ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ ದೇಶದ ಎಲ್ಲ ವರ್ಗದ ಜನರಿಗೂ ತಲುಪಬೇಕು ಎಂಬ ಉದ್ದೇಶದಿಂದ ದೇಶದ 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳಿಗೆ ಪ್ರಧಾನಿ ಅ.16ರಂದು ಚಾಲನೆ ನೀಡಿದ್ದರು. ಈ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತದೆ? ಇದರ ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ.
ನವದೆಹಲಿ (ಅ.19): ಬ್ಯಾಂಕಿಂಗ್ ವ್ಯವಸ್ಥೆಯನ್ನು ಸದೃಢಗೊಳಿಸುವ ಜೊತೆಗೆ ಸರಳೀಕರಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅ.16ರಂದು ದೇಶದ 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳಿಗೆ (ಡಿಬಿಯುಎಸ್) ಚಾಲನೆ ನೀಡಿದ್ದರು. ಸ್ವಾತಂತ್ರ್ಯದ ಅಮೃತಮಹೋತ್ಸವದ ಸಂದರ್ಭದಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳನ್ನು ಸ್ಥಾಪಿಸುವ ಕನಸನ್ನು ಪ್ರಧಾನಿ ಮೋದಿ ಕಂಡಿದ್ದರು ಕೂಡ. ಕನಿಷ್ಠ ಮೂಲಸೌಕರ್ಯದ ಜೊತೆಗೆ ಗರಿಷ್ಠ ಸೇವೆಗಳನ್ನು ಜನರಿಗೆ ಒದಗಿಸುವ ಉದ್ದೇಶ ಸರ್ಕಾರದ್ದಾಗಿದೆ. ಯಾವುದೇ ಕಾಗದಪತ್ರಗಳ ವ್ಯವಹಾರವಿಲ್ಲದೆ ಬ್ಯಾಂಕಿಂಗ್ ವ್ಯವಸ್ಥೆ ಸರಳಗೊಳ್ಳಬೇಕೆಂದ್ರೆ ಅದು ಡಿಜಿಟಲೀಕರಣದಿಂದ ಮಾತ್ರ ಸಾಧ್ಯ. ಸಾರ್ವಜನಿಕ ವಲಯದ 11 ಬ್ಯಾಂಕ್ ಗಳು, ಖಾಸಗಿ ವಲಯದ 12 ಬ್ಯಾಂಕುಗಳು ಮತ್ತು ಒಂದು ಕಿರು ಹಣಕಾಸು ಬ್ಯಾಂಕ್ ಸೇರಿದಂತೆ ಒಟ್ಟು 24 ಬ್ಯಾಂಕುಗಳು 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳನ್ನು ಸ್ಥಾಪಿಸಿವೆ. ಕರ್ನಾಟಕದಲ್ಲಿ ದೇವನಹಳ್ಳಿಯಲ್ಲಿ ಕೆನರಾ ಬ್ಯಾಂಕ್‌ನಿಂದ ಡಿಬಿಯು ಸ್ಥಾಪನೆಯಾಗಿದೆ.ಇದು ಗ್ರಾಮೀಣ ಭಾಗದ ಜನರಿಗೆ ಬ್ಯಾಂಕಿಂಗ್ ವ್ಯವಹಾರಗಳನ್ನು ಇನ್ನಷ್ಟು ಸರಳಗೊಳಿಸಲಿದೆ. ಹಾಗಾದ್ರೆ ಡಿಜಿಟಲ್ ಬ್ಯಾಂಕಿಂಗ್ ಘಟಕ ಅಂದ್ರೇನು? ಅದು ಹೇಗೆ ಕಾರ್ಯನಿರ್ವಹಿಸುತ್ತದೆ? ಇಲ್ಲಿದೆ ಮಾಹಿತಿ.
ಏನಿದು ಡಿಬಿಯುಎಸ್?
ಡಿಜಿಟಲ್ ಬ್ಯಾಂಕಿಂಗ್ ಘಟಕಗಳು (DBUs) ವೈಯಕ್ತಿಕವಾಗಿ ಕಂಪ್ಯೂಟರ್, ಲ್ಯಾಪ್ ಟಾಪ್ ಅಥವಾ ಸ್ಮಾರ್ಟ್ ಫೋನ್ ಹೊಂದಿರದವರಿಗೆ ಬ್ಯಾಂಕಿಂಗ್ ಸೇವೆಗಳನ್ನು ಪಡೆಯಲು ನೆರವು ನೀಡುತ್ತದೆ. ಇಂಥ ಗ್ರಾಹಕರು ಕಾಗದರಹಿತವಾಗಿ ಡಿಜಿಟಲ್ ರೂಪದಲ್ಲಿ ಬ್ಯಾಂಕಿಂಗ್ ಕೆಲಸಗಳನ್ನು ಮಾಡಿ ಮುಗಿಸಬಹುದು. ಡಿಜಿಟಲ್ ಬ್ಯಾಂಕಿಂಗ್ ಘಟಕಗಳು ಡಿಜಿಟಲ್ ಬ್ಯಾಂಕಿಂಗ್ ಸೇವೆಗಳನ್ನು ಗ್ರಾಹಕರಿಗೆ ಕಡಿಮೆ ವೆಚ್ಚದಲ್ಲಿ ಹಾಗೂ ಅನುಕೂಲಕರ ವಿಧಾನದಲ್ಲಿ ಒದಗಿಸುತ್ತವೆ. ಉಳಿತಾಯ ಖಾತೆಗಳನ್ನು ತೆರೆಯುವುದು, ಬ್ಯಾಲೆನ್ಸ್ ಚೆಕ್, ಪಾಸ್ ಪುಸ್ತಕ ಪ್ರಿಂಟ್ ಮಾಡೋದು, ಹಣ ವರ್ಗಾವಣೆ, ಸ್ಥಿರ ಠೇವಣಿಗಳಲ್ಲಿ ಹೂಡಿಕೆ, ಸಾಲದ ಅರ್ಜಿಗಳು, ವಿತರಿಸಿರುವ ಚೆಕ್ ಪಾವತಿ ತಡೆಯುವ ನಿರ್ದೇಶನ, ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಗಳಿಗೆ ಅರ್ಜಿಗಳು, ತೆರಿಗೆ ಹಾಗೂ ಬಿಲ್ ಪಾವತಿ ಹಾಗೂ ನಾಮನಿರ್ದೇಶನಗಳು ಸೇರಿದಂತೆ ಅನೇಕ ಸೇವೆಗಳನ್ನು ಒಳಗೊಂಡಿದೆ. ಈ ಘಟಕಗಳು ಬ್ಯಾಂಕಿಂಗ್ ಉತ್ಪನ್ನಗಳು ಹಾಗೂ ಸೇವೆಗಳ ಡಿಜಿಟಲ್ ಅನುಭವಗಳನ್ನು ಹೆಚ್ಚಿಸಲಿವೆ. ದೇಶದ ಮೂಲೆ ಮೂಲೆಗೂ ಹಾಗೂ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲೂ ಡಿಜಿಟಲ್ ಬ್ಯಾಂಕಿಂಗ್ ಸೇವೆಯ ಪ್ರಯೋಜನಗಳು ಲಭಿಸಬೇಕು ಎಂಬ ಉದ್ದೇಶದಿಂದ ಡಿಬಿಯುಎಸ್ ಸ್ಥಾಪಿಸಲಾಗಿದೆ.
ಈಗ ಪ್ರಯಾಣಿಸಿ, ನಂತರ ಪಾವತಿಸಿ;ಟಿಕೆಟ್ ಗೆ ಹಣ ನೀಡದೆ ರೈಲು ಪ್ರಯಾಣ ಸಾಧ್ಯ!
ಡಿಬಿಯುಎಸ್ ಹೇಗೆ ಕಾರ್ಯನಿರ್ವಹಿಸುತ್ತದೆ?
ಡಿಬಿಯುಎಸ್ ಎರಡು ಮಾದರಿಯಲ್ಲಿ ಸೇವೆಗಳನ್ನು ಒದಗಿಸಲಿದೆ. ಒಂದು ಸ್ವಯಂ ಸೇವೆ ಮಾದರಿ. ಇದು 24x7x365 ಲಭ್ಯವಿರಲಿದೆ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ವರ್ಚುವಲ್ ಸಭೆಯಲ್ಲಿ ಮಾಹಿತಿ ನೀಡಿದ್ದರು. ಇನ್ನು ಈ ಘಟಕದಲ್ಲಿ ಡಿಜಿಟಲ್ ನೆರವು ವಲಯವಿದ್ದು, ಇದು ಜನರ ಹಾಗೂ ಕಿರು ಉದ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಲಿದೆ. ಹಾಗೆಯೇ ಅವರ ಕಷ್ಟಗಳನ್ನು ಆಲಿಸಲಿದೆ.
ಇನ್ನು ಐಸಿಐಸಿಐ ಬ್ಯಾಂಕ್ ಹಾಗೂ ಎಚ್ ಡಿಎಫ್ ಸಿ ಸೇರಿದಂತೆ ಖಾಸಗಿ ಬ್ಯಾಂಕುಗಳು ಸ್ಥಾಪಿಸಿದ ಡಿಬಿಯುಎಸ್ ಗಳಲ್ಲಿ ಸೆಲ್ಫ್ ಸರ್ವೀಸ್ ಝೋನ್ ಹಾಗೂ ಡಿಜಿಟಲ್ ಅಸಿಸ್ಟೆಂಟ್ ಝೋನ್ ಎಂಬ ಎರಡು ವಿಭಾಗಗಳಿವೆ. ಡಿಜಿಟಲ್ ಅಸಿಸ್ಟೆಂಟ್ ಝೋನ್ ನಲ್ಲಿ ವಿವಿಧ ವಿಧದ ಖಾತೆಗಳನ್ನು ತೆರೆಯಲು ಗ್ರಾಹಕರಿಗೆ ನೆರವು ನೀಡಲಾಗುತ್ತದೆ.
MSP Rise: ರೈತರಿಗೆ ಗುಡ್ ನ್ಯೂಸ್; ಗೋಧಿ ಸೇರಿ 6 ಹಿಂಗಾರು ಬೆಳೆಗಳ ಬೆಂಬಲ ಬೆಲೆ ಹೆಚ್ಚಳ
ಎಚ್ ಡಿಎಫ್ ಸಿ ಸೆಲ್ಫ್ ಸರ್ವೀಸ್ ಝೋನ್ ನಲ್ಲಿ ಗ್ರಾಹಕರು ಎಟಿಎಂಗಳು, ನಗದು ಠೇವಣಿ ಮಷಿನ್ಸ್ , ಇಂಟರ್ ಆಕ್ಟೀವ್ ಡಿಜಿಟಲ್ ವಾಲ್ಸ್, ನೆಟ್ ಬ್ಯಾಂಕಿಂಗ್ ಕಿಯೋಸ್ಕಸ್ / ವಿಡಿಯೋ ಕಾಲ್ಸ್ ಹಾಗೂ ಟ್ಯಾಬ್ ಬ್ಯಾಂಕಿಂಗ್ ಸೇವೆಗಳ ಮೂಲಕ ವಹಿವಾಟುಗಳನ್ನು ನಡೆಸಲು ಅವಕಾಶ ಕಲ್ಪಿಸುತ್ತದೆ. ಬ್ಯಾಂಕ್ ನ ಇಬ್ಬರು ಸಿಬ್ಬಂದಿ ಡಿಜಿಟಲ್ ಅಸಿಸ್ಟೆಂಟ್ ಝೋನ್ ಅನ್ನು ನಿಭಾಯಿಸುತ್ತಾರೆ.