Union Budget 2025: ಎಲೆಕ್ಟ್ರಿಕ್‌ ವಾಹನ, ಮೊಬೈಲ್‌ ಬ್ಯಾಟರಿಗಳು ಇನ್ನು ಅಗ್ಗ

Published : Feb 02, 2025, 05:00 AM IST
Union Budget 2025: ಎಲೆಕ್ಟ್ರಿಕ್‌ ವಾಹನ, ಮೊಬೈಲ್‌ ಬ್ಯಾಟರಿಗಳು ಇನ್ನು ಅಗ್ಗ

ಸಾರಾಂಶ

ಕೇಂದ್ರ ಸರ್ಕಾರದ ಈ ನಡೆಯು, ದೇಶದಲ್ಲಿ ಲಿಥಿಯಂ-ಐಯಾನ್‌ ಬ್ಯಾಟರಿಗಳ ಉತ್ಪಾದನೆಯ ಪ್ರಮಾಣವನ್ನು ಹೆಚ್ಚಿಸಲಿದೆ. ಲಿಥಿಯಂ-ಐಯಾನ್‌ ಬ್ಯಾಟರಿಗಳನ್ನು ಎಲೆಕ್ಟ್ರಿಕ್‌ ವಾಹನ ಹಾಗೂ ಮೊಬೈಲ್‌ಗಳಲ್ಲಿ ಬಳಸಲಾಗುತ್ತದೆ.

ನವದೆಹಲಿ(ಫೆ.02):  ಭಾರತದಲ್ಲಿ ಎಲೆಕ್ಟ್ರಿಕ್‌ ವಾಹನಗಳು ಹಾಗೂ ಮೊಬೈಲ್‌ ಫೋನ್‌ಗಳ ಉತ್ಪಾದನೆಗೆ ಉತ್ತೇಜನ ನೀಡುವ ದೃಷ್ಟಿಯಿಂದ, ಲಿಥಿಯಂ-ಐಯಾನ್‌ ಬ್ಯಾಟರಿಗಳಲ್ಲಿ ಬಳಸುವ ಬಿಡಿ ಭಾಗಗಳ ಮೇಲಿನ ಸುಂಕವನ್ನು ಮತ್ತಷ್ಟು ಕಡಿತಗೊಳಿಸುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ತಮ್ಮ ಬಜೆಟ್‌ ಭಾಷಣದಲ್ಲಿ ತಿಳಿಸಿದರು.

ಕೇಂದ್ರ ಸರ್ಕಾರದ ಈ ನಡೆಯು, ದೇಶದಲ್ಲಿ ಲಿಥಿಯಂ-ಐಯಾನ್‌ ಬ್ಯಾಟರಿಗಳ ಉತ್ಪಾದನೆಯ ಪ್ರಮಾಣವನ್ನು ಹೆಚ್ಚಿಸಲಿದೆ. ಲಿಥಿಯಂ-ಐಯಾನ್‌ ಬ್ಯಾಟರಿಗಳನ್ನು ಎಲೆಕ್ಟ್ರಿಕ್‌ ವಾಹನ ಹಾಗೂ ಮೊಬೈಲ್‌ಗಳಲ್ಲಿ ಬಳಸಲಾಗುತ್ತದೆ.
‘ಈ ಹಿಂದೆಯೇ ಹಲವು ಬಿಡಿ ಭಾಗಗಳ ಮೇಲಿನ ಸುಂಕವನ್ನು ಕೇಂದ್ರವು ಕಡಿತಗೊಳಿಸಿದ್ದು, ಎಲೆಕ್ಟ್ರಿಕ್‌ ವಾಹನಗಳ ಬ್ಯಾಟರಿಗಳಲ್ಲಿ ಬಳಸುವ ಹೆಚ್ಚುವರಿ 35 ಬಿಡಿ ಭಾಗಗಳು, ಮೊಬೈಲ್‌ ಬ್ಯಾಟರಿಗಳಲ್ಲಿ ಬಳಸುವ ಹೆಚ್ಚುವರಿ 28 ಬಿಡಿ ಭಾಗಗಳ ಮೇಲಿನ ಸುಂಕವನ್ನು ಕಡಿತಗೊಳಿಸಲಾಗುತ್ತಿದೆ. ಇದರಿಂದ ದೇಶದಲ್ಲಿ ಇವಿ ಹಾಗೂ ಮೊಬೈಲ್‌ಗಳ ಬ್ಯಾಟರಿ ಉತ್ಪಾದನೆ ಪ್ರಮಾಣ ಗಣನೀಯವಾಗಿ ಏರಿಕೆಯಾಗಲಿದೆ’ ಎಂದು ನಿರ್ಮಲಾ ಹೇಳಿದರು. 

Budget 2025: ಇದು ಜನರ ಜೇಬಿಗೆ ಹಣ ತುಂಬಿಸುವ ಬಜೆಟ್: ಪ್ರಧಾನಿ ಮೋದಿ

ಕೇಂದ್ರದ ಈ ನಿರ್ಧಾರವನ್ನು ಇವಿ ಹಾಗೂ ಮೊಬೈಲ್ ಉತ್ಪಾದಕ ಸಂಸ್ಥೆಗಳು ಸ್ವಾಗತಿಸಿವೆ. ಗ್ರಾಂಟ್‌ ಥಾರ್ನ್‌ಟನ್‌ ಭಾರತ್‌ನ ಪಾರ್ಟ್ನರ್‌, ಆಟೋ ಹಾಗೂ ಇವಿ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರುವ ಸಾಕೇತ್‌ ಮೆಹ್ರಾ ಮಾತನಾಡಿ, ‘ಲಿಥಿಯಂ ಮೇಲಿನ ಕಸ್ಟಮ್ಸ್‌ ಸುಂಕ ಇಳಿಕೆಯಿಂದ ಭಾರತದಲ್ಲಿ ಲಿಥಿಯಂ-ಐಯಾನ್‌ ಬ್ಯಾಟರಿಗಳ ತಯಾರಿಕಾ ವೆಚ್ಚ ಕಡಿತಗೊಳ್ಳಲಿದೆ. ದೇಶದಲ್ಲಿ ಹೆಚ್ಚುತ್ತಿರುವ ಎಲೆಕ್ಟ್ರಿಕ್‌ ವಾಹನಗಳ ಉತ್ಪಾದನೆಗೆ ಇದು ದೊಡ್ಡ ನೆರವು ಒದಗಿಸಲಿದೆ’ ಎಂದಿದ್ದಾರೆ

ಕೇಂದ್ರದ ಈ ನಿರ್ಧಾರದಿಂದ ಬ್ಯಾಟರಿಗಳ ತಯಾರಿಕೆಗೆ ಬೇಕಿರುವ ಉತ್ಪನ್ನಗಳನ್ನು ಹೊರದೇಶಗಳಿಂದ ಆಮದು ಮಾಡಿಕೊಳ್ಳುವುದು ಕಡಿಮೆಯಾಗಲಿದೆ. ಇದೊಂದು ಸ್ವಾಗತಾರ್ಹ ನಿರ್ಧಾರ ಎಂದು ಯುನೋ ಮಿಂಡಾ ಸಂಸ್ಥೆಯ ಮುಖ್ಯಸ್ಥ ನಿರ್ಮಲ್‌ ಕೆ ಮಿಂಡಾ ಹೇಳಿದ್ದಾರೆ. ಎಲೆಕ್ಟ್ರಿಕ್‌ ವಾಹನಗಳಲ್ಲಿ ಬಳಸುವ ಬಿಡಿ ಭಾಗಗಳ ಮೇಲಿನ ಸುಂಕವನ್ನು ಕಡಿತಗೊಳಿಸುವ ಮೂಲಕ, ಭಾರತದಲ್ಲೇ ಬ್ಯಾಟರಿ, ಮೋಟಾರ್‌, ಕಂಟ್ರೋಲರ್‌ಗಳನ್ನು ತಯಾರಿಸಲು ಅನುಕೂಲವಾಗಲಿದ್ದು, ಇವುಗಳ ಉತ್ಪಾದನೆಗೆ ತಗುಲುವ ವೆಚ್ಚವೂ ಕಡಿಮೆಯಾಗಲಿದೆ. ಇದರಿಂದ ಹೆಚ್ಚೆಚ್ಚು ಭಾರತೀಯರು ಎಲೆಕ್ಟ್ರಿಕ್‌ ವಾಹನಗಳ ಖರೀದಿಗೆ ಮುಂದಾಗಬಹುದು. ಇದು ಪರಿಸರ ಸಂರಕ್ಷಣೆಗೂ ಅನುಕೂಲಕಾರಿ ಎಂದು ನಿರ್ಮಲ್‌ ಅಭಿಪ್ರಾಯಪಟ್ಟಿದ್ದಾರೆ.

ರೀವ್ಹಾಂಪ್‌ ಮೋಟೋ ಸಂಸ್ಥೆಯ ಸಹ ಮಾಲಿಕ ಹಾಗೂ ಸಿಇಒ ಪ್ರಿತೇಶ್‌ ಮಹಾಜನ ಮಾತನಾಡಿ, ‘ಕೋಬಾಲ್ಟ್ ಪುಡಿ, ಲಿಥಿಯಂ-ಐಯಾನ್‌ ಬ್ಯಾಟರಿ ತ್ಯಾಜ್ಯ ಹಾಗೂ ಇನ್ನಿತರ 12 ಪ್ರಮುಖ ಖನಿಜಗಳ ಮೇಲಿನ ಸುಂಕ ಇಳಿಕೆಯಿಂದ ಬ್ಯಾಟರಿ ಉತ್ಪಾದನೆಗೆ ಬೇಕಿರುವ ಕಚ್ಚಾ ವಸ್ತುಗಳ ಲಭ್ಯತೆ ಹೆಚ್ಚಲಿದೆ ಎಂದಿದ್ದಾರೆ. ಇದರಿಂದ ಉತ್ಪಾದನಾ ವೆಚ್ಚವಷ್ಟೇ ಕಡಿಮೆಯಾಗುವುದಿಲ್ಲ, ಜೊತೆಗೆ ಸಂಸ್ಥೆಗಳ ಉತ್ಪದಾನ ಪ್ರಮಾಣವೂ ಏರಿಕೆಯಾಗಲಿದೆ. ಮತ್ತಷ್ಟು ಮುಂದುವರಿದ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದರ ಜೊತೆಗೆ ಗುಣಮಟ್ಟದ ಉದ್ಯೋಗಗಳನ್ನೂ ಸೃಷ್ಟಿಸಬಹುದು ಎಂದಿದ್ದಾರೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ
ರೆಪೋ ದರ ಕಡಿತ : ಸಾಲಗಾರರಿಗೆ ಅನುಕೂಲ, ಹೂಡಿಕೆದಾರರಿಗೆ ಬೇಸರ