
ಬೆಂಗಳೂರು (ಏ.7): ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ಕೇಂದ್ರ ಸರ್ಕಾರ ಮತ್ತೊಂದು ಬರೆ ಹಾಕಿದ್ದು, ಪ್ರಧಾನಮಂತ್ರಿ ಉಜ್ವಲಾ ಸೇರಿದಂತೆ ಗೃಹಬಳಕೆಯ ಸಿಲಿಂಡರ್ ದರದಲ್ಲಿ 50 ರೂಪಾಯಿ ಏರಿಕೆ ಮಾಡಿದೆ. ಈ ಕುರಿತಾಗಿ ಪೆಟ್ರೋಲಿಯಂ ಖಾತೆ ಸಚಿವ ಹರ್ದೀಪ್ ಸಿಂಗ್ ಪೂರಿ ತಿಳಿಸಿದ್ದಾರೆ. ಮಧ್ಯರಾತ್ರಿಯಿಂದಲೇ ಈ ಬೆಲೆ ಏರಿಕೆ ಜಾರಿಯಾಗಲಿದೆ.
"14.2 ಕೆಜಿ ತೂಕದ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಪ್ರತಿ ಸಿಲಿಂಡರ್‌ಗೆ 50 ರೂ.ಗಳಷ್ಟು ಹೆಚ್ಚಾಗಲಿದೆ. 500 ರಿಂದ 550 ರೂ.ಗಳಿಗೆ (ಉಜ್ವಲಾ ಫಲಾನುಭವಿಗಳಿಗೆ) ಮತ್ತು ಇತರರಿಗೆ ಇದು 803 ರೂ.ಗಳಿಂದ 853 ರೂ.ಗಳಿಗೆ ಏರಿಕೆಯಾಗಲಿದೆ" ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಮಾಹಿತಿ ನೀಡಿದ್ದಾರೆ.
ಈ ಪರಿಷ್ಕರಣೆಯು ಸಾಮಾನ್ಯವಾಗಿ ಪ್ರತಿ 2-3 ವಾರಗಳಿಗೊಮ್ಮೆ ಆವರ್ತಕ ಪರಿಶೀಲನೆಗೆ ಒಳಪಟ್ಟಿರುತ್ತದೆ ಎಂದು ಅವರು ಹೇಳಿದರು. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಇತ್ತೀಚಿನ ಅಬಕಾರಿ ಸುಂಕ ಹೆಚ್ಚಳವು ಗ್ರಾಹಕರಿಗೆ ಹೊರೆಯಾಗೋದಿಲ್ಲ. ಆದರೆ, ಸಬ್ಸಿಡಿ ಅನಿಲ ಬೆಲೆಗಳಿಂದಾಗಿ ತೈಲ ಮಾರುಕಟ್ಟೆ ಕಂಪನಿಗಳು ಅನುಭವಿಸಿದ 43,000 ಕೋಟಿ ರೂ. ನಷ್ಟವನ್ನು ಸರಿದೂಗಿಸಲು ಸಹಾಯ ಮಾಡುವ ಉದ್ದೇಶವನ್ನು ಇದು ಹೊಂದಿದೆ ಎಂದು ತಿಳಿಸಿದ್ದಾರೆ.
ಸರ್ಕಾರ ಕೊನೆಯ ಬಾರಿಗೆ 2024ರ ಮಾರ್ಚ್ 8ರಂದು ಮಹಿಳಾ ದಿನದಂದು ಸಿಲಿಂಡರ್ ಬೆಲೆಯನ್ನು 100 ರೂ. ಕಡಿತ ಮಾಡಿತ್ತು. ಅಂದು ದೇಶದಲ್ಲಿ ಸಿಲಿಂಡರ್ ಬೆಲೆ 903 ರೂಪಾಯಿ ಆಗಿತ್ತು. ಇನ್ನು ಏಪ್ರಿಲ್ 1 ರಂದು ವಾಣಿಜ್ಯ ಸಿಲಿಂಡರ್ ಬೆಲೆಯನ್ನು ₹ 44.50 ರಷ್ಟು ಕಡಿಮೆ ಮಾಡಲಾಗಿತ್ತು. ತೈಲ ಮಾರುಕಟ್ಟೆ ಕಂಪನಿಗಳು ಏಪ್ರಿಲ್ 1 ರಂದು 19 ಕೆಜಿ ವಾಣಿಜ್ಯ ಅನಿಲ ಸಿಲಿಂಡರ್ ಬೆಲೆಯನ್ನು ₹ 44.50 ರಷ್ಟು ಕಡಿಮೆ ಮಾಡಿದ್ದವು. ದೆಹಲಿಯಲ್ಲಿ ಇದರ ಬೆಲೆ ₹ 41 ರಷ್ಟು ಇಳಿದು ₹ 1762 ಕ್ಕೆ ತಲುಪಿದೆ. ಮೊದಲು ಇದು ₹ 1803 ಕ್ಕೆ ಲಭ್ಯವಿತ್ತು. ಕೋಲ್ಕತ್ತಾದಲ್ಲಿ ಇದು ₹ 1868.50 ಕ್ಕೆ ಲಭ್ಯವಿದೆ, ₹ 44.50 ರಷ್ಟು ಕಡಿಮೆಯಾಗಿದೆ; ಮೊದಲು ಇದರ ಬೆಲೆ ₹ 1913 ಆಗಿತ್ತು.
ಗ್ಯಾಸ್ ಸಿಲಿಂಡರ್ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ: ತೈಲ ಕಂಪನಿಗಳು ಹಿಂದಿನ ತಿಂಗಳ ಅಂತರರಾಷ್ಟ್ರೀಯ ಬೆಲೆಗಳು, ವಿನಿಮಯ ದರ ಮತ್ತು ಇತರ ವೆಚ್ಚಗಳ ಆಧಾರದ ಮೇಲೆ ಪ್ರತಿ ತಿಂಗಳು LPG ಯ ಮೂಲ ಬೆಲೆಯನ್ನು ನಿಗದಿಪಡಿಸುತ್ತವೆ. ಇದರ ನಂತರ, ತೆರಿಗೆಗಳು, ಸಾರಿಗೆ ಮತ್ತು ಡೀಲರ್ ಕಮಿಷನ್ ಅನ್ನು ಸೇರಿಸುವ ಮೂಲಕ ಚಿಲ್ಲರೆ ಬೆಲೆಯನ್ನು ನಿರ್ಧರಿಸಲಾಗುತ್ತದೆ. ಸಬ್ಸಿಡಿ ಸಿಲಿಂಡರ್‌ಗಳಿಗೆ ಸರ್ಕಾರವು ವ್ಯತ್ಯಾಸವನ್ನು ಸರಿದೂಗಿಸುತ್ತದೆ, ಆದರೆ ಗ್ರಾಹಕರು ಸಬ್ಸಿಡಿ ರಹಿತ ಸಿಲಿಂಡರ್‌ಗಳಿಗೆ ಪೂರ್ಣ ಬೆಲೆಯನ್ನು ಪಾವತಿಸುತ್ತಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.