ಎಲಾನ್ ಮಸ್ಕ್ ಕೈಜಾರಿದ ವಿಶ್ವದ ನಂ.1 ಶ್ರೀಮಂತನ ಪಟ್ಟ;ಫ್ರೆಂಚ್ ಉದ್ಯಮಿ ಬರ್ನಾರ್ಡ್‌ ಅರ್ನಾಲ್ಟ್‌ಗೆ ಒಲಿದ ಅಗ್ರಸ್ಥಾನ

By Suvarna News  |  First Published Jan 30, 2024, 11:55 AM IST

ಹಲವು ವರ್ಷಗಳಿಂದ ವಿಶ್ವದ ನಂ.1 ಶ್ರೀಮಂತನ ಪಟ್ಟ ಅಲಂಕರಿಸಿದ್ದ ಟೆಸ್ಲಾ ಸಿಇಒ ಎಲಾನ್ ಮಸ್ಕ್, ಈಗ ಆ ಸ್ಥಾನದಿಂದ ಕೆಳಗಿಳಿದಿದ್ದಾರೆ. ಫ್ರೆಂಚ್ ಉದ್ಯಮಿ ಬರ್ನಾರ್ಡ್‌ ಅರ್ನಾಲ್ಟ್‌, ಮಸ್ಕ್ ಅವರನ್ನು ಹಿಂದಿಕ್ಕಿ ನಂ.1 ಸ್ಥಾನ ಅಲಂಕರಿಸಿದ್ದಾರೆ. 
 


ನ್ಯೂಯಾರ್ಕ್ (ಜ.30): ಕಳೆದ ಹಲವು ವರ್ಷಗಳಿಂದ ವಿಶ್ವದ ನಂ.1 ಶ್ರೀಮಂತನ ಪಟ್ಟವನ್ನು ಅಲಂಕರಿಸಿದ್ದ ಟೆಸ್ಲಾ ಸಿಇಒ  ಎಲಾನ್ ಮಸ್ಕ್ ಈಗ ಆ ಸ್ಥಾನದಿಂದ ಕೆಳಗಿಳಿದಿದ್ದಾರೆ. ಪ್ರಖ್ಯಾತ ಐಷಾರಾಮಿ ಉತ್ಪನ್ನ ತಯಾರಕ ಸಂಸ್ಥೆ ಎಲ್‌ವಿಎಂಎಚ್‌ ಸಿಎಒ ಬರ್ನಾರ್ಡ್‌ ಅರ್ನಾಲ್ಟ್‌ ಈಗ ವಿಶ್ವದ ಅಗ್ರ ಶ್ರೀಮಂತ ಪಟ್ಟಕ್ಕೇರಿದ್ದಾರೆ. ಫೋರ್ಬ್ಸ್ ವರದಿ ಪ್ರಕಾರ ಫ್ರಾನ್ಸ್ ಮೂಲದ ಉದ್ಯಮಿ ಬರ್ನಾರ್ಡ್‌ ಅರ್ನಾಲ್ಟ್‌ ಹಾಗೂ ಅವರ ಕುಟುಂಬದ  ಸಂಪತ್ತಿನಲ್ಲಿ 23.6 ಬಿಲಿಯನ್ ಡಾಲರ್ ಏರಿಕೆಯಾಗುವ ಮೂಲಕ ಅವರ ಒಟ್ಟು ಸಂಪತ್ತು 207.6 ಬಿಲಿಯನ್ ಡಾಲರ್ ತಲುಪಿದೆ. ಇನ್ನೊಂದೆಡೆ ಮಸ್ಕ್ ಅವರ ಟೆಸ್ಲಾ ಸಂಸ್ಥೆಯ ಷೇರುಗಳ ಮೌಲ್ಯ ಕಳೆದ ವಾರ ಶೇ.13 ರಷ್ಟು ಕುಸಿತ ಕಂಡಿದ್ದು, ಇದರಿಂದ  18 ಬಿಲಿಯನ್ ಡಾಲರ್ ನಷ್ಟವಾಗಿದೆ. ಪರಿಣಾಮ ಮಸ್ಕ್ ಒಟ್ಟು ಸಂಪತ್ತು 204.5 ಬಿಲಿಯನ್ ಡಾಲರ್ ಗೆ ಕುಸಿದಿದೆ.   ಇದೇ ಕಾರಣದಿಂದ ಮಸ್ಕ್ ವಿಶ್ವದ ನಂ.1 ಶ್ರೀಮಂತನ ಪಟ್ಟ ಕಳೆದುಕೊಂಡಿದ್ದಾರೆ.  2022 ರಿಂದಲೂ ವಿಶ್ವದ ಅಗ್ರ ಶ್ರೀಮಂತನ ಪಟ್ಟಕ್ಕಾಗಿ ಎಲಾನ್ ಮಸ್ಕ್ ಹಾಗೂ ಬರ್ನಾರ್ಡ್‌ ಅರ್ನಾಲ್ಟ್‌ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. 

ಬರ್ನಾರ್ಡ್‌ ಅರ್ನಾಲ್ಟ್‌ ಅವರ ಎಲ್‌ವಿಎಂಎಚ್‌ ಸಂಸ್ಥೆಯ ನಾಲ್ಕನೇ ತ್ರೈಮಾಸಿಕ ವರದಿ ಇತ್ತೀಚೆಗೆ ಪ್ರಕಟಗೊಂಡಿತ್ತು. ಈ ವರದಿ ಪ್ರಕಾರ ಸಂಸ್ಥೆಯ ಆದಾಯದಲ್ಲಿ ಶೇ.10 ರಷ್ಟು ಏರಿಕೆಯಾಗಿದೆ. ಪರಿಣಾಮ ಬರ್ನಾರ್ಡ್ ಷೇರುಗಳ ಮೌಲ್ಯದಲ್ಲಿ ಕೂಡ ಏರಿಕೆ ಕಂಡುಬಂದಿತ್ತು. ವಿಶ್ವಾದ್ಯಂತ ಜನಪ್ರಿಯತೆ ಗಳಿಸಿರುವ ಲೂಯಿ ವುಟ್ಟಾನ್‌, ಕ್ರಿಶ್ಚಿಯನ್‌ ಡಿಯೊರ್‌ ಸೇರಿದಂತೆ ಹಲವು ಉನ್ನತ ಫ್ಯಾಷನ್ ಬ್ರ್ಯಾಂಡ್ ಗಳು ಎಲ್‌ವಿಎಂಎಚ್‌ ಸಂಸ್ಥೆಗೆ ಸೇರಿವೆ. ಜಗತ್ತಿನ ಫ್ಯಾಷನ್ ವಲಯದಲ್ಲಿ ಎಲ್‌ವಿಎಂಎಚ್‌ ಅಗ್ರಸ್ಥಾನದಲ್ಲಿದೆ.

Tap to resize

Latest Videos

ಉದ್ಯೋಗಿಗಳನ್ನೇ ಬೆಸ್ತು ಬೀಳಿಸಿದ ಬಾಸ್;ವೈರಲ್ ಆಯ್ತು ಜೆರೋಧ ಸಿಇಒ ಹಂಚಿಕೊಂಡ ನಕಲಿ ಪೊಲೀಸ್ ದಾಳಿ ವಿಡಿಯೋ

ಯಾರು ಈ ಬರ್ನಾರ್ಡ್‌ ಅರ್ನಾಲ್ಟ್‌?
ಬರ್ನಾರ್ಡ್‌ ಅರ್ನಾಲ್ಟ್‌ ಫ್ರಾನ್ಸ್ ಮೂಲದ ಉದ್ಯಮಿ. 1949 ರಲ್ಲಿ ಫ್ರಾನ್ಸ್‌ನ ರೂಬೈಕ್ಸ್‌ನಲ್ಲಿ ಜನಿಸಿದ ಇವರು, ಪ್ಯಾರಿಸ್‌ನ ಎಕೋಲ್ ಪಾಲಿಟೆಕ್ನಿಕ್‌ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ತಂದೆಯ ಜೊತೆಗೆ ರಿಯಲ್ ಎಸ್ಟೇಟ್ ಸೇರಿದಂತೆ ಅನೇಕ ಉದ್ಯಮಗಳಲ್ಲಿ ಬರ್ನಾರ್ಡ್ ತೊಡಗಿದ್ದರು. 1987ರಲ್ಲಿ ಇವರು  ಎಲ್‌ವಿಎಂಎಚ್‌ ಪ್ರಾರಂಭಿಸಿದರು. ಕಂಪನಿಯನ್ನು ಸೂಕ್ತ ಯೋಜನೆಗಳ ಜೊತೆಗೆ ಯಶಸ್ವಿಯಾಗಿ ಮುನ್ನಡೆಸುವಲ್ಲಿ ಅರ್ನಾಲ್ಟ್ ಸಫಲರಾದರು ಕೂಡ.

ಫೋರ್ಬ್ಸ್ ಶ್ರೀಮಂತರ ಪಟ್ಟಿ ಹೀಗಿದೆ:
ಫೋರ್ಬ್ಸ್ ಬಿಲಿಯನೇರ್ ಪಟ್ಟಿಯಲ್ಲಿರುವ ಟಾಪ್ 10 ಶ್ರೀಮಂತರ ಹೆಸರು ಹೀಗಿದೆ:

1.ಬರ್ನಾರ್ಡ್‌ ಅರ್ನಾಲ್ಟ್‌ ಹಾಗೂ ಕುಟುಂಬ ($207.6 ಬಿಲಿಯನ್)
2.ಎಲಾನ್ ಮಸ್ಕ್ ($204.7 ಬಿಲಿಯನ್)
3.ಜೆಫ್ ಬೆಜೋಸ್ ($181.3 ಬಿಲಿಯನ್ )
4.ಲಾರಿ ಎಲ್ಲಿಸನ್ ($142.2 ಬಿಲಿಯನ್ )
5.ಮಾರ್ಕ್ ಜುಕರ್ ಬರ್ಗ್ ($139.1 ಬಿಲಿಯನ್ )
6.ವಾರನ್ ಬಫೆಟ್ ($127.2 ಬಿಲಿಯನ್ )
7.ಲಾರಿ ಪೇಜ್ ($127.1 ಬಿಲಿಯನ್ )
8.ಬಿಲ್ ಗೇಟ್ಸ್ ($122.9 ಬಿಲಿಯನ್ )
9.ಸೆರ್ಗೆ ಬ್ರಿನ್ ($121.7 ಬಿಲಿಯನ್ )
10.ಸ್ಟೀವ್ ಬಲ್ಲಮರ್ ($ 118.8 ಬಿಲಿಯನ್ )

ಅಮೆಜಾನ್ ಸ್ಥಾಪಕ ಜೆಫ್ ಬೆಜೋಸ್ ಮನೆ ಮಾರಾಟಕ್ಕಿದೆ, ಕೊಳ್ಳೋ ಯೋಚನೆ ಇದ್ದರೆ ಟ್ರೈ ಮಾಡಿ!

ಬ್ಲೂಮ್‌ಬರ್ಗ್ ಪ್ರಕಾರ ಎಲಾನ್ ಮಸ್ಕ್ ನಂ.1
ಇನ್ನೊಂದೆಡೆ ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನ ಪ್ರಕಾರ $199 ಬಿಲಿಯನ್ ನಿವ್ವಳ ಸಂಪತ್ತು ಹೊಂದಿರುವ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಈಗಲೂ ವಿಶ್ವದ ನಂ.1 ಶ್ರೀಮಂತ. ಇನ್ನು ಇ-ಕಾಮರ್ಸ್ ದೈತ್ಯ ಅಮೆಜಾನ್ ಮುಖ್ಯಸ್ಥ ಜೆಫ್ ಬೆಜೋಸ್ 184 ಬಿಲಿಯನ್ ಡಾಲರ್ ಸಂಪತ್ತು ಹೊಂದಿದ್ದು, ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ಬ್ಲೂಮ್ ಬರ್ಗ್ ಸೂಚ್ಯಂಕದ ಪ್ರಕಾರ ಬರ್ನಾರ್ಡ್‌ ಅರ್ನಾಲ್ಟ್‌ $183 ಬಿಲಿಯನ್ ನಿವ್ವಳ ಸಂಪತ್ತು ಹೊಂದಿರುವ ಮೂಲಕ ಮೂರನೇ ಸ್ಥಾನದಲ್ಲಿದ್ದಾರೆ. 
 

click me!