
ನವದೆಹಲಿ (ಮಾ.7): ರಷ್ಯಾದ (Russia) ಕಚ್ಚಾ ತೈಲ (Crude Oil) ಪೂರೈಕೆ (Supply) ಮೇಲೆ ನಿಷೇಧ (Ban) ಹೇರಲು ಅಮೆರಿಕ (US) ಹಾಗೂ ಐರೋಪ್ಯ (European) ರಾಷ್ಟ್ರಗಳು ಚಿಂತನೆ ನಡೆಸುತ್ತಿವೆ ಎಂಬ ವರದಿ ಬೆನ್ನಲ್ಲೇ ಸೋಮವಾರ (ಮಾ.7) ಜಾಗತಿಕ ಕಚ್ಚಾ ತೈಲ ಬೆಲೆ 14 ವರ್ಷಗಳಲ್ಲೇ ದಾಖಲೆಯ ಜಿಗಿತ ಕಂಡಿದೆ. 2008 ರ ಜುಲೈ ಬಳಿಕ ಇದು ದಾಖಲೆಯ ಏರಿಕೆಯಾಗಿದೆ.
ಜಾಗತಿಕ ಕಚ್ಚಾ ತೈಲದ ಮಾನದಂಡ ಬ್ರೆಂಟ್ (Brent) ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರಲ್ (Barrel) ಮೇಲೆ $139.13 ಏರಿಕೆ ಕಂಡಿದೆ. ರಷ್ಯಾ-ಉಕ್ರೇನ್ ಸಂಘರ್ಷ ಪ್ರಾರಂಭವಾದ ಬಳಿಕ ಪೂರೈಕೆಯಲ್ಲಿ ವ್ಯತ್ಯಯವಾಗೋ ಭಯದಲ್ಲಿ ಇಂಧನ ಬೆಲೆ ಭಾರೀ ಏರಿಕೆ ಕಾಣುತ್ತಿದೆ. ಗ್ರಾಹಕರಿಗೆ ಈಗಾಗಲೇ ಇಂಧನ ಬೆಲೆಯೇರಿಕೆ ಬಿಸಿ ತಟ್ಟಿದೆ. ಅಡುಗೆ ಅನಿಲದಿಂದ ಹಿಡಿದು ದಿನಬಳಕೆ ವಸ್ತುಗಳ ಬೆಲೆಯಲ್ಲಿ ಏರಿಕೆ ಕಂಡುಬರುತ್ತಿದೆ. ಇದ್ರಿಂದ ಮನೆ ನಿರ್ವಹಣೆ ವೆಚ್ಚ ಹೆಚ್ಚುತ್ತಿದೆ. ಇನ್ನೊಂದೆಡೆ ಇಂದು (ಮಾ.7) ಏಷ್ಯಾದ ಷೇರು ಪೇಟೆಯಲ್ಲಿ ಕುಸಿತ ಕಂಡುಬಂದಿದೆ. ಜಪಾನಿನ ನಿಕ್ಕೆಯಿ (Nikkei) 3% ಕ್ಲೋಸಿಂಗ್ ಡೌನ್ ಆದ್ರೆ, ಹಾಂಗ್ ಕಾಂಗ್ ನ ಹಾಂಗ್ ಸೆಂಗ್ (Hang Seng) 3.6% ಕಡಿಮೆ ಮಟ್ಟದಲ್ಲಿ ಟ್ರೇಡಿಂಗ್ ಆಗುತ್ತಿದೆ.
Ukraine Crisis: ಉಕ್ರೇನ್ ಮೇಲೆ ಯುದ್ಧ ಸಾರಿದ ರಷ್ಯಾಗೆ ಮತ್ತೊಂದು ಶಾಕ್!
ರಷ್ಯಾದ ಕಚ್ಚಾ ತೈಲ ಆಮದಿನ ಮೇಲೆ ನಿರ್ಬಂಧ ವಿಧಿಸೋ ಬಗ್ಗೆ ಐರೋಪ್ಯ ರಾಷ್ಟ್ರಗಳು ಹಾಗೂ ಮಿತ್ರರಾಷ್ಟ್ರಗಳ ಜೊತೆ ಅಮೆರಿಕ ಮಾತುಕತೆ ನಡೆಸುತ್ತಿದೆ ಎಂದು ಭಾನುವಾರ ಸಂದರ್ಶನವೊಂದರಲ್ಲಿ ಅಮೆರಿಕದ (US) ಗೃಹ ಕಾರ್ಯದರ್ಶಿ(Secretary of Stat) ಆಂಟನಿ ಬ್ಲಿಂಕೆನ್ ಹೇಳಿದ್ದರು. ಬ್ಲಿಂಕೆನ್ ಹೇಳಿಕೆ ಬೆನ್ನಲ್ಲೇ ಜಾಗತಿಕ ಕಚ್ಚಾ ತೈಲ ಬೆಲೆಯಲ್ಲಿ ದಾಖಲೆಯ ಏರಿಕೆ ಕಂಡುಬಂದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಪೂರೈಕೆ ಪ್ರಸ್ತುತ ಸಮರ್ಪಕ ಪ್ರಮಾಣದಲ್ಲಿದೆ ಎಂಬುದನ್ನು ಖಾತ್ರಿ ಪಡಿಸಿಕೊಂಡ ಬಳಿಕವಷ್ಟೇ ಇಂಥ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಬ್ಲಿಂಕೆನ್ ಸ್ಪಷ್ಟಪಡಿಸಿದ್ದರು.
ಜಾಗತಿಕ ಕಚ್ಚಾ ತೈಲ ಪೂರೈಕೆಯಲ್ಲಿ ರಷ್ಯಾದ ಪ್ರಮಾಣ ಅಷ್ಟೇನೂ ಗಮನಾರ್ಹವಾಗಿಲ್ಲ. ಹೀಗಾಗಿ ಅಮೆರಿಕ ಹಾಗೂ ಐರೋಪ್ಯ ಮಿತ್ರ ರಾಷ್ಟ್ರಗಳು ರಷ್ಯಾದ ಕಚ್ಚಾ ತೈಲ ಪೂರೈಕೆ ಮೇಲೆ ನಿರ್ಬಂಧ ವಿಧಿಸಿದರೂ ಜಾಗತಿಕ ಮಾರುಕಟ್ಟೆಯಲ್ಲಿ ಕೊರತೆ ಎದುರಾಗೋದಿಲ್ಲ ಎನ್ನುವ ಅಭಿಪ್ರಾಯವನ್ನು ಕೂಡ ಕೆಲವು ತಜ್ಞರು ವ್ಯಕ್ತಪಡಿಸಿದ್ದಾರೆ. ಆದ್ರೆ ಕಝುಕಿಸ್ತಾನದಿಂದ ಪೂರೈಕೆಯಾಗೋ ತೈಲ ಕೂಡ ರಷ್ಯಾದ ಬಂದರಿನ ಮೂಲಕವೇ ರಫ್ತಾಗುತ್ತಿದ್ದು, ಇದರ ಮೇಲೂ ಪರಿಣಾಮ ಬೀಳಲಿದೆ. ಈ ಬಗ್ಗೆ ಈಗಾಗಲೇ ಬ್ಯಾಂಕ್ ಆಫ್ ಅಮೆರಿಕ ಮಾಹಿತಿಯೊಂದನ್ನು ನೀಡಿದ್ದು, ರಷ್ಯಾದ ಕಚ್ಚಾ ತೈಲದ ಮೇಲೆ ನಿರ್ಬಂಧ ಹೇರಿದ್ರೆ 50 ಲಕ್ಷ ಬ್ಯಾರೆಲ್ ಕೊರತೆಯಾಗಲಿದೆ. ಇದ್ರಿಂದ ಇಂಧನ ದರದಲ್ಲಿ 100ರಿಂದ 200 ಡಾಲರ್ ಏರಿಕೆಯಾಗೋ ಸಾಧ್ಯತೆಯಿದೆ ಎಂದಿದೆ.
Russia Ukraine Crisis:ಗೋಧಿ ಬೆಲೆ ಶೇ.55 ಏರಿಕೆ; ಜಾಗತಿಕ ಆಹಾರ ಧಾನ್ಯಗಳ ಪೂರೈಕೆ ಮೇಲೆ ಯುದ್ಧದ ಪರಿಣಾಮವೇನು?
ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯೇರಿಕೆ ನಿರೀಕ್ಷೆ?
ಸೋಮವಾರದ ಪ್ರಾರಂಭದ ವಹಿವಾಟಿನಲ್ಲೇ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಕಂಡಿದೆ. ರೂಪಾಯಿ ಮೌಲ್ಯ 81ಪೈಸೆ ಇಳಿಕೆ ಕಂಡಿದ್ದು, ಡಾಲರ್ ಎದುರು ರೂಪಾಯಿ ಮೌಲ್ಯ ಪ್ರಸ್ತುತ 76.98ರೂ. ಇದೆ. ಇದು ಕೂಡ ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಮೇಲೆ ಪರಿಣಾಮ ಬೀರೋ ಸಾಧ್ಯತೆಯಿದೆ. ಏಕೆಂದ್ರೆ ರೂಪಾಯಿ ಮೌಲ್ಯ ಕುಸಿತದಿಂದ ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ವ್ಯತ್ಯಾಸವಾಗಿದೆ. ಇನ್ನು ಕೇಂದ್ರ ಸರ್ಕಾರ ಇಷ್ಟು ದಿನಗಳ ಕಾಲ ಪಂಚರಾಜ್ಯಗಳ ಚುನಾವಣೆ ಕಾರಣಕ್ಕೆ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಮಾಡಿಲ್ಲ ಎಂದೇ ವಿಶ್ಲೇಷಿಸಲಾಗುತ್ತಿದೆ. ಸೋಮವಾರ ಐದು ರಾಜ್ಯಗಳ ಚುನಾವಣೆಯ ಕೊನೆಯ ಹಂತದ ಮತದಾನ ನಡೆಯಲಿದೆ. ಹೀಗಾಗಿ ಮಂಗಳವಾರ ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯೇರಿಕೆ ಮಾಡೋ ಸಾಧ್ಯತೆ ಹೆಚ್ಚಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.