ವಿದ್ಯಾರ್ಥಿಗಳೇ, ಪಾಕೆಟ್ ಮನಿ ಉಳಿಸಲು ಸಾಧ್ಯವಾಗುತ್ತಿಲ್ವ? ಹಾಗಾದ್ರೆ ಈ 10 ಟಿಪ್ಸ್ ಫಾಲೋ ಮಾಡಿ

By Suvarna NewsFirst Published May 29, 2023, 12:30 PM IST
Highlights

ಅಪ್ಪ-ಅಮ್ಮ ಶಾಲೆಗೆ ಹೋಗುವಾಗ ಅಗತ್ಯ ಖರ್ಚಿಗೆಂದು ನೀಡುವ ಸಣ್ಣ ಮೊತ್ತದ ಹಣ ಮಕ್ಕಳ ಪಾಲಿಗೆ ದೊಡ್ಡ ನಿಧಿ. ಆದರೆ, ಕೆಲವು ಮಕ್ಕಳಿಗೆ ಈ ಪಾಕೆಟ್ ಮನಿಯನ್ನು ಹೇಗೆ ಬಳಸಬೇಕು? ಅದರಲ್ಲಿ ಉಳಿತಾಯ ಮಾಡೋದು ಹೇಗೆ? ಎಂಬುದು ತಿಳಿದಿರೋದಿಲ್ಲ. ಹಾಗಾದ್ರೆ ಪಾಕೆಟ್ ಮನಿಯನ್ನು ಸಮರ್ಪಕವಾಗಿ ಬಳಸೋದು ಹೇಗೆ? ಇಲ್ಲಿದೆ ಟಿಪ್ಸ್.
 

Business Desk: ಚಿಕ್ಕಂದಿನಲ್ಲೇ ಮಕ್ಕಳಿಗೆ ಹಣದ ಮಹತ್ವ ತಿಳಿಸೋದು ಅಗತ್ಯ. ಹಾಗೆಯೇ ಉಳಿತಾಯದ ಬಗ್ಗೆ ಕೂಡ ಅರಿವು ಮೂಡಿಸಬೇಕು. ಮಕ್ಕಳಿಗೆ ಪಾಕೆಟ್ ಮನಿ ನೀಡುವ ಮೂಲಕ ಅವರಲ್ಲಿ ಹಣದ ಬಗ್ಗೆ ಅರಿವು ಮೂಡಿಸಬಹುದು. ಪಾಕೆಟ್ ಮನಿಯನ್ನು ಹೇಗೆ ಬಳಸಬೇಕು ಎಂಬುದನ್ನು ಪೋಷಕರು ಮಕ್ಕಳಿಗೆ ತಿಳಿಸಬೇಕು. ಹಾಗೆಯೇ ಪಾಕೆಟ್ ಮನಿಯನ್ನು ಉಳಿತಾಯ ಮಾಡೋದು ಹೇಗೆ ಎಂಬುದನ್ನು ಕೂಡ ಅವರಿಗೆ ಕಲಿಸೋದು ಅಗತ್ಯ. ಬಾಲ್ಯದಲ್ಲೇ ಮಕ್ಕಳಿಗೆ ಹಣದ ಮೌಲ್ಯ ಕಲಿಸುವ ಜೊತೆಗೆ ಉಳಿತಾಯದ ಅಭ್ಯಾಸ ರೂಢಿಸೋದು ಅಗತ್ಯ. ಉಳಿತಾಯ ಅನಿರೀಕ್ಷಿತ ಅಥವಾ ತುರ್ತು ಸಂದರ್ಭಗಳಲ್ಲಿ ನೆರವಿಗೆ ಬರುತ್ತದೆ. ಇದು ಆರ್ಥಿಕ ಸುರಕ್ಷತೆಯನ್ನು ಒದಗಿಸುತ್ತದೆ. ಇನ್ನು ಪಾಕೆಟ್ ಮನಿ ಉಳಿತಾಯದಿಂದ ಉನ್ನತ ಶಿಕ್ಷಣಕ್ಕೆ ಹಣ ಸಂಗ್ರಹಿಸಬಹುದು, ನಿಮ್ಮ ನೆಚ್ಚಿನ ಸ್ಥಳಕ್ಕೆ ಪ್ರವಾಸ ಹೋಗಬಹುದು ಅಥವಾ ನಿಮ್ಮ ಇಷ್ಟದ ವಸ್ತುವನ್ನು ಖರೀದಿಸಬಹುದು. ಒಟ್ಟಾರೆ ಪಾಕೆಟ್ ಮನಿ ಮಕ್ಕಳಿಗೆ ಆರ್ಥಿಕ ಸ್ವಾತಂತ್ರ್ಯವನ್ನು ನೀಡುವ ಜೊತೆಗೆ ಖರೀದಿಗೆ ಸಂಬಂಧಿಸಿ ಸ್ವಂತ ನಿರ್ಣಯಗಳನ್ನು ಕೈಗೊಳ್ಳಲು ನೆರವು ನೀಡುತ್ತದೆ. ಕಾಲೇಜು ಹಂತದಲ್ಲಿ ಅನ್ಯ ಊರುಗಳಲ್ಲಿ ನೆಲೆಸಿರುವ ವಿದ್ಯಾರ್ಥಿಗಳಿಗೆ  ಪಾಕೆಟ್ ಮನಿಯಲ್ಲಿ  ಖರ್ಚುಗಳನ್ನು ನಿಭಾಯಿಸಿ ಒಂದಿಷ್ಟುಉಳಿತಾಯ ಮಾಡೋದು ಸವಾಲಿನ ಕೆಲಸವೇ ಸರಿ. ಆದರೂ ಸೂಕ್ತ ಯೋಜನೆ ಮೂಲಕ ಉಳಿತಾಯ ಮಾಡಲು ಸಾಧ್ಯವಿದೆ. ಹಾಗಾದ್ರೆ ಪಾಕೆಟ್ ಮನಿಯನ್ನು ಸಮರ್ಪಕವಾಗಿ ಬಳಸೋದು ಹೇಗೆ? ಇಲ್ಲಿದೆ ಟಿಪ್ಸ್.

1.ಬಜೆಟ್ ಸಿದ್ಧಪಡಿಸಿ: ಇದು ಪಾಕೆಟ್ ಮನಿ ನಿರ್ವಹಣೆಯಲ್ಲಿ ಮೊದಲ ಹೆಜ್ಜೆಯಾಗಿದೆ. ಪೋಷಕರು, ವಿದ್ಯಾರ್ಥಿವೇತನ ಹೀಗೆ ವಿವಿಧ ಮೂಲಗಳಿಂದ ಗಳಿಸಿದ ಹಣವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಬಜೆಟ್ ನೆರವು ನೀಡುತ್ತದೆ. ಅಗತ್ಯ ಖರ್ಚುಗಳು ಯಾವುವು ಎಂಬುದನ್ನು ಮೊದಲೇ ಪಟ್ಟಿ ಮಾಡಿಟ್ಟುಕೊಳ್ಳಿ. ಹಾಗೆಯೇ ಪ್ರತಿ ವೆಚ್ಚಕ್ಕೂ ಹಣ ನಿಗದಿಪಡಿಸಿ. ಇದರಿಂದ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ. 

ನಿಮಗೆ ವಯಸ್ಸು 40 ಆಯ್ತಾ? ಹಾಗಾದ್ರೆ ಈ ಹಣಕಾಸು ಸಂಗತಿಗಳನ್ನು ತಪ್ಪದೇ ಪರಿಶೀಲಿಸಿ

2.ವೆಚ್ಚದ ಬಗ್ಗೆ ಎಚ್ಚರ ಇರಲಿ: ನಿಮ್ಮ ವೆಚ್ಚದ ಬಗ್ಗೆ ಎಚ್ಚರ ವಹಿಸಿ. ಅಗತ್ಯಕ್ಕಿಂತ ಹೆಚ್ಚು ವೆಚ್ಚವಾಗದಂತೆ ಜಾಗ್ರತೆ ಮಾಡಿ. ಹೀಗೆ ಮಾಡಲು ನೀವು ರೂಪಿಸಿರುವ ಬಜೆಟ್ ಅನುಸರಿಸಿ.

3.ವೆಚ್ಚಗಳನ್ನು ಪಟ್ಟಿ ಮಾಡಿ: ಎಷ್ಟು ಹಣ ವ್ಯಯಿಸಬೇಕು ಎಂಬುದು ನಿಮಗೆ ತಿಳಿದ ತಕ್ಷಣ ಯಾವುದಕ್ಕೆಲ್ಲ ಹಣ ವ್ಯಯಿಸಬೇಕು ಎಂಬುದನ್ನು ಪಟ್ಟಿ ಮಾಡಿ. ಇದು ನಿಮ್ಮ ಹಣ ಎಲ್ಲಿ ಖರ್ಚಾಗುತ್ತಿದೆ ಎಂಬುದನ್ನು ಪತ್ತೆ ಹಚ್ಚಲು ನೆರವು ನೀಡುತ್ತದೆ. ಇದರಿಂದ ಎಲ್ಲಿ ವೆಚ್ಚ ಕಡಿತ ಮಾಡಬಹುದು ಎಂಬುದನ್ನು ನಿರ್ಧರಿಸಲು ಸಾಧ್ಯವಾಗುತ್ತದೆ.

4.ಮನೆಯಲ್ಲೇ ಆಹಾರ ಸಿದ್ಧಪಡಿಸಿ: ಇನ್ನು ಯಾವಾಗಲೂ ಹೋಟೆಲ್ ಗೆ ಹೋಗಿ ತಿನ್ನುವುದು ಖರ್ಚನ್ನು ಹೆಚ್ಚಿಸುತ್ತದೆ. ಇದರ ಬದಲು ಮನೆಯಲ್ಲೇ ಆಹಾರ ಸಿದ್ಧಪಡಿಸೋದ್ರಿಂದ ಹಣ ಉಳಿತಾಯವಾಗುವ ಜೊತೆಗೆ ಆರೋಗ್ಯಕ್ಕೆ ಕೂಡ ಉತ್ತಮ. 

5.ವೆಚ್ಚಗಳನ್ನು ಹಂಚಿಕೊಳ್ಳಿ: ಇನ್ನು ನೀವು ಸ್ನೇಹಿತರ ಜೊತೆಗೆ ಹೊರಗೆ ಸುತ್ತಾಡಲು ಹೋಗುತ್ತಿದ್ದರೆ ವೆಚ್ಚಗಳನ್ನು ಹಂಚಿಕೊಳ್ಳಿ. ಉದಾಹರಣೆಗೆ ಸಾರಿಗೆ ವೆಚ್ಚ, ಸಿನಿಮಾ ಟಕೆಟ್ ದರ ಅಥವಾ ಹೋಟೆಲ್ ಬಿಲ್ ಗಳನ್ನು ಹಂಚಿಕೊಳ್ಳಿ. ಇದರಿಂದ ನಿಮ್ಮ ಪಾಕೆಟ್ ಮೇಲೆ ಯಾವುದೇ ಹೆಚ್ಚುವರಿ ಹೊರೆ ಬೀಳದಂತೆ ಸುತ್ತಾಟ ನಡೆಸಬಹುದು.

6.ಅನಗತ್ಯ ಖರೀದಿಗೆ ಕಡಿವಾಣ ಹಾಕಿ: ನೀವು ಎಚ್ಚರ ವಹಿಸದಿದ್ರೆ ಅನಗತ್ಯ ವಸ್ತುಗಳ ಮೇಲೆ ಹಣ ವ್ಯಯಿಸುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಲು ಯಾವುದೇ ವಸ್ತುವನ್ನು ಖರೀದಿಸುವ ಮುನ್ನ ನಿಮಗೆ ಅದು ಅಗತ್ಯವೇ ಎಂಬ ಬಗ್ಗೆ ಯೋಚಿಸಿ ಆ ಬಳಿಕ ನಿರ್ಧಾರ ಕೈಗೊಳ್ಳಿ.

7.ಭವಿಷ್ಯಕ್ಕೆ ಉಳಿತಾಯ ಮಾಡಿ: ಪ್ರತಿ ತಿಂಗಳು ನೀವು ಸಣ್ಣ ಮೊತ್ತದ ಹಣವನ್ನು ಉಳಿತಾಯ ಮಾಡಿದರೆ ಸಮಯ ಕಳೆದಂತೆ ದೊಡ್ಡ ಮೊತ್ತದ ಹಣವನ್ನು ಸಂಗ್ರಹಿಸಲು ನಿಮಗೆ ಸಾಧ್ಯವಾಗುತ್ತದೆ. ಹೀಗಾಗಿ ಉಳಿತಾಯ ಖಾತೆ ತೆರೆದು ಪ್ರತಿ ತಿಂಗಳು ಅದರಲ್ಲಿ ಒಂದಿಷ್ಟು ಹಣವನ್ನು ಠೇವಣೆ ಇಡುವ ಅಭ್ಯಾಸ ರೂಢಿಸಿಕೊಳ್ಳಿ. 

ಅಂಚೆ ಕಚೇರಿ ಉಳಿತಾಯ ಯೋಜನೆ ಹೂಡಿಕೆ ನಿಯಮಗಳಲ್ಲಿ ಬದಲಾವಣೆ;ಕೆವೈಸಿ ಜೊತೆಗೆ ಆದಾಯದ ದಾಖಲೆಯೂ ಅಗತ್ಯ

8.ನಿಮಗಾಗಿ ಹೂಡಿಕೆ ಮಾಡಿ: ಇನ್ನು ನಿಮಗೋಸ್ಕರ ಒಂದಿಷ್ಟು ಹೂಡಿಕೆ ಮಾಡಿ. ಅಂದರೆ ತರಬೇತಿ ಕ್ಲಾಸ್ ಗಳಿಗೆ ಸೇರಿಕೊಳ್ಳುವುದು, ಪುಸ್ತಕ ಖರೀದಿ ಅಥವಾ ಕ್ಲಬ್ ಗೆ ಸೇರ್ಪಡೆ ಇತ್ಯಾದಿಗಳಿಗೆ ಹಣ ವ್ಯಯಿಸಿ. ನಿಮಗೋಸ್ಕರ ಒಂದಿಷ್ಟು ಹೂಡಿಕೆ ಮಾಡುವುದು ನಿಮ್ಮ ವ್ಯಕ್ತಿತ್ವದ ಬೆಳವಣಿಗೆಗೆ ನೆರವು ನೀಡುತ್ತದೆ. 

9.ಹಣಕಾಸಿನ ಗುರಿಗಳನ್ನು ನಿಗದಿಪಡಿಸಿ: ಹಣಕಾಸಿನ ಗುರಿಗಳನ್ನು ಮನಸ್ಸಿನಲ್ಲೇ ನಿಗದಿಪಡಿಸಿಕೊಳ್ಳಿ. ಇದು ನಿಮಗೆ ಪ್ರೋತ್ಸಾಹ ನೀಡುವ ಜೊತೆಗೆ ಗುರಿ ತಲುಪಲು ನೆರವು ನೀಡುತ್ತದೆ. 

10.ಅಗತ್ಯವಾದ್ರೆ ನೆರವು ಕೇಳಿ: ಪಾಕೆಟ್ ಮನಿಯನ್ನು ನಿರ್ವಹಣೆ ಮಾಡಲು ನೀವು ಹೆಣಗಾಡುತ್ತಿದ್ದರೆ, ಪೋಷಕರು, ಶಿಕ್ಷಕರು ಅಥವಾ ಹಣಕಾಸು ತಜ್ಞರ ನೆರವು ಪಡೆಯಿರಿ. 

click me!