
ವಾಷಿಂಗ್ಟನ್ (ನ.25): ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಅವರ ಒಡೆತನದ ಎರಡು ದೈತ್ಯ ಕಂಪನಿಗಳಾದ 'ಸ್ಪೇಸ್ಎಕ್ಸ್' (SpaceX) ಮತ್ತು 'ಟೆಸ್ಲಾ' (Tesla) ಶೀಘ್ರದಲ್ಲೇ ವಿಲೀನಗೊಳ್ಳುವ (Merger) ಸಾಧ್ಯತೆಯಿದೆ. ಪ್ರತಿಷ್ಠಿತ 'ಫೈನಾನ್ಷಿಯಲ್ ಟೈಮ್ಸ್' (Financial Times) ವರದಿಯ ಪ್ರಕಾರ, ಈ ಬೃಹತ್ ಒಪ್ಪಂದವು ಬರೋಬ್ಬರಿ 3.2 ಟ್ರಿಲಿಯನ್ ಡಾಲರ್ ಅಂದರೆ ಅಂದಾಜು 300 ಲಕ್ಷ ಕೋಟಿ ರೂಪಾಯಿ ಮೌಲ್ಯದ್ದಾಗಿದ್ದು, ಇದನ್ನು ಕಾರ್ಪೊರೇಟ್ ಇತಿಹಾಸದಲ್ಲೇ ಅತಿದೊಡ್ಡ ವಿಲೀನ ಎಂದು ಬಣ್ಣಿಸಲಾಗುತ್ತಿದೆ. ಈ ಮಹತ್ವದ ವಿಲೀನ ಪ್ರಕ್ರಿಯೆಯ ಕುರಿತು ಮಾತುಕತೆ ನಡೆಸಲು ಎರಡೂ ಕಂಪನಿಗಳು ವಿಶೇಷ ಸಮಿತಿಯನ್ನು (Special Committee) ರಚಿಸಿವೆ. ಇದೊಂದು ಸಂಪೂರ್ಣ 'ಆಲ್-ಸ್ಟಾಕ್ ಡೀಲ್' (All-stock deal) ಆಗಿರಲಿದ್ದು, ಮುಂಬರುವ ಡಿಸೆಂಬರ್ ತಿಂಗಳಿನಲ್ಲಿ ಇದರ ಅಧಿಕೃತ ಘೋಷಣೆಯಾಗುವ ಸಂಭವವಿದೆ.
ವಿಲೀನ ಪ್ರಕ್ರಿಯೆಯನ್ನು ಅಂತಿಮಗೊಳಿಸಲು ಎರಡೂ ಕಂಪನಿಗಳು ಒಟ್ಟು 5 ನಿರ್ದೇಶಕರು ಮತ್ತು 3 ಹೂಡಿಕೆ ಬ್ಯಾಂಕ್ಗಳನ್ನು (Investment banks) ನೇಮಿಸಿವೆ. ಸ್ಪೇಸ್ಎಕ್ಸ್ ಪರವಾಗಿ ರೋಲೋಫ್ ಬೋಥಾ (Roelof Botha) ಮತ್ತು ರ್ಯಾಂಡಿ ಗ್ಲೆನ್ (Randy Glenn) ಮಾತುಕತೆ ನಡೆಸಲಿದ್ದಾರೆ. ಇತ್ತ ಟೆಸ್ಲಾ ಪರವಾಗಿ ರಾಬಿನ್ ಡೆನ್ಹೋಮ್ (Robyn Denholm), ಕ್ಯಾಥ್ಲೀನ್ ವಿಲ್ಸನ್-ಥಾಂಪ್ಸನ್ (Kathleen Wilson-Thompson) ಮತ್ತು ಜ್ಯಾಕ್ ಹಾರ್ಟುಂಗ್ (Jack Hartung) ಅವರಿಗೆ ಒಪ್ಪಂದದ ಸೂಕ್ಷ್ಮ ವಿವರಗಳನ್ನು ನಿರ್ಧರಿಸುವ ಜವಾಬ್ದಾರಿ ವಹಿಸಲಾಗಿದೆ. ಈ ಐವರು ನಿರ್ದೇಶಕರು ಎಲಾನ್ ಮಸ್ಕ್ ಅವರೊಂದಿಗೆ ಹಳೆಯ ವೃತ್ತಿಪರ ಸಂಬಂಧ ಹೊಂದಿದ್ದರೂ, ಸಮಿತಿಯು ಅವರನ್ನು ಆರ್ಥಿಕವಾಗಿ ಸ್ವತಂತ್ರರು ಎಂದು ಪರಿಗಣಿಸಿದೆ. ಪ್ರಸ್ತಾವಿತ ಒಪ್ಪಂದದ ಮೌಲ್ಯಮಾಪನ (Valuation) ಮಾಡುವುದು ಮತ್ತು ಮಾತುಕತೆಯ ವೇಳೆ ತಮ್ಮ-ತಮ್ಮ ಕಂಪನಿಗಳ ಹಿತಾಸಕ್ತಿಗಳನ್ನು ರಕ್ಷಿಸುವುದು ಇವರ ಮುಖ್ಯ ಕೆಲಸವಾಗಿದೆ.
ಈ ಐತಿಹಾಸಿಕ ಒಪ್ಪಂದದ ಹಣಕಾಸಿನ ಅಂಶಗಳನ್ನು ಬಗೆಹರಿಸಲು ವಿಶ್ವದ ಮೂರು ದೊಡ್ಡ ಹೂಡಿಕೆ ಬ್ಯಾಂಕ್ಗಳನ್ನು ಜೋಡಿಸಲಾಗಿದೆ. ಮೋರ್ಗನ್ ಸ್ಟಾನ್ಲಿ (Morgan Stanley) ಮತ್ತು ಗೋಲ್ಡ್ಮನ್ ಸ್ಯಾಕ್ಸ್ (Goldman Sachs) ಸಂಸ್ಥೆಗಳು ಸ್ಪೇಸ್ಎಕ್ಸ್ಗೆ ಸಲಹೆ ನೀಡುತ್ತಿದ್ದರೆ, ಎವರ್ಕೋರ್ (Evercore) ಸಂಸ್ಥೆಗೆ ಟೆಸ್ಲಾಗಾಗಿ ಹಣಕಾಸು ಮಾದರಿಯನ್ನು (Financial model) ಸಿದ್ಧಪಡಿಸುವ ಹೊಣೆ ನೀಡಲಾಗಿದೆ.
ಪ್ರಸ್ತುತ ಮಾರುಕಟ್ಟೆ ಮೌಲ್ಯದ ಆಧಾರದ ಮೇಲೆ ಸ್ಪೇಸ್ಎಕ್ಸ್ ವಿಶ್ವದ 7ನೇ ಮತ್ತು ಟೆಸ್ಲಾ 9ನೇ ಅತ್ಯಂತ ಮೌಲ್ಯಯುತ ಕಂಪನಿಯಾಗಿದೆ. ಪ್ರಸ್ತುತ ಸ್ಪೇಸ್ಎಕ್ಸ್ನ ಮಾರುಕಟ್ಟೆ ಬಂಡವಾಳ (Market Cap) ಸುಮಾರು $1.7 ಟ್ರಿಲಿಯನ್ (ಅಂದಾಜು ₹157.28 ಲಕ್ಷ ಕೋಟಿ) ಮತ್ತು ಟೆಸ್ಲಾದ ಮಾರುಕಟ್ಟೆ ಬಂಡವಾಳ $1.5 ಟ್ರಿಲಿಯನ್ (ಅಂದಾಜು ₹138.78 ಲಕ್ಷ ಕೋಟಿ) ಇದೆ. ಎರಡೂ ಕಂಪನಿಗಳ ವಿಲೀನದ ನಂತರ ಅಸ್ತಿತ್ವಕ್ಕೆ ಬರುವ ನೂತನ ಕಂಪನಿಯ ಒಟ್ಟು ಮೌಲ್ಯ ಬರೋಬ್ಬರಿ $3.2 ಟ್ರಿಲಿಯನ್ (300 ಲಕ್ಷ ಕೋಟಿ ರೂಪಾಯಿ) ಆಗಲಿದೆ. ಇದರಿಂದ ಈ ಕಂಪನಿಯು ನೇರವಾಗಿ ವಿಶ್ವದ ಟಾಪ್-5 ಅತ್ಯಂತ ಮೌಲ್ಯಯುತ ಕಂಪನಿಗಳ ಪಟ್ಟಿಗೆ ಸೇರ್ಪಡೆಯಾಗಲಿದೆ.
ಎಲಾನ್ ಮಸ್ಕ್ ಅವರು 2026ರ ಆರಂಭದಲ್ಲಿ ಮೊದಲ ಬಾರಿಗೆ ಎರಡೂ ಕಂಪನಿಗಳ ವಿಲೀನದ ಪ್ರಸ್ತಾಪವನ್ನು ಮುಂದಿಟ್ಟಿದ್ದರು. ಕಳೆದ ಅಕ್ಟೋಬರ್ನಲ್ಲಿ ನಡೆದ ಸ್ಪೇಸ್ಎಕ್ಸ್ನ ಮೂರನೇ ತ್ರೈಮಾಸಿಕ (Q3) ಗಳಿಕೆಯ ಸಭೆಯಲ್ಲಿ (Earnings call) ಮಸ್ಕ್ ಈ ವಿಲೀನವನ್ನು ಒಂದು ಉತ್ತಮ ಆಲೋಚನೆ ಎಂದು ಬಣ್ಣಿಸಿದ್ದರು. ಡೀಲ್ ಮೌಲ್ಯಮಾಪನಕ್ಕಾಗಿ ಎರಡೂ ಕಂಪನಿಗಳಲ್ಲಿ ವಿಶೇಷ ಸಮಿತಿಗಳನ್ನು ರಚಿಸಲಾಗಿದೆ ಎಂದು ದೃಢಪಡಿಸಿದ್ದ ಮಸ್ಕ್, ಹಿತಾಸಕ್ತಿ ಸಂಘರ್ಷವನ್ನು (Conflict of interest) ತಪ್ಪಿಸಲು ತಾವು ಈ ಮಾತುಕತೆ ಪ್ರಕ್ರಿಯೆಯಿಂದ ಸಂಪೂರ್ಣವಾಗಿ ದೂರ ಉಳಿದಿರುವುದಾಗಿ ಸ್ಪಷ್ಟಪಡಿಸಿದ್ದರು. ಕಳೆದ ವಾರ ನಡೆದ 'ಡೀಲ್-ಬುಕ್ ಶೃಂಗಸಭೆ'ಯಲ್ಲಿ (DealBook Summit) ಮಾತನಾಡಿದ್ದ ಮಸ್ಕ್, "ಎರಡೂ ಕಂಪನಿಗಳು ಜೊತೆಯಾಗಿರುವುದು ಬಹುಶಃ ಹೆಚ್ಚು ಉತ್ತಮವಾಗಿರುತ್ತದೆ" ಎಂದು ಅಭಿಪ್ರಾಯಪಟ್ಟಿದ್ದರು.
ಹೂಡಿಕೆ ಬ್ಯಾಂಕ್ ಜೆಪಿ ಮೋರ್ಗನ್ (JPMorgan) ಮಂಗಳವಾರ ಬಿಡುಗಡೆ ಮಾಡಿದ ಟಿಪ್ಪಣಿಯ ಪ್ರಕಾರ, ಟೆಸ್ಲಾದೊಂದಿಗೆ ವಿಲೀನಗೊಳ್ಳುವುದರಿಂದ ರಾಕೆಟ್ ಕಂಪನಿ ಸ್ಪೇಸ್ಎಕ್ಸ್ ಅಮೆರಿಕದ ಷೇರು ಮಾರುಕಟ್ಟೆಯ ಪ್ರಮುಖ ಸೂಚ್ಯಂಕವಾದ 'S&P 500' ನಲ್ಲಿ ಸ್ಥಾನ ಪಡೆಯಲು ಅರ್ಹವಾಗಲಿದೆ. ಇದರಿಂದ ಕಂಪನಿಯ ಫ್ರೀ-ಫ್ಲೋಟ್ ಷೇರುಗಳಲ್ಲಿ ಸುಮಾರು ಶೇ. 10ರಷ್ಟು ಪ್ಯಾಸಿವ್ ಖರೀದಿ (Passive buying) ಆರಂಭವಾಗಬಹುದು. ಷೇರುಗಳ ಲಾಕ್-ಅಪ್ ಅವಧಿ ಮುಗಿದು ಅವು ವಹಿವಾಟಿಗೆ ಲಭ್ಯವಾಗುತ್ತಿದ್ದಂತೆಯೇ, S&P ಸಂಸ್ಥೆಯು ಸ್ಪೇಸ್ಎಕ್ಸ್ನ ಫ್ಲೋಟ್-ಹೊಂದಾಣಿಕೆಯ ಮಾರುಕಟ್ಟೆ ಬಂಡವಾಳದಲ್ಲಿ ಬದಲಾವಣೆ ಮಾಡಲಿದೆ. ಇದರಿಂದ S&P ಡೌ ಜೋನ್ಸ್ ಸೂಚ್ಯಂಕಕ್ಕೆ ಕಂಪನಿಯ ಪ್ರವೇಶ ವೇಗವಾಗಲಿದೆ ಎಂದು ಜೆಪಿ ಮೋರ್ಗನ್ ತಿಳಿಸಿದೆ.
ಪ್ರಸ್ತುತ ನಿಯಮಗಳ ಪ್ರಕಾರ ಸ್ಪೇಸ್ಎಕ್ಸ್ ಇನ್ನೂ S&P 500 ಸೂಚ್ಯಂಕ ಸೇರಲು ಅರ್ಹತೆ ಪಡೆದಿಲ್ಲ. ಏಕೆಂದರೆ ಈ ಸೂಚ್ಯಂಕದಲ್ಲಿ ಸ್ಥಾನ ಪಡೆಯಲು ಯಾವುದೇ ಕಂಪನಿಯು ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆದ ಬಳಿಕ ಕನಿಷ್ಠ 12 ತಿಂಗಳ ಕಾಲ ವಹಿವಾಟು ನಡೆಸಿರಬೇಕು ಮತ್ತು ಕಳೆದ ತ್ರೈಮಾಸಿಕ ಹಾಗೂ ಕಳೆದ 12 ತಿಂಗಳಲ್ಲಿ GAAP (Generally Accepted Accounting Principles) ಮಾನದಂಡದಡಿ ನಿವ್ವಳ ಲಾಭವನ್ನು ತೋರಿಸಿರಬೇಕು. ಟೆಸ್ಲಾ ಜೊತೆಗಿನ ವಿಲೀನದಿಂದ ಸ್ಪೇಸ್ಎಕ್ಸ್ಗೆ ಈ ಹಾದಿ ಸುಗಮವಾಗಲಿದೆ.
ಆಲ್-ಸ್ಟಾಕ್ ಡೀಲ್ (All-Stock Deal) ಎಂದರೇನು?: ಎರಡು ಕಂಪನಿಗಳು ಪರಸ್ಪರ ವಿಲೀನವಾದಾಗ, ಅಲ್ಲಿ ನಗದು (Cash) ವಹಿವಾಟು ನಡೆಸುವ ಬದಲು ಒಂದು ಕಂಪನಿಯ ಷೇರುದಾರರಿಗೆ ಮತ್ತೊಂದು ಕಂಪನಿಯ ಷೇರುಗಳನ್ನು ನೀಡಲಾಗುತ್ತದೆ. ಇದನ್ನೇ 'ಆಲ್-ಸ್ಟಾಕ್ ಡೀಲ್' ಎನ್ನುತ್ತಾರೆ. ಇದರಲ್ಲಿ ಎರಡೂ ಕಂಪನಿಗಳ ಷೇರುಗಳ ಮೌಲ್ಯದ ಅನುಪಾತಕ್ಕೆ ತಕ್ಕಂತೆ ಹೊಸ ಷೇರುಗಳನ್ನು ವಿತರಿಸಲಾಗುತ್ತದೆ.
S&P 500 ಎಂದರೇನು ಮತ್ತು ಇದರಿಂದಾಗುವ ಲಾಭವೇನು?: ಭಾರತದ 'ನಿಫ್ಟಿ-50' (Nifty-50) ಮಾದರಿಯಲ್ಲೇ ಇದು ಅಮೆರಿಕದ 500 ಅತಿದೊಡ್ಡ ಲಿಸ್ಟೆಡ್ ಕಂಪನಿಗಳ ಸೂಚ್ಯಂಕವಾಗಿದೆ. ಈ ಸೂಚ್ಯಂಕದಲ್ಲಿ ಸ್ಥಾನ ಪಡೆಯುವುದರಿಂದಾಗುವ ಅತಿದೊಡ್ಡ ಲಾಭವೆಂದರೆ, ಜಗತ್ತಿನಾದ್ಯಂತ ಇರುವ ದೊಡ್ಡ-ದೊಡ್ಡ ಇಂಡೆಕ್ಸ್ ಫಂಡ್ಗಳು ಮತ್ತು ಮ್ಯೂಚುವಲ್ ಫಂಡ್ಗಳು ನಿಯಮದ ಪ್ರಕಾರ ಆ ಕಂಪನಿಯ ಷೇರುಗಳನ್ನು ಕಡ್ಡಾಯವಾಗಿ ಖರೀದಿಸಬೇಕಾಗುತ್ತದೆ (ಇದನ್ನೇ 'ಪ್ಯಾಸಿವ್ ಬೈಯಿಂಗ್' ಎನ್ನುತ್ತಾರೆ). ಇದರಿಂದ ಷೇರುಗಳ ಬೇಡಿಕೆ ಮತ್ತು ಬೆಲೆ ಎರಡೂ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.