
ನವದೆಹಲಿ: ಥರ್ಮಲ್ ಪವರ್ ಪ್ಲಾಂಟ್ ಅಥವಾ ಸ್ಟೀಲ್ ಇಂಡಸ್ಟ್ರಿಯಲ್ಲಿ ಅತ್ಯಧಿಕ ಕಲ್ಲಿದ್ದಲು ಬಳಕಯಾಗುತ್ತದೆ. ಈ ಎರಡು ಉದ್ಯಮಗಳಿಂದಲೇ ಕಲ್ಲಿದ್ದಲಿಗೆ ಹೆಚ್ಚು ಬೇಡಿಕೆಯುಂಟಾಗುತ್ತದೆ. ಭಾರತಲ್ಲಿಯೂ ಹೇರಳವಾಗಿ ಕಲ್ಲಿದ್ದಲು ಉತ್ಪಾದನೆ ಮಾಡುತ್ತದೆ. ಪ್ರಪಂಚದಲ್ಲಿ ಅತ್ಯಧಿಕ ಕಲ್ಲಿದ್ದಲು ಉತ್ಪಾದನೆ ಮಾಡುವ ಪ್ರಮುಖ 5 ರಾಷ್ಟ್ರಗಳಲ್ಲಿ ಭಾರತ ಸಹ ಒಂದಾಗಿದೆ. ಈ ಪಟ್ಟಿಯಲ್ಲಿ ಅಮೆರಿಕ, ರಷ್ಯಾ, ಆಸ್ಟ್ರೇಲಿಯಾ ಮತ್ತು ಚೀನಾ ಸೇರಿವೆ. ಆದ್ರೂ ಕೆಲ ಗುಣಮಟ್ಟದ ಕಲ್ಲಿದ್ದಲನ್ನು ಭಾರತ ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಉತ್ತಮ ಗುಣಮಟ್ಟದ ಕೋಕಿಂಗ್ ಕಲ್ಲಿದ್ದಲಿನ ಕೊರತೆಯನ್ನು ಭಾರತ ಎದುರಿಸುತ್ತದೆ. ಬಹುತೇಕ ಸಂದರ್ಭಗಳಲ್ಲಿ ಉತ್ತಮ ಗುಣಮಟ್ಟದ ಕಲ್ಲಿದ್ದಲಿಗೆ ಬೇಡಿಕೆ ಹೆಚ್ಚಾದಾಗ ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಇದಕ್ಕಾಗಿ ಭಾರತ ಪ್ರತಿವರ್ಷ ಸಾವಿರಾರು ಕೋಟಿ ರೂಪಾಯಿ ಹಣವನ್ನ ವೆಚ್ಚ ಮಾಡುತ್ತದೆ.
6.93 ಬಿಲಿಯನ್ ಡಾಲರ್ ಉಳಿತಾಯ
ದೇಶದಲ್ಲಿ ಕಲ್ಲಿದ್ದಲು ಉತ್ಪಾದನೆ ಹೆಚ್ಚಳವಾಗಿರುವ ಮಾಹಿತಿಯನ್ನು ಸರ್ಕಾರ ಮಂಗಳವಾರ ನೀಡಿದೆ. ಏಪ್ರಿಲ್ 2024 ರಿಂದ ಫೆಬ್ರವರಿ 2025ರ ಅವಧಿಯಲ್ಲಿ ಕಲ್ಲಿದ್ದಲು ಆಮದು ಮಾಡಿಕೊಳ್ಳುವ ಪ್ರಮಾಣ ಶೇ.9.2ರಷ್ಟು ಇಳಿಕೆಯಾಗಿ 220.3 ಮಿಲಿಯನ್ ಟನ್ (ಎಂಟಿ) ಇಳಿಕೆಯಾಗಿದೆ ಎಂದು ಭಾರತ ಸರ್ಕಾರ ಮಾಹಿತಿ ನೀಡಿದೆ. ಕಳೆದ ವರ್ಷ 242.6 ಮೆಟ್ರಿಕ್ ಟನ್ ಕಲ್ಲಿದ್ದಲು ಆಮದು ಮಾಡಿಕೊಳ್ಳಲಾಗಿತ್ತು. ಕಳೆದ 11 ತಿಂಗಳಲ್ಲಿ ಕಲ್ಲಿದ್ದಲು ಆಮದು ಮಾಡಿಕೊಳ್ಳುವ ಪ್ರಮಾಣ ಇಳಿಕೆಯಾಗಿದ್ದರಿಂದ ವಿದೇಶಿ ವಿನಿಮಯ ನಿಧಿಯಲ್ಲಿ 6.93 ಬಿಲಿಯನ್ ಡಾಲರ್ (53,137.82 ಕೋಟಿ ರೂಪಾಯಿ) ಉಳಿತಾಯವಾಗಿದೆ ಎಂದು ಕಲ್ಲಿದ್ದಲು ಸಚಿವಾಲಯ ಮಾಹಿತಿ ನೀಡಿದೆ.
ಎಷ್ಟು ಏರಿಕೆ? ಇಳಿಕೆ?
ವಿದ್ಯುತ್ ಕ್ಷೇತ್ರವನ್ನು ಹೊರತುಪಡಿಸಿ ಉಳಿದ ಎಲ್ಲಾ ಅನಿಯಮಿತ ಕ್ಷೇತ್ರಗಳಲ್ಲಿ ಕಲ್ಲಿದ್ದಲು ಬಳಕೆಯ ಪ್ರಮಾಣ ಕಡಿಮೆಯಾಗಿರೋದು ಗಮನಾರ್ಹ ವಿಷಯವಾಗಿದೆ. ಈ ಅನಿಯಮಿತ ಕ್ಷೇತ್ರಗಳಲ್ಲಿ ಕಲ್ಲಿದ್ದಲು ಆಮದು ಶೇ.15.3ರಷ್ಟು ಇಳಿಕೆಯಾಗಿದೆ. ವಿದ್ಯುತ್ ಉತ್ಪಾದನೆಯಲ್ಲಿ ಬಳಕೆಯಾಗುವ ಕಲ್ಲಿದ್ದಲು ಪ್ರಮಾಣ ಏಪ್ರಿಲ್-2024 ರಿಂದ ಫೆಬ್ರವರಿ-2025ರ ನಡುವೆ ಶೇ.2.87ರಷ್ಟು ಏರಿಕೆಯಾಗಿದೆ. ಇನ್ನು ಉಷ್ಣ ವಿದ್ಯುತ್ ಸ್ಥಾವರಗಳಿಂದ ಮಿಶ್ರಣ ಮಾಡಲು ಕಲ್ಲಿದ್ದಲು ಆಮದು ಶೇ. 38.8 ರಷ್ಟು ಕಡಿಮೆಯಾಗಿದೆ.
ಕಲ್ಲಿದ್ದಲು ಉತ್ಪಾದನೆಯಲ್ಲಿ ಭಾರತ ಆತ್ಮನಿರ್ಭರ
ಭಾರತ ಕಲ್ಲಿದ್ದಲು ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನಿರಂತರವಾಗಿ ಪ್ರಯತ್ನ ಮಾಡುತ್ತಿದೆ. ಕಳೆದ ಕೆಲವು ವರ್ಷಗಳಿಂದ ಕಲ್ಲಿದ್ದಲು ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಲು ಪ್ರಯತ್ನಿಸುತ್ತಿದೆ. ಇದಕ್ಕಾಗಿ ಸರ್ಕಾರವು ವಾಣಿಜ್ಯ ಕಲ್ಲಿದ್ದಲು ಗಣಿಗಾರಿಕೆ ಮತ್ತು ಮಿಷನ್ ಕೋಕಿಂಗ್ ಕಲ್ಲಿದ್ದಲಿನಂತಹ ಹಲವು ಉಪಕ್ರಮಗಳನ್ನು ಪ್ರಾರಂಭಿಸಿದೆ.
ಸರ್ಕಾರದ ನಿರಂತರ ಪ್ರಯತ್ನದಿಂದಾಗಿ ಏಪ್ರಿಲ್ 2024 ಮತ್ತು ಫೆಬ್ರವರಿ 2025 ರ ನಡುವೆ ಕಲ್ಲಿದ್ದಲು ಉತ್ಪಾದನೆಯು 5.45 ರಷ್ಟು ಹೆಚ್ಚಾಗಿದೆ. ಭಾರತದ ಕಲ್ಲಿದ್ದಲು ವಲಯವು ಅದರ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯನ್ನು ಬೆಂಬಲಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ದೇಶದ ಆಮದು ಕಡಿಮೆಯಾದ್ರೆ ಭಾರತದ ವಿದೇಶಿ ವಿನಿಮಯ ನಿಧಿಯ ಪ್ರಮಾಣ ಏರಿಕೆಯಾಗುತ್ತದೆ. ಹಾಗಾಗಿ ಖನಿಜೋತ್ಪಾದನಾ ಕಾರ್ಯವನ್ನು ಸಹ ಆರಂಭಿಸಿದೆ. ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ನಿಕ್ಷೇಪ ಸಂಶೋಧನೆಯ ಕಾರ್ಯ ನಡೆಯುತ್ತಿದೆ.
ಕಲ್ಲಿದ್ದಲು ವಿದ್ಯುತ್, ಉಕ್ಕು ಮತ್ತು ಸಿಮೆಂಟ್‌ನಂತಹ ಹಲವಾರು ಪ್ರಮುಖ ವಲಯಗಳಿಗೆ ಶಕ್ತಿಯ ಪ್ರಾಥಮಿಕ ಮೂಲವಾಗಿ ಕಾರ್ಯನಿರ್ವಹಿಸುತ್ತದೆ. ಭಾರತದ ಒಂದೊಂದೇ ಖನಿಜಗಳ ಉತ್ಪಾದನೆಯನ್ನು ಸ್ವಾವಲಂಬಿಯಾಗುವತ್ತ ದಿಟ್ಟ ಹೆಜ್ಜೆಯನ್ನು ಇರಿಸುತ್ತಿರೋದು ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಬೆಳವಣಿಗೆಯಾಗಿದೆ.
ಇದನ್ನೂ ಓದಿ: ಅಮೆರಿಕಾ/ಚೀನಾ/ಜಪಾನ್‌ಗೆ ಅಲ್ಲ, ಈ ದೇಶಕ್ಕೆ ಸಿಕ್ತು ಅತಿದೊಡ್ಡ ಜಾಕ್‌ಪಾಟ್: ಇದರ ಮೌಲ್ಯ ಕೇಳಿ ಜಗತ್ತು ಹೈರಾಣು!
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.