ಅಡುಗೆ ಎಣ್ಣೆ ಬೆಲೆ ಶೀಘ್ರ 15 ರು. ಇಳಿಕೆ!

By Kannadaprabha NewsFirst Published Oct 14, 2021, 7:26 AM IST
Highlights

* ಅಡುಗೆ ಎಣ್ಣೆಯ ಮೇಲಿನ ಸೀಮಾ ಸುಂಕ, ಸೆಸ್‌ ಇಳಿಕೆ

* ಅಡುಗೆ ಎಣ್ಣೆ ಬೆಲೆ ಲೀ.15 ರು. ಇಳಿಕೆ?

* ಗಗನಕ್ಕೇರಿರುವ ಖಾದ್ಯ ತೈಲ ದರ ಇಳಿಕೆಗೆ ಕೇಂದ್ರದ ಕ್ರಮ

ನವದೆಹಲಿ(ಅ.14): ಗಗನಕ್ಕೇರಿರುವ ಕಚ್ಚಾತೈಲ ಬೆಲೆ(Crude Oil) ಇಳಿಕೆ ನಿಟ್ಟಿನಲ್ಲಿ, ಕಚ್ಚಾ ಖಾದ್ಯದ ಮೇಲಿನ ಮೂಲ ಆಮದು ಸುಂಕ ರದ್ದು ಮಾಡುವ, ಸಂಸ್ಕರಿತ ಎಣ್ಣೆಯ ಮೇಲಿನ ಸೀಮಾ ಸುಂಕ(Customs duty) ಮತ್ತು ಕೃಷಿ ಸೆಸ್‌ ಅನ್ನು ಇಳಿಕೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅ.14ರಿಂದ ಜಾರಿಯಾಗಲಿರುವ ಈ ಹೊಸ ತೆರಿಗೆ ನೀತಿ 2022ರ ಮಾ.31ರವರೆಗೂ ಜಾರಿಯಲ್ಲಿರಲಿದೆ. ಸರ್ಕಾರದ ಈ ನಿರ್ಧಾರದಿಂದ ತಾಳೆ ಎಣ್ಣೆ(Palm Oli), ಸೋಯಾಬಿನ್‌(Soyabean) ಮತ್ತು ಸೂರ್ಯಕಾಂತಿ ಎಣ್ಣೆ(Sunflower Oil) ದರದಲ್ಲಿ ಲೀ.ಗೆ 15 ರು.ವರೆಗೂ ಇಳಿಕೆ ಸಾದ್ಯತೆ ಇದೆ ಎಂದು ಉದ್ಯಮ ವಲಯ ತಿಳಿಸಿದೆ.

ಇದುವರೆಗೆ ಕಚ್ಚಾ ತಾಳೆ, ಸೋಯಾ ಮತ್ತು ಸೂರ್ಯಕಾಂತಿ ಎಣ್ಣೆಗೆ ಶೇ.20ರಷ್ಟು ಸೀಮಾ ಸುಂಕ ಇತ್ತು. ಅದನ್ನು ಇದೀಗ ತಾಳೆಎಣ್ಣೆಗೆ ಶೇ.8.25ಕ್ಕೆ ಮತ್ತು ಸೋಯಾಬೀನ್‌ ಮತ್ತು ಸೂರ್ಯಕಾಂತಿ ಎಣ್ಣೆಗೆ ಶೇ.5.5ಕ್ಕೆ ಇಳಿಸಲಾಗಿದೆ. ಇನ್ನು ಸಂಸ್ಕರಿತ ತಾಳೆ, ಸೋಯಾ, ಸೂರ್ಯಕಾಂತಿ ಎಣ್ಣೆ ಮೇಲಿನ ಸೀಮಾ ಸುಂಕವನ್ನು ಶೇ.32.5ರಿಂದ ಶೇ.17.5ಕ್ಕೆ ಇಳಿಸಲಾಗಿದೆ. ಜೊತೆಗೆ ತಾಳೆ ಎಣ್ಣೆ ಮೇಲಿನ ಕೃಷಿ ಸೆಸ್‌ ಅನ್ನು ಶೇ.7.5ಕ್ಕೆ ಸೋಯಾ ಮತ್ತು ಸೂರ್ಯಕಾಂತಿ ಎಣ್ಣೆಗೆ ಶೇ.5ಕ್ಕೆ ಇಳಿಸಲಾಗಿದೆ.

ಕಳೆದ ಒಂದು ವರ್ಷದಲ್ಲಿ ಖಾದ್ಯ ತೈಲದ ಬೆಲೆ ಬಹುತೇಕ ಡಬಲ್‌ ಆಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಇತ್ತೀಚೆಗಷ್ಟೇ ಖಾದ್ಯ ತೈಲ ಮತ್ತು ಎಣ್ಣೆ ಬೀಜಗಳ ಸಂಗ್ರಹದ ಮಿತಿಗೆ ನಿರ್ಬಂಧ ಹೇರಿತ್ತು. ಅದರ ಬೆನ್ನಲ್ಲೇ ಇದೀಗ ಮತ್ತಷ್ಟು ಕ್ರಮಗಳನ್ನು ಘೋಷಿಸಿದೆ.

click me!