Price Hike: ಹೊಸ ವರ್ಷಕ್ಕೆ ಜನರಿಗೆ ಶಾಕ್‌: ದಿನಬಳಕೆ, ಇಲೆಕ್ಟ್ರಾನಿಕ್ಸ್‌, ಆಟೋಮೊಬೈಲ್‌ ವಸ್ತುಗಳ ಬೆಲೆ ಏರಿಕೆ!

By Kannadaprabha NewsFirst Published Jan 1, 2022, 6:44 AM IST
Highlights

*ಹೊಸ ವರ್ಷಕ್ಕೆ ಮತ್ತಷ್ಟು ದುಬಾರಿ ಬರೆ
*ಓಲಾ, ಊಬರ್‌ ಆಟೋ, ಟ್ಯಾಕ್ಸಿ ಪ್ರಯಾಣ ದುಬಾರಿ
*ಸ್ವಿಗ್ಗಿ, ಝೊಮ್ಯಾಟೋ ಫುಡ್‌ ಪಾರ್ಸಲ್‌ ಕೂಡ ತುಟ್ಟಿ
*ಪಾದರಕ್ಷೆ, ಇಲೆಕ್ಟ್ರಾನಿಕ್ಸ್‌, ಆಟೋಮೊಬೈಲ್‌ ಬೆಲೆ ಏರಿಕೆ

ನವದೆಹಲಿ(ಜ. 1):  ಹೊಸ ವರ್ಷದ ಸಂಭ್ರಮದ ಜೊತೆಗೆ (New Year 2022) ಈ ವರ್ಷದ ಆರಂಭದಲ್ಲಿಯೇ ವಿಷಾದದ ಸಂಗತಿಯೂ ಇದೆ. ಕೊರೋನಾ, ಆರ್ಥಿಕ ಹೊಡೆತದ ನಡುವೆ ಕಂಗೆಟ್ಟಿರುವ ಜನಸಾಮಾನ್ಯರಿಗೆ ಈ ವರ್ಷದ ಆರಂಭದ ದಿನವೇ ಮತ್ತೆ ಬೆಲೆ ಏರಿಕೆ ಬಿಸಿ (Price Hike) ತಟ್ಟಲಿದೆ. ದಿನಬಳಕೆ ವಸ್ತುಗಳಿಂದ ಹಿಡಿದು ಆಟೋಮೊಬೈಲ್‌ ವರೆಗೆ ಇಂದಿನಿಂದಲೇ ಬೆಲೆ ಹೆಚ್ಚಳವಾಗಲಿದೆ. ಏನೇನು ಬದಲಾವಣೆ ಆಗಲಿದೆ ಎಂಬ ಕಿರು ಮಾಹಿತಿ ಇಲ್ಲದೆ.

1. ಆಟೋ, ಕಾರು ಸೇವೆ ಜಿಎಸ್‌ಟಿ ವ್ಯಾಪ್ತಿಗೆ

ಜ.1ರಿಂದ ಓಲಾ, ಊಬರ್‌, ರಾರ‍ಯಪಿಡೋದಂಥ ಆ್ಯಪ್‌ಗಳ ಮೂಲಕ ಆಟೋರಿಕ್ಷಾ/ಕಾರು/ಬೈಕ್‌ಗಳನ್ನು ಪ್ರಯಾಣಕ್ಕೆ ಬುಕ್‌ ಮಾಡಿದರೆ ಶೇ.5ರಷ್ಟುಜಿಎಸ್‌ಟಿ ಹೊರೆ ಬೀಳಲಿದೆ. ಆದರೆ ನೇರವಾಗಿ ಮೀಟರ್‌ ಆಧರಿತ ರಿಕ್ಷಾ ಪ್ರಯಾಣಕ್ಕೆ ಜಿಎಸ್‌ಟಿ ಅನ್ವಯ ಆಗುವುದಿಲ್ಲ.

"

2. ಸ್ವಿಗ್ಗಿ, ಝೋಮ್ಯಾಟೋ ದುಬಾರಿ

ವರ್ಷಾರಂಭದಿಂದಲೇ ಇ-ಕಾಮರ್ಸ್‌ ಆಪರೇಟರ್‌ಗಳಾದ ಸ್ವಿಗ್ಗಿ, ಝೊಮ್ಯಾಟೋದಂಥ ತಿಂಡಿ-ತಿನಿಸು ಪೂರೈಕೆ ಸೇವೆಗಳ ಮೇಲೆ ಸಹ ಶೇ.5ರಷ್ಟುಜಿಎಸ್‌ಟಿ ಹಾಕಲಾಗುತ್ತದೆ. ಹೀಗಾಗಿ ಜಿಎಸ್‌ಟಿ ನೆಪದಲ್ಲಿ ಈ ಕಂಪನಿಗಳು ಜನಸಾಮಾನ್ಯರಿಂದ ಮತ್ತಷ್ಟುಶುಲ್ಕ ವಸೂಲಿ ಮಾಡಲಿವೆ.

3. ಪಾದರಕ್ಷೆಗೂ 12% ಜಿಎಸ್‌ಟಿ

ಈವರೆಗೆ ವಿಭಿನ್ನ ಜಿಎಸ್‌ಟಿ ದರಗಳನ್ನು ಹೊಂದಿದ್ದ ಪಾದರಕ್ಷೆಗಳಿಗೆ ಇನ್ನು ಮುಂದೆ ಶೇ.12ರಷ್ಟುಏಕರೂಪದ ಜಿಎಸ್‌ಟಿ ಅನ್ವಯವಾಗಲಿದೆ. ಅದು ಜ.1ರಿಂದಲೇ ಅನುಷ್ಠಾನಗೊಳ್ಳಲಿದೆ.

4. ದಿನಬಳಕೆ ವಸ್ತುಗಳು ಮತ್ತಷ್ಟು ತುಟ್ಟಿ

ಸೋಪ್‌, ಎಣ್ಣೆ, ಟೂತ್‌ಪೇಸ್ಟ್‌, ಹಾಲು, ಹಣ್ಣು, ತರಕಾರಿ, ಕಾಫಿ, ಟೀ, ತಂಪು ಪಾನೀಯ ಮೊದಲಾದ ವಸ್ತುಗಳ ಬೆಲೆ 2020ರ ಡಿಸೆಂಬರ್‌ ಬಳಿಕ ಶೇ.5-12ರಷ್ಟುಏರಿಕೆಯಾಗಿದ್ದು, ಮುಂದಿನ 2-3 ತಿಂಗಳಲ್ಲಿ ಮತ್ತೆ ಶೇ.4-10ರಷ್ಟುಏರಿಕೆಯಾಗಲಿವೆ. ಇನ್ನು ರೆಫ್ರಿಜರೇಟರ್‌, ವಾಷಿಂಗ್‌ ಮಶಿನ್‌, ಎ.ಸಿ ಮುಂತಾದ ಎಲೆಕ್ಟ್ರಾನಿಕ್‌ ವಸ್ತುಗಳ ಬೆಲೆಯೂ ಇಂದಿನಿಂದ ಶೇ.4ರಿಂದ 10ರಷ್ಟುಹೆಚ್ಚಾಗುವ ಸಾಧ್ಯತೆ ಇದೆ.

5. ಎಲೆಕ್ಟ್ರಾನಿಕ್‌ ವಸ್ತುಗಳ ಬೆಲೆ ಶೇ.4-10 ಏರಿಕೆ

ಎಲೆಕ್ಟ್ರಾನಿಕ್‌ ವಸ್ತುಗಳ ಕಂಪನಿಗಳು ಇನ್ನು 2-3 ತಿಂಗಳಲ್ಲಿ ಕನಿಷ್ಠ ಶೇ.4ರಿಂದ ಗರಿಷ್ಠ ಶೇ.10ರವರೆಗೂ ತಮ್ಮ ಉತ್ಪನ್ನಗಳ ದರ ಏರಿಕೆಯಾಗುವ ಸುಳಿವು ನೀಡಿವೆ. ಈ ಕಂಪನಿಗಳು 2020ರ ಡಿಸೆಂಬರ್‌ ಬಳಿಕ ಈಗಾಗಲೇ 3 ಬಾರಿ ನಾನಾ ಸ್ತರದಲ್ಲಿ ದರ ಏರಿಕೆ ಮಾಡಿವೆ.

6.ಆಟೋಮೊಬೈಲ್‌ ದರ ಶೇ.4-5 ಏರಿಕೆ

ಉತ್ಪಾದನಾ ವೆಚ್ಚ ಹೆಚ್ಚಳ ಹಿನ್ನೆಲೆಯಲ್ಲಿ ವಾಹನ ತಯಾರಿಕಾ ಕಂಪನಿಗಳೂ ಸಹ ಬೆಲೆ ಏರಿಕೆ ಮಾಡಲಿವೆ. ವಾಹನಗಳ ಬೆಲೆ ಶೇ.4-5ರಷ್ಟುಹೆಚ್ಚಾಗುವ ಸಾಧ್ಯತೆ ಇದೆ.

7.ಜಿಎಸ್‌ಟಿ ವಂಚನೆ ತಡೆಗೆ ಆಧಾರ್‌ ಕಡ್ಡಾಯ

ಜಿಎಸ್‌ಟಿ ಪಾವತಿಯಲ್ಲಿ ನಡೆಯುತ್ತಿವೆ ಎನ್ನಲಾದ ವಂಚನೆ ತಡೆಗಟ್ಟಲು ಆಧಾರ್‌ ಕಡ್ಡಾಯಗೊಳಿಸಲಾಗಿದೆ. ಕಂಪನಿಗಳು ಜಿಎಸ್‌ಟಿಯನ್ನು ಸರ್ಕಾರಕ್ಕೆ ಪಾವತಿಸಿದ ಬಳಿಕ, ಕಟ್ಟಿದ ಹಣದಲ್ಲಿ ಕೆಲ ಭಾಗವನ್ನು ಪುನಃ ರೀಫಂಡ್‌ ಮಾಡಿಸಿಕೊಳ್ಳಲು ಅವಕಾಶವಿದೆ. ಆದರೆ ಕ್ಲೇಮ್‌ ಮಾಡಿಕೊಳ್ಳಲು ಕೆಲವು ಅಡ್ಡದಾರಿಯನ್ನು ಅವು ಬಳಸುತ್ತಿದ್ದವು ಎಂಬ ಆರೋಪವಿತ್ತು. ಹೀಗಾಗಿ ಇದನ್ನು ತಡೆಯಲು ಇನ್ನು ಜಿಎಸ್‌ಟಿ ರೀಫಂಡ್‌ ಕ್ಲೇಮ್‌ಗೆ ಆಧಾರ್‌ ಕಡ್ಡಾಯವಾಗಲಿದೆ.

8. ಎಟಿಎಂ ವಿತ್‌ಡ್ರಾ ಶುಲ್ಕ ಹೆಚ್ಚಳ

ಉಚಿತ ವಿತ್‌ಡ್ರಾ ಮಿತಿ ಬಳಿಕ ಪ್ರತಿ ಬಾರಿ ಎಟಿಎಂ ಮೂಲಕ ಹಣ ವಿತ್‌ ಡ್ರಾ ಮಾಡಲು ಇನ್ಮುಂದೆ 21 ರು. ಕಡಿತವಾಗಲಿದೆ. ಈ ಮೊದಲು 20 ರು. ಕಡಿತವಾಗುತ್ತಿತ್ತು.

9. ಗೂಗಲ್‌ನಲ್ಲಿ ಸೇವ್‌ ಆಗಿದ್ದ ಮಾಹಿತಿ ಡಿಲೀಟ್‌

ಆನ್‌ಲೈನ್‌ ಮೂಲಕ ಹಣ ಪಾವತಿ ಮಾಡುವಾಗ ಒಮ್ಮೆ ಟೈಪ್‌ ಮಾಡಿದ್ದ ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡಿನ ಮಾಹಿತಿ ಗೂಗಲ್‌ನಲ್ಲಿ ಸೇವ್‌ ಆಗಿರುತ್ತಿತ್ತು. ಸದ್ಯ ಆರ್‌ಬಿಐ ನಿರ್ದೇಶನದ ಹಿನ್ನೆಲೆಯಲ್ಲಿ ಗೂಗಲ್‌ ಇಂಥ ಎಲ್ಲಾ ಸೂಕ್ಷ್ಮ ಮಾಹಿತಿಯನ್ನು ಅಳಿಸಿಹಾಕಲಿದೆ. ಹಾಗಾಗಿ ಇನ್ಮುಂದೆ ಹೊಸದಾಗಿ ಟೈಪ್‌ ಮಾಡಬೇಕು.

click me!