ದೀಪಾವಳಿಗೆ ಗೃಹಿಣಿಯರಿಗೆ ಶಾಕ್; ಅಡುಗೆ ಎಣ್ಣೆ ಬೆಲೆ ಹೆಚ್ಚಳ ಸಾಧ್ಯತೆ!

By Suvarna News  |  First Published Oct 21, 2022, 4:12 PM IST

*ದೇಶದ ಕೆಲವು ನಗರಗಳಲ್ಲಿ ಈಗಾಗಲೇ ಅಡುಗೆ ಎಣ್ಣೆ ಬೆಲೆ ಹೆಚ್ಚಳ
*ಬೆಲೆ ಹೆಚ್ಚಳದ ಬಗ್ಗೆ ಕಳೆದ ವಾರವೇ ಮಾಹಿತಿ ನೀಡಿರುವ ಖಾದ್ಯ ತೈಲ ವ್ಯಾಪಾರಿಗಳ ಸಂಘಟನೆ 
*ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಕೂಡ ಬೆಲೆ ಹೆಚ್ಚಳಕ್ಕೆ ಕಾರಣ 


ನವದೆಹಲಿ (ಅ.21): ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಈಗಾಗಲೇ ಎಲ್ಲೆಡೆ ಮನೆ ಮಾಡಿದೆ. ಹಬ್ಬಕ್ಕೆ ಸಿಹಿ ತಿನಿಸುಗಳು, ವಿಶೇಷ ಅಡುಗೆಗೆ ಈಗಾಗಲೇ ಮಹಿಳೆಯರು ಅಗತ್ಯ ಸಾಮಗ್ರಿಗಳನ್ನು ಖರೀದಿಸುತ್ತಿದ್ದಾರೆ. ಆದರೆ, ಇದೇ ಸಮಯದಲ್ಲಿ ಗೃಹಿಣಿಯರಿಗೆ ಶಾಕ್ ನೀಡುವಂತಹ ಒಂದು ಸುದ್ದಿ ಬಂದಿದೆ. ಖಾದ್ಯ ತೈಲಗಳ ಬೆಲೆಯಲ್ಲಿ ದಿಢೀರ್ ಏರಿಕೆಯಾಗುವ ಸಾಧ್ಯತೆಯಿದೆ ಎಂದು ವರದಿಗಳು ಹೇಳಿವೆ. ದೇಶದ ಕೆಲವು ನಗರಗಳಲ್ಲಿ ಹಬ್ಬಕ್ಕೂ ಮುನ್ನವೇ ಚಿಲ್ಲರೆ ಹಾಗೂ ಸಗಟು ಮಾರುಕಟ್ಟೆಗಳಲ್ಲಿ ಅಡುಗೆ ಎಣ್ಣೆ ಬೆಲೆಗಳಲ್ಲಿ ಏರಿಕೆಯಾಗಿದೆ.  ಪ್ರಸ್ತುತ ಜಗತ್ತಿನಲ್ಲಿ ನಡೆಯುತ್ತಿರುವ ಕೆಲವು ಭೌಗೋಳಿಕ-ರಾಜಕೀಯ ಘಟನೆಗಳು ಖಾದ್ಯ ತೈಲದ ಬೆಲೆ ಮೇಲೆ ಪರಿಣಾಮ ಬೀರಿವೆ. ಕಚ್ಚಾ ತೈಲ ಉತ್ಪಾದನೆ ಮೇಲೆ ಒಪೆಕ್ ರಾಷ್ಟ್ರಗಳ ನಿರ್ಬಂಧಗಳು  ದೇಶಾದ್ಯಂತ ಅಡುಗೆ ಎಣ್ಣೆ ಬೆಲೆ ಹೆಚ್ಚಳಕ್ಕೆ ಕಾರಣವಾಗುವ ನಿರೀಕ್ಷೆಯಿದೆ. ದಿ ಇಂಡಿಯಾ ರೇಟಿಂಗ್ಸ್ ಹಾಗೂ ರಿಸರ್ಚ್ ವರದಿ ಪ್ರಕಾರ ತಾಳೆ ಎಣ್ಣೆ ರಫ್ತಿನ ಮೇಲೆ ನಿರ್ಬಂಧ ಹೇರುವ ಇಂಡೋನೇಷ್ಯಾದ ನಿರ್ಧಾರ ಜಾಗತಿಕವಾಗಿ ಖಾದ್ಯ ತೈಲದ ಪೂರೈಕೆ ಹಾಗೂ ಬೆಲೆ ಎರಡರ ಮೇಲೂ ಪರಿಣಾಮ ಬೀರಲಿದೆ. ಈ ಕಾರಣದಿಂದ ಜಾಗತಿಕ ಮಾರುಕಟ್ಟೆಯಲ್ಲಿ ಪ್ರತಿ ತಿಂಗಳು ಎರಡು ಮಿಲಿಯನ್ ಟನ್ ತಾಳೆ ಎಣ್ಣೆ ಪೂರೈಕೆ ಕಡಿಮೆಯಾಗಲಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಕೂಡ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಇದು ಮಾಸಿಕ ಜಾಗತಿಕ ವ್ಯಾಪಾರ ಪ್ರಮಾಣದ ಶೇ.50ರಷ್ಟಾಗಿದೆ. ಇದ್ರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಖಾದ್ಯ ತೈಲಗಳ ಬೇಡಿಕೆಗೆ ತಕ್ಕಂತೆ ಪೂರೈಕೆಯಿರೋದಿಲ್ಲ. ಪರಿಣಾಮ ಸಹಜವಾಗಿ ಬೆಲೆಯೇರಿಕೆಯಾಗಲಿದೆ. 

ಕಳೆದ ವಾರ ಅಖಿಲ ಭಾರತ ಖಾದ್ಯ ತೈಲ ವ್ಯಾಪಾರಿಗಳ ಸಂಘಟನೆ ರಿಟೇಲ್ ಅಂಗಡಿಗಳಲ್ಲಿ ತಾಳೆ ಎಣ್ಣೆ ಬೆಲೆಯಲ್ಲಿ ಲೀಟರ್ ಗೆ 10-12ರೂ., ಸೋಯಾಬಿನ್ ತೈಲ ಬೆಲೆಯಲ್ಲಿ ಲೀಟರ್ ಗೆ 14-16ರೂ. ಹಾಗೂ ಸೂರ್ಯಕಾಂತಿ ಎಣ್ಣೆ ಬೆಲೆಯಲ್ಲಿ ಲೀಟರ್ ಗೆ 18-20ರೂ. ಹೆಚ್ಚಳವಾಗಲಿದೆ ಎಂಬ ಮಾಹಿತಿ ನೀಡಿತ್ತು.  ಈ ಬೆಲೆಯೇರಿಕೆ ಗ್ರಾಹಕ ಬೆಲೆ ಆಧಾರಿತ ಹಣದುಬ್ಬರ ದರ ಹೆಚ್ಚಳಕ್ಕೆ ಕಾರಣವಾಗಿದೆ. ಇನ್ನು ದೇಶದಲ್ಲಿ ತಾಳೆ ಎಣ್ಣೆ ಪೂರೈಕೆಯಲ್ಲಿ ಮುಂದಿನ ದಿನಗಳಲ್ಲಿ ವ್ಯತ್ಯಯವಾಗಲಿದೆ.  ಈಗಾಗಲೇ ಭಾರತದಲ್ಲಿ ಚಿಲ್ಲರೆ ಹಣದುಬ್ಬರ ಸತತ ರಡು ತಿಂಗಳಿಂದ ಏರಿಕೆಯ ಹಾದಿಯಲ್ಲಿದೆ.  ಅಡುಗೆ ಎಣ್ಣೆಗಳ ಬೆಲೆಯೇರಿಕೆ ಮುಂದಿನ ದಿನಗಳಲ್ಲಿ ಚಿಲ್ಲರೆ ಹಣದುಬ್ಬರ ಇನ್ನಷ್ಟು ಏರಿಕೆಯಾಗಲು ಕಾರಣವಾಗಲಿದೆ.

Tap to resize

Latest Videos

ಭಾರತದ ದಾನಿಗಳ ಪಟ್ಟಿಯಲ್ಲಿ ಶಿವ ನಡಾರ್ ನಂ.1; ಎರಡನೇ ಸ್ಥಾನಕ್ಕೆ ಜಾರಿದ ಅಜೀಂ ಪ್ರೇಮ್ ಜಿ

ರಷ್ಯಾ-ಉಕ್ರೇನ್ ಸಂಘರ್ಷ ಜಾಗತಿಕ ಮಟ್ಟದಲ್ಲಿ ಕಚ್ಚಾ ಸೂರ್ಯಕಾಂತಿ ಎಣ್ಣೆ ಲಭ್ಯತೆಯ ಮೇಲೆ ಗಂಭೀರ ಪರಿಣಾಮ ಬೀರಿದೆ. ಉಕ್ರೇನ್ ಸೂರ್ಯಕಾಂತಿ ಎಣ್ಣೆ ಉತ್ಪಾದಿಸುವ ಪ್ರಮುಖ ರಾಷ್ಟ್ರವಾಗಿದೆ. ಆದರೆ, ರಷ್ಯಾ-ಉಕ್ರೇನೆ ಯುದ್ಧ ಪ್ರಾರಂಭವಾದ ಬಳಿಕ ಉಕ್ರೇನ್ ನಿಂದ ಸೂರ್ಯಕಾಂತಿ ಎಣ್ಣೆ ಪೂರೈಕೆಯಾಗುತ್ತಿಲ್ಲ. ಭಾರತ ಶೇ.70ರಷ್ಟು ಖಾದ್ಯ ತೈಲವನ್ನು ಬೇರೆ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುತ್ತದೆ.  ತಾಳೆ ಎಣ್ಣೆ ಬಳಿಕ ಭಾರತ ಆಮದು ಮಾಡಿಕೊಳ್ಳುವ ಎರಡನೇ ಅತೀ ಹೆಚ್ಚು ಪ್ರಮಾಣದ ಅಡುಗೆಎಣ್ಣೆ ಸೂರ್ಯಕಾಂತಿ ಎಣ್ಣೆ. ಭಾರತ ಶೇ.90ರಷ್ಟು ಸೂರ್ಯಕಾಂತಿ ಎಣ್ಣೆಯನ್ನು (sunflower oil) ರಷ್ಯಾ (Russia) ಹಾಗೂ ಉಕ್ರೇನ್ ನಿಂದ (Ukraine) ಆಮದು (Import) ಮಾಡಿಕೊಳ್ಳುತ್ತಿತ್ತು. ಆದರೆ, ಯುದ್ಧದಿಂದ ಈ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇದೇ ಕಾರಣಕ್ಕೆ ಮಾರ್ಚ್ -ಮೇ ಅವಧಿಯಲ್ಲಿ ದೇಶದಲ್ಲಿ ಅಡುಗೆ ಎಣ್ಣೆ ಬೆಲೆಯಲ್ಲಿ ಭಾರೀ ಏರಿಕೆ ಕಂಡುಬಂದಿತ್ತು. ಆ ಬಳಿಕ ಕೇಂದ್ರ ಸರ್ಕಾರದ ಕ್ರಮಗಳಿಂದ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡಿತ್ತು. 

8ನೆಯ ತರಗತಿ ಫೇಲ್‌ ಆದ ವ್ಯಕ್ತಿ ಇಂದು ದೊಡ್ಡ ಹೋಟೆಲ್‌ ಉದ್ಯಮಿ!

ಡಾಲರ್ ಎದುರು ರೂಪಾಯಿ ಮೌಲ್ಯದ ಕುಸಿತ ಕೂಡ ಅಡುಗೆ ಎಣ್ಣೆ ಬೆಲೆ ಪರಿಣಾಮ ಬೀರಲಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತದಿಂದ ಆಮದು ವೆಚ್ಚ ಹೆಚ್ಚಲಿದೆ. ಇದ್ರಿಂದ ಸಹಜವಾಗಿ ದೇಶೀಯ ವ್ಯಾಪಾರಿಗಳು ಖಾದ್ಯ ತೈಲಗಳ ಬೆಲೆಯಲ್ಲಿ ಹೆಚ್ಚಳ ಮಾಡಬೇಕಾಗುತ್ತದೆ. 


 

click me!