PF Update:ಪಿಎಫ್ ಖಾತೆಗೆ ಶೀಘ್ರದಲ್ಲೇ ಬರಲಿದೆ ಬಡ್ಡಿ ಹಣ; ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ?

By Suvarna NewsFirst Published Sep 5, 2022, 3:14 PM IST
Highlights

ಪಿಎಫ್ ಖಾತೆಗೆ 2021-22ನೇ ಹಣಕಾಸು ಸಾಲಿನ ಬಡ್ಡಿ ಹಣ ಶೀಘ್ರದಲ್ಲೇ ಕ್ರೆಡಿಟ್ ಆಗುವ ಸಾಧ್ಯತೆಯಿದೆ. ಪಿಎಫ್ ಖಾತೆಯಲ್ಲಿನ ಠೇವಣಿಗೆ ಎಷ್ಟು ಬಡ್ಡಿದರ ಸಿಗುತ್ತದೆ? ಬಡ್ಡಿ ಲೆಕ್ಕ ಹಾಕೋದು ಹೇಗೆ? ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ. 

ನವದೆಹಲಿ (ಸೆ.5): ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಖಾತೆಗೆ ಸರ್ಕಾರ ಪ್ರತಿ ವರ್ಷ ಬಡ್ಡಿ ಹಾಕುತ್ತದೆ. ಖಾತೆಯಲ್ಲಿ ಠೇವಣಿ ಮಾಡಿದ ಹಣಕ್ಕೆ ಕೇಂದ್ರ ಸರ್ಕಾರ 2021-22ನೇ ಹಣಕಾಸು ಸಾಲಿನಲ್ಲಿ ಶೇ.8.1ರಷ್ಟು ಬಡ್ಡಿ ನೀಡಲಿದೆ. ಇಪಿಎಫ್ ಖಾತೆಯಲ್ಲಿರುವ ಹಣಕ್ಕೆ ತಿಂಗಳ ಆಧಾರದಲ್ಲಿ ಬಡ್ಡಿ ಲೆಕ್ಕ ಹಾಕಿದರೂ ಕೂಡ ಅದನ್ನು ಜಮೆ ಮಾಡೋದು ಮಾತ್ರ ಆ ಆರ್ಥಿಕ ವರ್ಷ ಮುಗಿದ ಬಳಿಕವೇ. ಈ ವರ್ಷ ಜೂನ್ ನಲ್ಲೇ ಸರ್ಕಾರ 2021-22ನೇ ಹಣಕಾಸು ಸಾಲಿನ ಬಡ್ಡಿದರವನ್ನು ನಿಗದಿಪಡಿಸಿತ್ತು. ಹೀಗಾಗಿ ಇಪಿಎಫ್ ಖಾತೆಗಳಿಗೆ ಈ ವರ್ಷ ಬಡ್ಡಿದರ ಬೇಗ ಜಮೆ ಆಗುವ ಸಾಧ್ಯತೆಯಿದೆ ಎಂದು ಹೇಳಲಾಗಿತ್ತು ಕೂಡ. ಕೆಲವು ವರದಿಗಳ ಪ್ರಕಾರ ಈ ತಿಂಗಳು ಪಿಎಫ್ ಖಾತೆಗೆ ಬಡ್ಡಿ ಕ್ರೆಡಿಟ್ ಆಗುವ ಸಾಧ್ಯತೆಯಿದೆ. ಕಳೆದ ವರ್ಷ ಹಣಕಾಸು ಸಚಿವಾಲಯದಿಂದ ತಡವಾಗಿ ಅನುಮೋದನೆ ದೊರೆತ ಕಾರಣ ಪಿಎಫ್ ಖಾತೆಗೆ ಬಡ್ಡಿ ದೀಪಾವಳಿ ಸಮಯದಲ್ಲಿ ಕ್ರೆಡಿಟ್ ಆಗಿತ್ತು. ಇನ್ನು ಈ ವರ್ಷ ಮಾರ್ಚ್ ನಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು, ಇಪಿಎಫ್‌ ಠೇವಣಿಗಳ ಮೇಲೆ ಒದಗಿಸುವ ಬಡ್ಡಿದರವನ್ನು ಶೇ.8.5ರಿಂದ ಶೇ.8.1ಗೆ ತಗ್ಗಿಸಲು ನಿರ್ಧರಿಸಿತ್ತು. ಇದಕ್ಕೆ ಕಾರ್ಮಿಕ ಸಂಘಟನೆಗಳು ಮತ್ತು ವಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು. ಇದರ ಹೊರತಾಗಿಯೂ, ಇಪಿಎಫ್‌ ಬಡ್ಡಿದರವನ್ನು ಶೇ.8.5ರಿಂದ ಶೇ.8.1ಕ್ಕೆ ಇಳಿಸುವ ಮಂಡಳಿ ನಿರ್ಧಾರಕ್ಕೆ ಕೇಂದ್ರ ಕಾರ್ಮಿಕ ಸಚಿವಾಲಯ ಅನುಮೋದನೆ ನೀಡಿತ್ತು. ಹಾಗಾದ್ರೆ ಇಪಿಎಫ್ ಖಾತೆಗೆ ಎಷ್ಟು ಬಡ್ಡಿ ಬರುತ್ತದೆ ಎಂದು ಲೆಕ್ಕ ಹಾಕೋದು ಹೇಗೆ? ಇಪಿಎಫ್ ಖಾತೆಯಲ್ಲಿನ ಠೇವಣಿ ಹಣವನ್ನು ಸರ್ಕಾರ ಏನ್ ಮಾಡುತ್ತದೆ? ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ.

ಬಡ್ಡಿ ಲೆಕ್ಕ ಹಾಕೋದು ಹೇಗೆ?
ನೀವು ಪಿಎಫ್ ಖಾತೆಯಲ್ಲಿಟ್ಟಿರುವ ಠೇವಣಿಗೆ ಈಗಾಗಲೇ ಹೆಳಿದಂತೆ ಶೇ.8ರಷ್ಟು ಬಡ್ಡಿದರವನ್ನು ಸರ್ಕಾರ ನೀಡುತ್ತದೆ. ಉದಾಹರಣೆಗೆ ನಿಮ್ಮ ಪಿಎಫ್ ಖಾತೆಯಲ್ಲಿ 10ಲಕ್ಷ ರೂ. ಠೇವಣಿಯಿಟ್ಟಿದ್ರೆ ನಿಮಗೆ ವಾರ್ಷಿಕ 81000 ರೂ. ಬಡ್ಡಿ ಸಿಗುತ್ತದೆ. ನೀವು ಹೆಚ್ಚು ಹಣ ಠೇವಣಿಯಿಟ್ಟಿದ್ರೆ ಬಡ್ಡಿ ಮೊತ್ತ ಕೂಡ ಹೆಚ್ಚಿರುತ್ತದೆ. 

6,000ರೂ. ಆಸೆಗೆ ಬಿದ್ದು ವೈಯಕ್ತಿಕ ಮಾಹಿತಿ ಹಂಚಿಕೊಂಡ್ರೆ ಖಾತೆ ಖಾಲಿ, ಹುಷಾರ್!

ಪಿಎಫ್ ಹಣವನ್ನು ಸರ್ಕಾರ ಹೇಗೆ ಬಳಸಿಕೊಳ್ಳುತ್ತದೆ?
ಇಪಿಎಫ್ ಖಾತೆಯಲ್ಲಿರುವ ಹಣವನ್ನು ಇಪಿಎಫ್ ಒ ವಿವಿಧ ವಲಯಗಳಲ್ಲಿ ಹೂಡಿಕೆ ಮಾಡುತ್ತದೆ. ಈ ಹೂಡಿಕೆಯಿಂದ ಗಳಿಸಿದ ಸ್ವಲ್ಪ ಭಾಗವನ್ನು ಪಿಎಫ್ ಖಾತೆದಾರರಿಗೆ ನೀಡಲಾಗುತ್ತದೆ. ಈ ವರ್ಷದ ಆಗಸ್ಟ್ ನಲ್ಲಿ ಇಪಿಎಫ್ಒ ತನ್ನ ನಿಧಿಯ ಶೇ.85ರಷ್ಟನ್ನು ಸಾಲ ಸಾಧನಗಳಲ್ಲಿ ಹೂಡಿಕೆ ಮಾಡೋದಾಗಿ ತಿಳಿಸಿತ್ತು. ಇನ್ನು ಇಪಿಎಫ್ ಖಾತೆಯಲ್ಲಿನ ಶೇ.15ರಷ್ಟು ಹಣವನ್ನು ಇಟಿಎಫ್ ಗಳಲ್ಲಿ ಹೂಡಿಕೆ ಮಾಡಲಾಗುತ್ತದೆ.

ತಿಂಗಳಿಗೆ 1ಲಕ್ಷ ರೂ. ಪಿಂಚಣಿ ಪಡೆಯಬೇಕೇ? ಮ್ಯೂಚ್ಯುವಲ್ ಫಂಡ್ ಎಸ್ ಐಪಿಯಲ್ಲಿ ಎಷ್ಟು ಹೂಡಿಕೆ ಮಾಡಬೇಕು?

ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ?
ಇಪಿಎಫ್ಒ (EPFO) ಪೋರ್ಟಲ್‌ನಲ್ಲೇ ನಿಮ್ಮ ಸಕ್ರಿಯ ಯುನಿವರ್ಸಲ್ ಅಕೌಂಟ್ ನಂಬರ್ (UAN) ಬಳಸಿ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಬಹುದು. ಅಷ್ಟೇ ಅಲ್ಲ, ಇ-ಪಾಸ್ ಬುಕ್ ಡೌನ್ ಲೋಡ್ ಮಾಡಬಹುದು ಹಾಗೂ ಪ್ರಿಂಟ್ ಕೂಡ ತೆಗೆಯಬಹುದು. ಇನ್ನು ಎಸ್ಎಂಎಸ್ ಮೂಲಕ ಬ್ಯಾಲೆನ್ಸ್ ಚೆಕ್ ಮಾಡಬಹುದು. ನಿಮ್ಮ ಮೊಬೈಲ್ ನಲ್ಲಿ “EPFOHO UAN ENG" ಎಂದು ಟೈಪ್ ಮಾಡಿ 7738299899 ಸಂಖ್ಯೆಗೆ ಮೆಸೇಜ್ ಕಳುಹಿಸಿ. ಒಂದು ವೇಳೆ ನಿಮಗೆ ಕನ್ನಡದಲ್ಲಿ ಮಾಹಿತಿ ಬೇಕಿದ್ದರೆ ಕೊನೆಯಲ್ಲಿ ಟೈಪ್ ಮಾಡಿರುವ ENG ತೆಗೆದು KAN ಎಂದು ಟೈಪ್ ಮಾಡಿ ಕಳುಹಿಸಿ. ನಿಮಗೆ ಪಿಎಫ್ ಖಾತೆಯಲ್ಲಿರುವ ಬ್ಯಾಲೆನ್ಸ್ ವಿವರ ಕೆಲವೇ ಸಮಯದಲ್ಲಿ ಲಭಿಸುತ್ತದೆ.  ಒಂದು ವೇಳೆ ನೀವು UAN ಸೈಟ್ ನಲ್ಲಿ ನೋಂದಣಿ ಮಾಡಿಸಿದ್ರೆ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 011-22901406 ಕರೆ ಮಾಡಿ ಕೂಡ ಬ್ಯಾಲೆನ್ಸ್ ತಿಳಿಯಬಹುದು. 
 

click me!