ಬಜೆಟ್ 2025: ಭಾರತದ ಬಾಹ್ಯಾಕಾಶ ಕನಸಿಗೆ 13,416 ಕೋಟಿ ರೂಪಾಯಿಗಳ ಉತ್ತೇಜನ

ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಭಾರತದ ಬಾಹ್ಯಾಕಾಶ ವಲಯದಲ್ಲಿ ಪಾಲ್ಗೊಳ್ಳುವ ಖಾಸಗಿ ಸಂಸ್ಥೆಗಳಿಗೆ ಉತ್ತೇಜನ ನೀಡುವ ಸಲುವಾಗಿ 1,000 ಕೋಟಿ ರೂಪಾಯಿಗಳ ಸಾಹಸೋದ್ಯಮ ಬಂಡವಾಳವನ್ನು (ವೆಂಚರ್ ಕ್ಯಾಪಿಟಲ್) ಘೋಷಿಸಿದ್ದಾರೆ. 

Union Budget 2025 Rs 13416 crore boost for Indias space dream

ಗಿರೀಶ್ ಲಿಂಗಣ್ಣ, (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಶನಿವಾರ ಸಂಸತ್ ಭವನದಲ್ಲಿ ಮಂಡಿಸಲಾದ 2025-26ನೇ ಸಾಲಿನ ಕೇಂದ್ರ ಬಜೆಟ್ ಬಾಹ್ಯಾಕಾಶ ಇಲಾಖೆಗೆ 13,416.20 ಕೋಟಿ ರೂಪಾಯಿಗಳನ್ನು ಒದಗಿಸಿದೆ. ಈ ಮೊತ್ತದಲ್ಲಿ, 6,103.63 ಕೋಟಿ ರೂಪಾಯಿಗಳನ್ನು ಬಂಡವಾಳ ವೆಚ್ಚಕ್ಕೆ ವಿನಿಯೋಗಿಸಿದರೆ, 7,312.57 ಕೋಟಿ ರೂಪಾಯಿಗಳನ್ನು ಆದಾಯ ವೆಚ್ಚಕ್ಕೆ ಬಳಸಲಾಗುತ್ತದೆ. ಇದಕ್ಕೆ ಹೋಲಿಸಿದರೆ, ಕಳೆದ ವರ್ಷದ ಮಧ್ಯಂತರ ಬಜೆಟ್ ಬಾಹ್ಯಾಕಾಶ ಇಲಾಖೆಗೆ 13,042.75 ಕೋಟಿ ರೂಪಾಯಿಗಳನ್ನು ಒದಗಿಸಿತ್ತು. 

Latest Videos

ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಭಾರತದ ಬಾಹ್ಯಾಕಾಶ ವಲಯದಲ್ಲಿ ಪಾಲ್ಗೊಳ್ಳುವ ಖಾಸಗಿ ಸಂಸ್ಥೆಗಳಿಗೆ ಉತ್ತೇಜನ ನೀಡುವ ಸಲುವಾಗಿ 1,000 ಕೋಟಿ ರೂಪಾಯಿಗಳ ಸಾಹಸೋದ್ಯಮ ಬಂಡವಾಳವನ್ನು (ವೆಂಚರ್ ಕ್ಯಾಪಿಟಲ್) ಘೋಷಿಸಿದ್ದಾರೆ. ಈ ನಿಧಿ ವಿನೂತನ ಬಾಹ್ಯಾಕಾಶ ಸಂಬಂಧಿ ಯೋಜನೆಗಳಲ್ಲಿ ತೊಡಗುವ ಸ್ಟಾರ್ಟಪ್‌ಗಳು ಮತ್ತು ಉದ್ಯಮ ಸಂಸ್ಥೆಗಳಿಗೆ ನೆರವು ನೀಡುವ ಗುರಿ ಹೊಂದಿದೆ. ಇಂತಹ ಸಂಸ್ಥೆಗಳಿಗೆ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸಲು ಮತ್ತು ಬೆಳೆಯುತ್ತಿರುವ ಭಾರತದ ಬಾಹ್ಯಾಕಾಶ ಯೋಜನೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ನೆರವಾಗುತ್ತದೆ.

ಬಜೆಟ್ 2025-26: ಸ್ಮಾರ್ಟ್ ಹೂಡಿಕೆಗಳ ಮೂಲಕ ರಕ್ಷಣಾ ಬಲವರ್ಧನೆ

ಬಂಡವಾಳ ವೆಚ್ಚ: ಈ ಮೊತ್ತವನ್ನು ದೀರ್ಘಾವಧಿಗೆ ಬಳಕೆಯಾಗುವಂತಹ ಮೂಲಭೂತ ಸೌಕರ್ಯಗಳಾದ ಉಪಗ್ರಹಗಳು, ರಾಕೆಟ್‌ಗಳು, ಅಥವಾ ಬಾಹ್ಯಾಕಾಶ ಮೂಲಭೂತ ವ್ಯವಸ್ಥೆಗಳನ್ನು ನಿರ್ಮಿಸಲು ಬಳಸಲಾಗುತ್ತದೆ. ಇವು ಒಂದು ಬಾರಿಯ ಹೂಡಿಕೆಯಾಗಿದ್ದು, ದೇಶಕ್ಕೆ ದೀರ್ಘಾವಧಿಯಲ್ಲಿ ನೆರವಾಗುತ್ತದೆ.

ಆದಾಯ ವೆಚ್ಚ: ಈ ಹಣವನ್ನು ದೈನಂದಿನ ಕಾರ್ಯಾಚರಣೆಗಳಿಗೆ ಬಳಸಲಾಗುತ್ತದೆ. ಅಂದರೆ, ಸಂಬಳ ನೀಡಲು, ಉಪಕರಣಗಳನ್ನು ನಿರ್ವಹಿಸಲು, ಯೋಜನೆಗಳನ್ನು ನಿರ್ವಹಿಸಲು ಮತ್ತು ಬಾಹ್ಯಾಕಾಶ ಇಲಾಖೆಯ ಇತರ ಖರ್ಚು ವೆಚ್ಚಗಳನ್ನು ನಿರ್ವಹಿಸಲು ಬಳಸಲಾಗುತ್ತದೆ. 2024ನೇ ಸಾಲಿನಲ್ಲಿ ಒದಗಿಸಲಾದ ಹೆಚ್ಚುವರಿ ಬಜೆಟ್ ಅನ್ನು ಚಂದ್ರಯಾನ-3 ಚಂದ್ರ ಅನ್ವೇಷಣಾ ಯೋಜನೆ ಮತ್ತು ಸೂರ್ಯನ ಅಧ್ಯಯನ ನಡೆಸುವ ಆದಿತ್ಯ ಎಲ್1 ಯೋಜನೆಗಳಂತಹ ಮಹಾನ್ ಸಾಧನೆ ಕೈಗೊಳ್ಳಲು ಬಳಸಲಾಗಿತ್ತು. 2023-24ನೇ ಸಾಲಿನಲ್ಲಿ ಬಾಹ್ಯಾಕಾಶ ಬಜೆಟ್ ಹಿಂದಿನ 12,543.91 ಕೋಟಿ ರೂಪಾಯಿಗಳಿಗೆ ಹೆಚ್ಚಳ ಕಂಡಿದ್ದರೂ, 2022-23ನೇ ಸಾಲಿನ 13,700 ಕೋಟಿ ರೂಪಾಯಿಗಿಂತ ಕಡಿಮೆಯಾಗಿತ್ತು. ಇತ್ತೀಚಿನ ವರ್ಷಗಳಲ್ಲಿ, ಬಾಹ್ಯಾಕಾಶ ಇಲಾಖೆಗೆ ಸರ್ಕಾರದಿಂದ ಉತ್ತಮ ಆರ್ಥಿಕ ಬೆಂಬಲ ಲಭಿಸಿದೆ.

* ಉದಾಹರಣೆಗೆ, 2020-21ನೇ ಸಾಲಿನಲ್ಲಿ ಸ್ಥಾಪನಾ ವೆಚ್ಚಗಳಿಗಾಗಿ 230.17 ಕೋಟಿ ರೂಪಾಯಿಗಳನ್ನು ನಿಯೋಜಿಸಲಾಗಿತ್ತು. ಇದರಲ್ಲಿ, 194 ಕೋಟಿ ರೂಪಾಯಿಗಳನ್ನು ಇಸ್ರೋದ ಮುಖ್ಯ ಕಚೇರಿಯ ಕಾರ್ಯಾಚರಣೆಗಳು ಮತ್ತು ಚಟುವಟಿಕೆಗಳಿಗೆ ನೆರವಾಗಲು ಒದಗಿಸಲಾಗಿತ್ತು. ಸ್ಥಾಪನಾ ವೆಚ್ಚಗಳು ಸಾಮಾನ್ಯವಾಗಿ ಕಚೇರಿಗಳ ನಿರ್ವಹಣಾ ವೆಚ್ಚ, ಆಡಳಿತಾತ್ಮಕ ಕಾರ್ಯಗಳು, ಮತ್ತು ಸಾಮಾನ್ಯ ಖರ್ಚು ವೆಚ್ಚಗಳನ್ನು ನಿರ್ವಹಿಸಲು ಬಳಕೆಯಾಗುತ್ತವೆ.

* ಇದೇ ವೇಳೆ, ಸೆಂಟ್ರಲ್ ಸೆಕ್ಟರ್ ಯೋಜೆನಗಳಿಗಾಗಿ 12,587 ಕೋಟಿ ರೂಪಾಯಿಗಳನ್ನು ಒದಗಿಸಲಾಗಿತ್ತು. ಇದು ಉಪಗ್ರಹಗಳು, ರಾಕೆಟ್‌ಗಳು ಮತ್ತು ಆಧುನಿಕ ಉಪಕರಣಗಳನ್ನು ಅಭಿವೃದ್ಧಿ ಪಡಿಸುವ ಬಾಹ್ಯಾಕಾಶ ತಂತ್ರಜ್ಞಾನಕ್ಕೆ ಒದಗಿಸಿದ 9,761.50 ಕೋಟಿ ರೂಪಾಯಿಗಳನ್ನೂ ಒಳಗೊಂಡಿತ್ತು. 1,810 ಕೋಟಿ ರೂಪಾಯಿಗಳನ್ನು ಬಾಹ್ಯಾಕಾಶ ಬಳಕೆಗಾಗಿ ನಿಯೋಜಿಸಲಾಗಿದ್ದು, ಇದು ಪ್ರಾಯೋಗಿಕ ಬಳಕೆಗಳಾದ ಹವಾಮಾನ ಮುನ್ಸೂಚನೆ, ಸಂವಹನ ಮತ್ತು ಸಂಚರಣದಂತಹ (ನ್ಯಾವಿಗೇಶನ್) ಬಾಹ್ಯಾಕಾಶ ತಂತ್ರಜ್ಞಾನಗಳಿಗೆ ಬಳಕೆಯಾಗುತ್ತದೆ. ಈ ನಿಧಿಗಳು ಭಾರತಕ್ಕೆ ತನ್ನ ಬಾಹ್ಯಾಕಾಶ ಸಾಮರ್ಥ್ಯವನ್ನು ವೃದ್ಧಿಸಿ, ಜನರಿಗೆ ದೈನಂದಿನ ಸೇವೆಯನ್ನು ಹೆಚ್ಚಿಸಲು ನೆರವಾಗಲಿವೆ.

ಭಾರತದ ಬಾಹ್ಯಾಕಾಶ ಮಹತ್ವಾಕಾಂಕ್ಷೆಗಳು ದಿನೇ ದಿನೇ ವೃದ್ಧಿಸುತ್ತಿದ್ದು, ಬಾಹ್ಯಾಕಾಶ ಕ್ಷೇತ್ರದಲ್ಲಿ ವಾಣಿಜ್ಯಿಕ ಆಸಕ್ತಿಯೂ ಬೆಳೆಯುತ್ತಿದೆ. ಆದ್ದರಿಂದ, ಈ ಬಾರಿಯ ಬಾಹ್ಯಾಕಾಶ ಬಜೆಟ್ ಬಾಹ್ಯಾಕಾಶ ಅನ್ವೇಷಣೆಯಲ್ಲಿ, ಉಪಗ್ರಹ ತಂತ್ರಜ್ಞಾನದಲ್ಲಿ, ಮತ್ತು ಡೀಪ್ ಸ್ಪೇಸ್ ಯೋಜನೆಗಳಲ್ಲಿ ಭಾರತದ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ.

ಪ್ರಜಾಪ್ರಭುತ್ವದ ಹಬ್ಬಕ್ಕೆ ಭಾರತೀಯ ಸೇನೆ ಸಜ್ಜು: ಗಣರಾಜ್ಯೋತ್ಸವದಲ್ಲಿ ಈ ಬಾರಿ 'ಸ್ವರ್ಣಿಮ್ ಭಾರತ್'

(ಈ ಲೇಖನದ ಬರಹಗಾರರು ಪ್ರಶಸ್ತಿ ಪುರಸ್ಕೃತ ವಿಜ್ಞಾನ ಬರಹಗಾರರು, ಮತ್ತು ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ನೀವು ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)

click me!