PMAY ಅಡಿ ಮನೆ ಸಾಲ ಸಬ್ಸಿಡಿ ನೀಡಲು ನಿರಾಕರಿಸಿದ ಬ್ಯಾಂಕ್‌ಗೆ ಶಾಕ್: ಕೇಸ್ ಗೆದ್ದ ಗ್ರಾಹಕ

By Anusha Kb  |  First Published Jan 23, 2023, 4:48 PM IST

ಪ್ರಧಾನಮಂತ್ರಿ ಆವಾಸ್ ಯೋಜನೆಯ ಅಡಿ ಮನೆ ಕಟ್ಟುವ ಸಾಲಕ್ಕೆ ಸಬ್ಸಿಡಿ ನೀಡಲು ನಿರಾಕರಿಸಿದ ಬ್ಯಾಂಕ್‌ಗೆ ಗ್ರಾಹಕರೊಬ್ಬರು ಬಿಸಿ ಮುಟ್ಟಿಸಿದ್ದಾರೆ.  ಬ್ಯಾಂಕ್‌ ವಿರುದ್ಧ ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದ ವ್ಯಕ್ತಿಯೊಬ್ಬರು ಪ್ರಕರಣ ಗೆದ್ದಿದ್ದು, ಇವರಿಗೆ  2.4 ಲಕ್ಷ  ಸಬ್ಸಿಡಿ ಮೊತ್ತ ನೀಡುವಂತೆ ಕೋರ್ಟ್‌ ಬ್ಯಾಂಕ್‌ಗೆ ಆದೇಶಿಸಿದೆ.


ಬೆಂಗಳೂರು: ಪ್ರಧಾನಮಂತ್ರಿ ಆವಾಸ್ ಯೋಜನೆಯ ಅಡಿ ಮನೆ ಕಟ್ಟುವ ಸಾಲಕ್ಕೆ ಸಬ್ಸಿಡಿ ನೀಡಲು ನಿರಾಕರಿಸಿದ ಬ್ಯಾಂಕ್‌ಗೆ ಗ್ರಾಹಕರೊಬ್ಬರು ಬಿಸಿ ಮುಟ್ಟಿಸಿದ್ದಾರೆ.  ಬ್ಯಾಂಕ್‌ ವಿರುದ್ಧ ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದ ವ್ಯಕ್ತಿಯೊಬ್ಬರು ಪ್ರಕರಣ ಗೆದ್ದಿದ್ದು, ಇವರಿಗೆ  2.4 ಲಕ್ಷ  ಸಬ್ಸಿಡಿ ಮೊತ್ತ ನೀಡುವಂತೆ ಗ್ರಾಹಕ ನ್ಯಾಯಾಲಯ ಬ್ಯಾಂಕ್‌ಗೆ ಆದೇಶಿಸಿದೆ. ಮಾರ್ಚ್ 2021ರ ಪ್ರಕರಣ ಇದಾಗಿದ್ದು, ಆಧಾರ್‌ಕಾರ್ಡ್ ಸರಿ ಇಲ್ಲ ಎಂಬ ಕಾರಣ ನೀಡಿ ಬ್ಯಾಂಕ್ ಮನೆ ಸಾಲ (Home Loan) ಸಬ್ಸಿಡಿ ನೀಡಲು ನಿರಾಕರಿಸಿತ್ತು.   ಇದರ ವಿರುದ್ಧ ಗ್ರಾಹಕ ಸೌರಭ್ ಅಗರ್ವಾಲ್ (Sourabh Agarwal)ಅವರು ನಗರ ಗ್ರಾಹಕ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದು,  ಅವರಿಗೆ ಈಗ 2.4 ಲಕ್ಷ  ಪರಿಹಾರ ಸಿಕ್ಕಿದೆ. 

ಅಲ್ಲದೇ ಬ್ಯಾಂಕ್‌ನ ಅಸಮರ್ಪಕ ಸೇವೆಯ ಹಿನ್ನೆಲೆಯಲ್ಲಿ 26 ವರ್ಷದ ಈ ಯುವಕನಿಗೆ 35 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಕೋರ್ಟ್ ಆದೇಶಿಸಿದೆ.  ಇಲೆಕ್ಟ್ರಾನಿಕ್ ಸಿಟಿಯ (Electronic city) ದೊಡ್ಡಮಂಗಲ ಗ್ರಾಮದ ನಿವಾಸಿಯಾಗಿರುವ ಸೌರಭ್ ಅಗರ್ವಾಲ್,  2021ರ ಮಾರ್ಚ್‌ 21 ರಂದು ಉತ್ತರಹಳ್ಳಿಯಲ್ಲಿ ಬ್ಯಾಂಕ್‌ವೊಂದರಿಂದ 45 ಲಕ್ಷ ರೂಪಾಯಿ  ಸಾಲ ತೆಗೆದುಕೊಂಡಿದ್ದರು.  ಈ ವೇಳೆ ಪ್ರಧಾನಮಂತ್ರಿ ಆವಾಸ್ ಯೋಜನೆಯ ಅಡಿ ಅವರಿಗೆ 2.4 ಲಕ್ಷ ಲೋನ್  ಸಬ್ಸಿಡಿ ಸಿಗುವುದು ಎಂಬುವುದು ಗೊತ್ತಾಗಿ ಅದಕ್ಕೆ ಅಗತ್ಯವಿದ್ದ ಆಧಾರ್‌ಕಾರ್ಡ್ (Adharcard) ಸೇರಿದಂತೆ ವಿವಿಧ ದಾಖಲೆಗಳೊಂದಿಗೆ ಅವರು ಅದಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಅವರ ಆಧಾರ್‌ಕಾರ್ಡ್ ಸರಿ ಇಲ್ಲ, ಐಡಿ ನಂಬರ್ ಕಾಣಿಸುತ್ತಿಲ್ಲ. ಹೀಗಾಗಿ ಸಬ್ಸಿಡಿ ನೀಡಲು ಸಾಧ್ಯವಿಲ್ಲ ಎಂದು ಹೇಳಿ ಬ್ಯಾಂಕ್ ಸಿಬ್ಬಂದಿ ಸಾಲದ ಸಬ್ಸಿಡಿ ನೀಡಲು ನಿರಾಕರಿಸಿದರು. 

Tap to resize

Latest Videos

ಸಾಲದ ಬಡ್ಡಿದರ ಹೆಚ್ಚಿಸಿದ HDFC: ಗೃಹಸಾಲದ ಪ್ರಾರಂಭಿಕ ಬಡ್ಡಿದರ ಶೇ. 8.65

ಆದರೆ ಸೌರಭ್ ಅವರು ತಮ್ಮ ಐಡಿ ಕಾರ್ಡ್ ಸರಿ ಇದೆ ಎಂಬುದನ್ನು ಸಾಬೀತುಪಡಿಸಲು ಏನು ಸಾಧ್ಯವೋ ಎಲ್ಲವನ್ನು ಮಾಡಿದರು. ಜೊತೆಗೆ ಅವರು ಕಳಿಸಿದ ಆಧಾರ್‌ಕಾರ್ಡ್‌ನಲ್ಲಿ ಐಡಿ ನಂಬರ್ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಆದರೂ ಬ್ಯಾಂಕ್ ಮಾತ್ರ ಇವರಿಗೆ ಸಬ್ಸಿಡಿ ನೀಡಲು ನಿರಾಕರಿಸಿತು.  ಈ ಹಿನ್ನೆಲೆಯಲ್ಲಿ ಅಗರ್ವಾಲ್ ಅವರು ಆರ್‌ಬಿಐಗೆ (RBI) ದೂರು ನೀಡಿದರು.  ಆರ್‌ಬಿಐನಿಂದ ಸಕರಾತ್ಮಕ ಪ್ರತಿಕ್ರಿಯೆ ಬಂದ ಹಿನ್ನೆಲೆಯಲ್ಲಿ ಅವರು ಬೆಂಗಳೂರಿನಲ್ಲಿ  ಜಿಲ್ಲಾ ಗ್ರಾಹಕ ವಿವಾದ ಪರಿಹಾರ ಕಮೀಷನ್‌ಗೆ  ಸೆಪ್ಟೆಂಬರ್ 22 ರಂದು ದೂರು ನೀಡಿದರು.  ಬ್ಯಾಂಕ್‌ನ ಮನೆ ಸಾಲದ ವಿರುದ್ಧ ದೂರು ನೀಡಿದ್ದರು. ಅಲ್ಲದೇ ತಮ್ಮ ದೂರಿಗೆ ಬೇಕಾದಂತಹ ಎಲ್ಲಾ ದಾಖಲೆಗಳನ್ನು ಅವರು ನೀಡಿದ್ದರು. ಆದರೆ ಬ್ಯಾಂಕ್ ಸಿಬ್ಬಂದಿ ಕೋರ್ಟ್‌ ನೋಟೀಸ್ ಬಳಿಕವೂ ವಿಚಾರಣೆಗೆ ಹಾಜರಾಗಲು ವಿಫಲವಾಗಿದ್ದಲ್ಲದೇ ಸಮರ್ಪಕ ದಾಖಲೆಗಳನ್ನು ನೀಡುವಲ್ಲಿ ವಿಫಲವಾಯ್ತು. ಇದಾದ ಬಳಿಕ ಕೋರ್ಟ್‌ ಬ್ಯಾಂಕ್ ತಪ್ಪಿತಸ್ಥ ಎಂದು ಘೋಷಣೆ ಮಾಡಿತು. 

ಅಲ್ಲದೇ ಕೋರ್ಟ್ ನ್ಯಾಯಾಧೀಶರು ಎರಡು ತಿಂಗಳ ಕಾಲ ಈ ಪ್ರಕರಣದ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಅಗರ್‌ವಾಲ್ ಅವರು ಸಾಲದ ಸಬ್ಸಿಡಿ ಪಡೆಯಲು ಅರ್ಹರು ಎಂಬುದನ್ನು  ಮನಗಂಡರು. ಅಲ್ಲದೇ ಬ್ಯಾಂಕ್ ಸಕಾರಣವಿಲ್ಲದೇ ಸಾಲದ ಸಬ್ಸಿಡಿ ನೀಡಲು ನಿರಾಕರಿಸಿದೆ ಎಂಬುದನ್ನು ಅರಿತು ಗ್ರಾಹಕನ ಪರ ಆದೇಶ ಹೊರಡಿಸಿದೆ. ನವಂಬರ್ 14 2022 ರಂದು ಗ್ರಾಹಕ ನ್ಯಾಯಾಲಯದ ನ್ಯಾಯಾಧೀಶರು, ಬ್ಯಾಂಕ್ ಗ್ರಾಹಕ ಅಗರ್ವಾಲ್‌ಗೆ ಶೇಕಡಾ10 ಬಡ್ಡಿಯೊಂದಿಗೆ 2.4 ಲಕ್ಷ ರೂಪಾಯಿ ಸಬ್ಸಿಡಿ ನೀಡುವಂತೆ ಆದೇಶಿಸಿದೆ. ಅಲ್ಲದೇ ಸಬ್ಸಿಡಿ ಪಡೆಯುವ ಅರ್ಹತೆ ಇದ್ದರೂ ಅಲೆದಾಡಿಸಿದ್ದಕ್ಕಾಗಿ 25 ಸಾವಿರ ಪರಿಹಾರದ ಜೊತೆ 10 ಸಾವಿರ ನ್ಯಾಯಾಲಯದ ವೆಚ್ಚ ಭರಿಸುವಂತೆ ಸೂಚಿಸಿದೆ. 

ಸಾಲದ ಮೇಲಿನ ಬಡ್ಡಿದರ ಹೆಚ್ಚಿಸಿದ ಎಸ್ ಬಿಐ; ಸಾಲಗಾರರ ಮೇಲೆ ಹೆಚ್ಚಿದ ಇಎಂಐ ಹೊರೆ

click me!