ಡಿಮ್ಯಾಟ್ ಖಾತೆ, ಡೆಬಿಟ್, ಕ್ರೆಡಿಟ್ ಕಾರ್ಡ್ ಹೊಂದಿರೋರು ಗಮನಿಸಿ, ಅ.1ರಿಂದ ಈ 6 ನಿಯಮಗಳಲ್ಲಿ ಬದಲಾವಣೆ

By Suvarna News  |  First Published Sep 29, 2022, 6:34 PM IST

*ಅ.1ರಿಂದ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಮೂಲಕ ಆನ್ ಲೈನ್ ಪಾವತಿಗೆ ಟೋಕನೈಸೇಷನ್ 
*ಜಿಎಸ್ ಟಿ ಇನ್ ವಾಯ್ಸ್ ನಿಯಮದಲ್ಲಿ ಬದಲಾವಣೆ
*ಆದಾಯ ತೆರಿಗೆ ಪಾವತಿಸೋರು ಅಟಲ್ ಪಿಂಚಣಿ ಯೋಜನೆಗೆ ಸೇರ್ಪಡೆಗೊಳ್ಳುವಂತಿಲ್ಲ
 


ನವದೆಹಲಿ (ಸೆ.29): ಅಕ್ಟೋಬರ್ 1ರಿಂದ ಕೆಲವೊಂದು ನಿಯಮಗಳಲ್ಲಿ ಬದಲಾವಣೆಯಾಗಲಿದೆ. ಇದು ಜನಸಾಮಾನ್ಯರ ನಿತ್ಯದ ಬದುಕಿನ ಮೇಲೆ ನೇರ ಪರಿಣಾಮ ಬೀರುವ ಕಾರಣ ಈ ಬಗ್ಗೆ ಮಾಹಿತಿ ಹೊಂದಿರೋದು ಒಳ್ಳೆಯದು.  ಅಕ್ಟೋಬರ್ 1ರಿಂದ ಆದಾಯ ತೆರಿಗೆ ಪಾವತಿಸೋರು ಅಟಲ್ ಪಿಂಚಣಿ ಯೋಜನೆಗೆ ಸೇರ್ಪಡೆಗೊಳ್ಳಲು ಅರ್ಹರಲ್ಲ. ಈ ಯೋಜನೆಯ ಪ್ರಯೋಜನ ಅರ್ಹರಿಗೆ, ಅಗತ್ಯ ಇರೋರಿಗೆ ಸಿಗಬೇಕು ಎಂಬ ಉದ್ದೇಶದಿಂದ ಹಣಕಾಸು ಸಚಿವಾಲಯ ಈ ನಿಯಮ ಜಾರಿಗೆ ತರುತ್ತಿದೆ. ಇನ್ನು ನೀವು ಡಿಮ್ಯಾಟ್ ಖಾತೆ ಹೊಂದಿದ್ರೆ ಸೆಪ್ಟೆಂಬರ್ 30ರೊಳಗೆ  '2-ಫ್ಯಾಕ್ಟರ್ ಅಥೆಂಟಿಕೇಶನ್' ಸಕ್ರಿಯಗೊಳಿಸದಿದ್ರೆ ಖಾತೆಗೆ ಲಾಗಿ ಇನ್ ಆಗಲು ಸಾಧ್ಯವಾಗೋದಿಲ್ಲ. ಹಾಗೆಯೇ ಆನ್ ಲೈನ್ ಪಾವತಿಗೆ ಸಂಬಂಧಿಸಿ ಟೋಕನೈಸೇಷನ್ ವ್ಯವಸ್ಥೆ ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ. ಇನ್ನು ಕ್ರೆಡಿಟ್. ಡೆಬಿಟ್ ಕಾರ್ಡ್ ಹೊಸ ನಿಯಮಗಳು ಕೂಡ ಅಕ್ಟೋಬರ್ ನಿಂದ ಜಾರಿಗೆ ಬರಲಿವೆ. ಜಿಎಸ್ ಟಿ ಇನ್ ವಾಯ್ಸ್ ನಿಯಮದಲ್ಲಿ ಕೂಡ ಬದಲಾವಣೆಯಾಗಲಿದೆ. ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಿರೋರು ಅಥವಾ ಮಾಡುವ ಆಲೋಚನೆ ಹೊಂದಿರೋರು  ಅಕ್ಟೋಬರ್ 1ರ ಬಳಿಕ ನಾಮಿನೇಷನ್ ಮಾಹಿತಿ ನೀಡೋದು ಅಗತ್ಯ. 

1.ಕಾರ್ಡ್ ಟೋಕನೈಸೇಷನ್ 
ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಮೂಲಕ ಆನ್ ಲೈನ್ ಪಾವತಿಗೆ ಅಕ್ಟೋಬರ್ 1ರಿಂದ  ಟೋಕನೈಸೇಷನ್ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಅಧಿಸೂಚನೆಯಲ್ಲಿ ತಿಳಿಸಿದೆ. ಆನ್ ಲೈನ್ ಪಾವತಿ ವ್ಯವಸ್ಥೆಯನ್ನು ಹೆಚ್ಚು ಸುರಕ್ಷಿತ ಹಾಗೂ ಸುಭದ್ರವಾಗಿಡಲು ಆರ್ ಬಿಐ ಟೋಕನೈಸೇಷನ್ ವ್ಯವಸ್ಥೆಯನ್ನು ಜಾರಿಗೆ ತರಲು ನಿರ್ಧರಿಸಿದೆ.ಡೆಬಿಟ್ (Debit) ಅಥವಾ ಕ್ರೆಡಿಟ್ ಕಾರ್ಡ್ (Credit card) ಮೂಲಕ ನಡೆಸೋ ಆನ್ ಲೈನ್ ವಹಿವಾಟುಗಳಲ್ಲಿ ಈ ತನಕ ವರ್ತಕರು, ಪೇಮೆಂಟ್ ಗೇಟ್ ವೇಗಳು ಗ್ರಾಹಕರ ಕಾರ್ಡ್ ಮಾಹಿತಿಗಳನ್ನು ಸಂಗ್ರಹಿಸಿಡುತ್ತಿದ್ದವು. ಇದ್ರಿಂದ ಆ ಗ್ರಾಹಕ ಇನ್ನೊಮ್ಮೆ ಅದೇ ಆನ್ ಲೈನ್ ಸಂಸ್ಥೆಯಿಂದ ಖರೀದಿ ಮಾಡೋವಾಗ ಕಾರ್ಡ್ ಮಾಹಿತಿಗಳನ್ನು ದಾಖಲಿಸಬೇಕಾದ ಅಗತ್ಯವಿರಲಿಲ್ಲ. ಇನ್ನು ಮುಂದೆ ಈ ಮಾಹಿತಿಗಳು ಟೋಕನ್ ರೂಪದಲ್ಲಿ ಇರಲಿವೆ. 

Tap to resize

Latest Videos

ಡಾಲರ್ ಎದುರು ಮುಂದುವರಿದ ರೂಪಾಯಿ ಮೌಲ್ಯ ಕುಸಿತ, ಕಾರಣವೇನು?

2.ಅಟಲ್ ಪಿಂಚಣಿ ಯೋಜನೆ ನಿಯಮ ಬದಲಾವಣೆ
ಆದಾಯ ತೆರಿಗೆ ಪಾವತಿಸುವ ಹೂಡಿಕೆದಾರರು 2022ರ ಅಕ್ಟೋಬರ್ 1ರಿಂದ ಅಟಲ್ ಪಿಂಚಣಿ ಯೋಜನೆಗೆ ಸೇರ್ಪಡೆಗೊಳ್ಳಲು ಅರ್ಹರಾಗಿರೋದಿಲ್ಲ. ಒಂದು ವೇಳೆ ಆದಾಯ ತೆರಿಗೆ ಪಾವತಿಸುತ್ತಿರುವ ವ್ಯಕ್ತಿ ಅಕ್ಟೋಬರ್ 1 ಅಥವಾ ಅದರ ನಂತರ ಎಪಿವೈ ಯೋಜನೆಗೆ ಸೇರ್ಪಡೆಗೊಂಡರೆ ಅಂಥ ಖಾತೆಯನ್ನು ಮುಚ್ಚಲಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ಅಧಿಸೂಚನೆ ತಿಳಿಸಿದೆ. ಒಂದು ವೇಳೆ ಯಾವುದೇ ಚಂದಾದಾರರು ಅಕ್ಟೋಬರ್ 1 ಅಥವಾ ಅದರ ನಂತರ ಸೇರ್ಪಡೆಗೊಂಡರೆ ಹಾಗೂ ಅವರು ಅರ್ಜಿ ಸಲ್ಲಿಸಿದಾಗ ಅಥವಾ ಅದಕ್ಕೂ ಮೊದಲು ಆದಾಯ ತೆರಿಗೆ ಪಾವತಿಸುತ್ತಿದ್ದಾರೆ ಎಂಬುದು ತಿಳಿದು ಬಂದರೆ ಎಪಿವೈ ಖಾತೆಯನ್ನು ಮುಚ್ಚಲಾಗುತ್ತದೆ. ಆ ದಿನಾಂಕದ ತನಕ ಸಂಗ್ರಹಣೆಗೊಂಡ ಪಿಂಚಣಿಯನ್ನು ಚಂದಾದಾರರಿಗೆ ನೀಡಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

3.ಜಿಎಸ್ ಟಿ ನಿಯಮ ಬದಲಾವಣೆ
ಸರಕು ಹಾಗೂ ಸೇವಾ ತೆರಿಗೆ ಅಡಿಯಲ್ಲಿ ಅಥವಾ ಜಿಎಸ್ ಟಿ ತೆರಿಗೆ ವ್ಯಾಪ್ತಿಯಲ್ಲಿ 10 ಕೋಟಿ ರೂ. ಹಾಗೂ ಅದಕ್ಕಿಂತ ಹೆಚ್ಚಿನ ವಹಿವಾಟು ನಡೆಸುವ ಉದ್ಯಮಗಳಿಗೆ ಅಕ್ಟೋಬರ್ 1ರಿಂದ ಇ-ಇನ್ ವಾಯ್ಸ್ ಕಡ್ಡಾಯ. ಪ್ರಸ್ತುತ ಸರ್ಕಾರ ಈ ಮಿತಿಯನ್ನು 20 ಕೋಟಿ ರೂ.ಗೆ ನಿಗದಿಪಡಿಸಿದ್ದು, ಮುಂದಿನ ತಿಂಗಳಿಂದ 10 ಕೋಟಿ ರೂ.ಗೆ ಇಳಿಕೆ ಮಾಡಿದೆ. ಉದ್ಯಮಗಳಿಂದ ಆದಾಯ ಸೋರಿಕೆ ತಡೆ ಹಾಗೂ ಉತ್ತಮ ತೆರಿಗೆ ಸಂಗ್ರಹದ ಉದ್ದೇಶದಿಂದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಈ ಕುರಿತ ಅಧಿಸೂಚನೆಯನ್ನು ನೇರ ತೆರಿಗೆಗಳು ಹಾಗೂ ಸುಂಕಗಳ ಕೇಂದ್ರೀಯ ಮಂಡಳಿ (CBIC) ಆಗಸ್ಟ್ 1ರಂದು ಹೊರಡಿಸಿತ್ತು. ಜಿಎಸ್ ಟಿ ಮಂಡಳಿಯ ಶಿಫಾರಸ್ಸುಗಳ ಆಧಾರದಲ್ಲಿ ನಿಯಮಗಳನ್ನು ರೂಪಿಸಲಾಗಿದೆ.

4.ಡಿಮ್ಯಾಟ್ ಖಾತೆಗೆ ಹೊಸ ನಿಯಮ
ಡಿಮ್ಯಾಟ್ ಖಾತೆ ಹೊಂದಿರೋರು ಸೆ. 30ರೊಳಗೆ '2-ಫ್ಯಾಕ್ಟರ್ ಅಥೆಂಟಿಕೇಶನ್' ಸಕ್ರಿಯಗೊಳಿಸದಿದ್ರೆ ಖಾತೆಗೆ ಲಾಗಿ ಇನ್ ಆಗಲು ಸಾಧ್ಯವಾಗೋದಿಲ್ಲ. ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ (ಎನ್ ಎಸ್ ಇ)  ಜೂನ್ 14ರಂದು ಜಾರಿಗೊಳಿಸಿರುವ ಸುತ್ತೋಲೆಯಲ್ಲಿ ಈ ವಿಚಾರವನ್ನು ಸ್ಪಷ್ಟಪಡಿಸಲಾಗಿದೆ.  ಈ ಸುತ್ತೋಲೆ ಪ್ರಕಾರ ಸದಸ್ಯರು ಬಯೋಮೆಟ್ರಿಕ್ ಅನ್ನು ತಮ್ಮ ಡಿಮ್ಯಾಟ್ ಖಾತೆಗಳಿಗೆ ಲಾಗಿ ಇನ್ ಆಗಲು ಒಂದು ದೃಢೀಕರಣ ಅಂಶವನ್ನಾಗಿ ಪರಿಗಣಿಸಬೇಕು. ಇದನ್ನು ಹೊರತುಪಡಿಸಿದ್ರೆ ಇನ್ನೊಂದು ದೃಢೀಕರಣ ಪಾಸ್ ವರ್ಡ್ ಅಥವಾ ಪಿನ್ ರೀತಿಯಲ್ಲಿ ಬಳಕೆದಾರನಿಗೆ ಮಾತ್ರ ತಿಳಿದಿರುವಂತಹದ್ದು ಆಗಿರಬೇಕು ಅಥವಾ ಆತನ ಸ್ವಾಧೀನದಲ್ಲಿ ಇರುವಂತಹ ಅಂಶ ಅಂದ್ರೆ ಒನ್ ಟೈಮ್ ಪಾಸ್ ವರ್ಡ್ (ಒಟಿಪಿ), ಸೆಕ್ಯುರಿಟಿ ಟೋಕನ್ ಅಥವಾ ಸ್ಮಾರ್ಟ್ ಫೋನ್ ಇಲ್ಲವೇ ಡೆಸ್ಕ್ ಟಾಪ್ ಗಳಲ್ಲಿರುವ ದೃಢೀಕರಣ ಅಪ್ಲಿಕೇಷನ್ ಗಳು ಆಗಿರಬೇಕು. ಗ್ರಾಹಕರಿಗೆ ಒಟಿಪಿ ಇ-ಮೇಲ್ ಹಾಗೂ ಮೆಸೇಜ್ ಎರಡರ ಮೂಲಕವೂ ಲಭ್ಯವಾಗಬೇಕು. ಹೀಗಾಗಿ ಬಯೋಮೆಟ್ರಿಕ್ ದೃಢೀಕರಣ ಸಾಧ್ಯವಾಗದ ಸಂದರ್ಭದಲ್ಲಿ ಸುತ್ತೋಲೆಯಲ್ಲಿ ತಿಳಿಸಿರುವಂತೆ ಬಳಕೆದಾರ ತನ್ನ ಯೂಸರ್ ಐಡಿ ಜೊತೆಗೆ ಪಾಸ್ ವರ್ಡ್ ಅಥವಾ ಪಿನ್,  ಒಟಿಪಿ ಅಥವಾ ಸೆಕ್ಯುರಿಟಿ ಟೋಕನ್  ಬಳಸಿ ಡಿಮ್ಯಾಟ್ ಖಾತೆಗೆ ಲಾಗಿ ಇನ್ ಆಗಬೇಕು.

ಲ್ಯಾಪ್‌ಟಾಪ್‌ಗೆ ಡಿಟರ್ಜೆಂಟ್‌: ತಪ್ಪಿಗೆ ಪರಿಹಾರ ಕೊಡುತ್ತೇನೆಂದ Flipkart

5.ಎನ್ ಪಿಎಸ್ ಇ-ನಾಮಿನೇಷನ್ ನಿಯಮ ಬದಲಾವಣೆ
ಎನ್ ಪಿಎಸ್ ಖಾತೆದಾರರು ಇ-ನಾಮಿನೇಷನ್ ಗೆ ಮನವಿ ಸಲ್ಲಿಸಿದ ಬಳಿಕ ನೋಡಲ್ ಅಧಿಕಾರಿಗೆ ಅದನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಆಯ್ಕೆ ನೀಡಲಾಗಿದೆ. ಒಂದು ವೇಳೆ ಯಾವುದೇ ನೋಡಲ್ ಅಧಿಕಾರಿ ಮನವಿ ಸಲ್ಲಿಸಿದ 30 ದಿನಗಳೊಳಗೆ ಯಾವುದೇ ಕ್ರಮ ಕೈಗೊಳ್ಳದಿದ್ರೆ  ಸಿಆರ್ ಎ ವ್ಯವಸ್ಥೆ ಅದನ್ನು ಸ್ವೀಕರಿಸಲಿದೆ ಎಂದು ಪಿಂಚಣಿ ನಿಧಿ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ (PFRDA) ತಿಳಿಸಿದೆ. ಈ ಹೊಸ ವ್ಯವಸ್ಥೆ ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ.

6.ಮ್ಯೂಚುವಲ್ ಫಂಡ್ ಗೆ ನಾಮಿನೇಷನ್
ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಿರೋರು ಹಾಗೂ ಭವಿಷ್ಯದಲ್ಲಿ ಮಾಡಲು ಬಯಸೋರು ಅಕ್ಟೋಬರ್ 1ರ ಬಳಿಕ ನಾಮಿನೇಷನ್ ಮಾಹಿತಿ ನೀಡೋದು ಕಡ್ಡಾಯ. ನಾಮಿನೇಷನ್ ವಿವರಗಳನ್ನು ನೀಡದಿರೋರು ಈ ಸೌಲಭ್ಯದ ಅಗತ್ಯವಿಲ್ಲ ಎಂಬ ಘೋಷಣೆ ನೀಡಬೇಕು. 


 

click me!