ದೀಪಾವಳಿ ಬೋನಸ್ ಸಿಕ್ತಾ? ಆ ಹಣವನ್ನುಇಲ್ಲಿ ಹೂಡಿಕೆ ಮಾಡಿದ್ರೆ ಲಾಭ ಗ್ಯಾರಂಟಿ!

By Suvarna NewsFirst Published Oct 22, 2022, 4:35 PM IST
Highlights

ದೀಪಾವಳಿ ಹಬ್ಬಕ್ಕೆ ಸಾಮಾನ್ಯವಾಗಿ ಬಹುತೇಕ ಕಂಪನಿಗಳು ನೌಕರರಿಗೆ ಬೋನಸ್ ನೀಡುತ್ತವೆ. ಈ ಬೋನಸ್ ಹಣವನ್ನು ಸುಖಾಸುಮ್ಮನೆ ಖರ್ಚು ಮಾಡುವ ಬದಲು ಸೂಕ್ತವಾಗಿ ಹೂಡಿಕೆ ಮಾಡಿ ಒಂದಿಷ್ಟು ಲಾಭ ಗಳಿಸಬಹುದು. ಹಾಗಾದ್ರೆ ಬೋನಸ್ ಹಣವನ್ನು ಹೇಗೆ ಬಳಸಿಕೊಳ್ಳಬಹುದು? ಹೇಗೆಲ್ಲ ಹೂಡಿಕೆ ಮಾಡಬಹುದು? ಇಲ್ಲಿದೆ ಮಾಹಿತಿ. 

Business Desk: ದೀಪಾವಳಿ ಹಬ್ಬಕ್ಕೆ ಸಾರ್ವಜನಿಕ ಹಾಗೂ ಖಾಸಗಿ ವಲಯದ ಅನೇಕ ಸಂಸ್ಥೆಗಳು ಉದ್ಯೋಗಿಗಳಿಗೆ ಬೋನಸ್ ನೀಡೋದು ಕಾಮನ್. ಹಬ್ಬದ ಖುಷಿ, ಸಂಭ್ರಮ ಹೆಚ್ಚಿಸಲು ನೌಕರರಿಗೆ ಸಂಸ್ಥೆಗಳು ಬೋನಸ್ ನೀಡುತ್ತವೆ. ಬಹುತೇಕರು ಈ ಬೋನಸ್ ಹಣದಲ್ಲಿ ಹಬ್ಬಕ್ಕೆ ಬಟ್ಟೆ, ಪಟಾಕಿ ಖರೀದಿಸಿ ಖುಷಿ ಪಡುತ್ತಾರೆ. ಆದರೆ, ಖರ್ಚು ಕಳೆದು ಉಳಿದ ಬೋನಸ್ ಹಣವನ್ನು ಹೇಗೆ ಬಳಸಬೇಕು ಎಂಬುದು ಬಹುತೇಕರಿಗೆ ತಿಳಿದಿರೋದಿಲ್ಲ. ಹೀಗೆ ಉಳಿದ ಹಣವನ್ನು ಆರ್ಥಿಕ ಪರಿಸ್ಥಿತಿಯ ಸುಧಾರಣೆಗೆ ಬಳಸಿಕೊಳ್ಳಬಹುದು. ಅಂದರೆ ಯಾವುದಾದ್ರೂ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಬಹುದು ಇಲ್ಲವೇ ನಿಮಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಅಭ್ಯಾಸವಿದ್ರೆ ಅದಕ್ಕೆ ಬಳಸಿಕೊಳ್ಳಬಹುದು. ಗೃಹಸಾಲ ಅಥವಾ ಇನ್ನಿತರ ಯಾವುದೇ ಸಾಲಗಳಿದ್ರೆ ಅದರ ಪಾವತಿಗೆ ಬಳಸಿಕೊಳ್ಳಬಹುದು. ಕೆಲವರಿಗೆ ಬೋನಸ್ ಸ್ವಲ್ಪ ದೊಡ್ಡ ಪ್ರಮಾಣದಲ್ಲಿ ಸಿಕ್ಕಿದ್ರೆ, ಇನ್ನೂ ಕೆಲವರಿಗೆ ಅದು ಚಿಕ್ಕ ಮೊತ್ತದಾಗಿರಬಹುದು. ಹೀಗಾಗಿ ಬೋನಸ್ ಮೊತ್ತ ಹಾಗೂ ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ಅದನ್ನು ಬಳಕೆ ಮಾಡಬಹುದು. ನಿಮಗೂ ದೀಪಾವಳಿಗೆ ಬೋನಸ್ ಸಿಕ್ಕಿದ್ದು, ಅದನ್ನು ಹೇಗೆ ಬಳಸಬೇಕು ಎಂಬುದು ತಿಳಿಯುತ್ತಿಲ್ವಾ? ಹಾಗಾದ್ರೆ ಇಲ್ಲಿದೆ ನೋಡಿ ಟಿಪ್ಸ್.

1.ಗೃಹಸಾಲ ಅಥವಾ ಇತರ ಸಾಲಕ್ಕೆ ಹಾಕಿ
ಇತ್ತೀಚಿನ ದಿನಗಳಲ್ಲಿ ರೆಪೋ ದರ ಹೆಚ್ಚಳದ ಹಿನ್ನೆಲೆಯಲ್ಲಿ ಸಾಲಗಳ ಮೇಲಿನ ಬಡ್ಡಿದರ ಸತತ ಏರಿಕೆ ಕಾಣುತ್ತಿದೆ. ಇದು ಸಾಲಗಾರರ ಮೇಲಿನ ಹೊರೆ ಹೆಚ್ಚಿಸಿದೆ. ಹಣದುಬ್ಬರ ನಿರಂತರ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಆರ್ ಬಿಯ ಮುಂದಿನ ದಿನಗಳಲ್ಲಿ ಕೂಡ ರೆಪೋ ದರ ಏರಿಕೆ ಮಾಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಸಾಲದ ಮರುಪಾವತಿ ಮೇಲೆ ಸದ್ಯ ಹೆಚ್ಚಿನ ಗಮನ ನೀಡೋದು ಒಳ್ಳೆಯದು. ಅದರಲ್ಲೂ ಗೃಹಸಾಲದಂತಹ ದೀರ್ಘಾವಧಿ ಸಾಲ ಹೊಂದಿರೋರು ಉಳಿತಾಯದ ಹಣವನ್ನು ಸಾಲಕ್ಕೆ ಹಾಕುವ ಮೂಲಕ ಬಡ್ಡಿ ಏರಿಕೆ ಬಿಸಿಯಿಂದ ಸ್ವಲ್ಪ ಮಟ್ಟಿಗೆ ನೆಮ್ಮದಿ ಪಡೆಯಬಹುದು. ಹೀಗಾಗಿ ನಿಮ್ಮ ಬೋನಸ್ ಹಣವನ್ನು ಸಾಲದ ಮರುಪಾವತಿಗೆ ಬಳಸಬಹುದು. ಸಾಲದ ಮರುಪಾವತಿ ಮಾಡುವ ಸಮಯದಲ್ಲಿ ಇಎಂಐ ಮೊತ್ತ ಕಡಿತದ ಆಯ್ಕೆ ಬದಲು ಸಾಲದ ಅವಧಿ ತಗ್ಗಿಸುವ ಆಯ್ಕೆಯನ್ನು ಆರಿಸಿಕೊಳ್ಳಿ. ಇದ್ರಿಂದ ಬಡ್ಡಿದರಕ್ಕೆ ತಗಲುವ ವೆಚ್ಚದಲ್ಲಿ ಹೆಚ್ಚಿನ ಉಳಿತಾಯವಾಗಲಿದೆ.

ದೀಪಾವಳಿಗೆ ಗೃಹಿಣಿಯರಿಗೆ ಶಾಕ್; ಅಡುಗೆ ಎಣ್ಣೆ ಬೆಲೆ ಹೆಚ್ಚಳ ಸಾಧ್ಯತೆ!

2.ಸ್ಥಿರ ಆದಾಯದ ಯೋಜನೆಗಳಲ್ಲಿ ಹೂಡಿಕೆ
3-5 ವರ್ಷಗಳ ಅವಧಿಯ ಹೂಡಿಕೆಯನ್ನು ಅಲ್ಪಾವಧಿಯ ಹೂಡಿಕೆ ಎನ್ನಬಹುದು. ಬೋನಸ್ ಹಣವನ್ನು ಇಂಥ ಹೂಡಿಕೆಯಲ್ಲಿ ಕೂಡ ತೊಡಗಿಸಬಹುದು. ಅಂಚೆ ಕಚೇರಿ ಅಥವಾ ಬ್ಯಾಂಕ್ ಗಳಲ್ಲಿನ ಆರ್ ಡಿ ಖಾತೆ, ಸ್ಥಿರ ಠೇವಣಿಗಳು ಅಲ್ಪಾವಧಿಯದ್ದಾಗಿದ್ದು, ಇವುಗಳಲ್ಲಿ ಹೂಡಿಕೆ ಮಾಡಬಹುದು. ಇತ್ತೀಚೆಗೆ ಎಲ್ಲ ಬ್ಯಾಂಕ್ ಗಳು ಎಫ್ ಡಿ, ಆರ್ ಡಿಗಳ ಮೇಲಿನ ಬಡ್ಡಿದರ ಹೆಚ್ಚಳ ಮಾಡಿವೆ. ಹೀಗಾಗಿ ಇಂಥ ಹೂಡಿಕೆಗಳಿಂದ ಉತ್ತಮ ರಿಟರ್ನ್ಸ್ ಕೂಡ ಸಿಗಲಿದೆ.

3.ಈಕ್ವಿಟಿಗಳಲ್ಲಿ ಹೂಡಿಕೆ
ದೀರ್ಘಾವಧಿ ಹಣಕಾಸಿನ ಗುರಿಗಳಿಗೆ ಈಕ್ವಿಟಿಗಳಲ್ಲಿ ಹೂಡಿಕೆ ಮಾಡೋದು ಉತ್ತಮ. ಹೀಗಾಗಿ ನಿಮ್ಮ ಬಳಿ ಅಲ್ಪಾವಧಿಯ ಗುರಿಗಳ ಪೂರೈಕೆಗೆ ಸಾಕಾಗುವಷ್ಟು ಹಣವಿದ್ರೆ ನೀವು ದೀರ್ಘಾವಧಿ ಗುರಿಗಳನ್ನು ಪೂರ್ಣಗೊಳಿಸಲು ಈಕ್ವಿಟಿಗಳಲ್ಲಿ ಹೂಡಿಕೆ ಮಾಡಬಹುದು. ತೆರಿಗೆ ವ್ಯಾಪ್ತಿಗೊಳಪಡುವ ಉದ್ಯೋಗಿಗಳು ತೆರಿಗೆ ಉಳಿತಾಯದ ಮ್ಯೂಚ್ಯುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡೋದು ಉತ್ತಮ. ಇಂಥ ಹೂಡಿಕೆಗೆ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ವಿನಾಯ್ತಿ ಪ್ರಯೋಜನ ಸಿಗುತ್ತದೆ. 

ದೀಪಾವಳಿಗೆ ದುಬಾರಿ ಗಿಫ್ಟ್ ಪಡೆದು ಸಂಭ್ರಮಿಸುತ್ತಿದ್ದೀರಾ? ಅದಕ್ಕೂ ಟ್ಯಾಕ್ಸ್ ಕಟ್ಟಬೇಕು ಗೊತ್ತಾ?

4.ಜೀವ ವಿಮೆಯಲ್ಲಿ ಹೂಡಿಕೆ ಮಾಡಬಹುದು
ನೀವಿನ್ನೂ ಆರೋಗ್ಯ ವಿಮೆ ಖರೀದಿಸದಿದ್ರೆ ಆ ಬಗ್ಗೆ ಯೋಚಿಸಬಹುದು. ಇನ್ನು ನಿಮ್ಮ ಬಳಿ ಈಗಾಗಲೇ ಜೀವ ವಿಮೆ ಪಾಲಿಸಿಗಳಿದ್ರೆ, ಟರ್ಮ್ ಇನ್ಯುರೆನ್ಸ್ ಖರೀದಿಸುವ ಬಗ್ಗೆ ಯೋಚಿಸಬಹುದು. 

click me!