ನೊಯೆಲ್ ಟಾಟಾ ಪುತ್ರಿಯರ ಎಂಟ್ರಿಯಿಂದ ಟಾಟಾ ಗ್ರೂಪ್‌ನಲ್ಲಿ ಬಿರುಕು

By Anusha Kb  |  First Published Jan 10, 2025, 11:07 AM IST

ರತನ್ ಟಾಟಾ ಅವರ ಮಲ ಸಹೋದರ ನೋಯೆಲ್ ಟಾಟಾ ಅವರ ಪುತ್ರಿಯರಾದ ಮಯಾ ಮತ್ತು ಲಿಯಾ ಟಾಟಾ, ಸರ್ ರತನ್ ಟಾಟಾ ಇಂಡಸ್ಟ್ರಿಯಲ್ ಇನ್ಸ್ಟಿಟ್ಯೂಟ್‌ನ ಮಂಡಳಿಗೆ ಸೇರ್ಪಡೆಯಿಂದಾಗಿ ಟ್ರಸ್ಟ್‌ನಲ್ಲಿ ಆಂತರಿಕ ಕಲಹ ಉಂಟಾಗಿದೆ. ಈ ಬದಲಾವಣೆಯಿಂದಾಗಿ ಇಬ್ಬರು ಹಿರಿಯ ಟ್ರಸ್ಟಿಗಳು ರಾಜೀನಾಮೆ ನೀಡಿದ್ದಾರೆ.


ರತನ್‌ ಟಾಟಾ ಮಲ ಸಹೋದರ ನೊಯೆಲ್ ಟಾಟಾ ಪುತ್ರಿಯರಾದ ಮಯಾ ಹಾಗೂ ಲೀಯಾ ಟಾಟಾ ಅವರು, ಸರ್ ರತನ್ ಟಾಟಾ ಇಂಡಸ್ಟ್ರಿಯಲ್‌ ಇನ್ಸ್ಟಿಟ್ಯೂಟ್‌ ಬೋರ್ಡ್‌ನ ಪ್ರಮುಖ ಹುದ್ದೆಗಳಿಗೆ ಪ್ರವೇಶಿಸುತ್ತಿದ್ದಂತೆ ಟ್ರಸ್ಟ್ ಒಳಗೆ ಆಂತರಿಕ ಕಲಹ ಏರ್ಪಟ್ಟಿದೆ ಎಂದು ವರದಿಯಾಗಿದೆ. ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ, ಟಾಟಾ ಟ್ರಸ್ಟ್‌ನ ಅಧ್ಯಕ್ಷ ನೋಯೆಲ್ ಟಾಟಾ ಅವರ ಪುತ್ರಿಯರಾದ ಮಾಯಾ ಮತ್ತು ಲಿಯಾ ಟಾಟಾ ಅವರನ್ನು ಸರ್ ರತನ್ ಟಾಟಾ ಇಂಡಸ್ಟ್ರಿಯಲ್ ಇನ್‌ಸ್ಟಿಟ್ಯೂಟ್ (SRTII) ನ ಟ್ರಸ್ಟಿಗಳ ಮಂಡಳಿಗೆ ಸೇರಿಸಿಕೊಳ್ಳಲಾಗಿದೆ. ಈ ಟ್ರಸ್ಟ್, ಟಾಟಾ ಗ್ರೂಪ್ ಹೋಲ್ಡಿಂಗ್ ಕಂಪನಿಯಾದ ಟಾಟಾ ಸನ್ಸ್‌ನ ಎರಡು ಪ್ರಮುಖ ಷೇರುದಾರರಲ್ಲಿ ಒಂದಾಗಿದೆ. 

ಮಾಯಾ ಮತ್ತು ಲಿಯಾ ಟಾಟಾ ಅವರು ಅರ್ನಾಜ್‌ ಕೊತ್ವಾಲ್ ಮತ್ತು ಫ್ರೆಡ್ಡಿ ತಲಾಟಿ ಅವರ ಜಾಗಕ್ಕೆ ಆಗಮಿಸಿದ್ದು, ಈ ನಡೆಯೊಂದಿಗೆ  ನೋಯೆಲ್ ಟಾಟಾ ಅವರ ಮೂವರೂ ಮಕ್ಕಳು ಕೂಡ ಈಗ ಸಣ್ಣ ಟಾಟಾ ಟ್ರಸ್ಟ್‌ಗಳ ಮಂಡಳಿಗೆ ಸೇರಿದಂತಾಗಿದೆ. ಆದರೂ ಅವರನ್ನು ಟಾಟಾದ  ಇನ್ನೂ ಎರಡು ಪ್ರಮುಖ ಟ್ರಸ್ಟ್‌ಗಳಾದ ಸರ್ ರತನ್ ಟಾಟಾ ಟ್ರಸ್ಟ್ & ಅಲೈಡ್ ಟ್ರಸ್ಟ್‌ ಮತ್ತು ಸರ್ ದೋರಾಬ್ಜಿ ಟಾಟಾ ಟ್ರಸ್ಟ್ ಮತ್ತು ಅಲೈಡ್ ಟ್ರಸ್ಟ್‌ಗಳಿಗೆ ಸೇರಿಸಿಲ್ಲ.

Tap to resize

Latest Videos

ಈ ಬದಲಾವಣೆಯೂ ಈಗ ಟಾಟಾ ಸಂಸ್ಥೆಯೊಳಗೆ ಆಂತರಿಕೆ ಬಿರುಕಿಗೆ ಕಾರಣವಾಗಿದೆ ಎಂದು ವರದಿಯಾಗಿದೆ. ನೋಯೆಲ್ ಟಾಟಾ ಅವರ ಪುತ್ರಿಯರ ಆಗಮನದ ಕಾರಣಕ್ಕೆ ಈಗ ಸಂಸ್ಥೆಯಿಂದ ಹೊರಬಂದಿರುವ ಅರ್ನಾಜ್ ಕೊತ್ವಾಲ್ ಅವರು ತಮ್ಮ ಸಹ ಟ್ರಸ್ಟಿಗಳಿಗೆ ಬರೆದ ಪತ್ರದಲ್ಲಿ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ರಾಜೀನಾಮೆ ನೀಡುವಂತೆ ಮಾಡಿದ ವಿನಂತಿಯಿಂದಾಗಿ ಕಣ್ಣು ಮುಚ್ಚಿದಂತಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.  ಅರ್ನಾಜ್ ಕೊತ್ವಾಲ್ ಅವರು ಪ್ರಸ್ತುತ ದುಬೈನಲ್ಲಿ ನೆಲೆಸಿದ್ದು, ವಿಎಫ್‌ಎಸ್‌ ಗ್ಲೋಬಲ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮಲ್ಲಿ ಯಾರು ಕೂಡ ನೇರವಾಗಿ ನನ್ನೊಂದಿಗೆ ಮಾತನಾಡದಿರುವುದು ಬೇಸರ ತರಿಸಿದೆ ಎಂದು ಅವರು ಹೇಳಿದ್ದಾರೆ ಎಂದು ವರದಿಯಾಗಿದೆ. 

ಹಾಗೆಯೇ ಹೊರ ಹೋಗುತ್ತಿರುವ ಇನ್ನೊಂದು ಟ್ರಸ್ಟಿ ಫ್ರಡ್ಡಿ ತಲಾಟಿ ಅವರು ಈಗ ರಾಷ್ಟ್ರೀಯ ಪ್ರದರ್ಶನ ಕಲೆಗಳ ಕೇಂದ್ರದ (NCPA) ಮುಖ್ಯ ಕಾರ್ಯಾಚರಣಾ ಅಧಿಕಾರಿಯಾಗಿದ್ದಾರೆ. ಈ ವಿಷಯದ ಬಗ್ಗೆ ತಿಳಿದಿರುವ ಅಧಿಕಾರಿಯೊಬ್ಬರ ಪ್ರಕಾರ, ಲಿಯಾ ಮತ್ತು ಮಾಯಾ ಟಾಟಾ ಅವರ ನೇಮಕಾತಿಗಳನ್ನು  SRTIIಯ ಪ್ರಸ್ತುತ ನಡೆಯುತ್ತಿರುವ ನವೀಕರಣ ಮತ್ತು ಉನ್ನತೀಕರಣ ಯೋಜನೆಗಳಿಗೆ ಅನುಗುಣವಾಗಿ ಮಾಡಲಾಗಿದೆ.
ಸರ್ ರತನ್‌ ಟಾಟಾ ಟ್ರಸ್ಟ್‌ (SRTII)ಆರು ಸದಸ್ಯರಲ್ಲಿ ಮೂವರನ್ನು ನಾಮನಿರ್ದೇಶನ ಮಾಡುವ ಅಧಿಕಾರ ಹೊಂದಿದೆ. ಹಾಗೂ SRTII ಯ ವ್ಯವಹಾರಗಳನ್ನು ನಿರ್ವಹಿಸುವಲ್ಲಿ ಪೂರ್ವ ಅನುಭವ ಹೊಂದಿರುವ ಮತ್ತು ಮುಂಬೈನಲ್ಲಿ ಸ್ಥಳೀಯವಾಗಿ ನೆಲೆಸಿರುವ ಟ್ರಸ್ಟಿಗಳ ಅಗತ್ಯವನ್ನು ಒತ್ತಿ ಹೇಳಿದೆ.

ನೇಮಕಾತಿಗಳನ್ನು ಸರ್ವಾನುಮತದಿಂದ ಅನುಮೋದಿಸಿದ SRTT ಮಂಡಳಿಯಲ್ಲಿ ನೋಯೆಲ್ ಟಾಟಾ, ವಿಜಯ್ ಸಿಂಗ್, ವೇಣು ಶ್ರೀನಿವಾಸನ್, ಡೇರಿಯಸ್ ಖಂಬಟ, ಜಹಾಂಗೀರ್ ಹೆಚ್. ಜಹಾಂಗೀರ್ ಮತ್ತು ಮೆಹ್ಲಿ ಮಿಸ್ತ್ರಿ ಸೇರಿದ್ದಾರೆ. ಟಾಟಾ ಗ್ರೂಪ್‌ನಲ್ಲಿ ದೊಡ್ಡ ಪಾತ್ರಗಳಿಗೆ ಮುಂದಿನ ಪೀಳಿಗೆಯನ್ನು ಸಿದ್ಧಪಡಿಸುವ ಕಾರ್ಯತಂತ್ರದ ಕ್ರಮವಾಗಿ ಮಿಲೇನಿಯಲ್ ತಲೆಮಾರಿನ ಮಾಯಾ ಮತ್ತು ಲಿಯಾ ಟಾಟಾ ಇಬ್ಬರನ್ನು ಸೇರಿಸಲಾಗಿದೆ. 
ಇವರಲ್ಲಿ ಮಾಯಾ ಟಾಟಾ, ಟಾಟಾ ಕ್ಯಾಪಿಟಲ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದು ಟಾಟಾ ಡಿಜಿಟಲ್ ಅಡಿಯಲ್ಲಿ ಟಾಟಾ ನ್ಯೂ ಅಪ್ಲಿಕೇಶನ್ ಅನ್ನು ನಿರ್ವಹಿಸುವ ತಂಡದ ಭಾಗವಾಗಿದ್ದಾರೆ. ಹಾಗೆಯೇ ಲಿಯಾ ಟಾಟಾ  ಇಂಡಿಯನ್ ಹೋಟೆಲ್ಸ್‌ನಲ್ಲಿ ಉಪಾಧ್ಯಕ್ಷೆಯಾಗಿದ್ದು,  ಐಇ ಬಿಸಿನೆಸ್ ಸ್ಕೂಲ್‌ನಿಂದ ಮಾರ್ಕೆಟಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

click me!