
ಕತ್ತೆ ಹಾಲು ಎಂದರೆ ನೆನಪಾಗುವುದು ಈಜಿಪ್ಟ್‌ನ ಪುರಾತನ ಇತಿಹಾಸಗಳಲ್ಲಿ ಉಲ್ಲೇಖವಾಗಿರುವ ರಾಣಿ ಕ್ಲಿಯೋಪಾತ್ರ. ಕ್ಲಿಯೋಪಾತ್ರ ತನ್ನ ಸೌಂದರ್ಯವನ್ನು ಕಾಪಾಡುವುದಕ್ಕಾಗಿ ದಿನವೂ ಕತೆ ಹಾಲಿನಿಂದ ಸ್ನಾನ ಮಾಡುತ್ತಿದ್ದಳಂತೆ. ಇತಿಹಾಸದಲ್ಲಿ ಉಲ್ಲೇಖವಾದಂತೆ ಆಕೆ ಪ್ರತಿದಿನ ಕತ್ತೆ ಹಾಲಿನ ಕೊಳದಲ್ಲಿ ಸ್ನಾನ ಮಾಡುತ್ತಿದ್ದಳು. ಆಕೆಯ ಸ್ನಾನಕ್ಕೆ ಅಗತ್ಯವಿರುವ ಹಾಲನ್ನು ಪೂರೈಸುವುದಕ್ಕೆ 700 ಕತೆಗಳ ಹಾಲು ಬೇಕಾಗುತ್ತಿತ್ತು ಎಂದು ಹೇಳಲಾಗುತ್ತಿದೆ. ಹೀಗಾಗಿ ಕತ್ತೆ ಹಾಲು ಎಂದ ಕೂಡಲೇ ನೆನಪಾಗುವುದು ಸೌಂದರ್ಯ ಹಾಗೂ ರಾಣಿ ಕ್ಲಿಯೋಪಾತ್ರ. ಬಹಳ ಹಿಂದಿನಿಂದಲೂ ಕತ್ತೆ ಹಾಲಿಗೆ ಬಹಳ ಮಹತ್ವವಿದೆ. ಹೀಗಾಗಿ ತುಮಕೂರಿನ ಮಧುಗಿರಿಯ ಮಹಿಳೆಯೊಬ್ಬರು ಕತ್ತೆ ಹಾಲನ್ನೇ ಪ್ರಮುಖವಾಗಿರಿಸಿಕೊಂಡು ಉದ್ಯಮ ಆರಂಭಿಸಿದ್ದು, ಅದರಲ್ಲಿ ಯಶಸ್ಸು ಕಂಡಿದ್ದಾರೆ. ಅವರ ಸ್ಟೋರಿ ಇಲ್ಲಿದೆ ನೋಡಿ..
ಜಿಕೆವಿಕೆ ಕೃಷಿ ಮೇಳದಲ್ಲಿ ಗಮನ ಸೆಳೆದ ಕತ್ತೆ ಹಾಲಿನ ಸೋಪ್:
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರತಿ ವರ್ಷದಂತೆ ಈ ವರ್ಷದ ಕೃಷಿಮೇಳಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಜಿಕೆವಿಕೆ ಆವರಣದಲ್ಲಿ ಕೃಷಿ ಲೋಕವೇ ಅನಾವರಣಗೊಂಡಿದ್ದು, ಈ ಬಾರಿಯ ಕೃಷಿಮೇಳದಲ್ಲಿ 700 ವಿವಿಧ ಮಳಿಗೆಗಳು ತೆರೆದುಕೊಂಡಿವೆ. ಬಗೆ ಬಗೆಯ ಕೃಷಿ ಉಪಕರಣಗಳು, ವಿವಿಧ ಬಗೆಯ ಸಸ್ಯ ತಳಿಗಳು ಜನರ ಗಮನಸೆಳೆಯುತ್ತಿದ್ರೆ, ಕೀಟ ವಿಸ್ಮಯ, ಮತ್ಸ್ಯಲೋಕ ಹಾಗೂ ಬಗೆ ಬಗೆಯ ಕೃಷಿ ಉತ್ಪನ್ನಗಳು ಎಲ್ಲರ ಗಮನ ಸೆಳೆಯುತ್ತಿದೆ. ಹಾಗೆಯೇ ಇಲ್ಲಿ ಗಮನ ಸೆಳೆದ ಮತ್ತೊಂದು ವಿಚಾರ ಎಂದರೆ ಕತ್ತೆ ಹಾಲಿನಿಂದ ತಯಾರಿಸಿದ ಉತ್ಪನ್ನಗಳು.
ತುಮಕೂರಿನ ಯುವ ಉದ್ಯಮಿ ಮೇಘ ಯಶೋಗಾಥೆ:
ಹೌದು ತುಮಕೂರಿನ ಮೇಘ ಎಂಬ ಮಹಿಳಾ ಉದ್ಯಮಿಯೊಬ್ಬರು ಕತ್ತೆ ಹಾಲಿನಿಂದ ತಯಾರಿಸಿದ ಹಲವು ಉತ್ಪನ್ನಗಳನ್ನು ಈ ಕೃಷಿ ಮೇಳದಲ್ಲಿ ಪರಿಚಯಿಸಿದರು. ತುಮಕೂರಿನ ಮಧುಗಿರಿಯಲ್ಲಿ ಕ್ಷೀರ ಸಾಗರ ಡಾಂಕಿ ಫಾರಂ ಎಂಬ ಸಂಸ್ಥೆಯನ್ನು ಸ್ಥಾಪಿಸಿರುವ ಅವರು, ಜಿಕೆವಿಕೆಯಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಕತ್ತೆ ಹಾಲಿನಿಂದ ತಮ್ಮ ಸಂಸ್ತೆ ತಯಾರಿಸಿದ ಹಲವು ಉತ್ಪನ್ನಗಳನ್ನು ಇಲ್ಲಿ ಪ್ರದರ್ಶಿಸಿದ್ದಾರೆ. ಜೊತೆಗೆ ಅವರು ತಮ್ಮ ಉತ್ಪನ್ನಗಳ ಬಗ್ಗೆ ವಿವರಿಸಿದ್ದಾರೆ. ಇವರ ಬಳಿ ಕತ್ತೆ ಹಾಲಿನಿಂದ ತಯಾರಿಸಿದ ಸ್ನಾನದ ಸೋಪ್, ಕ್ರೀಮ್, ಆಯಿಲ್ ಸೇರಿದಂತೆ ಹಲವು ಉತ್ಪನ್ನಗಳಿವೆ.
ಕತ್ತೆ ಹಾಲಿನ ಸೋಪ್ ಪ್ರಯೋಜನ
ಕತ್ತೆ ಹಾಲಿನಿಂದ ರೆಡಿಯಾದ ಸ್ನಾನದ ಸೋಪಿನಿಂದ ಚರ್ಮ ಮೃದುವಾಗುತ್ತದೆ. ಅದರಲ್ಲಿ ವಿಟಾಮಿನ್ ಎ, ಡಿ, ಇ ಇದೆ. ಇವೆಲ್ಲವೂ ಚರ್ಮಕ್ಕೆ ಆರೋಗ್ಯಕ್ಕೆ ಸಹಾಯಕವಾಗುವ ವಿಟಾಮಿನ್‌ಗಳಾಗಿದ್ದು, ಇದರಿಂದ ಚರ್ಮ ಮೃದುವಾಗುತ್ತದೆ. ಚರ್ಮದಲ್ಲಿ ತುರಿಕೆ ಇದ್ದರೆ ಕಡಿಮೆ ಆಗುತ್ತದೆ. ಅದರ ನೈಸರ್ಗಿಕ ಎಣ್ಣೆ ಬಲಸುವುದರಿಂದ ಚರ್ಮಕ್ಕೆ ಹೊಳಪು ಬರುವುದು. ಸಂಪೂರ್ಣವಾಗಿ ಚರ್ಮ ಗೌರವರ್ಣಕ್ಕೆ ತಿರುಗುತ್ತದೆ ಎಂದು ಹೇಳುತ್ತಾರೆ ಮೇಘಾ. ಒಮ್ಮೆ ಈ ಉತ್ಪನ್ನವನ್ನು ಬಳಸಿದವರು ಮತ್ತೆ ಮತ್ತೆ ಆರ್ಡರ್ ಮಾಡುತ್ತಾರೆ. ಕಳೆದ ವರ್ಷ ಕೃಷಿ ಮೇಳದಲ್ಲಿ ಇದನ್ನು ಪರಿಚಯಿಸಲಾಯ್ತು. ಈ ವರ್ಷದ ಕೃಷಿ ಮೇಳದ ಸಮಯಕ್ಕೆ ಒಂದು ವರ್ಷ ಆಯ್ತು ಎಂದು ಅವರು ಹೇಳಿದ್ದಾರೆ. ಜನರಿಂದ ಈ ಉತ್ಪನ್ನಗಳಿಗೆ ಸ್ಪಂದನೆ ಚೆನ್ನಾಗಿದೆ, ಸುಮಾರು 40 ಕತ್ತೆಗಳನ್ನು ಈ ಉತ್ಪನ್ನಗಳಿಗಾಗಿ ಸಾಕಾಲಾಗುತ್ತಿದೆ ಎಂದು ಅವರು ಹೇಳಿದರು.
ಕತ್ತೆ ಹಾಲನ್ನು ಉತ್ಪನ್ನಗಳ ತಯಾರಿಗೆ ಬಳಸುತ್ತೇವೆ. ಮರಿಗಳು ಕುಡಿಯುತ್ತವೆ. ಯಾರಾದರು ಕತ್ತೆ ಹಾಲು ಬೇಕು ಎಂದು ಆರ್ಡರ್ ಮಾಡಿದರೆ ಅವರಿಗೆ ಕಳುಹಿಸಿ ಕೊಡುತ್ತೇವೆ ಎಂದು ಅವರು ಹೇಳಿದರು. ಇದೆಲ್ಲವೂ ಸಂಪೂರ್ಣವಾಗಿ ಕೈಯಿಂದ ತಯಾರಿಸಿದ ಉತ್ಪನ್ನ ಇದರ ನಿರ್ಮಾಣಕ್ಕೆ ಯಾವುದೇ ಮಿಷನ್‌ಗಳ ಬಳಕೆ ಮಾಡಿಲ್ಲ ಎಂದು ಅವರು ಹೇಳಿದರು. ನೋಡಿದ್ರಲ್ಲ ನಿಮಗೂ ನಿಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬೇಕು ಅಂತ ಅನಿಸಿದ್ರೆ ಇವರನ್ನು ಸಂಪರ್ಕಿಸಬಹುದು.
ಇದನ್ನೂ ಓದಿ: ಪಾಸ್‌ಪೋರ್ಟ್‌ಗೂ ಅರ್ಜಿ ಸಲ್ಲಿಸಿದ್ದ ಟೆರರ್ ಡಾಕ್ಟರ್ ಶಾಹೀನಾ: ದುಬೈಗೆ ಹಾರುವ ಮೊದಲೇ ಜಾಮ್ ಮಾಡಿದ ಪೊಲೀಸರು
ಇದನ್ನೂ ಓದಿ: ವಿಮಾನದ ಫೋಟೋ ತೆಗೆಯಲು ಹೋಗಿ ದುರಂತ: ದುಬೈನ ಗಗನಚುಂಬಿ ಕಟ್ಟಡದಿಂದ ಬಿದ್ದು ಕೇರಳದ ಹುಡುಗ ಸಾವು
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.