ಇಂದು ಕೋಟ್ಯಧಿಪತಿಗಳು, ಅಂದು ಏನಾಗಿದ್ದರು?: ನೀವು ಓದಲೇಬೇಕು!

By Web DeskFirst Published Sep 1, 2018, 5:44 PM IST
Highlights

ಇವೆರೆಲ್ಲಾ ಇಂದು ವಿಶ್ವದ ಅಗ್ರ ಶ್ರೀಮಂತರು! ಇವರ ಬದುಕಿನ ಕತೆಯೇ ಇತರರಿಗೆ ಮಾದರಿ! ಶ್ರೀಮಂತರಾಗುವುದರ ಹಿಂದಿದೆ ಬೆವರಿನ ಇತಿಹಾಸ! ಚಿಕ್ಕ ಚಿಕ್ಕ ಕೆಲಸದಿಂದ ಅಗ್ರ ಶ್ರೀಮಂತರೆಂಬ ಪಟ್ಟದವರೆಗೆ!

ಬೆಂಗಳೂರು(ಸೆ.1): ಈಗ ಜಗತ್ತಿನ ಅತಿ ದೊಡ್ಡ ಶ್ರೀಮಂತರು ಅಂತನ್ನಿಸಿಕೊಳ್ಳುವ ಬಹುತೇಕರು ಹುಟ್ಟು ಶ್ರೀಮಂತರಲ್ಲ. ಕ್ಲೀನರ್ ಆಗಿ, ಕೂಲಿ ಮಾಡಿ, ಪಾತ್ರೆ ತಿಕ್ಕಿ ಶ್ರಮ ಪಟ್ಟು ಬೆವರು ಹರಿಸಿ ಬದುಕಿಗಾಗಿ ಸೆಣಸಿದವರು. ತೀವ್ರ ತುಡಿತ, ಸಾಧಿಸುವ ಛಲ, ಪರಿಶ್ರಮ ಅವರನ್ನು ಅಷ್ಟೆತ್ತರಕ್ಕೆ ಬೆಳೆಸಿದೆ. ಈ ಖ್ಯಾತನಾಮರ ಆರಂಭದ ಕೆಲಸ ಏನು ಅನ್ನುವುದೇ ಒಂದು ಇಂಟರೆಸ್ಟಿಂಗ್ ಕಥೆ. ಶೂನ್ಯದಿಂದ ಕೋಟ್ಯಧಿಪತಿಗಳಾದ ಐದು ಜನ ಜಗದ್ವಿಖ್ಯಾತ ಉದ್ಯಮಿಗಳ ಕಥೆ ಇಲ್ಲಿದೆ.  

1. ಮೈಕೆಲ್ ಡೆಲ್, ಡೆಲ್ ಕಂಪ್ಯೂಟರ್ಸ್‌ ಸಂಸ್ಥಾಪಕ:

ಮೈಕೆಲ್ ಡೆಲ್, ಜಗತ್ತಿನ ಟಾಪ್ 10 ಉದ್ಯಮಿಗಳ ಪಟ್ಟಿಯಲ್ಲಿರುವವರು. ಇವರ ಒಟ್ಟು ಆದಾಯ 24.4 ಬಿಲಿಯನ್ ಡಾಲರ್. ವರ್ಷಗಳ ಕೆಳಗೆ 1 ಬಿಲಿಯನ್ ಡಾಲರ್‌ನಷ್ಟು ಮೊತ್ತವನ್ನು ತಮ್ಮದೇ ಫೌಂಡೇಶನ್‌ಗೆ ನೀಡಿದ್ದು ವಿಶ್ವಮಟ್ಟದಲ್ಲಿ ಸುದ್ದಿಯಾಗಿತ್ತು. ಡೆಲ್ ಇಂಕ್ ಎಂಬ ಶ್ರೀ ಸಾಮಾನ್ಯದ ಕಂಪ್ಯೂಟರ್ ಅನ್ನು ಇವರು ವಿನ್ಯಾಸಗೊಳಿಸಿದ್ದು 1984ರಲ್ಲಿ. ಇಂದಿಗೂ ಜಗತ್ತಿನಲ್ಲಿ ಮಧ್ಯಮ ವರ್ಗದವರ ನೆಚ್ಚಿನ ಕಂಪ್ಯೂಟರ್ ಡೆಲ್. 

ಇಷ್ಟೆಲ್ಲ ಸಾಧನೆ ಮಾಡಿದ ಮೈಕೆಲ್ ಡೆಲ್ ತನ್ನ 12ನೇ ವರ್ಷದಲ್ಲಿ ಪಾತ್ರೆ ತೊಳೆಯುವ ಕೆಲಸ ಮಾಡುತ್ತಿದ್ದರು. ಅವರ ಮೊದಲ ಹುದ್ದೆ ಒಬ್ಬ ಪಾತ್ರೆ ತೊಳೆಯುವ ನೌಕರ. ಹಾಗೆಂದು ಮನೆಯಲ್ಲೇನೂ ಬಡತನ ಇರಲಿಲ್ಲ. ತಂದೆ, ತಾಯಿ ಒಳ್ಳೆಯ ಉದ್ಯೋಗದಲ್ಲೇ ಇದ್ದರು. ಆದರೆ ಡೆಲ್‌ಗೆ ಸ್ಟಾಂಪ್ ಕಲೆಕ್ಷನ್ ಕ್ರೇಜ್ ಇತ್ತು. ಸ್ಟಾಂಪ್ ಖರೀದಿಸಲು ಬೇಕಾದ ಹಣಕ್ಕೋಸ್ಕರ ಡೆಲ್ ಪಾತ್ರೆ ತೊಳೆಯೋ ಕೆಲಸ ಮಾಡುತ್ತಿದ್ದರು. 

2. ಡಗ್ ಮೆಕ್ ಮಿಲಿಯನ್,  ವಾಲ್‌ಮಾರ್ಟ್ ಮುಖ್ಯಸ್ಥ:

ಟ್ರಕ್‌ನಿಂದ ಅನ್‌ಲೋಡ್ ಮಾಡುವ ಕೆಲಸ ಜಗತ್ತಿನ ಅತೀ ದೊಡ್ಡ ಚಿಲ್ಲರೆ ವ್ಯಾಪಾರ ಉದ್ಯಮ ವಾಲ್‌ಮಾರ್ಟ್ ಇಂಕ್‌ನ ಮುಖ್ಯಸ್ಥ ಹಾಗೂ ಸಿಇಓ ಡಗ್ ಮೆಕ್ ಮಿಲಿಯನ್. 1984ರಲ್ಲಿ ಇವರ ಮೊದಲ ಉದ್ಯೋಗ ಟ್ರಕ್‌ನಿಂದ ಸಾಮಗ್ರಿಗಳನ್ನು ಅನ್ ಲೋಡ್ ಮಾಡುವುದು. ಅದು ವಾಲ್‌ಮಾರ್ಟ್ ಕಂಪೆನಿಯಲ್ಲೇ. ಆಗ ಇವರಿಗೆ ಟೀನೇಜ್.

ಕಾಲೇಜ್‌ಗೆ ರಜೆಯಿದ್ದಾಗ ಇಡೀ ದಿನ ವಾಲ್‌ಮಾರ್ಟ್‌ನ ದಾಸ್ತಾನು ಕೊಠಡಿಗೆ ಬರುತ್ತಿದ್ದ ಬೃಹತ್ ಟ್ರಕ್‌ಗಳಿಂದ ಸಾಮಾನು ಅನ್‌ಲೋಡ್ ಮಾಡೋದು, ಅದರ ಲೆಕ್ಕ ಬರೆಯುವ ಕೆಲಸ ಮಾಡುತ್ತಿದ್ದರು. ಮುಂದೆ ಇದೇ ಕಂಪೆನಿಯಲ್ಲಿ ಸಣ್ಣಪುಟ್ಟ ಪೋಸ್ಟ್‌ಗಳಲ್ಲಿ ದುಡಿದರು. ಬಳಿಕ ಅಸಿಸ್ಟೆಂಟ್ ಮ್ಯಾನೇಜರ್, ಮ್ಯಾನೇಜರ್ ಹುದ್ದೆಗಳಿಗೇರಿ, ಈಗ ವಾಲ್‌ಮಾರ್ಟ್‌ನ ಮುಖ್ಯಸ್ಥರಾಗಿದ್ದಾರೆ.

ಇಂದು ವಾಲ್‌ಮಾರ್ಟ್‌ನ ವಾರ್ಷಿಕ ಆದಾಯ 500.34 ಬಿಲಿಯನ್ ಡಾಲರ್‌ಗಳು. ಡಗ್ ಮೆಕ್ ಮಿಲಿಯನ್ ಅವರ 22.8 ಮಿಲಿಯನ್ ಅಮೆರಿಕನ್ ಡಾಲರ್‌ನಷ್ಟು ಡಗ್ ತಿಂಗಳ ಸಂಬಳವೇ ಇದೆ. ಅವರ ವಾರ್ಷಿಕ ಆದಾಯ ಎಷ್ಟಿರಬಹುದೆಂದು ಊಹಿಸಿ. 

3. ಮರಿಸ್ಸಾ ಮೇಯರ್, ಯಾಹೂ ಸಿಇಓ:

ಕಿರಾಣಿ ಅಂಗಡಿಯಲ್ಲಿ ಲೆಕ್ಕ ಬರೆಯುತ್ತಿದ್ದರು ಮರಿಸ್ಸಾ ಮೇಯರ್ ಜಗತ್ತಿನ 22 ಪವರ್‌ಫುಲ್ ಮಹಿಳೆಯರಲ್ಲಿ ಒಬ್ಬರೆಂದು ಗುರುತಿಸಿಕೊಂಡವರು. ಯಾಹೂ ಸಾಮ್ರಾಜ್ಯ ಕಟ್ಟಿ ಬೆಳೆಸುವಲ್ಲಿ ಈಕೆಯದು ಮಹತ್ವದ ಪಾತ್ರ. ಯಾಹೂ ಸೇರುವ ಮೊದಲು ಗೂಗಲ್‌ನ ಹಲವು ವಿಭಾಗಗಳ ಮುಖ್ಯಸ್ಥೆಯಾಗಿ ಕೆಲಸ ಮಾಡಿದ ಅನುಭವವಿತ್ತು. 

ಈ ಅನುಭವ ಗೂಗಲ್ ಹಾಗೂ ಯಾಹೂ ನಡುವಿನ ಸ್ಪರ್ಧೆಯನ್ನು ಸಮರ್ಥವಾಗಿ ಎದುರಿಸಲು ಸಹಾಯ ಮಾಡಿತು. ಅಮೆರಿಕಾದ ವಿಸ್‌ಕಾನ್‌ಸಿನ್ ಎಂಬ ಚಿಕ್ಕ ಪಟ್ಟಣದಲ್ಲಿ ಹುಟ್ಟಿದ ಈಕೆಯ ಆರ್ಥಿಕ ಸ್ಥಿತಿ ಅಷ್ಟೇನೂ ಚೆನ್ನಾಗಿರಲಿಲ್ಲ. ಕಿರಾಣಿ ಅಂಗಡಿಯಲ್ಲಿ ಲೆಕ್ಕ ಬರೆಯುವ ಕೆಲಸದೊಂದಿಗೆ ಈಕೆಯ ಔದ್ಯೋಗಿಕ ಬದುಕು ಶುರುವಾದದ್ದು. 

ಈ ಕೆಲಸದಿಂದ ಬಂದ ಹಣದಿಂದ ಸ್ಟಾನ್‌ಫರ್ಡ್ ಯುನಿವರ್ಸಿಟಿಯಲ್ಲಿ ಕಂಪ್ಯೂಟರ್ ಸೈನ್ಸ್ ಓದುತ್ತಿದ್ದರು. ಸೌಂದರ್ಯದ ಗಣಿಯಂತಿರುವ ಮರಿಸ್ಸಾ ಜನಪ್ರಿಯ ಫ್ಯಾಶನ್ ಮ್ಯಾಗಜಿನ್‌ಗಳ ಕವರ್ ಪೇಜ್ ಅಲಂಕರಿಸಿದ್ದರು. 

4. ರೀಡ್ ಹೇಸ್ಟಿಂಗ್ಸ್, ನೆಟ್‌ಫ್ಲಿಕ್ಸ್ ಸ್ಥಾಪಕ:

ಕಳೆದ ವರ್ಷ ಸುಮಾರು 11.7 ಬಿಲಿಯನ್ ಡಾಲರ್ ಗಳಷ್ಟು ಆದಾಯ ದಾಖಲಿಸಿರುವ ನೆಟ್‌ಫ್ಲಿಕ್ಸ್‌ನ ಸ್ಥಾಪಕ ಹಾಗೂ ಸಿಇಒ ರೀಡ್ ಹೇಸ್ಟಿಂಗ್ಸ್. ಇವರ ಮೊದಲ ಕೆಲಸ ಮನೆ ಮನೆಗೆ ಹೋಗಿ ವ್ಯಾಕ್ಯೂಮ್ ಕ್ಲೀನರ್ ಮಾರೋದು. ಹೈಸ್ಕೂಲ್ ಮುಗಿದ ಬಳಿಕ ಈ ಕೆಲಸಕ್ಕೆ ಸೇರಿದ್ದು. ಇಂದು ವಿಶ್ವದ ಅತೀ ಶ್ರೀಮಂತರಲ್ಲಿ ಒಬ್ಬರಾದ ಹೇಸ್ಟಿಂಗ್ಸ್, ಒಂದು ಕಾಲಕ್ಕೆ ತಾನು ಅಮೆರಿಕಾದ ಬೂಸ್ಟರ್ನ್ ನಗರದ ಮನೆ ಮನೆಗೆ ಸಂಚರಿಸಿ ವ್ಯಾಕ್ಯೂಮ್ ಕ್ಲೀನರ್ ಮಾರುತ್ತಿದ್ದೆ ಅಂತ ಖುಷಿಯಿಂದ ಹೇಳಿಕೊಳ್ಳುತ್ತಾರೆ. 

ಇದರಿಂದ ನೂರಾರ ಜನರ ಜೊತೆಗೆ ಮುಖಾಮುಖಿಯಾಗಲು, ಅವರ ಮನಸ್ಥಿತಿ ಅರಿಯುವುದು ಸಾಧ್ಯವಾಯಿತು. ಇವರ ಮನೆಯವರು ಡಿವಿಡಿ ಕಂಪೆನಿ ನಡೆಸುತ್ತಿದ್ದರು. ಕ್ರಮೇಣ ಡಿವಿಡಿಗಳಿಗೆ ಬೇಡಿಕೆ ಕಡಿಮೆಯಾದ ಕಾರಣ ಬ್ಯುಸಿನೆಸ್ ನೆಲಕ್ಕಚ್ಚುವುದರಲ್ಲಿತ್ತು. ಆಗ ಹೇಸ್ಟಿಂಗ್ಸ್‌ಗೆ ಹೈ ಕ್ವಾಲಿಟಿ ಡಿವಿಡಿಗಳನ್ನೇ ಡಿಜಿಟಲ್ ಮಾದರಿಯಲ್ಲಿ ಹಂಚುವ ಐಡಿಯಾ ಬಂತು.  ಅದೇ ಈ ನೆಟ್‌ಫ್ಲಿಕ್ಸ್ ಆಗಿ ಕೋಟ್ಯಂತರ ಜನರನ್ನು ತಲುಪಿ ಹಲವು ಬಿಲಿಯನ್ ಆದಾಯ ತರುತ್ತಿದೆ.

5. ಧೀರೂಬಾಯ್ ಅಂಬಾನಿ, ಅಂಬಾನಿ ಗ್ರೂಪ್ಸ್:

ಧೀರಜ್‌ಲಾಲ್ ಹೀರಾಚಂದ್ ಅಂಬಾನಿ ಅರ್ಥಾತ್ ಧೀರೂಬಾಯಿ ಅಂಬಾನಿ ಗುಜರಾತ್ ಶಾಲಾ ಶಿಕ್ಷಕರೊಬ್ಬರ ಮೂರನೇ ಮಗ. ಹತ್ತನೇ ತರಗತಿಯವರೆಗೆ ಓದಿದ ಬಳಿಕ ಮುಂದಿನ ಶಿಕ್ಷಣಕ್ಕೆ ಹಣವಿಲ್ಲದೇ ಓದು ತೊರೆದರು. ಇವರ ಅಣ್ಣ ಯೆಮನ್‌ನಲ್ಲಿ ಉದ್ಯೋಗಿಯಾಗಿದ್ದರು. ಅವರ ನೆರವಿನಿಂದ ಇವರೂ ಯೆಮನ್‌ಗೆ ಹೋಗಿ ಅಲ್ಲೊಂದು ಪೆಟ್ರೋಲ್ ಬಂಕ್‌ನಲ್ಲಿ ಕೆಲಸಗಾರನಾಗಿ ದುಡಿದರು. 

ಎಂಟು ವರ್ಷ ಅಲ್ಲಿ ದುಡಿದು 500 ರೂ. ಜೊತೆಗೆ ಮುಂಬೈಗೆ ಬಂದ ಅಂಬಾನಿ ಆರಂಭದಲ್ಲಿ ಚಿಕ್ಕಪುಟ್ಟ ವ್ಯಾಪಾರದಲ್ಲಿ ತೊಡಗಿಸಿಕೊಂಡರು. ಒಂದು ಕೋಣೆಯ ಸಣ್ಣ ಮನೆಯಲ್ಲಿ ಸಂಸಾರದ ಜೊತೆ ವಾಸ. ಹೀಗೆ ಬೆಳೆಯಲಾರಂಭಿಸಿದ ಅಂಬಾನಿ ರಿಲಯನ್ಸ್ ಇಂಡಸ್ಟ್ರೀಸ್‌ನ ಸಾಮ್ರಾಜ್ಯ ಕಟ್ಟಿ ಬೆಳೆಸಿದ್ದು ದೊಡ್ಡ ಕಥೆ. ಇವರು ಇಹಲೋಕ ತ್ಯಜಿಸಿದ್ದು 2002ರಲ್ಲಿ. ಆಗ ಇವರ ಆದಾಯ 6 ಬಿಲಿಯನ್ ಡಾಲರ್‌ಗಳು. ವಿಶ್ವದ ಅತೀ ಶ್ರೀಮಂತರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು.

click me!