ಬಿಲ್ ಗೇಟ್ಸ್ ಹಿಂದಿಕ್ಕಿದ ಗೌತಮ್ ಅದಾನಿ, ಈಗ ವಿಶ್ವದ ನಾಲ್ಕನೇ ಸಿರಿವಂತ ವ್ಯಕ್ತಿ

By Suvarna NewsFirst Published Jul 20, 2022, 5:53 PM IST
Highlights

*ಫೋರ್ಬ್ಸ್ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಐದರಿಂದ ನಾಲ್ಕನೇ ಸ್ಥಾನಕ್ಕೆ ಜಿಗಿದ ಅದಾನಿ
*ಬಿಲ್ ಗೇಟ್ಸ್ ಎನ್ ಜಿಒಗೆ 20 ಬಿಲಿಯನ್ ಡಾಲರ್ ದಾನ ಮಾಡೋದಾಗಿ ಘೋಷಿಸಿದ ಬಳಿಕ ಈ ಬೆಳವಣಿಗೆ
*ಪ್ರಸ್ತುತ ಬಿಲ್ ಗೇಟ್ಸ್ ಸಂಪತ್ತಿಗಿಂತ ಸುಮಾರು 11 ಬಿಲಿಯನ್ ಡಾಲರ್ ಹೆಚ್ಚಿನ ಸಂಪತ್ತು ಹೊಂದಿರುವ ಅದಾನಿ

ನವದೆಹಲಿ (ಜು.20): ಭಾರತದ ನಂ.1 ಶ್ರೀಮಂತ ಗೌತಮ್ ಅದಾನಿ ಈಗ ವಿಶ್ವದ ನಾಲ್ಕನೇ ಅತ್ಯಂತ ಸಿರಿವಂತ ವ್ಯಕ್ತಿ. ಫೋರ್ಬ್ಸ್ ವಿಶ್ವದ ಶ್ರೀಮಂತರ ಪಟ್ಟಿ ಪ್ರಕಾರ ಐದನೇ ಸ್ಥಾನದಲ್ಲಿದ್ದ ಅದಾನಿ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೇರಿದ್ದಾರೆ.  ಬಿಲ್ ಗೇಟ್ಸ್ ತನ್ನ ಸಂಪತ್ತಿನಲ್ಲಿ  20 ಬಿಲಿಯನ್ ಡಾಲರ್ ಅನ್ನು ತನ್ನದೇ ಎನ್ ಜಿಒ ಬಿಲ್ ಹಾಗೂ ಮಿಲಿಂದಾ ಗೇಟ್ಸ್ ಫೌಂಡೇಷನ್ ಗೆ ದಾನ ಮಾಡೋದಾಗಿ ಕಳೆದ ವಾರ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಗೌತಮ್ ಅದಾನಿ ಸ್ಥಾನ ಒಂದಂಕೆ ಮೇಲೇರಿದೆ. ಫೋರ್ಬ್ಸ್ ಪ್ರಕಾರ 115 ಬಿಲಿಯನ್ ಡಾಲರ್ ಸಂಪತ್ತು ಹೊಂದಿರುವ ಅದಾನಿ ಹಾಗೂ ಕುಟುಂಬ ಗೇಟ್ಸ್  ಅವರನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನವನ್ನು ಅಲಂಕರಿಸಿದೆ. ಭಾರತದ ಉದ್ಯಮ ದಿಗ್ಗಜ ಅದಾನಿ ಗ್ರೂಪ್ ಚೇರ್ಮನ್ ಗೌತಮ್ ಅದಾನಿ ಈ ವರ್ಷದ ಪ್ರಾರಂಭದಲ್ಲಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದು ಮಾತ್ರವಲ್ಲ, ವಿಶ್ವದ  ಐದನೇ ಸಿರಿವಂತ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು ಕೂಡ. ಫೋರ್ಬ್ಸ್ ನೀಡಿರುವ ಮಾಹಿತಿ ಅನ್ವಯ ಅದಾನಿ ಕುಟುಂಬ115.6 ಬಿಲಿಯನ್ ಡಾಲರ್ ಆಸ್ತಿ ಹೊಂದಿದ್ದು, ಇದು ಬಿಲ್ ಗೇಟ್ಸ್ ಸಂಪತ್ತಿಗಿಂತ ಸುಮಾರು 11 ಬಿಲಿಯನ್ ಡಾಲರ್ ಹೆಚ್ಚಿದೆ. ಬಿಲ್ ಗೇಟ್ಸ್ 104.2 ಬಿಲಿಯನ್ ಡಾಲರ್ ನಿವ್ವಳ ಆಸ್ತಿ ಹೊಂದಿದ್ದಾರೆ.

ಏಪ್ರಿಲ್ ನಲ್ಲಿ ಅದಾನಿ ಸುಮಾರು 123 ಬಿಲಿಯನ್ ಡಾಲರ್ ಆಸ್ತಿಯೊಂದಿಗೆ ವಿಶ್ವದ ಐದನೇ ಶ್ರೀಮಂತ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದರು. ಆ ಸಮಯದಲ್ಲಿ ಮೈಕ್ರೋಸಾಫ್ಟ್ (Microsoft) ಸಂಸ್ಥಾಪಕ ಬಿಲ್ ಗೇಟ್ಸ್ ಗಿಂತ ( Bill Gates) ಸುಮಾರು 7 ಬಿಲಿಯನ್ ಡಾಲರ್ ಕಡಿಮೆ ಸಂಪತ್ತು ಹೊಂದಿದ್ದರು. ಆಗ 130.2 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ ಗೇಟ್ಸ್ ಜಗತ್ತಿನ ನಾಲ್ಕನೇ ಶ್ರೀಮಂತ ವ್ಯಕ್ತಿಯಾಗಿದ್ದರು. 

ದುಡ್ಡೇ ದೊಡ್ಡಪ್ಪ..! ಒಂದೂವರೆ ಲಕ್ಷಕ್ಕೆ Instagram ಖಾತೆಗೆ ಬ್ಲ್ಯೂಟಿಕ್‌, 10 ಸಾವಿರ ರೂಪಾಯಿಗೆ 10 ಲಕ್ಷ ವೀವ್ಸ್‌!

ಬಂದರುಗಳು (ports), ಗಣಿಗಳು (mines) ಹಾಗೂ ಹಸಿರು ಇಂಧನ (green energy) ಕ್ಷೇತ್ರಗಳಲ್ಲಿ ತನ್ನ ಸಾಮ್ರಾಜ್ಯ ಸ್ಥಾಪಿಸಿರುವ ಅದಾನಿ (Adani), ಈಗ ವಿಶ್ವದ  ನಂ.1 ಶ್ರೀಮಂತನಾಗಲು ಕೇವಲ ಮೂರು ಉದ್ಯಮ ದಿಗ್ಗಜರಿಗಿಂತ ಹಿಂದಿದ್ದಾರೆ. 154.9  ಬಿಲಿಯನ್ ಡಾಲರ್ ಆಸ್ತಿ ಹೊಂದಿರುವ ಬರ್ನಾಡ್ ಅರ್ನೌಲ್ಟ್ (Bernard Arnault) , 143.9 ಬಿಲಿಯನ್ ಡಾಲರ್ ಸಂಪತ್ತು ಹೊಂದಿರುವ ಅಮೆಜಾನ್ ಮುಖ್ಯಸ್ಥ ಜೆಫ್ ಬೆಝೊಸ್ (Jeff Bezos), 234.4 ಬಿಲಿಯನ್ ಡಾಲರ್ ಸಂಪತ್ತು ಹೊಂದಿರುವ ಟೆಸ್ಲಾ ಸಿಇಒ ಎಲನ್ ಮಸ್ಕ್ ( Elon Musk) ಪ್ರಸ್ತುತ ಅದಾನಿಗಿಂತ ಮುಂದಿದ್ದಾರೆ. 
ಭಾರತದ ಈ ನಂ.1 ಸಿರಿವಂತನ ಆಸ್ತಿಯಲ್ಲಿ 2021ರ ಆರಂಭದಿಂದ ಈ ತನಕ ದುಪ್ಪಟ್ಟು ಹೆಚ್ಚಳವಾಗಿದೆ ಎಂದು ಫೋರ್ಬ್ಸ್ (Forbes) ನೀಡಿರುವ ಮಾಹಿತಿಯಲ್ಲಿ ತಿಳಿಸಲಾಗಿದೆ. ಅದಾನಿ 2008ರಲ್ಲಿ ಮೊದಲ ಬಾರಿಗೆ ಫೋರ್ಬ್ಸ್ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಆ ಸಮಯದಲ್ಲಿ ಅವರ ನಿವ್ವಳ ಸಂಪತ್ತು 9.3 ಬಿಲಿಯನ್ ಡಾಲರ್ ಇತ್ತು.

ಸಾವಿತ್ರಿ ಜಿಂದಾಲ್ ಭಾರತದ ಶ್ರೀಮಂತ ಮಹಿಳೆ; ಕೇವಲ ಎರಡೇ ವರ್ಷಗಳಲ್ಲಿ ಇವರ ಸಂಪತ್ತು ಮೂರು ಪಟ್ಟು ಹೆಚ್ಚಳ

ಈ ವರ್ಷದ ಜೂನ್ ಪ್ರಾರಂಭದಲ್ಲಿ ತನ್ನ 60ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಚಾರಿಟಿಗೆ  60,000 ಕೋಟಿ ರೂ. ದಾನ ಮಾಡುವ ಪ್ರತಿಜ್ಞೆಯನ್ನು ಅದಾನಿ ಮಾಡಿದ್ದರು. ಈ ದಾನದ ಹಣವನ್ನು ಆರೋಗ್ಯಸೇವೆ, ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿಗೆ ಬಳಸಿಕೊಳ್ಳಲಾಗುತ್ತದೆ ಎಂದು ತಿಳಿಸಿದ್ದರು. ಇದು ಭಾರತದ ಕಾರ್ಪೋರೇಟ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮೊತ್ತದ ಚಾರಿಟೇಬಲ್ ದಾನವಾಗಿದೆ. ಅಲ್ಲದೆ, ಈ ಮೂಲಕ ಅವರು ಬೃಹತ್ ಮೊತ್ತದ ದಾನ ಮಾಡಿದ ಮಾರ್ಕ್ ಜುಕರ್ ಬರ್ಗ್ ಹಾಗೂ ವಾರೆನ್ ಬಫೆಟ್ ಸೇರಿದಂತೆ ಜಾಗತಿಕ ಬಿಲಿಯನೇರ್ ಗಳ ಪಟ್ಟಿಗೆ ಸೇರ್ಪಡೆಗೊಂಡಿದ್ದರು.

click me!