ಪಿಎಂ ಸ್ವನಿಧಿ ಸಾಲಕ್ಕೆ ಸಿಬಿಲ್‌ ಸ್ಕೋರ್‌ ವಿನಾಯಿತಿ: ಜಗದೀಶ್‌ ಶೆಟ್ಟರ್‌

By Kannadaprabha News  |  First Published Jul 20, 2022, 9:34 PM IST

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ‘ಸ್ವಾತಂತ್ರ್ಯ ಅಮೃತ ಮಹೋತ್ಸವ’ ನಿಮಿತ್ತ ಬೀದಿಬದಿ ವ್ಯಾಪಾರಸ್ಥರ ಸಂಭ್ರಮಾಚರಣೆ 


ಹುಬ್ಬಳ್ಳಿ(ಜು.20):  ‘ಪಿಎಂ ಸ್ವನಿಧಿ ಸಾಲ’ ಸೌಲಭ್ಯಕ್ಕಿದ್ದ ಸಿಬಿಲ್‌ ಸ್ಕೋರ್‌ ಮಿತಿಗೆ ವಿನಾಯಿತಿ ನೀಡಲಾಗಿದ್ದು, ಈ ಯೋಜನೆಯ ಪ್ರಯೋಜನ ಪಡೆದು ಬೀದಿ ಬದಿ ವ್ಯಾಪಾರಸ್ಥರು ಆರ್ಥಿಕವಾಗಿ ಸಬಲರಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಹೇಳಿದರು. ಇಲ್ಲಿನ ಗೋಕುಲ ರಸ್ತೆಯ ಖಾಸಗಿ ಹೊಟೇಲ್‌ನಲ್ಲಿ ಮಂಗಳವಾರ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ‘ಸ್ವಾತಂತ್ರ್ಯ ಅಮೃತ ಮಹೋತ್ಸವ’ ನಿಮಿತ್ತ ಬೀದಿಬದಿ ವ್ಯಾಪಾರಸ್ಥರ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಂದ ಬಳಿಕ ಸಮಾಜದ ಕೆಳಸ್ತರದಲ್ಲಿ ಇರುವವರಿಗೆ ನೆರವಾಗಲು ಹಲವಾರು ಯೋಜನೆ ತರಲಾಯಿತು. ಅದರಲ್ಲಿ ಬೀದಿಬದಿ ವ್ಯಾಪಾರಸ್ಥರಿಗಾಗಿ ತಂದ ಪಿಎಂ ಸ್ವನಿಧಿ ಯೋಜನೆ ಕೂಡ ಪ್ರಮುಖ. ವ್ಯಾಪಾರಸ್ಥರು ಹೆಚ್ಚು ಸ್ವಾವಲಂಬಿಯಾಗಲು ಇದರ ಕೊಡುಗೆ ಸಾಕಷ್ಟಿದೆ. ಸಿಬಿಲ್‌ ಸ್ಕೋರ್‌ ಮಿತಿ ತೆಗೆದು ಸಾಲ ನೀಡಲಾಗುತ್ತಿದ್ದು, 50 ಸಾವಿರ ವರೆಗೂ ಪಡೆಯಬಹುದು. ಖಾಸಗಿ ವ್ಯಕ್ತಿಗಳ ಬಳಿ ಅತೀಹೆಚ್ಚಿನ ಬಡ್ಡಿ ಸಾಲ ತೆಗೆದುಕೊಂಡು ದೌರ್ಜನ್ಯಕ್ಕೆ ಒಳಗಾಗಬೇಡಿ. ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಈ ವ್ಯವಸ್ಥೆಯನ್ನು ಬಳಸಿಕೊಳ್ಳಿ ಎಂದರು.

Tap to resize

Latest Videos

ಬಿಲ್‌ ಗೇಟ್ಸ್‌ ಅನ್ನೇ ಮೀರಿಸಿದ ಉದ್ಯಮಿ ಗೌತಮ್‌ ಅದಾನಿ ಆಸ್ತಿ ಎಷ್ಟು ಗೊತ್ತಾ..?

ಹಿಂದೆ ವ್ಯಾಪಾರಿಗಳ ಮೇಲೆ ಸಾಕಷ್ಟುದೌರ್ಜನ್ಯ ಆಗುತ್ತಿತ್ತು. ಮಹಿಳಾ ವ್ಯಾಪಾರಿಗಳು ತೊಂದರೆಗೆ ಒಳಗಾಗುತ್ತಿದ್ದರು. ವ್ಯಾಪಾರಿ ಸಾಮಗ್ರಿಯನ್ನು ಜಪ್ತು ಮಾಡಲಾಗುತ್ತಿತ್ತು. ಆದರೆ ಈಗ ಆ ಪರಿಸ್ಥಿತಿ ಇಲ್ಲ. ಮಹಾನಗರ ವ್ಯಾಪ್ತಿಯಲ್ಲಿ 45 ವ್ಯಾಪಾರಿ ವಲಯ ಗುರುತಿಸಲಾಗಿದೆ. ಅಂತಹ ಸ್ಥಳದಲ್ಲಿ ವ್ಯಾಪಾರ ಮಾಡಿ. ನಗರದಲ್ಲಿ ಶಿಸ್ತು ಕಾಪಾಡಿಕೊಳ್ಳಲು ಸಹಕಾರ ನೀಡಿ ಎಂದು ಇದೇ ವೇಳೆ ಮನವಿ ಮಾಡಿದರು.

ಮೇಯರ್‌ ಈರೇಶ ಅಂಚಟಗೇರಿ ಮಾತನಾಡಿ, ಕೋವಿಡ್‌ ಸಂದರ್ಭದಲ್ಲಿ ಪಿಎಂ ಸ್ವ ನಿಧಿ ಸಾಲ ಸೌಲಭ್ಯ ಸಾಕಷ್ಟುನೆರವಿಗೆ ಬಂದಿದೆ. ಈ ಯೋಜನೆಯಿಂದಾಗಿ ಬಡ ವ್ಯಾಪಾರಿಗಳು ಸಂಕಷ್ಟದಿಂದ ಪಾರಾಗಲು ಸಾಧ್ಯವಾಯಿತು ಎಂದರು
ಪಾಲಿಕೆ ಆಯುಕ್ತ ಡಾ. ಬಿ. ಗೋಪಾಲಕೃಷ್ಣ ಮಾತನಾಡಿ, ಪಿಎಂ ಸ್ವ ನಿಧಿ ಅಡಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 10896 ಅರ್ಜಿ ಪಡೆದು 7193 ಜನರಿಗೆ ಸಾಲ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ಅಣ್ಣಯ್ಯ ಆರ್‌. ಮಾತನಾಡಿ, 6 ಸಾವಿರಕ್ಕೂ ಹೆಚ್ಚು ವ್ಯಾಪಾರಸ್ಥರಿಗೆ ಸಾಲ ಮಂಜೂರಾತಿ ಪತ್ರ ನೀಡಲಾಗಿದೆ. ಈ ಯೋಜನೆಯಡಿ ಶೇ. 90ರಷ್ಟುಸಾಲ ವಿತರಿಸಲಾಗಿದೆ. ನಿಗದಿತ ವೇಳೆಯಲ್ಲಿ ಸಾಲ ಮರುಪಾವತಿ ಮಾಡಿದರೆ . 20ರಿಂದ . 50 ಸಾವಿರ ವರೆಗೆ ಸಾಲ ಸೌಲಭ್ಯ ಪಡೆದುಕೊಳ್ಳಬಹುದು ಎಂದು ತಿಳಿಸಿದರು.

ಯಾರಿಂದ ಹೆಚ್ಚಾಯ್ತು ಭಾರತದ ಸಾಲ..? ಮೋದಿ ಸರ್ಕಾರ ಮಾಡಿದ್ದೆಷ್ಟು, ಮನಮೋಹನ್ ಸಿಂಗ್ ಮಾಡಿದ ಸಾಲವೆಷ್ಟು?

ಪಾಲಿಕೆಯ ಸಭಾನಾಯಕ ತಿಪ್ಪಣ್ಣ ಮಜ್ಜಗಿ ಮಾತನಾಡಿದರು. ಬೀದಿಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಪ್ರೇಮನಾಥ ಚಿಕ್ಕತುಂಬಳ ಅನಿಸಿಕೆ ಹಂಚಿಕೊಂಡು ಕೇಂದ್ರ ಸರ್ಕಾರಕ್ಕೆ ಅಭಿನಂದಿಸಿದರು. ಇದೇ ವೇಳೆ ರಂಗೋಲಿ, ಆಹಾರ ಪದಾರ್ಥ, ಹಾಡಿನ ಸ್ಪರ್ಧೆ ವಿಜೇತರನ್ನು ಸನ್ಮಾನಿಸಲಾಯಿತು. ಪಿಎಂ ಸ್ವನಿಧಿ ಯೋಜನೆಯಡಿಯಲ್ಲಿ ಸಾಲ ಪಡೆದು ಸಕಾಲಕ್ಕೆ ಪಾವತಿಸಿದ ಹಾಗೂ ಅತೀ ಹೆಚ್ಚು ಡಿಜಿಟಲ್‌ ವಹಿವಾಟು ಮಾಡಿರುವ ಬೀದಿಬದಿ ವ್ಯಾಪಾರಸ್ಥರನ್ನು ಸನ್ಮಾನಿಸಲಾಯಿತು. ಬೀದಿ ಆಹಾರ ಉತ್ಸವ, ಸ್ವ-ಸ್ವಹಾಯ ಸಂಘಗಳು ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳವು ನಡೆಯಿತು.

ಈ ವೇಳೆ ಹುಡಾ ಅಧ್ಯಕ್ಷ ನಾಗೇಶ ಕಲ್ಬುರ್ಗಿ, ಉಪ ಮೇಯರ್‌ ಉಮಾ ಮುಕುಂದ, ಪಾಲಿಕೆ ವಿಪಕ್ಷ ನಾಯಕ ದೊರೈರಾಜ ಮಣಿಕುಂಟ್ಲ, ಪಾಲಿಕೆ ಸದಸ್ಯರಾದ ರೂಪಾ ಶೆಟ್ಟಿ, ಶಿವು ಮೆಣಸಿನಕಾಯಿ, ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆಯ ಅಕ್ಕಮಹಾದೇವಿ ಶೆಟ್ಟರ್‌, ಕುಮಾರ ಇದ್ದರು. ಮೌನೇಶ ಬಡಿಗೇರ ತಂಡ ನಾಡಗೀತೆ ಪ್ರಸ್ತುತ ಪಡಿಸಿತು. ಪಾಲಿಕೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಸ್‌.ಸಿ. ಬೇವೂರ ಸ್ವಾಗತಿಸಿದರು.
 

click me!