
ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜಾರಿಗೆ ತಂದಿರುವ ನೂತನ ಸುಂಕ ನೀತಿ ವ್ಯಾಪಾರ ಯುದ್ಧವನ್ನೇ ಆರಂಭಿಸಿದ್ದು, ಅದು ಜಾಗತಿಕ ಆರ್ಥಿಕತೆಯನ್ನು ನಲುಗಿಸುತ್ತಿದೆ. ಎಪ್ರಿಲ್ 2, 2025ರಂದು ಟ್ರಂಪ್ ಆಮದಿನ ಮೇಲೆ ಹೆಚ್ಚಿನ ಸುಂಕ ಘೋಷಿಸಿದ ಬಳಿಕ, ಚೀನಾ ಎಲ್ಲ ಅಮೆರಿಕನ್ ಉತ್ಪನ್ನಗಳ ಮೇಲೆ 34% ಸುಂಕ ವಿಧಿಸಿತು. ಐರೋಪ್ಯ ಒಕ್ಕೂಟವೂ ಸಹ ಮಾತುಕತೆ ವಿಫಲವಾದರೆ ಅಮೆರಿಕಾದ ತಂತ್ರಜ್ಞಾನ ಕಂಪನಿಗಳನ್ನು ಗುರಿಯಾಗಿಸುವ ಎಚ್ಚರಿಕೆ ನೀಡಿದೆ. ಭಾರತವೂ ಸಹ ಅಮೆರಿಕನ್ ಅಧಿಕಾರಿಗಳೊಡನೆ ಈ ಸಮಸ್ಯೆಯನ್ನು ಪರಿಹರಿಸುವ ಕುರಿತು ಮಾತುಕತೆ ನಡೆಸುತ್ತಿದ್ದಾರೆ. ಈ ವ್ಯಾಪಾರ ಕದನ ಕೇವಲ ಬೃಹತ್ ರಾಷ್ಟ್ರಗಳಿಗೆ ಮಾತ್ರವೇ ಸೀಮಿತವಾಗಿರದೆ, ಜನಸಾಮಾನ್ಯರು, ಉದ್ಯಮಗಳು, ಭಾರತದ ಸೆನ್ಸೆಕ್ಸ್ ಸೇರಿದಂತೆ ಜಗತ್ತಿನಾದ್ಯಂತ ಷೇರು ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರಿದೆ.
ಗಗನಕ್ಕೇರುತ್ತಿರುವ ದರಗಳು
ಅಮೆರಿಕಾದ ಸುಂಕ ಎಂದರೆ ವಿದೇಶಗಳಿಂದ ಆಮದಾಗುತ್ತಿರುವ ಉತ್ಪನ್ನಗಳ ಮೇಲೆ ಹೆಚ್ಚುವರಿ ತೆರಿಗೆ ವಿಧಿಸಿದಂತೆ. ಅಮೆರಿಕಾ ಈಗ ಚೀನಾ, ಕೆನಡಾ, ಅಥವಾ ಮೆಕ್ಸಿಕೋಗಳಿಂದ ಆಮದಾಗುವ ಉತ್ಪನ್ನಗಳ ಮೇಲೆ ಹೆಚ್ಚಿನ ಸುಂಕ ವಿಧಿಸುವುದರಿಂದ, ಹಣ್ಣುಗಳು, ಆಟಿಕೆಗಳು, ಇಂಧನ ಮತ್ತು ಇಲೆಕ್ಟ್ರಾನಿಕ್ಸ್ ಬೆಲೆಗಳು ಹೆಚ್ಚಾಗುತ್ತವೆ. ಜಾಗತಿಕವಾಗಿ ಉತ್ಪನ್ನಗಳ ಬೆಲೆ ಏರಿಕೆ ಉಂಟಾದರೆ, ಭಾರತದಲ್ಲೂ ದೈನಂದಿನ ವಸ್ತುಗಳ ಬೆಲೆ ಹೆಚ್ಚಾಗಲಿದೆ. ಎಂಕೇ ಗ್ಲೋಬಲ್ ಸಂಸ್ಥೆಯ ಅರ್ಥಶಾಸ್ತ್ರಜ್ಞರಾದ ಮಾಧವಿ ಅರೋರಾ ಅವರು ಸುಂಕದ ಹೆಚ್ಚಳದ ಪರಿಣಾಮವಾಗಿ ಬೆಲೆ ಏರಿಕೆ ಉಂಟಾಗಿ ಕಂಪನಿಗಳ ಆದಾಯಕ್ಕೂ ಹೊಡೆತ ನೀಡಿದರೆ, ಅಮೆರಿಕಾ ಅಂದುಕೊಳ್ಳುತ್ತಿರುವ ಲಾಭವನ್ನು ಗಳಿಸಲು ಸಾಧ್ಯವಾಗದು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಸಂಕಷ್ಟಕ್ಕೆ ಸಿಲುಕಿದ ಉದ್ಯಮಗಳು
ಕಚ್ಚಾ ವಸ್ತುಗಳು ಮತ್ತು ಸಿದ್ಧ ವಸ್ತುಗಳಿಗಾಗಿ ಆಮದಿನ ಮೇಲೆ ಅವಲಂಬಿತವಾಗಿರುವ ಕಂಪನಿಗಳು ಈಗ ಸಂಕಷ್ಟಕ್ಕೆ ಸಿಲುಕಿವೆ. ಅವುಗಳ ವೆಚ್ಚವೂ ಈಗ ಹೆಚ್ಚಾಗುತ್ತಿದ್ದು, ಕಂಪನಿಗಳ ಆದಾಯ ಕಡಿಮೆಯಾಗಿದೆ. ಅಮೆರಿಕನ್ ಕಂಪನಿಗಳ ಲಾಭದ ಪ್ರಮಾಣ ಕಡಿಮೆಯಾಗಲಿದ್ದು, ವ್ಯಾಪಾರ ನಿಧಾನವಾದರೆ ಭಾರತೀಯ ಸಂಸ್ಥೆಗಳ ಮೇಲೂ ಪರಿಣಾಮ ಬೀರಲಿದೆ ಎಂದು ಅರೋರಾ ಹೇಳಿದ್ದಾರೆ. ಉದ್ಯಮಗಳು ಸಂಕಷ್ಟಕ್ಕೆ ಸಿಲುಕಿದಾಗ, ಅವುಗಳು ಹೊಸ ಉದ್ಯೋಗಿಗಳ ನೇಮಕವನ್ನು ತಡೆಹಿಡಿದು, ಇರುವ ಉದ್ಯೋಗಿಗಳನ್ನೂ ಕಿತ್ತುಹಾಕುತ್ತಾರೆ. ಅಂದರೆ, ಇದರಿಂದ ಉದ್ಯೋಗಿಗಳ ಆದಾಯವೂ ಕಡಿಮೆಯಾಗಿ, ಅವರ ಕುಟುಂಬಕ್ಕೆ ಹೆಚ್ಚಿನ ಕಷ್ಟ ಉಂಟಾಗುತ್ತದೆ.
ನಿಧಾನಗೊಂಡ ಜಾಗತಿಕ ವ್ಯಾಪಾರ
ಅಮೆರಿಕಾ, ಐರೋಪ್ಯ ಒಕ್ಕೂಟ, ಮತ್ತು ಚೀನಾದಂತ ದೊಡ್ಡ ರಾಷ್ಟ್ರಗಳು ಸುಂಕದ ವಿಚಾರದಲ್ಲಿ ಕಿತ್ತಾಟಕ್ಕೆ ಇಳಿದಾಗ, ಅವುಗಳ ನಡುವಿನ ವ್ಯಾಪಾರ ಕುಸಿತ ಕಾಣುತ್ತದೆ. ಭಾರತವೂ ಸೇರಿದಂತೆ ಇತರ ದೇಶಗಳೂ ಸಹ ಗಾಬರಿಗೊಂಡು, ವ್ಯಾಪಾರದಿಂದ ಹಿಂದೇಟು ಹಾಕುತ್ತವೆ. ವರದಿಗಳ ಪ್ರಕಾರ, ಇದರಿಂದಾಗಿ ಅಮೆರಿಕಾದ ಆರ್ಥಿಕತೆ ಈ ವರ್ಷ ನಿರೀಕ್ಷಿಸಿದ್ದಂತೆ 1.3% ಪ್ರಗತಿ ಕಾಣುವ ಬದಲು, 0.3% ಕುಸಿತ ಕಾಣಬಹುದು. ಒಂದು ವೇಳೆ ಜಾಗತಿಕ ವ್ಯಾಪಾರ ಕುಸಿತ ಕಂಡರೆ, ನಮ್ಮ ಕಾರ್ಖಾನೆಗಳು, ಉದ್ಯೋಗಗಳು ಮತ್ತು ಉದ್ಯಮಗಳು ಸಂಕಷ್ಟಕ್ಕೆ ಸಿಲುಕಲಿವೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಭಾರತದ ರಫ್ತಿನ ಮೇಲೂ ಹೊಡೆತ ಬೀಳಬಹುದು.
ಪತನ ಕಾಣುತ್ತಿರುವ ಷೇರು ಮಾರುಕಟ್ಟೆಗಳು
ಹೂಡಿಕೆದಾರರಿಗೆ ಅನಿಶ್ಚಿತತೆ ಎಂದರಾಗದು. ಈಗಿನ ವ್ಯಾಪಾರ ಸಮರ, ಹೆಚ್ಚುತ್ತಿರುವ ದರ, ಮತ್ತು ಹಣದುಬ್ಬರದ ಭೀತಿ ಹೂಡಿಕೆದಾರರನ್ನು ಆತಂಕಕ್ಕೀಡುಮಾಡಿವೆ. ಡೌ ಜೋನ್ಸ್ ಮತ್ತು ಎಸ್&ಪಿ 500ನಂತಹ ಅಮೆರಿಕನ್ ಷೇರು ಮಾರುಕಟ್ಟೆಗಳು ಕುಸಿತ ಕಾಣುತ್ತಿದ್ದು, ಭಾರತದ ಸೆನ್ಸೆಕ್ಸ್ ಸಹ ಬೀಳುತ್ತಿದೆ. ಯಾಕೆಂದರೆ, ಜನರು ಈಗ ಷೇರಿನಿಂದ ಹಣವನ್ನು ಹಿಂಪಡೆದು, ಅಮೆರಿಕನ್ ಸರ್ಕಾರಿ ಬಾಂಡ್‌ಗಳಂತಹ ಸುರಕ್ಷಿತ ವಿಧಾನಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಆದರೆ ಈ ಸರ್ಕಾರಿ ಬಾಂಡ್‌ಗಳ ಆದಾಯವೂ 4%ಗಿಂತ ಕುಸಿತ ಕಂಡಿದ್ದು, ಸದ್ಯದ ಮಟ್ಟಿಗೆ ಹೂಡಿಕೆದಾರರಿಗೆ ಮಾರುಕಟ್ಟೆ ಅಪಾಯಕ್ಕಿಂತಲೂ ಸುರಕ್ಷತೆಯೇ ಮುಖ್ಯ ಎನಿಸಿದೆ. ಷೇರುಗಳಲ್ಲಿ ಕಡಿಮೆ ಹಣದ ಹೂಡಿಕೆಯಾಗಿದೆ ಎಂದರೆ, ಷೇರು ದರಗಳು ಸಹಜವಾಗಿಯೇ ಕುಸಿಯುತ್ತವೆ. ಅದು ಮಾರುಕಟ್ಟೆಯಲ್ಲಿ ತಮ್ಮ ಉಳಿಕೆ ಹಣವನ್ನು ಹೂಡಿಕೆ ಮಾಡಿರುವ ಎಲ್ಲರಿಗೂ ಅಸಮಾಧಾನದ ಬೆಳವಣಿಗೆಯಾಗುತ್ತದೆ.
ಇದನ್ನೂ ಓದಿ: ದುಬಾರಿಯಾದ ಟ್ರಂಪ್ ಸುಂಕದ ಹೊಡೆತ: ಭಾರತದ ಚಾಲಾಕಿ ನಡೆ
ಹಣದುಬ್ಬರ ಮರಳುವ ಭೀತಿ
ಜೆಪಿ ಮೋರ್ಗನ್ ನಂತಹ ದೊಡ್ಡ ಬ್ಯಾಂಕ್‌ಗಳು ಜಾಗತಿಕ ಹಣದುಬ್ಬರ ತಲೆದೋರುವ 60% ಸಾಧ್ಯತೆಗಳಿವೆ ಎಂದು ಅಭಿಪ್ರಾಯ ಪಟ್ಟಿವೆ. ಹಣದುಬ್ಬರ ಉಂಟಾದರೆ, ಆರ್ಥಿಕತೆಯೂ ನಿಧಾನವಾಗಬಹುದು, ಜನರು ಉದ್ಯೋಗ ಕಳೆದುಕೊಂಡು, ಅವರ ಖರ್ಚು ಮಾಡುವ ಸಾಮರ್ಥ್ಯವೂ ಕುಸಿಯಬಹುದು. ಅಮೆರಿಕಾದ ಫೆಡರಲ್ ರಿಸರ್ವ್ ಮುಖ್ಯಸ್ಥರಾದ ಜೆರೋಮ್ ಪೊವೆಲ್ ಅವರು ಈ ವ್ಯಾಪಾರ ಸಮರದಿಂದಾಗಿ ಹೆಚ್ಚಿನ ಹಣದುಬ್ಬರ ಮತ್ತು ಕಡಿಮೆ ಆರ್ಥಿಕ ಪ್ರಗತಿಯ 'ಸ್ಟಾಗ್‌ಫ್ಲೇಶನ್' ಎಂಬ ಅಪಾಯಕಾರಿ ಸಂಯೋಜನೆ ಉಂಟಾಗಬಹುದು ಎಂದಿದ್ದಾರೆ. ಒಂದು ವೇಳೆ ಅಮೆರಿಕಾದಲ್ಲಿ ಹಣದುಬ್ಬರ ಆರಂಭವಾದರೆ, ಅದು ಭಾರತವೂ ಸೇರಿದಂತೆ ಇಡೀ ಜಗತ್ತನ್ನೇ ಆರ್ಥಿಕತೆಯ ಆಳಕ್ಕೆ ಸೆಳೆಯಲಿದೆ.
ಮುಂದಿನ ಬೆಳವಣಿಗೆಗಳೇನು?
ಅಮೆರಿಕಾ ಬಡ್ಡಿ ದರವನ್ನು ಕಡಿಮೆಗೊಳಿಸಿ, ಆರ್ಥಿಕತೆಗೆ ನೆರವಾಗಬಹುದು ಎಂದು ಒಂದಷ್ಟು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ, ಅದನ್ನು ಈಗಲೇ ಊಹಿಸಲು ಸಾಧ್ಯವಿಲ್ಲ ಎಂದು ಪೊವೆಲ್ ಹೇಳಿದ್ದಾರೆ. ಇಂತಹ ಗೊಂದಲಗಳು ಪರಿಸ್ಥಿತಿಯನ್ನು ಇನ್ನಷ್ಟು ಹಾಳುಮಾಡುತ್ತಿವೆ. ಹೂಡಿಕೆದಾರರು ಸುರಕ್ಷತೆಗೋಸ್ಕರ ಕಡಿಮೆ ಬಡ್ಡಿ ದರವಿದ್ದರೂ ಪರವಾಗಿಲ್ಲ ಎಂದು ಸರ್ಕಾರಿ ಬಾಂಡ್‌ಗಳ ಮೊರೆಹೋಗುತ್ತಿದ್ದಾರೆ. ಯಾಕೆಂದರೆ, ಸಂಕಷ್ಟದ ಸಂದರ್ಭದಲ್ಲಿ ಭಾರೀ ಲಾಭ ಮಾಡುವುದಕ್ಕಿಂತಲೂ ಇರುವ ಹಣವನ್ನು ರಕ್ಷಿಸಿಕೊಳ್ಳುವುದೇ ಮುಖ್ಯವಾಗುತ್ತದೆ. ಆದರೆ, ನಮ್ಮಂತಹ ಸಾಮಾನ್ಯ ಜನರಿಗೆ ಇದರ ಪರಿಣಾಮವಾಗಿ ಬೆಲೆ ಏರಿಕೆ, ಕಡಿಮೆ ಉದ್ಯೋಗಗಳು ಮತ್ತು ನಲುಗುವ ಭವಿಷ್ಯ ಎದುರಾಗುತ್ತದೆ.
ಇದನ್ನೂ ಓದಿ: ಮೋದಿ - ಯೂನುಸ್ ಭೇಟಿ: ಹೊಸ ದಿಕ್ಕಿನಲ್ಲಿ ಮೊದಲ ಹೆಜ್ಜೆ?
ಒಟ್ಟಾರೆಯಾಗಿ, ಟ್ರಂಪ್ ಜಾರಿಗೆ ತಂದಿರುವ ಸುಂಕಗಳು ಅಮೆರಿಕನ್ ಉದ್ಯಮಗಳನ್ನು ರಕ್ಷಿಸುವ ಉದ್ದೇಶ ಹೊಂದಿದ್ದವು. ಆದರೆ, ಈಗ ಈ ಕ್ರಮ ಅಮೆರಿಕಾಗೇ ಏಟು ನೀಡುತ್ತಿರುವಂತಿದೆ. ಇದರ ಪರಿಣಾಮವಾಗಿ ವೆಚ್ಚಗಳು ಹೆಚ್ಚಿ, ಉದ್ಯಮಗಳಿಗೆ ಸಮಸ್ಯೆ ಉಂಟಾಗಿ, ಅವುಗಳಲ್ಲಿ ಭಯ ಮೂಡಿಸುತ್ತಿದೆ. ಭಾರತವೂ ಸಹ ಜಾಗತಿಕ ಆರ್ಥಿಕತೆಯ ಭಾಗವಾಗಿರುವುದರಿಂದ ಈ ಬಿರುಗಾಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸರ್ಕಾರ ಮತ್ತು ತಜ್ಞರು ಈ ಕುರಿತು ಕ್ಷಿಪ್ರವಾಗಿ ಕ್ರಮ ಕೈಗೊಂಡು, ನಮ್ಮನ್ನು ವ್ಯಾಪಾರ ಸಮರದ ಸುಳಿಯಿಂದ ಪಾರು ಮಾಡಬೇಕಿದೆ. ಸದ್ಯದ ಮಟ್ಟಿಗೆ, ನಾವು ಪರಿಸ್ಥಿತಿ ಕೈಮೀರಿ ಹೋಗುವ ಮುನ್ನವೇ ದೊಡ್ಡ ದೇಶಗಳು ಇದನ್ನು ಸರಿಪಡಿಸಲಿ ಎಂದು ಆಶಿಸುತ್ತಾ, ಈ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರಬಹುದು.
(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.