ಜನ್ ಧನ್ ಯೋಜನೆ ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದೆ. ಇದೇ ಆಗಸ್ಟ್ 15ಕ್ಕೆ 9 ವರ್ಷ ಪೂರೈಸಿದ ಈ ಯೋಜನೆಯಡಿ ಬ್ಯಾಂಕಿಂಗ್ ವ್ಯವಸ್ಥೆಗೆ 50 ಕೋಟಿಗೂ ಅಧಿಕ ಜನರು ಸೇರ್ಪಡೆಗೊಂಡಿದ್ದಾರೆ.
ನವದೆಹಲಿ (ಆ.28): ಜನ್ ಧನ್ ಯೋಜನೆ ಹಾಗೂ ಡಿಜಿಟಲ್ ಪರಿವರ್ತನೆಯು ದೇಶದಲ್ಲಿ ಆರ್ಥಿಕ ಸೇರ್ಪಡೆ ವಿಚಾರದಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ತಿಳಿಸಿದ್ದಾರೆ. ಈ ಎರಡರ ಪರಿಣಾಮ 50 ಕೋಟಿಗೂ ಅಧಿಕ ಜನರು ಬ್ಯಾಂಕಿಂಗ್ ವ್ಯವಸ್ಥೆಗೆ ಸೇರ್ಪಡೆಗೊಂಡಿದ್ದು, ಒಟ್ಟು ಠೇವಣಿಗಳ ಮೊತ್ತ 2ಲಕ್ಷ ಕೋಟಿ ರೂ. ದಾಟಿದೆ ಎಂಬ ಮಾಹಿತಿಯನ್ನು ಅವರು ನೀಡಿದ್ದಾರೆ. ಜಗತ್ತಿನ ಅತೀದೊಡ್ಡ ಆರ್ಥಿಕ ಸೇರ್ಪಡೆ ಕಾರ್ಯಕ್ರಮ ಎಂದು ಗುರುತಿಸಿಕೊಂಡಿರುವ ಜನ್ ಧನ್ ಯೋಜನೆಯ 9ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ನೀಡಿದ ಸಂದೇಶದಲ್ಲಿ ಈ ಮಾಹಿತಿ ನೀಡಿರುವ ಅವರು, ಶೇ.55.5ಷ್ಟು ಬ್ಯಾಂಕ್ ಖಾತೆಗಳನ್ನು ಮಹಿಳೆಯರು ತೆರೆದಿದ್ದಾರೆ. ಹಾಗೆಯೇ ಶೇ.67ರಷ್ಟು ಖಾತೆಗಳನ್ನು ಗ್ರಾಮೀಣ ಹಾಗೂ ಅರೆ ನಗರ ಪ್ರದೇಶಗಳಲ್ಲಿ ತೆರೆಯಲಾಗಿದೆ. ಇನ್ನು ಈ ಯೋಜನೆಯಡಿ ಬ್ಯಾಂಕ್ ಖಾತೆಗಳ ಸಂಖ್ಯೆಯಲ್ಲಿ 3.4 ಪಟ್ಟು ಹೆಚ್ಚಳವಾಗಿದ್ದು, 2015ರ ಮಾರ್ಚ್ ನಲ್ಲಿ 14.72 ಕೋಟಿಯಿಂದ 2023ರ ಆಗಸ್ಟ್ 16ಕ್ಕೆ 50.09 ಕೋಟಿಗೆ ಏರಿಕೆಯಾಗಿತ್ತು. ಇನ್ನು ಒಟ್ಟು ಠೇವಣಿಗಳು ಕೂಡ ಹೆಚ್ಚಳಗೊಂಡಿದ್ದು, 2015ರ ಮಾರ್ಚ್ ನಲ್ಲಿ 15,670 ಕೋಟಿ ರೂ.ನಿಂದ 2023 ಆಗಸ್ಟ್ ವೇಳೆಗೆ 2.03ಲಕ್ಷ ಕೋಟಿ ರೂ.ಗೆ ಏರಿಕೆಯಾಗಿವೆ.
ಜನ್ ಧನ್ ಖಾತೆಗಳ ಸರಾಸರಿ ಠೇವಣಿಗಳಲ್ಲಿ ಕೂಡ 3.8 ಪಟ್ಟು ಏರಿಕೆಯಾಗಿದೆ. 2015ರ ಮಾರ್ಚ್ ನಲ್ಲಿ ಠೇವಣಿ ಸರಾಸರಿ ಮೊತ್ತ 1,065ರೂ. ಇದ್ದು, 2023ರ ಮಾರ್ಚ್ ನಲ್ಲಿ 4,063ರೂ.ಗೆ ಏರಿಕೆಯಾಗಿದೆ. ಯಾವುದೇ ಶುಲ್ಕವಿಲ್ಲದೆ ಈ ಖಾತೆಗಳಿಗೆ ಸುಮಾರು 34 ಕೋಟಿ ರುಪೇ ಕಾರ್ಡ್ ಗಳನ್ನು ವಿತರಿಸಲಾಗಿದೆ. ಇದು 2ಲಕ್ಷ ರೂ. ಅಪಘಾತ ವಿಮಾ ಕವರೇಜ್ ಅನ್ನು ಕೂಡ ಒದಗಿಸಿದೆ. ಇನ್ನು ಈ ಯೋಜನೆಯಡಿ ಶೂನ್ಯ ಬ್ಯಾಲೆನ್ಸ್ ಹೊಂದಿರುವ ಒಟ್ಟು ಖಾತೆಗಳ ಪ್ರಮಾಣದಲ್ಲಿ 2023ರ ಆಗಸ್ಟ್ ಗೆ ಅನ್ವಯಿಸುವಂತೆ ಶೇ.8ರಷ್ಟು ಇಳಿಕೆಯಾಗಿದೆ. 2015ರ ಮಾರ್ಚ್ ನಲ್ಲಿ ಈ ಖಾತೆಗಳ ಪ್ರಮಾಣ ಶೇ.58ರಷ್ಟಿತ್ತು.
ಮತ್ತೊಂದು ಮೈಲಿಗಲ್ಲು ಸಾಧಿಸಿದ ಪಿಎಂ ಜನ್ ಧನ್ ಯೋಜನೆ; 2 ಲಕ್ಷ ಕೋಟಿ ರೂ.ಗಡಿ ದಾಟಿದ ಠೇವಣಿ ಮೊತ್ತ
ಷೇರುದಾರರು, ಬ್ಯಾಂಕ್ ಗಳು, ವಿಮಾ ಕಂಪನಿಗಳು ಹಾಗೂ ಸರ್ಕಾರಿ ಅಧಿಕಾರಿಗಳ ಸಮಗ್ರ ಪರಿಶ್ರಮದ ಫಲವಾಗಿ ಪಿಎಂಜೆಡಿವೈ ಯಶಸ್ವಿ ಕಾರ್ಯಕ್ರಮವಾಗಿ ರೂಪುಗೊಂಡಿದೆ. ಇದು ದೇಶದ ಆರ್ಥಿಕ ಸೇರ್ಪಡೆ ಸ್ವರೂಪವನ್ನೇ ಬದಲಾಯಿಸಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಜನ್ ಧನ್-ಆಧಾರ್-ಮೊಬೈಲ್ (JAM) ಸಂಯೋಜನೆ ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಸಾಮಾನ್ಯ ಜನರ ಖಾತೆಗೆ ನೇರವಾಗಿ ವರ್ಗಾಯಿಸುವಲ್ಲಿ ಯಶಸ್ವಿಯಾಗಿದೆ ಎಂದು ಹಣಕಾಸು ಸಚಿವಾಲಯದ ರಾಜ್ಯ ಸಚಿವ ಭಗ್ವತ್ ಕರಡ್ ಜನ್ ಧನ್ ಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಎಲ್ಲರನ್ನೂ ಒಳಗೊಂಡ ಹಣಕಾಸು ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದ ಪ್ರಾರಂಭಿಸಿದ ಪಿಎಂಜಿಡಿವೈ ಯೋಜನೆಗೆ ಇದೇ ಆಗಸ್ಟ್ 15ಕ್ಕೆ 9 ವರ್ಷಗಳು. 2014ರ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಈ ಯೋಜನೆ ಘೋಷಣೆ ಮಾಡಿದ್ದರು. ಇದನ್ನು ಆರ್ಥಿಕತೆಯಲ್ಲಿ ಜನರನ್ನು ತೊಡಗಿಸಿಕೊಂಡ ಜಗತ್ತಿನ ಅತೀದೊಡ್ಡ ಯೋಜನೆ ಎಂದು ಪರಿಗಣಿಸಲಾಗಿದೆ.
ಪಿಎಂ ಆವಾಸ್ ಯೋಜನೆ (ನಗರ) ವಿಸ್ತರಿಸುವಂತೆ ಸರ್ಕಾರಕ್ಕೆ ಶಿಫಾರಸ್ಸು ನೀಡಿದ ವರದಿ,ಇದಕ್ಕೇನು ಕಾರಣ?
ಬ್ಯಾಂಕ್ ಖಾತೆಯನ್ನೇ ಹೊಂದಿರದ ಜನರು ಬ್ಯಾಂಕ್ ಖಾತೆಗಳನ್ನು ಸುಲಭವಾಗಿ ತೆರೆಯಲು ಜನ್ ಧನ್ ಯೋಜನೆ ಅವಕಾಶ ಒದಗಿಸಿತು. ಈ ಮೂಲಕ ಬ್ಯಾಂಕಿಂಗ್ ವ್ಯವಹಾರಗಳಿಂದ ದೂರವಿದ್ದ ಗ್ರಾಮೀಣ ಭಾಗದ ಜನರನ್ನು ದೇಶದ ಹಣಕಾಸು ವ್ಯವಸ್ಥೆಯಲ್ಲಿ ಸೇರ್ಪಡೆಗೊಳ್ಳುವಂತೆ ಮಾಡಿತು. ಇನ್ನು ಜನ್ ಧನ್ ಯೋಜನೆ ಜಾರಿಗಿಂತ ಮುನ್ನ ಸರ್ಕಾರಿ ಯೋಜನೆಗಳ ಸಹಾಯಧನ ಫಲಾನುಭವಿಗಳಿಗೆ ನೇರವಾಗಿ ಸಿಗುತ್ತಿರಲಿಲ್ಲ. ಹಾಗಾಗಿ ದುರ್ಬಳಕೆ ಸಾಧ್ಯತೆ ಹೆಚ್ಚಿತ್ತು. ಆದರೆ, ಜನ್ ಧನ್ ಬಳಿಕ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮೆ ಆಗುತ್ತಿರುವ ಕಾರಣ ದುರ್ಬಳಕೆಯಾಗುವ ತೀರಾ ಕಡಿಮೆ.
OD ಸೌಲಭ್ಯ
ಜನ್ ಧನ್ ಖಾತೆಯಿಂದ ಓವರ್ ಡ್ರಾಫ್ಟ್ (OD) ಸೌಲಭ್ಯವನ್ನು ಕೂಡ ಪಡೆಯಬಹುದು. ನಿಮ್ಮ ಜನ್ ಧನ್ ಖಾತೆಯಲ್ಲಿ ಶೂನ್ಯ ಬ್ಯಾಲೆನ್ಸ್ (zero balance) ಇದ್ದರೂ ನೀವು 10 ಸಾವಿರ ರೂ. ತನಕ ಓವರ್ ಡ್ರಾಫ್ಟ್ ಸೌಲಭ್ಯ ಪಡೆಯಲು ಸರ್ಕಾರ ಅವಕಾಶ ಕಲ್ಪಿಸಿದೆ.