
ನವದೆಹಲಿ: ಭಾರತಕ್ಕೆ ಚೀನಾ ರೇಯರ್ ಅರ್ಥ್ ಮ್ಯಾಗ್ನೆಟೈಸ್ ಅಪರೂಪದ ಖನಿಜ ರಫ್ತು ಮಾಡೋದನ್ನು ನಿಲ್ಲಿಸಿದೆ. ಚೀನಾದ ಈ ನಿರ್ಧಾರ ಭಾರತದ ಆಟೋಮೊಬೈಲ್ ಕ್ಷೇತ್ರದ ಮೇಲೆ ನೇರ ಪರಿಣಾಮ ಬೀರಿದೆ. ಈ ನಡುವೆ ಭಾರತ ಸರ್ಕಾರ ಸಹ ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಹಜ್ಜೆಯನ್ನು ಇರಿಸುತ್ತಿದೆ. ರಾಯಿಟರ್ಸ್ ವರದಿ ಪ್ರಕಾರ, ಸರ್ಕಾರಿ ಕಂಪನಿಯಾಗಿರುವ ಇಂಡಿಯನ್ ರೇಯರ್ ಅರ್ಥ್ ಲಿಮಿಟೆಡ್ (IREL) ಜಪಾನ್‌ಗೆ ರೇಯರ್ ಅರ್ಥ್ ಮ್ಯಾಗ್ನೆಟೈಸ್ ರಫ್ತು ಮಾಡುವುದನ್ನು ನಿಲ್ಲಿಸುವಂತೆ ಹೇಳಿದೆ. ಮೂಲಗಳ ಪ್ರಕಾರ, ಕಳೆದ 13 ವರ್ಷದ ಹಳೆಯ ಒಪ್ಪಂದದ ಆಧಾರದ ಮೇಲೆ ಜಪಾನ್‌ಗೆ ಅಪರೂಪದ ಖನಿಜವನ್ನು ರಫ್ತು ಮಾಡಲಾಗುತ್ತಿತ್ತು.
IREL ಇದೀಗ ಭಾರತದಲ್ಲಿಯೇ ಅಪರೂಪದ ಖನಿಜಗಳ ಎಲಿಮೆಂಟ್ಸ್ ಪ್ರೊಸೆಸ್ ಮಾಡುವ ಕಾರ್ಯಕ್ಷಮತೆ ಹೆಚ್ಚಿಸುವ ಗುರಿಯನ್ನು ಹೊಂದಿದೆ. ಆದ್ರೆ ಈ ವಿಷಯದಲ್ಲಿ ಭಾರತಕ್ಕಿಂತ ಚೀನಾ ದೇಶ ಮುಂದಿದೆ. ಚೀನಾದಲ್ಲಿ ಅಪರೂಪ ಖನಿಜ ಉತ್ಪಾದನೆ ಪ್ರಮಾಣ 2014ರಿಂದ ಮೂರುಪಟ್ಟು ಹೆಚ್ಚಳವಾಗಿದೆ. 2024ರಲ್ಲಿ ಚೀನಾ 2,70,000 ಮೆಟ್ರಿಕ್ ಟನ್ ರೇಯರ್ ಅರ್ಥ್ ಮ್ಯಾಗ್ನೆಟೈಸ್ ಉತ್ಪಾದಿಸಿದ್ದು, ಇದು ಗ್ಲೋಬಲ್ ಪ್ರೊಡೆಕ್ಷನ್‌ನಲ್ಲಿ ಶೇ.69ರಷ್ಟಾಗಿದೆ. ಜಗತ್ತಿನ ಒಟ್ಟು ರಿಫೈನಿಂಗ್ ಕ್ಯಾಪೆಸಿಟಿ ಶೇ.90ರಷ್ಟು ಪ್ರಮಾಣ ಚೀನಾ ಬಳಿಯಲ್ಲಿದೆ. ಈ ವರ್ಷ ಏಪ್ರಿಲ್-2024ರಿಂದೇ ರೇಯರ್ ಅರ್ಥ್ ಮ್ಯಾಗ್ನೆಟೈಸ್ ರಫ್ತು ಮಾಡುವುದನ್ನು ಚೀನಾ ನಿಷೇಧಿಸಿದೆ.
ಅಧಿಕಾರಿಗಳೊಂದಿಗೆ ಗೋಯಲ್ ಸಭೆ
ವರದಿಗಳ ಪ್ರಕಾರ ವಾಣಿಜ್ಯ ಮಂತ್ರಿ ಪಿಯೂಷ್ ಗೋಯುಲ್ ಅವರು ಆಟೋ ಮತ್ತು ಇತರೆ ಇಂಡಸ್ಟ್ರೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ IREL ಮಾಡುತ್ತಿರುವ ರಫ್ತನ್ನು ನಿಲ್ಲಿಸುವಂತೆ ನಿರ್ದೇಶನ ನೀಡಲಾಗಿದೆ. ಈ ರಫ್ತಿನಲ್ಲಿ ನಿಯೋಡಿಮಿಯಮ್ ಹೆಸರಿನ ಅಂಶವೂ ಸಹ ಸೇರಿದೆ. ಇದನ್ನು ಇಲೆಕ್ಟ್ರಾನಿಕ್ ವಾಹನಗಳ ಮೋಟಾರನ ಅಯಸ್ಕಾಂತದಲ್ಲಿ ಬಳಕೆ ಮಾಡಲಾಗುತ್ತದೆ. ಈ ಸಂಬಂಧ ವಾಣಿಜ್ಯ ಸಚಿವಾಲಯ IREL ಮತ್ತು ಪರಮಾಣು ಇಂಧನ ಇಲಾಖೆಯಿಂದ ಮಾಹಿತಿ ಕೇಳಿದೆ. ಪರಮಾಣು ಇಂಧನ ಇಲಾಖೆಯೇ IRELನ್ನು ನಿರ್ವಹಣೆ ಮಾಡುತ್ತದೆ.
2012ರಲ್ಲಿ ಭಾರತ-ಜಪಾನ್ ಒಪ್ಪಂದ
ಜಪಾನ್‌ನ ಟೊಯೊಟಾ ತ್ಸುಶೋದ ಒಂದು ಘಟಕಕ್ಕೆ IRELನಿಂದ ರೇಯರ್ ಅರ್ಥ್ ಮ್ಯಾಗ್ನೆಟೈಸ್ ರಫ್ತು ಮಾಡಲಾಗುವುದು ಎಂದು 2012ರಲ್ಲಿ ಸರ್ಕಾರ ಒಪ್ಪಂದ ಮಾಡಿಕೊಂಡಿತ್ತು. ಕಸ್ಟಮ್ ವಿಭಾಗದ ಅಂಕಿ ಅಂಶಗಳ ಪ್ರಕಾರ, 2024ರಲ್ಲಿ 1000 ಟನ್ ಅಪರೂಪದ ಖನಿಜವನ್ನು ಜಪಾನ್‌ಗೆ ರಫ್ತು ಮಾಡಲಾಗಿದೆ. IREL ಒಟ್ಟು 2,900 ಟನ್ ಅಪರೂಪದ ಖನಿಜ ಉತ್ಪಾದಿಸಿದ್ದು, ಇದರಲ್ಲಿನ ಸಿಂಹಪಾಲು ಜಪಾನ್‌ಗೆ ಕಳುಹಿಸಲಾಗಿದೆ. ಆದರೆ ಜಪಾನ್ ತನ್ನ ಅಗತ್ಯತೆಯನ್ನು ಪೂರೈಸಿಕೊಳ್ಳಲು ಚೀನಾದಿಂದಲೇ ಈ ಖನಿಜವನ್ನು ಆಮದು ಮಾಡಿಕೊಳ್ಳುತ್ತದೆ.
ವರದಿಗಳ ಪ್ರಕಾರ, ಈ ಅಪರೂಪದ ಖನಿಜದ ಸಂಸ್ಕರಣಾ ಸಾಮರ್ಥ್ಯವನ್ನು ಭಾರತ ಹೊಂದಿರದ ಕಾರಣ ಜಪಾನ್ ರಫ್ತು ಮಾಡುತ್ತಿತ್ತು. ಚೀನಾ ಪೂರೈಕೆ ನಿಷೇಧಿಸಿದ್ದರಿಂದ ಭಾರತ ಈ ಅಪರೂಪದ ಖನಿಜವನ್ನು ತನ್ನಲ್ಲಿಯೇ ಉಳಿಸಿಕೊಳ್ಳಲು ಮುಂದಾಗಿದೆ. ಭಾರತದಲ್ಲಿ ಗಣಿಗಾರಿಕೆ ಮತ್ತು ಸಂಸ್ಕರಣೆಯನ್ನು ಹೆಚ್ಚಿಸಲು ಬಯಸುತ್ತಿದ್ದು, ಐಆರ್‌ಇಎಲ್ ನಾಲ್ಕು ಗಣಿಗಳಿಗೆ ಸರ್ಕಾರದ ಅನುಮೋದನೆಗಾಗಿ ಕಾಯುತ್ತಿದೆ. ಚೀನಾದ ಈ ನಿರ್ಧಾರದಿಂದ ಭಾರತ ಮತ್ತು ಜಪಾನ್ ನಡುವಿನ 13 ವರ್ಷದ ವ್ಯವಹಾರಿಕ ಸಂಬಂಧ ಕೊನೆಗೊಂಡಿದೆ.
2010ರಲ್ಲಿ ಇದೇ ರೀತಿಯ ಕುತಂತ್ರ
ಭಾರತ ಮತ್ತು ಜಪಾನ್ ನಡುವೆ ದ್ಗಿಪಕ್ಷೀಯ ಮಾತುಕತೆಯಾಗಿರೋದರಿಂದ ತಕ್ಷಣವೇ ಈ ಒಪ್ಪಂದ ರದ್ದುಗೊಳಿಸಲು ಸಾಧ್ಯವಿಲ್ಲ. ಜಪಾನ್ ಜೊತೆ ಸ್ನೇಹಯುತವಾಗಿ ಚರ್ಚೆ ನಡೆಸಿ ಒಪ್ಪಂದ ರದ್ದುಗೊಳಿಸಿಕೊಳ್ಳಲು IREL ಬಯಸುತ್ತದೆ. ಆದರೆ ಜಪಾನ್ ಈ ಬಗ್ಗೆ ಯಾವುದೇ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ. 2010ರಲ್ಲಿಯೂ ಚೀನಾ ಇದೇ ರೀತಿಯ ಕುತಂತ್ರವನ್ನು ಮಾಡಿತ್ತು. ಆ ಸಂದರ್ಭದಲ್ಲಿ ಭಾರತದಿಂದ ಜಪಾನ್ ಈ ಅಪರೂಪದ ಖನಿಜವನ್ನು ಆಮದು ಮಾಡಿಕೊಳ್ಳಲು ಆರಂಭಿಸಿತ್ತು.
ಆಟೋ ಉದ್ಯಮದಲ್ಲಿ ಆತಂಕ ಸೃಷ್ಟಿ
ಚೀನಾ ರಫ್ತಿನ ಮೇಲೆ ನಿಷೇಧ ವಿಧಿಸೋದರಿಂದ ಪಂಚದಾದ್ಯಂತದ ಆಟೋ ಉದ್ಯಮದಲ್ಲಿ ಆತಂಕ ಸೃಷ್ಟಿಯಾಗಿದೆ. ಖನಿಜದ ಪೂರೈಕೆ ಕಡಿಮೆಯಾದ್ರೆ ಉತ್ಪಾದನೆ ಕುಸಿತವಾಗಲಿದೆ ಎಂದು ಕಂಪನಿಗಳು ಹೇಳಿಕೆ ನೀಡುತ್ತಿವೆ. ಭಾರತವು ಮಾರ್ಚ್ 2025 ರವರೆಗೆ 53,748 ಟನ್ ಅಪರೂಪದ ಭೂಮಿಯ ಆಯಸ್ಕಾಂತಗಳನ್ನು ಆಮದು ಮಾಡಿಕೊಂಡಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.