
ನವದೆಹಲಿ(ಅ.13): ಹಿಂಗಾರು ಬೆಳೆಗಳಿಗೆ ರೈತರಿಗೆ ಕೈಗೆಟುಕುವ ದರದಲ್ಲಿ ರಸಗೊಬ್ಬರ ಪೂರೈಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಫಾಸ್ಫೆಟಿಕ್ ಮತ್ತು ಪೊಟಾಸಿಕ್ (ಪಿ ಮತ್ತು ಕೆ) ರಸಗೊಬ್ಬರಗಳಿಗೆ 28,655 ಕೋಟಿ ರು. ಸಬ್ಸಿಡಿ ಘೋಷಣೆ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮಂಗಳವಾರ ನಡೆದ ಆರ್ಥಿಕ ವ್ಯವಹಾರಗಳ ಕುರಿತಾದ ಕ್ಯಾಬಿನೆಟ್ ಸಮಿತಿ ಸಭೆ 2021ರ ಅಕ್ಟೋಬರ್‌ನಿಂದ 2022ರ ಮಾಚ್‌ರ್‍ವರೆಗೆ ಈ ಎರಡೂ ರಸಗೊಬ್ಬರಗಳ ಮೇಲಿನ ಸಬ್ಸಿಡಿ ನೀಡಲು ಸಮ್ಮತಿ ನೀಡಿದೆ. ನ್ಯೂಟ್ರಿಯೆಂಟ್ ಆಧಾರಿತ ಸಬ್ಸಿಡಿ ಪ್ರಕಾರ ಪ್ರತೀ ಕೇಜಿಯ ಸಾರಜನಕಕ್ಕೆ 18.789 ರು., ಫಾಸ್ಫರಸ್‌ಗೆ 45.323 ರು., ಪೋಟ್ಯಾಷ್‌ಗೆ 10.116 ರು. ಮತ್ತು ಸಲ್ಫರ್‌ಗೆ 2.374 ರು.ನಷ್ಟುಸಬ್ಸಿಡಿ ದರ ನೀಡಲಾಗುತ್ತದೆ.
ಡಿಎಪಿಗೆ 5716 ಕೋಟಿ ರು. ಹೆಚ್ಚುವರಿ ಸಬ್ಸಿಡಿ:
ರೈತರು ಅತಿ ಹೆಚ್ಚು ಬಳಸುವ ಡಿಎಪಿಗೆ ಹೆಚ್ಚುವರಿ 5716 ಕೋಟಿ ರು.ನಷ್ಟುವಿಶೇಷ ಸಬ್ಸಿಡಿ ಪ್ಯಾಕೇಜ್ ನೀಡಲು ನಿರ್ಧರಿಸಲಾಗಿದೆ. ಜೊತೆಗೆ ಕಬ್ಬು, ಭತ್ತ ಸೇರಿದಂತೆ ಇನ್ನಿತರ ಬೆಳೆಗಳಿಗೆ ಯಥೇಚ್ಚವಾಗಿ ಬಳಸಲಾಗುವ ಎನ್‌ಪಿಕೆಯ ಮೂರು ಮಾದರಿ ರಸಗೊಬ್ಬರಗಳಿಗೆ 837 ಕೋಟಿ ರು. ವಿಶೇಷ ಪ್ಯಾಕೇಜ್ ಪ್ರಕಟಿಸಲಾಗಿದೆ.
ಅಲ್ಲದೆ ಈ ಕ್ಯಾಬಿನೆಟ್ ಸಮಿತಿಯು ಮೊಲಾಸಸ್‌ನಿಂದ ಉತ್ಪತ್ತಿಯಾಗುವ ಪೊಟ್ಯಾಷ್ ಅನ್ನು ಸಹ ನ್ಯೂಟ್ರಿಯೆಂಟ್ ಆಧಾರಿತ ಸಬ್ಸಿಡಿ ಅಡಿ ಸೇರಿಸಿಕೊಳ್ಳಲು ನಿರ್ಧರಿಸಲಾಗಿದೆ. ಮುಂಗಾರು ಆರಂಭವಾಗುವ ಜೂನ್ ತಿಂಗಳಲ್ಲೂ ಕೇಂದ್ರ ಸರ್ಕಾರ, ಡಿಎಪಿ ಸೇರಿದಂತೆ ಇತರೆ ಯೂರಿಯಾಯೇತರ ರಸಗೊಬ್ಬರಗಳಿಗೆ 14,775 ಕೋಟಿ ರು.ನಷ್ಟುಸಬ್ಸಿಡಿ ಬಿಡುಗಡೆ ಮಾಡಿತ್ತು.
ಕೇಂದ್ರ ಸರ್ಕಾರ 2021-22ನೇ ಬಜೆಟ್‌ನಲ್ಲಿ ರಸಗೊಬ್ಬರಗಳಿಗೆ 79,600 ಕೋಟಿ ರು. ಸಬ್ಸಿಡಿ ನೀಡಿತ್ತು. ಇದರ ಹೊರತಾಗಿ ಇದೀಗ ಹೆಚ್ಚುವರಿ ಹಣವನ್ನು ರಸಗೊಬ್ಬರಗಳಿಗೆ ಸಬ್ಸಿಡಿ ನೀಡುತ್ತಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.