
ಮಂಗಳೂರು(ಫೆ.19): ರಾಜ್ಯದ ಸಂಸದರ ಮೌನ, ಸರ್ಕಾರದ ಅಸಹಾಯಕತೆ, ಕೇಂದ್ರದ ಮಲತಾಯಿ ಧೋರಣೆಯಿಂದಾಗಿ ರಾಜ್ಯದ ಜನರು ಸಾಲದ ಹೊರೆ ಹೊತ್ತುಕೊಳ್ಳುವಂತಾಗಿದೆ. ರಾಜ್ಯ ಸರ್ಕಾರ ಮಂಡಿಸಿದ್ದು ಸುಲಿಗೆ, ಸಾಲದ ಬಜೆಟ್ ಆಗಿದೆ ಎಂದು ವಿಧಾನಸಭಾ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಟೀಕಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1947ರಿಂದ 2018ರವರೆಗೆ ರಾಜ್ಯದ ಸಾಲ 2,42,000 ಕೋಟಿ ರು. ಆಗಿದ್ದರೆ, ಬಿಜೆಪಿ ಸರ್ಕಾರ ಬಂದ ಬಳಿಕ ಕೇವಲ ನಾಲ್ಕೇ ವರ್ಷಗಳಲ್ಲಿ 5,64,816 ಕೋಟಿ ರು.ಗೆ ಏರಿಕೆಯಾಗಿದೆ. ಕೇವಲ 4 ವರ್ಷಗಳಲ್ಲಿ ಬಿಜೆಪಿ ಸರ್ಕಾರ ಬರೋಬ್ಬರಿ 2.80 ಲಕ್ಷ ಕೋಟಿ ರು. ಸಾಲ ಮಾಡಿದೆ. ಈ ಬಜೆಟಲ್ಲೂ 78 ಸಾವಿರ ಕೋಟಿ ರು. ಸಾಲ ಮಾಡುವುದಾಗಿ ಹೇಳಿದೆ. ಜನರನ್ನು ಸಾಲದಲ್ಲಿ ಮುಳುಗಿಸಿದೆ ಎಂದು ಆಕ್ಷೇಪಿಸಿದರು.
ಜನರ ಕಿವಿ ಮೇಲೆ ಹೂವಿಡುವ ಬಜೆಟ್: ಸುರ್ಜೇವಾಲಾ
ಕೇವಲ ಇಬ್ಬರು ಶಾಸಕರಿರುವ ಕೊಡಗಿಗೆ 100 ಕೋಟಿ ರು. ವಿಶೇಷ ಅನುದಾನವನ್ನು ಬಜೆಟ್‌ನಲ್ಲಿ ನೀಡಲಾಗಿದೆ. ಆದರೆ ಅವಿಭಜಿತ ದ.ಕ. ಜಿಲ್ಲೆಯಲ್ಲಿ 12 ಶಾಸಕರು, ಸಂಸದರು ಇದ್ದರೂ ನಯಾಪೈಸೆ ತರಲು ಸಾಧ್ಯವಾಗಿಲ್ಲ. ಈ ಮೂಲಕ ಕರಾವಳಿ ಜನರಿಗೆ ಸಂಪೂರ್ಣ ಮೋಸ ಮಾಡಿದ್ದಾರೆ. ಮೀನುಗಾರರಿಗೆ ಕಳೆದ ವರ್ಷದ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದನ್ನೇ ಕೊಟ್ಟಿಲ್ಲ. 5 ಸಾವಿರ ಮನೆ ಕಟ್ಟುವ ಘೋಷಣೆಯಲ್ಲಿ ಸಿಕ್ಕಿದ್ದು 350 ಮನೆಗಳು ಮಾತ್ರ, ಸಂಪೂರ್ಣ ಹಣ ಇನ್ನೂ ಪಾವತಿಯಾಗಿಲ್ಲ ಎಂದು ಖಾದರ್ ಆರೋಪಿಸಿದರು.
ಕುಚ್ಚಲಕ್ಕಿಯನ್ನೇ ಕೊಟ್ಟಿಲ್ಲ:
ಕರಾವಳಿಯಲ್ಲಿ ಬಿಜೆಪಿಯ ಇಷ್ಟೊಂದು ಶಾಸಕರು, ಸಂಸದರು ಇದ್ದರೂ ಜನರ ಬೇಡಿಕೆಯಾದ ಕುಚ್ಚಲಕ್ಕಿ ನೀಡಲು ಇನ್ನೂ ಸಾಧ್ಯವಾಗಿಲ್ಲ. ಬಿಜೆಪಿ ಸರ್ಕಾರ ಕೊನೆಯ ಉಸಿರಿನಲ್ಲಿದೆ ಎನ್ನುವ ಸಂಕೇತ ಇದು. ಇಂಥ ಸಂದರ್ಭದಲ್ಲಿ ಟಿಪ್ಪು, ಪಾಕಿಸ್ತಾನ, ತಾಲಿಬಾನ್ ವಿಚಾರಗಳು ಅವರಿಗೆ ಆಕ್ಸಿಜನ್‌ನಂತಾಗಿವೆ ಎಂದು ಯು.ಟಿ.ಖಾದರ್ ಟೀಕಿಸಿದರು. ಕಾಂಗ್ರೆಸ್ ಸದಾಶಿವ ಉಳ್ಳಾಲ್, ಸಂತೋಷ್ ಕುಮಾರ್ ಶೆಟ್ಟಿ, ದೀಪಕ್ ಪೂಜಾರಿ, ರೆಹಮಾನ್ ಕೋಡಿಜಾಲ್ ಮತ್ತಿತರರಿದ್ದರು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.