*ರಷ್ಯಾದಿಂದ ಕಡಿಮೆ ಬೆಲೆಗೆ ಕಚ್ಚಾ ತೈಲ ಆಮದು ಮಾಡಿಕೊಂಡ ಭಾರತ
*ರಷ್ಯಾದಿಂದ ಭಾರತ ಖರೀದಿಸುತ್ತಿರುವ ಕಚ್ಚಾ ತೈಲದ ಪ್ರಮಾಣ ಶೇ.12ಕ್ಕೆ ಏರಿಕೆ
*ಏಪ್ರಿಲ್-ಜುಲೈ ತಿಂಗಳ ಅವಧಿಯಲ್ಲಿ ರಷ್ಯಾದಿಂದ ಭಾರತಕ್ಕೆ ಆಮದಾದ ತೈಲದ ಪ್ರಮಾಣದಲ್ಲಿ 8 ಪಟ್ಟು ಹೆಚ್ಚಳ
ನವದೆಹಲಿ (ಸೆ.19): ಫೆಬ್ರವರಿಯಲ್ಲಿ ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭವಾದಾಗಿನಿಂದ ರಷ್ಯಾದಿಂದ ಕಡಿಮೆ ಬೆಲೆಗೆ ಕಚ್ಚಾ ತೈಲ ಆಮದು ಮಾಡಿಕೊಂಡಿದ್ದರಿಂದ ಭಾರತಕ್ಕೆ ಸರಿಸುಮಾರು 35,000 ಕೋಟಿ ರೂ. ಲಾಭವಾಗಿದೆ ಎಂದು ಈ ಬಗ್ಗೆ ಮಾಹಿತಿ ಹೊಂದಿರೋರು ತಿಳಿಸಿದ್ದಾರೆ. ಉಕ್ರೇನ್ ಮೇಲೆ ದಾಳಿ ಹಿನ್ನೆಲೆಯಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳು ಸೇರಿದಂತೆ ಜಗತ್ತಿನ ಕೆಲವು ರಾಷ್ಟ್ರಗಳು ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳೋದನ್ನು ಸ್ಥಗಿತಗೊಳಿಸಿದವು. ಇದರಿಂದ ರಷ್ಯಾದ ಬಂದರಿನಲ್ಲಿ ಕಚ್ಚಾ ತೈಲದ ಬ್ಯಾರೆಲ್ ಗಳು ರಾಶಿ ಬಿದ್ದವು. ಈ ಸಂದರ್ಭವನ್ನು ಸಮರ್ಥವಾಗಿ ಬಳಸಿಕೊಂಡ ಭಾರತ ರಷ್ಯಾದೊಂದಿಗೆ ಚೌಕಾಸಿ ನಡೆಸಿ ಡಿಸ್ಕೌಂಟ್ ದರದಲ್ಲಿ ಕಚ್ಚಾ ತೈಲವನ್ನು ಖರೀದಿಸಿತು. ಅಲ್ಲದೆ, ಕಡಿಮೆ ಬೆಲೆಯಲ್ಲಿ ಆಮದು ಮಾಡಿಕೊಂಡ ತೈಲವನ್ನು ಸಂಗ್ರಹ ಮಾಡಿಟ್ಟಿತ್ತು. ಇದರಿಂದ ಭಾರತಕ್ಕೆ ಭಾರೀ ಪ್ರಮಾಣದ ಲಾಭವಾಗಿದೆ. ಅಮೆರಿಕ ಸೇರಿದಂತೆ ಜಗತ್ತಿನ ಬಲಾಢ್ಯ ರಾಷ್ಟ್ರಗಳ ವಿರೋಧದ ನಡುವೆಯೂ ಭಾರತ ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವುದನ್ನು ಮುಂದುವರಿಸಿತು. ಪರಿಣಾಮ ಚೀನಾದ ಬಳಿಕ ರಷ್ಯಾದಿಂದ ಕಚ್ಚಾ ತೈಲ ಖರೀದಿಸುವ ಎರಡನೇ ದೊಡ್ಡ ರಾಷ್ಟ್ರವಾಗಿ ಭಾರತ ಗುರುತಿಸಿಕೊಂಡಿದೆ.
ರಷ್ಯಾ-ಉಕ್ರೇನ್ (Russia-Ukraine) ಯುದ್ಧಕ್ಕಿಂತ (War) ಮೊದಲು ರಷ್ಯಾದಿಂದ (Russia) ಭಾರತ (India) ಖರೀದಿಸುತ್ತಿದ್ದ ಕಚ್ಚಾ ತೈಲದ (Crude oil) ಪ್ರಮಾಣ ಶೇ.1ಕ್ಕಿಂತ ಕಡಿಮೆ ಇತ್ತು. ಆದರೆ, ಈಗ ಅದು ಶೇ.12ರಷ್ಟಿದೆ. ಜುಲೈನಲ್ಲಿ ರಷ್ಯಾ ಭಾರತದ ಎರಡನೇ ಅತೀದೊಡ್ಡ ಕಚ್ಚಾ ತೈಲ (Crude oil) ಪೂರೈಕೆದಾರ ರಾಷ್ಟ್ರವಾಗಿದ್ದು, ಹಿಂದೆ ಈ ಸ್ಥಾನದಲ್ಲಿದ್ದ ಸೌದಿ ಅರೇಬಿಯಾ (Saudi Arabia) ಮೂರನೇ ಸ್ಥಾನಕ್ಕೆ ದೂಡಲ್ಪಟ್ಟಿದೆ. ಆದರೆ, ಆಗಸ್ಟ್ ನಲ್ಲಿ ಸೌದಿ ಅರೇಬಿಯಾ ಮತ್ತೆ ತನ್ನ ಹಿಂದಿನ ಸ್ಥಾನ ಗಳಿಸಿಕೊಂಡಿದ್ದು, ಪ್ರಸ್ತುತ ರಷ್ಯಾ (Russia) ಭಾರತದ ಮೂರನೇ ಅತೀದೊಡ್ಡ ಕಚ್ಚಾ ತೈಲ ಪೂರೈಕೆ ರಾಷ್ಟ್ರವಾಗಿದೆ.
ನೋಕಿಯಾ,ಕೋಲ್ಗೇಟ್ ಕಂಪನಿಗಳ ಮೊದಲ ಪ್ರಾಡಕ್ಟ್ ಯಾವುದು? ಆನಂದ್ ಮಹೀಂದ್ರಾ ಹಂಚಿಕೊಂಡ ಲಿಸ್ಟ್ ವೈರಲ್
ವಾಣಿಜ್ಯ ಇಲಾಖೆ ನೀಡಿರುವ ಅಂಕಿಅಂಶಗಳ ಅನ್ವಯ ಏಪ್ರಿಲ್-ಜುಲೈ ತಿಂಗಳ ಅವಧಿಯಲ್ಲಿ ರಷ್ಯಾದಿಂದ ಭಾರತಕ್ಕೆ ಆಮದಾದ (Import) ತೈಲದ ಪ್ರಮಾಣದಲ್ಲಿ ಎಂಟು ಪಟ್ಟು ಹೆಚ್ಚಳವಾಗಿದೆ. 2021 ರ ಏಪ್ರಿಲ್- ಜುಲೈ ತನಕ ಭಾರತ ರಷ್ಯಾದಿಂದ 1.3 ಬಿಲಿಯನ್ ಡಾಲರ್ ಮೌಲ್ಯದ ಕಚ್ಚಾ ತೈಲ ಆಮದು ಮಾಡಿಕೊಂಡಿತ್ತು. ಆದರೆ, 2022ರಲ್ಲಿ ಇದು 11.2 ಬಿಲಿಯನ್ ಡಾಲರ್‌ಗೆ ಭಾರೀ ಏರಿಕೆ ಕಂಡಿದೆ.
ಈ ಬೆಳವಣಿಗೆಗಳು ಘಟಿಸುವ ಮುನ್ನ ಭಾರತದ ಕಚ್ಚಾ ತೈಲ ದಾಸ್ತಾನು ತುಂಬಾನೇ ಕಡಿಮೆ ಇತ್ತು. ಒಟ್ಟು ಬೇಡಿಕೆಯ ಶೇ. 83 ರಷ್ಟು ತೈಲವನ್ನು ಬೇರೆ ರಾಷ್ಟ್ರಗಳಿಂದ ಆಮದು ಮಾಡಿ ಪೂರೈಸಬೇಕಿತ್ತು. ಆದರೆ, ರಷ್ಯಾದಿಂದ ಭಾರತಕ್ಕೆ ತೈಲ ಬರಲು ಪ್ರಾರಂಭಿಸಿದ ಬಳಿಕ ಪರಿಸ್ಥಿತಿ ಸುಧಾರಿಸಿತು. ಈ ತಿಂಗಳ ಪ್ರಾರಂಭದಲ್ಲಿ ವಿತ್ತ ಸಚಿವೆ (Finance Minister) ನಿರ್ಮಲಾ ಸೀತಾರಾಮನ್ (Nirmala Sitharaman) ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ, ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿರೋದು ದೇಶದ ಹಣದುಬ್ಬರ ನಿಯಂತ್ರಣಕ್ಕೆ ಸರ್ಕಾರ ಅನುಸರಿಸುತ್ತಿರುವ ತಂತ್ರವಾಗಿದೆ ಎಂದು ತಿಳಿಸಿದ್ದರು. ಅಲ್ಲದೆ, ಇತರ ರಾಷ್ಟ್ರಗಳು ಕೂಡ ಇದೇ ರೀತಿಯಾಗಿ ಮಾಡುತ್ತಿವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.
15 ಕೋಟಿ TikTok ಫಾಲೋವರ್ಸ್: ಖಾಬಿ ಲೇಮ್‌ಗೆ ಒಂದು ಪೋಸ್ಟ್‌ಗೆ ಇಷ್ಟು ಹಣ ಸಿಗುತ್ತೆ..!
ಭಾರತವು ಜಗತ್ತಿನ ಮೂರನೇ ಅತೀದೊಡ್ಡ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿರುವ ಹಾಗೂ ಬಳಸುತ್ತಿರುವ ರಾಷ್ಟ್ರವಾಗಿದೆ. ಅಮೆರಿಕ (US) ಹಾಗೂ ಚೀನಾದ (China) ಬಳಿಕ ಭಾರತ ಜಗತ್ತಿನ ಮೂರನೇ ಅತೀದೊಡ್ಡ ಕಚ್ಚಾ ತೈಲ ಬಳಕೆ ರಾಷ್ಟ್ರವಾಗಿದೆ. ಒಟ್ಟು ಕಚ್ಚಾ ತೈಲ ಬಳಕೆಯಲ್ಲಿ ಶೇ.85ಕ್ಕಿಂತ ಹೆಚ್ಚಿನದ್ದನ್ನು ಬೇರೆ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ.