
ಬೆಂಗಳೂರು(ಏ.27): ಡೋಲೋ 650 ಮಾತ್ರೆ ಕುರಿತು ಹೆಚ್ಚು ಹೇಳಬೇಕಿಲ್ಲ. ಭಾರತದ ಪ್ರತಿ ಮನೆಯಲ್ಲೂ ಡೋಲೋ 650 ಹೆಸರು ಕೇಳದವರಿಲ್ಲ. ಬಹುತೇಕ ಮನೆಗಳಲ್ಲಿ ಡೋಲೋ 650 ಮಾತ್ರೆ ಬಳಸಿದ್ದಾರೆ. ಕೋವಿಡ್ ಕಾಲದಲ್ಲಿ ಭಾರತದ ಬಹುತೇಕರು ಡೋಲೋ 650 ಮಾತ್ರೆ ಖರೀದಿಸಿದ್ದಾರೆ. ಇದರ ಪರಿಣಾಮ 2020ರಲ್ಲಿ ಡೋಲೋ ಕಂಪನಿ 400 ಕೋಟಿ ರೂಪಾಯಿ ಆದಾಯ ಗಳಿಸಿತ್ತು. 2019ರಿಂದ 2021ರ ವರೆಗೆ ಡೋಲೋ ಆದಾಯದಲ್ಲಿ ಶೇಕಡಾ 244ರಷ್ಟು ಏರಿಕೆಯಾಗಿತ್ತು. ಕೋಟಿ ಕೋಟಿ ಆದಾಯಗಳಿಸುತ್ತಿರುವ ಡೋಲೋ ಕಂಪನಿ ಸಿಇಒ ದಿಲೀಪ್ ಸುರಾನ ಇದೀಗ ಬೆಂಗಳೂರಿನಲ್ಲಿ ಬರೋಬ್ಬರಿ 66 ಕೋಟಿ ರೂಪಾಯಿ ಮನೆ ಖರೀದಿಸಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಏರಿಯಾದಲ್ಲಿರುವ ಈ ಮನೆ ಹಾಗೂ ನಿವೇಷನ ಜಾಗ 12,043 ಚದರ ಅಡಿ ವಿಸ್ತಾರವಾಗಿದೆ. ಇದರಲ್ಲಿ 8,373 ಚದರ ಅಡಿಯಲ್ಲಿ ಭವ್ಯ ಬಂಗಲೆ ಇದೆ.
ಜಿಜಿ ರಾಜೇಂದ್ರ ಕುಮಾರ್, ಸಧಾನ ಹಾಗೂ ಮನು ಗೌತಮ್ ಅವರ ಬಳಿಯಿಂದ ಈ ದುಬಾರಿ ಬಂಗಲೆ ಖರೀದಿಸಲಾಗಿದೆ.ಈ ಮನೆ ಖರೀದಿಸಿದ ನೋಂದಣಿ ಮಾಡಿಕೊಂಡಿದ್ದಾರೆ. ಇದರ ಸ್ಟಾಂಪ್ ಡ್ಯೂಟಿ ಬೆಲೆ 3.33 ಕೋಟಿ ರೂಪಾಯಿ. ಇದೀಗ ಡೋಲೋ ಕಂಪನಿ ಸಿಇಇ ದಿಲೀಪ್ ಸುರಾನ ಬೆಂಗಳೂರಿನಲ್ಲಿ ಅತ್ಯಂತ ದುಬಾರಿ ಮನೆ ಹೊಂದಿರುವ ಆಗರ್ಭ ಶ್ರೀಮಂತರ ಪಟ್ಟಿಗೆ ಸೇರಿಕೊಂಡಿದ್ದಾರೆ.
ರೋಗಿಗಳಿಗೆ ಡೋಲೋ ಮಾತ್ರೆ ಶಿಫಾರಸಿಗಾಗಿ ವೈದ್ಯರಿಗೆ 1,000 ಕೋಟಿ ರೂ ಖರ್ಚು, ವರದಿ ಕೇಳಿದ ಸುಪ್ರೀಂ!
ಡೋಲೋ 650 ಮಾತ್ರೆ ಭಾರಿ ವ್ಯಾಪಾರದಿಂದ ದಿಲೀಪ್ ಸುರಾನಾ ಒಟ್ಟು ಆಸ್ತಿ ಇದೀಗ 26,000 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ದಿಲೀಪ್ ಸುರಾನ ತಂದೆ ಜಿಸಿ ಸುರನಾ 1973ರಲ್ಲಿ ಬೆಂಗಳೂರಿಗೆ ಬಂದರು. ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದ ಜಿಸಿ ಸುರಾನಾ ವೃತ್ತಿಯಲ್ಲಿ ಅಕೌಂಟೆಂಟ್ ಆಗಿದ್ದರು. ಆದರೆ ದೆಹಲಿ ಮೂಲದ ಫಾರ್ಮಾ ಕಂಪನಿಯ ಔಷಧಿಗಳ ಸೇಲ್ಸ್ ಮೂಲಕ ಬೆಂಗಳೂರಿನಲ್ಲಿ ವೃತ್ತಿ ಆರಂಭಿಸಿದರು. ಐದೇ ವರ್ಷಕ್ಕೆ ಮೈಕ್ರೋ ಲ್ಯಾಬ್ಸ್ ಕಂಪನಿಯನ್ನು ಬೆಂಗಳೂರಿನಲ್ಲಿ ಹುಟ್ಟು ಹಾಕಿದರು. 1983ರಲ್ಲಿ ಪುತ್ರ ದಿಲೀಪ್ ಸುರನಾ ಮೈಕ್ರೋ ಲ್ಯಾಬ್ಸ್ ಕಂಪನಿ ಸೇರಿಕೊಂಡರು. ಬಳಿಕ ಬೆಂಗಳೂರು, ಕರ್ನಾಟಕದಲ್ಲಿ ಸೀಮಿತವಾಗಿದ್ದ ಮೈಕ್ರೋ ಲ್ಯಾಬ್ಸ್‌ನ ಡೋಲೋ 650 ಹಾಗೂ ಇತರ ಔಷಧಿಗಳು ಭಾರತದಲ್ಲಿ ವ್ಯಾಪಾರ ವಹಿವಾಟು ಆರಂಭಿಸಿತು.
Covid Crisis: ಕೊರೋನಾ ಬಂದಾಗಿನಿಂದ ಪ್ಯಾರಾಸಿಟಮಲ್ ಮಾತ್ರೆಗಳ ವಹಿವಾಟು ಡಬಲ್!
ಕೋವಿಡ್ ಸಂದರ್ಭದಲ್ಲಿ ಡೋಲೋ ಮಾತ್ರೆ ಭಾರಿ ವಹಿವಾಟು ನಡೆಸಿದೆ. 2020ರ ಮಾಚ್ ತಿಂಗಳಿನಿಂದ 2021ರವರೆಗೆ 567 ಕೋಟಿ ರು. ಮೌಲ್ಯದ ದಾಖಲೆಯ 350 ಕೋಟಿ ಮಾತ್ರೆಗಳು ಮಾರಾಟವಾಗಿವೆ. ಈ ಸಾಂಕ್ರಾಮಿಕ ಅವಧಿಯಲ್ಲಿ ಜ್ವರ ಮತ್ತು ನೋವು ನಿವಾರಕವಾಗಿ ಬೆಂಗಳೂರು ಮೂಲದ ಮೈಕ್ರೋಲ್ಯಾಬ್ಸ್ ಕಂಪನಿಯ ಡೋಲೋ 650 ಮಾತ್ರೆಯನ್ನೇ ವೈದ್ಯರು ಸೂಚಿಸಿದ ಹಿನ್ನೆಲೆಯಲ್ಲಿ ಈ ಪ್ರಮಾಣದ ಮಾತ್ರೆಗಳು ಮಾರಾಟವಾಗಿವೆ ಎನ್ನಲಾಗಿದೆ.
ದೇಶದಲ್ಲಿ ಕೋವಿಡ್‌ನ 2ನೇ ಅಲೆ ಉತ್ತುಂಗಕ್ಕೆ ಏರಿದ 2021ರ ಏಪ್ರಿಲ್ ತಿಂಗಳೊಂದರಲ್ಲೇ 49 ಕೋಟಿ ರು. ಮೌಲ್ಯದ ಮಾತ್ರೆಗಳು ಮಾರಾಟವಾಗಿದ್ದವು. ಇದು ಒಂದು ತಿಂಗಳಲ್ಲಿ ಡೋಲೋ ಮಾರಾಟವಾದ ಸಾರ್ವಕಾಲಿಕ ದಾಖಲೆ ಎಂದು ಆರೋಗ್ಯ ಸಂಶೋಧನಾ ಸಂಸ್ಥೆ ಐಕ್ಯೂವಿಐಎ ತಿಳಿಸಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.