ಕರ್ನಾಟಕದ ಮಾಜಿ ಸಿಎಂ ಎಸ್.ಎಂ ಕೃಷ್ಣ ಅಳಿಯ ಕೆಫೆ ಕಾಫಿ ಡೇ ಮಾರಾಟಕ್ಕೆ ಮುಂದಾಗಿದ್ದಾರೆ.
ಮುಂಬೈ/ನವದೆಹಲಿ[ಜೂ.28] : ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಳಿಯ, ಉದ್ಯಮಿ ವಿ.ಜಿ. ಸಿದ್ಧಾರ್ಥ ಅವರು ತಮ್ಮ ಮಾಲೀಕತ್ವದ ಜನಪ್ರಿಯ ಕಾಫಿ ಶಾಪ್ ‘ಕೆಫೆ ಕಾಫಿ ಡೇ’ ಅನ್ನು ಮಾರಾಟ ಮಾಡಲು ಮುಂದಾಗಿದ್ದಾರೆ.
ಕಂಪನಿಯನ್ನು ಖರೀದಿ ಮಾಡಲು ಬಹುರಾಷ್ಟ್ರೀಯ ಲಘುಪೇಯ ತಯಾರಿಕಾ ಕಂಪನಿ ಕೋಕಾ ಕೋಲಾ ಕಳೆದ ಕೆಲವು ತಿಂಗಳಿನಿಂದ ಮಾತುಕತೆ ನಡೆಸುತ್ತಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಆಂಗ್ಲದೈನಿಕವೊಂದು ವರದಿ ಮಾಡಿದೆ.
ಈಗಾಗಲೇ ಅಮೆರಿಕದಿಂದ ಕೋಕಾ ಕೋಲಾ ಅಧಿಕಾರಿಗಳು ಸಿದ್ಧಾರ್ಥ ಒಡೆತನದ ಕಂಪನಿಗೆ ಭೇಟಿ ನೀಡಿದ್ದಾರೆ. ಮಾತುಕತೆ ನಡೆಯುತ್ತಿದ್ದರೂ, ಈವರೆಗೆ ಯಾವುದೂ ಅಂತಿಮವಾಗಿಲ್ಲ. ಕಂಪನಿಯನ್ನು ಮಾರಾಟ ಮಾಡಿದರೂ, ಅದರಲ್ಲಿ ಒಂದಷ್ಟುಪ್ರಮಾಣದ ಷೇರು ಉಳಿಸಿಕೊಳ್ಳಲು ಸಿದ್ಧಾರ್ಥ ಅವರು ಮುಂದಾಗಿದ್ದಾರೆ. ಇದು ಕೋಕಾ ಕೋಲಾಗೆ ತೊಡಕಾಗಿದೆ ಎನ್ನಲಾಗುತ್ತಿದೆ.
ದೇಶದಲ್ಲಿ 1800 ಕಾಫಿ ಶಾಪ್‌ಗಳನ್ನು ಕಾಫಿ ಡೇ ಹೊಂದಿದೆ. ಸ್ಟಾರ್‌ಬಕ್ಸ್ ಹಾಗೂ ಬರಿಸ್ಟಾಜತೆ ಪೈಪೋಟಿಯಲ್ಲಿದೆ. ಆದರೆ ಚಾಯ್‌ಪಾಯಿಂಟ್ ಹಾಗೂ ಚಾಯೋಸ್‌ನಂತಹ ಕಂಪನಿಗಳಿಂದ ಕಾಫಿ ಡೇಗೆ ಹಿನ್ನಡೆಯಾಗಿದೆ. ಸಾಲವನ್ನು ಕಡಿಮೆ ಮಾಡಿಕೊಳ್ಳಲು ಸಿದ್ಧಾರ್ಥ ಅವರು ಕಂಪನಿಯನ್ನು ಮಾರಲು ಉದ್ದೇಶಿಸಿದ್ದಾರೆ ಎನ್ನಲಾಗಿದೆ. 2018-19ನೇ ಸಾಲಿನಲ್ಲಿ ಈ ಕಂಪನಿ 1468 ಕೋಟಿ ರು. ಆದಾಯ ಹೊಂದಿತ್ತು. 41 ಕೋಟಿ ರು. ಲಾಭ ಗಳಿಸಿತ್ತು.