ಉದ್ಯೋಗಿಗಳ ಇಪಿಎಫ್ ಖಾತೆಗಳಿಗೆ ಈ ತಿಂಗಳ ಅಂತ್ಯದೊಳಗೆ ಅಂದ್ರೆ ದೀಪಾವಳಿ ಬಳಿಕ ಬಡ್ಡಿ ಜಮೆಯಾಗೋ ಸಾಧ್ಯತೆಯಿದೆ ಎಂದು ಕೆಲವು ವರದಿಗಳು ತಿಳಿಸಿವೆ. ಹಾಗಾದ್ರೆ ಇಪಿಎಫ್ ಖಾತೆಗೆ ಬಡ್ಡಿ ಹಣ ಬಂದಿದೆಯೋ ಇಲ್ಲವೋ ಎಂದು ಚೆಕ್ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ.
ನವದೆಹಲಿ (ಅ.19): ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಖಾತೆಗೆ ಬಡ್ಡಿ ಯಾವಾಗ ಜಮೆ ಆಗುತ್ತದೆಂದು ಕಾಯುತ್ತಿರೋರಿಗೆ ಶುಭ ಸುದ್ದಿ. ಕೆಲವು ವರದಿಗಳ ಪ್ರಕಾರ ಈ ತಿಂಗಳ ಅಂತ್ಯದೊಳಗೆ ಇಪಿಎಫ್ ಖಾತೆಗೆ ಬಡ್ಡಿ ಜಮೆಯಾಗುವ ಸಾಧ್ಯತೆಯಿದೆ. ಹೀಗಾಗಿ ನಿಮ್ಮ ಇಪಿಎಫ್ ಖಾತೆಗೆ ಈ ತನಕ ಬಡ್ಡಿ ಜಮೆ ಆಗಿಲ್ಲವೆಂದ್ರೆ ಚಿಂತಿಸಬೇಡಿ, ದೀಪಾವಳಿಯಾದ ತಕ್ಷಣ ಈ ಕೆಲಸವಾಗಲಿದೆ. ಕೇಂದ್ರ ಸರ್ಕಾರ ಜೂನ್ ನಲ್ಲಿ ಇಪಿಎಫ್ ಠೇವಣಿಗಳಿಗೆ 2021-22ನೇ ಸಾಲಿಗೆ ನಾಲ್ಕು ದಶಕಗಳ ಅತೀ ಕಡಿಮೆ ಬಡ್ಡಿದರವಾದ ಶೇ.8.1 ನೀಡಲು ಒಪ್ಪಿಗೆ ನೀಡಿತ್ತು. ಇದು 1977-78ರ ಬಳಿಕದ ಅತೀ ಕಡಿಮೆ ಬಡ್ಡಿದರವಾಗಿದೆ. 1977-78ರಲ್ಲಿ ಶೇ.8 ರಷ್ಟುಬಡ್ಡಿದರ ನೀಡಲಾಗಿತ್ತು. ಇಪಿಎಫ್ಒ 65 ಮಿಲಿಯನ್ ಗಿಂತಲೂ ಅಧಿಕ ಸದಸ್ಯರನ್ನು ಹೊಂದಿದ್ದು, ಕಳೆದ ವರ್ಷ 15.7ಲಕ್ಷ ಕೋಟಿ ರೂ. ನಿರ್ವಹಣೆ ಮಾಡಿದೆ. ಈ ತಿಂಗಳ ಪ್ರಾರಂಭದಲ್ಲಿ ಇಪಿಎಫ್ ಖಾತೆಗೆ ಬಡ್ಡಿ ಜಮೆ ಮಾಡುವ ಬಗ್ಗೆ ಮಾಹಿತಿ ನೀಡಿದ್ದ ಹಣಕಾಸು ಸಚಿವಾಲಯ, ಇಪಿಎಫ್ ಬಡ್ಡಿ ಹಣವನ್ನು ಉದ್ಯೋಗಿಗಳ ಖಾತೆಗೆ ಜಮೆ ಮಾಡುತ್ತಿದೆ. ಒಂದು ವೇಳೆ ಯಾರಿಗಾದರೂ ಸ್ಟೇಟ್ ಮೆಂಟ್ ನಲ್ಲಿ ಇದು ಕಾಣಿಸದಿದ್ರೆ, ಇದಕ್ಕೆ ಕಾರಣ ಇಪಿಎಫ್ಒ ಸಾಫ್ಟ್ ವೇರ್ ಉನ್ನತೀಕರಣಗೊಳ್ಳುತ್ತಿರೋದು ಎಂದು ತಿಳಿಸಿತ್ತು.
ಇಪಿಎಫ್ ಠೇವಣಿಗಳಿಗೆ 2015-16ರಲ್ಲಿ ಶೇ.8.8,2016-17ರಲ್ಲಿ ಶೇ.8.65, 2017-18ರಲ್ಲಿ ಶೇ.8.55, 2018-19ರಲ್ಲಿ ಶೇ.8.65, 2019-20ರಲ್ಲಿ ಶೇ.8.5 ಮತ್ತು 2020-21ರಲ್ಲಿ ಶೇ.8.5ರಷ್ಟುಬಡ್ಡಿ ನೀಡಲಾಗಿತ್ತು. ಈ ವರ್ಷದ ಮಾರ್ಚ್ ನಲ್ಲಿ ಇಪಿಎಫ್ ಟ್ರಸ್ಟಿಗಳ ಕೇಂದ್ರೀಯ ಮಂಡಳಿ (CBT) ಬಡ್ಡಿದರವನ್ನು ಶೇ.8.5ರಿಂದ ಶೇ.8.1ಕ್ಕೆ ತಗ್ಗಿಸಲು ನಿರ್ಧರಿಸಿತ್ತು. ಕಾರ್ಮಿಕ ಸಂಘಟನೆಗಳು ಹಾಗೂ ವಿಪಕ್ಷಗಳ ವಿರೋಧದ ಹೊರತಾಗಿಯೂ ಮಂಡಳಿಯ ಈ ನಿರ್ಧಾರಕ್ಕೆ ಕೇಂದ್ರ ಕಾರ್ಮಿಕ ಸಚಿವಾಲಯ ಅನುಮೋದನೆ ನೀಡಿತ್ತು.
ಡಿಜಿಟಲ್ ಬ್ಯಾಂಕಿಂಗ್ ಘಟಕಗಳು ಅಂದ್ರೇನು? ಅವು ಹೇಗೆ ಕಾರ್ಯನಿರ್ವಹಿಸುತ್ತವೆ? ಇಲ್ಲಿದೆ ಮಾಹಿತಿ
ಆರ್ ಬಿಐ ಇತ್ತೀಚೆಗೆ ರೆಪೋ ದರವನ್ನು 50 ಮೂಲಾಂಕ ಹೆಚ್ಚಿಸಿದೆ. ಈ ವರ್ಷದಲ್ಲಿ ಮೇ ನಿಂದ ಇಲ್ಲಿಯ ತನಕ ನಾಲ್ಕು ಬಾರಿ ರೆಪೋ ದರ ಏರಿಕೆ ಮಾಡಲಾಗಿದೆ. ರೆಪೋ ದರವನ್ನು ಒಟ್ಟು 190 ಮೂಲಾಂಕಗಳಷ್ಟು ಹೆಚ್ಚಳ ಮಾಡಲಾಗಿದೆ. ಪರಿಣಾಮ ಬಹುತೇಕ ಬ್ಯಾಂಕ್ ಗಳು ಕೂಡ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರ ಹೆಚ್ಚಳ ಮಾಡಿವೆ. ಆದರೆ, ಇಪಿಎಫ್ ಬಡ್ಡಿದರ ಮಾತ್ರ ಈ ಹಿಂದಿಗಿಂತ ತಗ್ಗಿದೆ.
ಪಿಎಫ್ ಬ್ಯಾಲೆನ್ಸ್ ಹೀಗೆ ಚೆಕ್ ಮಾಡಿ
ಇಪಿಎಫ್ಒ (EPFO) ಪೋರ್ಟಲ್‌ನಲ್ಲೇ ನಿಮ್ಮ ಸಕ್ರಿಯ ಯುನಿವರ್ಸಲ್ ಅಕೌಂಟ್ ನಂಬರ್ (UAN) ಬಳಸಿ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಬಹುದು. ಅಷ್ಟೇ ಅಲ್ಲ, ಇ-ಪಾಸ್ ಬುಕ್ ಡೌನ್ ಲೋಡ್ ಮಾಡಬಹುದು ಹಾಗೂ ಪ್ರಿಂಟ್ ಕೂಡ ತೆಗೆಯಬಹುದು.
- ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಲು ಮೊದಲಿಗೆ ನೀವು www.epfindia.gov.in ಭೇಟಿ ನೀಡಿ. ‘Our Services’ಅಡಿಯಲ್ಲಿ ‘For Employees’ಆಯ್ಕೆ ಮೇಲೆ ಕ್ಲಿಕ್ ಮಾಡಿ.
-‘Services’ಆಯ್ಕೆ ಅಡಿಯಲ್ಲಿ ‘Member Passbook’ ಮೇಲೆ ಕ್ಲಿಕ್ ಮಾಡಿ. ಇಲ್ಲಿ ನೀವು ನಿಮ್ಮ ಯುಎಎನ್ ಸಂಖ್ಯೆ (UAN) ಹಾಗೂ ಪಾಸ್ ವರ್ಡ್ ನಮೂದಿಸಿದರೆ ನಿಮ್ಮ ಪಾಸ್ ಬುಕ್ ಕಾಣಿಸುತ್ತದೆ.
-ಆದ್ರೆ ಹೀಗೆ ನಿಮ್ಮ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಲು ನಿಮ್ಮ ಯುಎಎನ್ ಸಂಖ್ಯೆ ಸಕ್ರಿಯವಾಗಿರಬೇಕು.
-ಒಂದು ವೇಳೆ ನಿಮಗೆ ಯುಎಎನ್ ಸಂಖ್ಯೆ ಗೊತ್ತಿಲ್ಲದಿದ್ರೆ ಆಗ epfoservices.in/epfo/ ಮೇಲೆ ಕ್ಲಿಕ್ ಮಾಡಿ ಹಾಗೂ ನಿಮ್ಮ ಆಫೀಸ್ ಲಿಂಕ್ ಕ್ಲಿಕ್ ಮಾಡುವ ಮುನ್ನ ನಿಮ್ಮ ರಾಜ್ಯ ಆಯ್ಕೆ ಮಾಡಿ.
-ನಿಮ್ಮ ಪಿಎಫ್ ಖಾತೆ ಸಂಖ್ಯೆ, ಹೆಸರು ಹಾಗೂ ನೋಂದಾಯಿತ ಮೊಬೈಲ್ ಸಂಖ್ಯೆ ನಮೂದಿಸಿ ಹಾಗೂ ‘Submit’ಆಯ್ಕೆ ಮೇಲೆ ಕ್ಲಿಕ್ ಮಾಡಿ. ಈಗ ನಿಮಗೆ ಪಿಎಫ್ ಬ್ಯಾಲೆನ್ಸ್ ಕಾಣಿಸುತ್ತದೆ.
ಈಗ ಪ್ರಯಾಣಿಸಿ, ನಂತರ ಪಾವತಿಸಿ;ಟಿಕೆಟ್ ಗೆ ಹಣ ನೀಡದೆ ರೈಲು ಪ್ರಯಾಣ ಸಾಧ್ಯ!
ಎಸ್ಎಂಎಸ್ ಮೂಲಕ ಬ್ಯಾಲೆನ್ಸ್ ಚೆಕ್
ನಿಮ್ಮ ಮೊಬೈಲ್ ನಲ್ಲಿ “EPFOHO UAN ENG" ಎಂದು ಟೈಪ್ ಮಾಡಿ 7738299899 ಸಂಖ್ಯೆಗೆ ಮೆಸೇಜ್ ಕಳುಹಿಸಿ. ಒಂದು ವೇಳೆ ನಿಮಗೆ ಕನ್ನಡದಲ್ಲಿ ಮಾಹಿತಿ ಬೇಕಿದ್ದರೆ ಕೊನೆಯಲ್ಲಿ ಟೈಪ್ ಮಾಡಿರುವ ENG ತೆಗೆದು KAN ಎಂದು ಟೈಪ್ ಮಾಡಿ ಕಳುಹಿಸಿ. ನಿಮಗೆ ಪಿಎಫ್ ಖಾತೆಯಲ್ಲಿರುವ ಬ್ಯಾಲೆನ್ಸ್ ವಿವರ ಕೆಲವೇ ಸಮಯದಲ್ಲಿ ಲಭಿಸುತ್ತದೆ.