ಮನೆ ನವೀಕರಣಕ್ಕೆ ಈ 5 ವಿಧದ ಸಾಲ ಬೆಸ್ಟ್, ಪಡೆಯೋದು ಹೇಗೆ? ಇಲ್ಲಿದೆ ಮಾಹಿತಿ

By Suvarna NewsFirst Published May 29, 2023, 3:37 PM IST
Highlights

ಹೊಸ ಮನೆ ಖರೀದಿಗೆ ಬ್ಯಾಂಕ್ ಗಳು ಸುಲಭವಾಗಿ ಗೃಹಸಾಲ ನೀಡುತ್ತವೆ. ಆದರೆ, ಮನೆ ನವೀಕರಣಕ್ಕೆ ಹಣದ ಅಗತ್ಯ ಬಿದ್ದರೆ ಸಾಲ ಪಡೆಯೋದು ಹೇಗೆ? ಇದಕ್ಕೆಂದೇ ನೀವು ಬ್ಯಾಂಕ್ ಗಳಿಂದ ಸಾಲ ಪಡೆಯಬಹುದು. ಅಂಥ 5 ಸಾಲಗಳ ಮಾಹಿತಿ ಇಲ್ಲಿದೆ. 

Business Desk:ಮನೆ ಖರೀದಿಸಲು ಅಥವಾ ನಿರ್ಮಿಸಲು ಗೃಹಸಾಲವನ್ನು ಬ್ಯಾಂಕ್ ಗಳು ಸುಲಭವಾಗಿ ನೀಡುತ್ತವೆ. ಆದರೆ, ಮನೆ ದುರಸ್ತಿ ಅಥವಾ ನವೀಕರಣಕ್ಕೆ ಸಾಲ ಪಡೆಯೋದು ಹೇಗೆ? ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತದೆ.  ಗೃಹ ಸಾಲ ಪಡೆದಷ್ಟು ಸುಲಭವಾಗಿ ಮನೆ ದುರಸ್ತಿ ಸಾಲ ಪಡೆಯಲು ಸಾಧ್ಯವಿಲ್ಲ ಎಂಬ ಭಾವನೆ ಅನೇಕರಲ್ಲಿದೆ. ಆದರೆ, ಮನೆ ನವೀಕರಣಕ್ಕೂ ಬ್ಯಾಂಕ್ ಗಳು, ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳು ಹಾಗೂ ಗೃಹ ಹಣಕಾಸು ಕಂಪನಿಗಳಿಂದ (ಎಚ್ ಎಫ್ ಸಿ) ಸಾಲ ಪಡೆಯಬಹುದು. ಸಾಮಾನ್ಯ ಗೃಹಸಾಲ ಉತ್ಪನ್ನದ ಅಡಿಯಲ್ಲೇ ಬ್ಯಾಂಕ್ ಹಾಗೂ ಇತರ ಹಣಕಾಸು ಸಂಸ್ಥೆಗಳು ಈ ಸಾಲ ನೀಡುತ್ತವೆ. ಈಗಾಗಲೇ ಗೃಹ ಸಾಲ ಹೊಂದಿರೋರು ಹಾಗೂ ಹೊಸ ಗ್ರಾಹಕರು ಈ ಗೃಹ ನವೀಕರಣ ಸಾಲವನ್ನು ಪಡೆಯಬಹುದು. ಇನ್ನು ಮನೆ ದುರಸ್ತಿ ಅಥವಾ ನವೀಕರಣಕ್ಕೆ ನಿಮಗೆ ಹಣಕಾಸಿನ ನೆರವು ಒದಗಿಸಲು ಅನೇಕ ವಿಧದ ಸಾಲಗಳು ಲಭ್ಯವಿವೆ. ಆದರೆ, ಬಹುತೇಕರಿಗೆ ಇವುಗಳ ಬಗ್ಗೆ ಮಾಹಿತಿಯಿಲ್ಲ. ಅಂಥ 5 ಸಾಲಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. 

1.ಗೃಹ ಈಕ್ವಿಟಿ ಸಾಲ: ಇದರಲ್ಲಿ ನೀವು ನಿಮ್ಮ ಮನೆಯನ್ನು ಅಡವಿಟ್ಟು ಸಾಲ ಪಡೆಯಬಹುದು. ಈ ಸಾಲ ನಿಮಗೆ ದೊಡ್ಡ ಮೊತ್ತದ ಹಣವನ್ನು ಒದಗಿಸುತ್ತದೆ. ಇದನ್ನು ನೀವು ಮನೆ ನವೀಕರಣ ಕಾರ್ಯಗಳಿಗೆ ಬಳಸಬಹುದು. ಇತರ ವಿಧದ ಸಾಲಗಳಿಗೆ ಹೋಲಿಸಿದರೆ ಗೃಹ ಈಕ್ವಿಟಿ ಸಾಲಗಳ ಮೇಲಿನ ಬಡ್ಡಿದರ ಕಡಿಮೆ. ಈ ಸಾಲದ ಅವಧಿ 5ರಿಂದ 15 ವರ್ಷಗಳ ತನಕ ಇರುತ್ತದೆ. ಆದರೆ, ಈ ಸಾಲ ಪಡೆಯಲು ನೀವು ಆ ಮನೆಯಲ್ಲಿ ಪಾಲು ಹೊಂದಿರೋದು ಅಗತ್ಯ.

ಸಾಲ ಮರುಪಾವತಿಗೆ ಕ್ರೆಡಿಟ್ ಕಾರ್ಡ್ ಬಳಸುವಂತಿಲ್ಲ: ಐಆರ್ ಡಿಎಐ

2.ಗೃಹ ಈಕ್ವಿಟಿ ಲೈನ್ ಆಫ್ ಕ್ರೆಡಿಟ್ (HELOC): ಮನೆ ನವೀಕರಣ ಮಾಡೋರಿಗೆ ಇದು ಜನಪ್ರಿಯ ಸಾಲದ ಆಯ್ಕೆಯಾಗಿದೆ. ಇದು ಮನೆಯಲ್ಲಿ ನಿಮಗಿರುವ ಪಾಲಿನ ಆಧಾರದ ಮೇಲೆ ಸಾಲ ಪಡೆಯಲು ನೆರವು ನೀಡುತ್ತದೆ. ಈ ಸಾಲದಲ್ಲಿ ನಿಮ್ಮ ಮನೆಯ ಮಾರುಕಟ್ಟೆ ಮೌಲ್ಯ ಹಾಗೂ ಇನ್ನೂ ಬಾಕಿ ಉಳಿದಿರುವ ಸಾಲದ ನಡುವಿನ ವ್ಯತ್ಯಾಸದ ಮೊತ್ತವನ್ನಷ್ಟೇ ನೀಡಲಾಗುತ್ತದೆ. ಅಗತ್ಯವಿರುವಷ್ಟು ಮೊತ್ತದ ಸಾಲವನ್ನು ನೀವು ಇದರ ಮೂಲಕ ಪಡೆಯಬಹುದು ಹಾಗೂ ನೀವು ಎಷ್ಟು ಸಾಲ ಬಳಸಿಕೊಳ್ಳುತ್ತಿರೋ ಅಷ್ಟು ಮೊತ್ತದ ಮೇಲೆ ಮಾತ್ರ ಬಡ್ಡಿ ವಿಧಿಸಲಾಗುತ್ತದೆ. ಇನ್ನು ಈ ಸಾಲದ ಅವಧಿ 5 ವರ್ಷದಿಂದ 25 ವರ್ಷಗಳ ತನಕ ಇರುತ್ತದೆ.

3.ವೈಯಕ್ತಿಕ ಸಾಲ: ಮೇಲೆ ವಿವರಿಸಿದ ಎರಡು ವಿಧದ ಸಾಲಗಳು ಸಿಗದ ಸಂದರ್ಭದಲ್ಲಿ ಮನೆ ನವೀಕರಣಕ್ಕೆ ವೈಯಕ್ತಿಕ ಸಾಲ ಪಡೆಯಬಹುದು. ವೈಯಕ್ತಿಕ ಸಾಲಗಳಿಗೆ ಯಾವುದೇ ಭದ್ರತೆಯ ಅಗತ್ಯವಿಲ್ಲ. ಆದರೆ, ಗೃಹ ಈಕ್ವಿಟಿ ಸಾಲಗಳಿಗೆ ಹೋಲಿಸಿದರೆ ವೈಯಕ್ತಿಕ ಸಾಲಗಳ ಮೇಲಿನ ಬಡ್ಡಿ ಹೆಚ್ಚಿರುತ್ತದೆ. ಆದರೆ, ವೈಯಕ್ತಿಕ ಸಾಲ ಪ್ರಕ್ರಿಯೆ ತ್ವರಿತವಾಗಿ ನಡೆಯುತ್ತದೆ. ಈ ಸಾಲದ ಅವಧಿ 1ರಿಂದ 7 ವರ್ಷಗಳು.

Personal Finance: ಇಎಂಐ ಹೊರೆ ಕಡಿಮೆ ಮಾಡೋದು ಚಾಲಾಕಿತನ

4.ಎಫ್ ಎಚ್ ಎ 203 (ಕೆ) ಸಾಲ: ನೀವು ಖರೀದಿಸುತ್ತಿರುವ ಮನೆಗೆ ನವೀಕರಣದ ಅಗತ್ಯವಿದ್ದರೆ ಅಥವಾ ನೀವೀಗ ಇರುವ ಮನೆಗೆ ನವೀಕರಣ ಮಾಡಬೇಕಿದ್ದರೆ ನೀವು ಎಫ್ ಎಚ್ ಎ 20(k) ಸಾಲ ಪಡೆಯಬಹುದು. ಈ ಸಾಲದ ಮರುಪಾವತಿ ಅವಧಿ 15ರಿಂದ 30 ವರ್ಷಗಳು. ಆದರೆ, ಈ ಸಾಲ ಪಡೆಯಲು ನೀವು ಕೆಲವೊಂದು ಅರ್ಹತೆಗಳನ್ನು ಹೊಂದಿರೋದು ಅಗತ್ಯ. ಎಫ್ ಎಚ್ ಎ 203 (k)ಸಾಲಗಳು ಸರ್ಕಾರದ ಬೆಂಬಲ ಹೊಂದಿವೆ.

5.ನಿರ್ಮಾಣ ಸಾಲ: ನಿಮ್ಮ ಮನೆ ನವೀಕರಣ ಸಾಕಷ್ಟು ಬದಲಾವಣೆಗಳನ್ನು ಒಳಗೊಂಡಿದ್ದರೆ ಅಥವಾ ಮನೆಯನ್ನು ಇನ್ನಷ್ಟು ವಿಸ್ತರಿಸುತ್ತಿದ್ದರೆ ಆಗ ನಿರ್ಮಾಣ ಸಾಲ ಪಡೆಯಬಹುದು. ಇದು ಕಿರು ಅವಧಿಯ ಸಾಲವಾಗಿದ್ದು, ಮನೆ ನಿರ್ಮಾಣ ಅಥವಾ ಇತರ ರಿಯಲ್ ಎಸ್ಟೇಟ್ ಯೋಜನೆಗಳಿಗೆ ಹಣಕಾಸು ಒದಗಿಸಲು ಬಳಸಲಾಗುತ್ತದೆ. ಈ ಸಾಲದ ಬಡ್ಡಿದರ ಇತರ ಸಾಲಗಳಿಗೆ ಹೋಲಿಸಿದರೆ ಅಧಿಕವಾಗಿರುತ್ತದೆ. 

click me!