾರ ಹಣದುಬ್ಬರದ ಪರಿಣಾಮವಾಗಿ ಬೆಲೆ ಏರಿಕೆ ಅನಿವಾರ್ಯ ಕ್ರಮ ಎಂದು ಹೇಳಿರುವ ಈ ಕಂಪನಿಗಳು, ಬಿಸ್ಕಟ್ ಬೆಲೆಯಲ್ಲಿ ಶೇ. 3 ರಿಂದ 6 ರಷ್ಟು ಬೆಲೆ ಹೆಚ್ಚಳ ಮಾಡುವುದು ಬಹುತೇಕ ಖಚಿತ ಎಂದು ಹೇಳಿವೆ. 

ಸಣ್ಣ ಮತ್ತು ಮಧ್ಯಮ ಉತ್ಪನ್ನ ತಯಾರಿಕರಿಗೆ ನಿರ್ವಹಣಾ ವೆಚ್ಚಗಳನ್ನು ಸೇರಿಸಲಾಗುವುದಾದರೂ, ದೊಡ್ಡ ಪ್ಯಾಕ್‌ಗಳ ಬೆಲೆ ಹೆಚ್ಚಳ ಅಥವಾ ತೂಕದಲ್ಲಿ ವ್ಯತ್ಯಾಸ ಮಾಡುವುದು ಅನಿವಾರ್ಯ ಎಂದು ಹೇಳಲಾಗಿದೆ. 

ಅದರಂತೆ ಹಾಲಿನ ಉತ್ಪನ್ನಗಳ ಬೆಲೆಯಲ್ಲಿ ಶೇ. 35ರಷ್ಟು ಹೆಚ್ಚಳ ಮಾಡಲಾಗಿದ್ದು, ದೇಶದ ಪ್ರಮುಖ ಹಾಲು ಉತ್ಪಾದಕ ಸಂಸ್ಥೆಗಳಾದ ಅಮುಲ್  ಹಾಗೂ ಮದರ್ ಡೈರಿ ಹಾಲಿನ ದರ ಏರಿದೆ. 

ಅಮೂಲ್ ಎಲ್ಲಾ ರಾಜ್ಯಗಳಲ್ಲಿ  ಪ್ರತಿ ಲೀಟರ್‌ಗೆ 2 ರೂ ಬೆಲೆ ಹೆಚ್ಚಳ ಮಾಡಿದ್ದರೆ, ಮದರ್ ಡೈರಿ 3 ರೂ.ವರೆಗೆ ಏರಿಕದೆ ಮಾಡಿದೆ. 

ಹಣದುಬ್ಬರದ ಒತ್ತಡದಿಂದಾಗಿ ಮುಂದಿನ ಎರಡು ವಾರಗಳಲ್ಲಿ ಶೇ.7 ರಿಂದ ಶೇ.12ರಷ್ಟು ಬೆಲೆ ಹೆಚ್ಚಳವಾಗುವ ಸಂಭವವಿದ್ದು, ಮುಂದಿನ ದಿನಗಳಲ್ಲಿ ಗ್ರಾಹಕ ಸರಕುಗಳ ಬೆಲೆಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ದಟ್ಟವಾಗಿದೆ ಅಂತಾರೆ ತಜ್ಞರು.

ಜನವರಿ 2ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!