
ಧಾರವಾಡ (ಜು.20): ಡೋಮಿನೋಸ್ ಪಿಜ್ಜಾ ಬಗ್ಗೆ ಎಲ್ಲರಿಗೂ ಗೊತ್ತು. ಮಾಂಸಾಹಾರ ಸೇವನೆ ಮಾಡುವವರು ವೆಜ್ ಪಿಜ್ಜಾ ಆರ್ಡರ್ ಮಾಡಿದಾಗ ನಾನ್‌ವೆಜ್ ಪಿಜ್ಜಾ ಕೊಟ್ಟರೆ ಜಾಕ್‌ಪಾಟ್ ಹೊಡೆದಂತಾಗುತ್ತದೆ. ಆದರೆ, ಇಲ್ಲಿ ಧಾರ್ಮಿಕ ಮತ್ತು ಸಮುದಾಯಿಕವಾಗಿ ಸಸ್ಯಾಹಾರ ಸೇವನೆ ಮಾಡದಿರುವ ಕುಟುಂಬವೊಂದು ಡೊಮಿನೋಸ್ ವೆಜ್ ಪಿಜ್ಜಾ (Dominos Veg Pizza) ಆರ್ಡರ್ ಮಾಡಿದರೆ, ನಾನ್‌ವೆಜ್ (Non veg Pizza) ಮಾಂಸಾಹಾರಿ ಪಿಜ್ಜಾ ಡೆಲಿವರಿ ಕೊಟ್ಟಿದ್ದಾರೆ. ಇದರಿಂದ ಕೋಪಗೊಂಡ ಗ್ರಾಹಕರು ಡೊಮಿನೋಸ್ ಪಿಜ್ಜಾದವರು ಧರ್ಮಭ್ರಷ್ಟ ಕೆಲಸ ಮಾಡಿದ್ದಾರೆ ಎಂದು ಗ್ರಾಹಕರ ಆಯೋಗಕ್ಕೆ ದೂರು ನೀಡಿದ್ದರು. ಇದರ ಬೆನ್ನಲ್ಲಿಯೇ ಡೊಮಿನೋಸ್‌ಗೆ 50 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.
ಹೌದು, ಸಸ್ಯಾಹಾರ ಪಿಜ್ಜಾ ಡೆಲಿವರಿ ಕೊಡುವುದರ ಬದಲು ಮಾಂಸಾಹಾರ ಪಿಜ್ಜಾ ಕಳಿಸಿದ ಡೋಮಿನೋಸ್ ಸಂಸ್ಥೆಗೆ ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಿಂದ 50 ಸಾವಿರ ರೂ. ದಂಡವನ್ನು ವಿಧಿಸಿ ಆದೇಶ ಹೊರಡಿಸಲಾಗಿದೆ.
ಧಾರವಾಡ ವಿದ್ಯಾಗಿರಿಯ ಪ್ರದ್ಯುಮ್ನ ಇನಾಮದಾರ್ ಎಂಬ ವಿದ್ಯಾರ್ಥಿ ಧಾರವಾಡ ಡೋಮಿನೋಸ್‌ಗೆ ಸಸ್ಯಾಹಾರಿ ಪಿಜ್ಜಾ ಆರ್ಡರ್ ಮಾಡಿದ್ದರು. ಅಂದರೆ, ಸಸ್ಯಾಹಾರಿ ಆಗಿರುವ ಇವರು ಡೋಮಿನೋಸ್ ಸಂಸ್ಥೆಗೆ ತಂದೂರಿ ಪನ್ನಿರ ಪಿಜ್ಜಾ, ಪನ್ನೀರ್ ಟಿಕ್ಕಾ, ಸ್ಟಫ್ಟ್‌ಗಾರ್ಲಿಕ್ ಬ್ರೆಡ್ ಮತ್ತು ವೆಜ್ ಜಿಂಗಿ ಪಿಜ್ಜಾವನ್ನು ಆರ್ಡರ್ ಮಾಡಿದ್ದರು. ಇದಕ್ಕೆ ಆನ್‌ಲೈನ್ ಮೂಲಕ 555 ರೂಪಾಯಿ ಕೂಡಾ ಪಾವತಿ ಮಾಡಿದ್ದರು. ಆದರೆ, ಇವರು ಆರ್ಡರ್ ಮಾಡಿದ್ದರಲ್ಲಿ ಪನ್ನೀರ್ ಪಿಜ್ಜಾ ಸಸ್ಯಾಹಾರಿ ಬದಲು, ಡೋಮಿನೋಸ್ ಸಿಬ್ಬಂದಿ ಮಾಂಸಾಹಾರಿ ಚಿಕನ್ ಪಿಜ್ಜಾ ಕಳಿಸಿದ್ದರು.
ಮೂಲತಃ ಸಸ್ಯಾಹಾರಿ ಆಗಿರುವ ವಿದ್ಯಾರ್ಥಿ ತನಗೆ ವೆಜ್ ಪಿಜ್ಜಾ ಬದಲು ನಾನ್‌ವೆಜ್ ಪಿಜ್ಜಾ ಕಳಿಸಿಕೊಟ್ಟಿದ್ದಾಗಿ ದೂರು ನೀಡಿದ್ದಾನೆ. ಇದಕ್ಕೆ ಡೋಮಿನೋಸ್‌ನವರು ಗ್ರಾಹಕನ ಪೇಮೆಂಟ್ ಅನ್ನು ವಾಪಸ್ ಕೊಟ್ಟು, ಇದೇ ಆರ್ಡರ್‌ಗೆ ಹಣವನ್ನು ಪಡೆಯದೇ ಕಾಂಪ್ಲಿಮೆಂಟರಿಯೊಂದನ್ನು ಕೊಡುವದಾಗಿ ಹೇಳಿದ್ದರು. ಆದರೆ, ಸಸ್ಯಾಹಾರಿ ಗ್ರಾಹಕರಿಗೆ ಮಾಂಸಾಹಾರಿ ಪಿಜ್ಜಾ ಕಳಿಸಿ ಧರ್ಮ ಭ್ರಷ್ಟ ಕೆಲಸವನ್ನು ಮಾಡಿದ ಡೊಮಿನೋಸ್ ಪಿಜ್ಜಾ ಸಂಸ್ಥೆಯ ಕಾರ್ಯವನ್ನು ಕ್ಷಮಿಸದ ವಿದ್ಯಾರ್ಥಿ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ನೀಡಿದ್ದರು.
ಕಳೆದ ಜನವರಿ 1, 2025 ಕ್ಕೆ ಗ್ರಾಹಕರ ಆಯೋಗಕ್ಕೆ ದೂರು ನೀಡಿದ್ದರು. ಇನ್ನೊಮ್ಮೆ ಈ ರೀತಿ ಡೋಮಿನೋಸ್ ಮತ್ತೊಬ್ಬ ಗ್ರಾಹಕರಿಗೆ ಮಾಡದಿರಲಿ ಎಂಬ ಉದ್ದೇಶದಿಂದ ಗ್ರಾಹಕರ ಆಯೋಗಕ್ಕೆ ದೂರು ನೀಡಿದ್ದರು. ಈ ಪ್ರಕರಣವನ್ನು ಕೂಲಂಕಷವಾಗಿ ವಿಚಾರಣೆ ಮಾಡಿದ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗವು, ಡೋಮಿನೋಸ್ ಸೇವಾ ನೂನ್ಯತೆ ಮಾಡಿದೆ ಎಂದು ತೀರ್ಮಾನಕ್ಕೆ ಬಂದಿದೆ. ಜೊತೆಗೆ, ಭಾರತೀಯ ಹಿಂದೂ ಧಾರ್ಮಿಕ ಪದ್ದತಿ ಹಾಗೂ ಒಂದು ಸಮುದಾಯದ ಭಾವನೆಗೆ ಧಕ್ಕೆ ತಂದಿರುವ ಪ್ರಕರಣವೆಂದು ಪರಿಗಣಿಸಿ ಡೋಮಿನೋಸ್ ಸಂಸ್ಥೆಗೆ 50 ಸಾವಿರ ರೂ. ದಂಡ ಹಾಗೂ ಪ್ರಕರಣದ ಖರ್ಚು 10 ಸಾವಿರ ರೂ. ನೀಡುವಂತೆ ಆದೇಶ ಹೊರಡಿಸಿದೆ. ಧಾರವಾಡ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಅವರು ಈ ಆದೇಶವನ್ನು ಹೊರಡಿಸಿದ್ದಾರೆ.
ಭಾರತೀಯ ಸಂಪ್ರದಾಯದಲ್ಲಿ ಕೆಲವು ಸಮುದಾಯದವರು (ಬ್ರಾಹ್ಮಣರು, ಲಿಂಗಾಯತರು, ಪೂಜಾರಿಗಳು, ಜೈನರು ಇತರೆ..) ಮಾಂಸಾಹಾರ ಸೇವನೆಯನ್ನು ವರ್ಜನೆ ಮಾಡುತ್ತಾರೆ. ಹೀಗಾಗಿ, ಎಂದಿಗೂ ಇವರು ಮಾಂಸಾಹಾರದ ಹತ್ತಿರವೂ ಸುಳಿಯುವುದಿಲ್ಲ. ಆದರೆ, ಇದೀಗ ಡೊಮಿನೋಸ್ ಪಿಜ್ಜಾದಿಂದ ಸಸ್ಯಾಹಾರ ಪಿಜ್ಜಾ ಆರ್ಡರ್ ಮಾಡಿದರೆ ಮಾಂಸಾಹಾರ ಪಿಜ್ಜಾ ಕಳಿಸಿದ್ದಾರೆ. ಇದನ್ನು ತಮ್ಮ ಕೋಣೆಯೊಳಗೆ ತೆಗೆದುಕೊಂಡು ಕೊಂಡೊಯ್ದು, ಕೈಯಲ್ಲಿ ಮುಟ್ಟಿದ್ದರಿಂದ ತಮ್ಮ ಧರ್ಮಕ್ಕೆ ಮತ್ತು ಸಮುದಾಯ ಪಾಲನೆಗೆ ಅಪಮಾನ ಹಾಗೂ ತಮ್ಮ ಪಾವಿತ್ರತೆಗೆ ಧಕ್ಕೆ ಆಗಿದೆ ಎಂದು ಪರಿಗಣಿಸಿದ್ದಾರೆ. ಹೀಗಾಗಿ, ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದರು ಎಂದು ತಿಳಿದುಬಂದಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.