ಸಾಲದ ಮೇಲಿನ ಬಡ್ಡಿದರ ಹೆಚ್ಚಿಸಿದ ಎಸ್ ಬಿಐ; ಸಾಲಗಾರರ ಮೇಲೆ ಹೆಚ್ಚಿದ ಇಎಂಐ ಹೊರೆ

*ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ದರ 25 ಬೇಸಿಸ್ ಪಾಯಿಂಟ್ಸ್ ಹೆಚ್ಚಳ
*ಹೆಚ್ಚಲಿದೆ ಗೃಹ, ವಾಹನ ಸೇರಿದಂತೆ ವಿವಿಧ ಸಾಲಗಳ ಇಎಂಐ ಮೊತ್ತ 
*ಪರಿಷ್ಕೃತ ಬಡ್ಡಿದರ ಇಂದಿನಿಂದಲೇ ಅನ್ವಯ
 

SBI hikes home loan other loan interest rates EMIs to rise further

ನವದೆಹಲಿ (ಡಿ.15): ಆರ್ ಬಿಐ ರೆಪೋ ದರ ಏರಿಕೆ ಮಾಡಿದ ಬೆನ್ನಲ್ಲೇ ದೇಶದ ಸಾರ್ವಜನಿಕ ವಲಯದ ಅತೀದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಸಾಲಗಳ ಮೇಲಿನ ಬಡ್ಡಿದರ ಹೆಚ್ಚಳ ಮಾಡಿದೆ. ಆಯ್ದ ಅವಧಿಯ ಸಾಲಗಳ ಮೇಲಿನ ಕನಿಷ್ಠ ಬಡ್ಡಿದರ ಅಥವಾ ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ದರವನ್ನು (ಎಂಸಿಎಲ್ ಆರ್)  25 ಬೇಸಿಸ್ ಪಾಯಿಂಟ್ಸ್ ಹೆಚ್ಚಳ ಮಾಡಿದೆ. ಈ ಹೆಚ್ಚಳದ ಪರಿಣಾಮ ಗೃಹ, ವಾಹನ ಸೇರಿದಂತೆ ವಿವಿಧ ಸಾಲಗಳ ಇಎಂಐ ಮೊತ್ತ ಹೆಚ್ಚಲಿದೆ. ಪರಿಷ್ಕೃತ ಬಡ್ಡಿದರ 2022ರ ಡಿಸೆಂಬರ್ 15ರಿಂದಲೇ ಅನ್ವಯವಾಗಲಿದೆ. ಎಸ್ ಬಿಐ ವೆಬ್ ಸೈಟ್ ನಲ್ಲಿ ನೀಡಿರುವ ಮಾಹಿತಿ ಪ್ರಕಾರ ಒಂದು ಹಾಗೂ ಮೂರು ತಿಂಗಳ ಅವಧಿಯ ಎಂಸಿಎಲ್ ಆರ್ ಶೇ.7.75ರಿಂದ ಶೇ.8ಕ್ಕೆ ಹೆಚ್ಚಳವಾಗಲಿದೆ. ಇನ್ನು ಆರು ತಿಂಗಳು ಹಾಗೂ ಒಂದು ವರ್ಷದ ಅವಧಿಯ ಎಂಸಿಎಲ್ ಆರ್ ಶೇ.8.05ರಿಂದ ಶೇ.8.30ಕ್ಕೆ ಏರಿಕೆಯಾಗಲಿದೆ. ಬಹುತೇಕ ಗೃಹ, ವಾಹನ ಹಾಗೂ ವೈಯಕ್ತಿಕ ಸಾಲಗಳು ಎಂಸಿಎಲ್ ಆರ್ ಜೊತೆಗೆ ಬೆಸೆದುಕೊಂಡಿವೆ. ಎರಡು ವರ್ಷಗಳ ಅವಧಿಯ ಎಂಸಿಎಲ್ ಆರ್ ಶೇ.8.25ರಿಂದ ಶೇ.8.50ಕ್ಕೆ ಏರಿಕೆಯಾಗಿದೆ. ಇನ್ನು ಮೂರು ವರ್ಷಗಳ ಅವಧಿಯ ಎಂಸಿಎಲ್ ಆರ್ ಶೇ. 8.35ರಿಂದ ಶೇ.8.60ಕ್ಕೆ ಹೆಚ್ಚಳವಾಗಿದೆ. ಈ ಹಿಂದೆ ಎಸ್ ಬಿಐ ನವೆಂಬರ್ 15ರಂದು ಎಲ್ಲ ಅವಧಿಯ ಸಾಲಗಳ ಮೇಲಿನ ಎಂಸಿಎಲ್ ಆರ್ ಅನ್ನು 10-15 ಬೇಸಿಸ್ ಪಾಯಿಂಟ್ಸ್ ಹೆಚ್ಚಳ ಮಾಡಿತ್ತು. 

ಎಂಸಿಎಲ್ ಆರ್ ಅಂದ್ರೇನು?
ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ರೇಟ್ (ಎಂಸಿಎಲ್ ಆರ್) ಎಂದರೆ ಬ್ಯಾಂಕ್ ಗಳು ಗ್ರಾಹಕರಿಗೆ ಸಾಲ ನೀಡುವ ಕನಿಷ್ಠ ಬಡ್ಡಿದರ. ವಿವಿಧ ಮಾದರಿಯ ಸಾಲಗಳ ಬಡ್ಡಿ ದರಗಳನ್ನು ನಿರ್ಧರಿಸಲು  2016 ರಲ್ಲಿ ಆರ್ ಬಿಐ ಎಂಸಿಎಲ್ ಆರ್ ಪರಿಚಯಿಸಿತು. ಸರಳವಾಗಿ  ಹೇಳಬೇಕೆಂದ್ರೆ ಎಂಸಿಎಲ್ ಆರ್ ಅನ್ನೋದು ಬ್ಯಾಂಕ್ ಗಳು ಸಾಲ ನೀಡಲು ಅನುಸರಿಸುವ ಬಡ್ಡಿಯ ಮಾನದಂಡ. ಈ ವಿಧಾನದಲ್ಲಿ ಸಾಲದ ಮೇಲಿನ ಬಡ್ಡಿ ನಿಗದಿಗೆ ಕನಿಷ್ಠ ದರವನ್ನು ಅನುಸರಿಸಲಾಗುತ್ತದೆ. ಇದಕ್ಕಿಂತ ಕಡಿಮೆ ದರದಲ್ಲಿ ಬ್ಯಾಂಕ್ ಗಳು ಸಾಲ ನೀಡುವುದಿಲ್ಲ. 

ಬ್ಯಾಂಕ್ ನಲ್ಲಿ ಡಿಜಿಟಲ್ ರೂಪಾಯಿ ಎಫ್ ಡಿ ಖಾತೆ ತೆರೆಯಲು ಅವಕಾಶವಿದೆಯಾ? ಕೇಂದ್ರ ಸರ್ಕಾರ ಏನ್ ಹೇಳಿದೆ?

ಇಬಿಎಲ್ ಆರ್, ಆರ್ ಎಲ್ ಎಲ್ಆರ್ ಹೆಚ್ಚಳ
ಎಸ್ ಬಿಐ ಎಕ್ಟ್ರನಲ್ ಬೆಂಚ್ ಮಾರ್ಕ್ ಆಧಾರಿತ ಸಾಲದ ದರವನ್ನು ಶೇ.8.55ರಿಂದ ಶೇ.8.90ಕ್ಕೆ ಏರಿಕೆ ಮಾಡಿದೆ. ಹಾಗೆಯೇ ಆರ್ ಎಲ್ ಎಲ್ಆರ್ ಅನ್ನು ಕೂಡ ಶೇ.8.15ರಿಂದ ಶೇ. 8.50ಕ್ಕೆ ಹೆಚ್ಚಳ ಮಾಡಿದೆ. ಇನ್ನು ಬೆಂಚ್ ಮಾರ್ಕ್ ಪ್ರೈಮ್ ಲೆಂಡಿಂಗ್ ದರ (ಬಿಪಿಎಲ್ ಆರ್ ) ಅನ್ನು ಕೂಡ ಎಸ್ ಬಿಐ ಪರಿಷ್ಕರಿಸಿದ್ದು, ವಾರ್ಷಿಕ ಶೇ.14.15ಕ್ಕೆ ಏರಿಕೆ ಮಾಡಿದೆ.

ಇಎಂಐ ಹೆಚ್ಚಳ
ಎಸ್ ಬಿಐ ಸಾಲಗಳ ಮೇಲಿನ ಬಡ್ಡಿದರ ಹೆಚ್ಚಳ ಮಾಡಿರೋದ್ರಿಂದ ಗೃಹಸಾಲಗಳ ಇಎಂಐ ಮೊತ್ತ ಹೆಚ್ಚಲಿದೆ. ಇಎಂಐ ಮೊತ್ತ ಸಾಲದ ಒಟ್ಟು ಮೊತ್ತ, ಅವಧಿ ಹಾಗೂ ಬಡ್ಡಿದರವನ್ನು ಅವಲಂಬಿಸಿದೆ. ಬಡ್ಡಿದರ ಹೆಚ್ಚಳವಾದಾಗ ಇಎಂಐ ಮೊತ್ತ ಕೂಡ ಹೆಚ್ಚಳವಾಗುತ್ತದೆ. ಇಎಂಐ ಮೊತ್ತ ತಗ್ಗಿಸಲು ಸಾಲದ ಅವಧಿಯನ್ನು ವಿಸ್ತರಿಸುವಂತೆ ಬ್ಯಾಂಕ್ ಬಳಿ ಮನವಿ ಮಾಡಬಹುದು. 

ಶೀಘ್ರದಲ್ಲೇ ಪಿಪಿಎಫ್, ಎನ್ ಎಸ್ ಸಿ ,ಕೆವಿಪಿ ಬಡ್ಡಿದರ ಹೆಚ್ಚಳ?

ಬಡ್ಡಿ ಹೆಚ್ಚಳಕ್ಕೆ ಕಾರಣವೇನು?
ಆರ್ ಬಿಐ ರೆಪೋ ದರ ಹೆಚ್ಚಳ ಮಾಡಿದಾಗ ಬ್ಯಾಂಕ್ ಗಳು ಕೂಡ ಸಾಲಗಳ ಮೇಲಿನ ಬಡ್ಡಿದರ ಹೆಚ್ಚಳ ಮಾಡುತ್ತವೆ. ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರಕ್ಕೆ ಕಡಿವಾಣ ಹಾಕಲು ಆರ್ ಬಿಐ ಈ ವರ್ಷ ಇಲ್ಲಿಯ ತನಕ ಐದು ಬಾರಿ ರೆಪೋ ದರ ಏರಿಕೆ ಮಾಡಿದೆ.  ಡಿಸೆಂಬರ್ 7ರಂದು  ಆರ್ ಬಿಐ ರೆಪೋ ದರವನ್ನು 35 ಮೂಲಾಂಕಗಳಷ್ಟು ಹೆಚ್ಚಳ ಮಾಡಿದೆ. ಕಳೆದ 10 ತಿಂಗಳಲ್ಲಿ ರೆಪೋ ದರ ಒಟ್ಟು ಶೇ.2.25ರಷ್ಟು ಹೆಚ್ಚಳವಾಗಿದ್ದು, ಶೇ.6.25ಕ್ಕೆ ತಲುಪಿದೆ. ಇದೇ ಕಾರಣಕ್ಕೆ ಎಸ್ ಬಿಐ ಕೂಡ ಸಾಲಗಳ ಮೇಲಿನ ಬಡ್ಡಿ ದರ ಹೆಚ್ಚಳ ಮಾಡಿದೆ. 
 

Latest Videos
Follow Us:
Download App:
  • android
  • ios