
ಓಲಾ, ಊಬರ್ ಸೇರಿದಂತೆ ಕೆಲವು ಖಾಸಗಿ ಕ್ಯಾಬ್ಗಳು ಚಾಲನೆಯಲ್ಲಿ ಇವೆ. ಆದರೆ ಅದೆಷ್ಟೋ ಬಾರಿ ಪ್ರಯಾಣಿಕರು ಕಿರಿಕಿರಿ ಅನುಭವಿಸುವುದು ಇದೆ. ಕಮಿಷನ್ ಹಾವಳಿಯಿಂದ ಅತಿ ಹೆಚ್ಚು ಕೊಟ್ಟು ಪ್ರಯಾಣಿಸುವ ಅನಿವಾರ್ಯತೆಯೂ ಸದ್ಯದ ಸ್ಥಿತಿಯದ್ದು. ಅದೇ ಇನ್ನೊಂದೆಡೆ, ಪೀಕ್ ಅವರ್ಗಳಲ್ಲಿ ಹೆಚ್ಚು ದರ ವಸೂಳಿ ಮಾಡುವುದು ಚಾಲಕರಿಗೂ ಅನಿವಾರ್ಯವಾಗಿದೆ. ಏಕೆಂದರೆ ಎಲ್ಲೆಡೆ ಕಮಿಷನ್ ನೀಡಬೇಕಾಗಿರುವುದರಿಂದ ಅವರೂ ಕೂಡ ಲಾಭ ನೋಡಿಕೊಳ್ಳಲೇಬೇಕಿದೆ. ಮಾಲೀಕರಿಗೆ ಪ್ರತಿ ಪ್ರಯಾಣದ ಮೇಲೆ ಕಮಿಷನ್ ನೀಡುವುದು ಕಡ್ಡಾಯ ಆಗಿರುವ ಹಿನ್ನೆಲೆಯಲ್ಲಿ, ಅವರು ಹೆಚ್ಚಿನ ದರ ಪ್ರಯಾಣಿಕರ ಮೇಲೆ ಹಾಕಲೇಬೇಕಿದೆ. ಇದೀಗ ಇವೆಲ್ಲ ಸಮಸ್ಯೆಗಳಿಗೆ ಪರಿಹಾರವಾಗಿ ಕೇಂದ್ರ ಸರ್ಕಾರದ ಭಾರತ್ ಟ್ಯಾಕ್ಸಿ ಸೇವೆ ಆರಂಭಿಸಲಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಅರ್ಥಾತ್ ನವೆಂಬರ್ ತಿಂಗಳಿನಿಂದಲೇ ಇದು ಕಾರ್ಯಾರಂಭ ಮಾಡಲಿದೆ.
ಕೇಂದ್ರ ಸರಕಾರದ ಸಹಕಾರ ಸಚಿವಾಲಯದ ಮಾರ್ಗದರ್ಶನದಲ್ಲಿ ಇದನ್ನು ಸ್ಟಾರ್ಟ್ ಮಾಡಲಾಗಿದೆ. ಇದರ ಮುಖ್ಯ ಉದ್ದೇಶ, ಖಾಸಗಿ ಕ್ಯಾಬ್ ಸೇವೆಗಳ ಕಮಿಷನ್ ಹಾವಳಿ ತಪ್ಪಿಸುವುದು, ಈ ಮೂಲಕ ಪ್ರಯಾಣಿಕರಿಗೆ ಕಡಿಮೆ ದರದಲ್ಲಿ ಪ್ರಯಾಣ ಸೇವೆಯನ್ನುಒದಗಿಸುವುದು. ಆರಂಭದಲ್ಲಿ 650 ಭಾರತ್ ಟ್ಯಾಕ್ಸಿ (Bharat Taxi) ರಸ್ತೆಗೆ ಇಳಿಯಲಿವೆ. ಮುಂಬೈ. ಪುಣೆ, ಭೋಪಾಲ್ , ಲಖನೌನಲ್ಲಿ ಆರಂಭ ಆಗಲಿದ್ದು, ಶೀಘ್ರದಲ್ಲಿಯೇ ಇದು ಎಲ್ಲಾ ಪ್ರಮುಖ ನಗರ ಪ್ರದೇಶಗಳ ರಸ್ತೆಗಳಲ್ಲಿ ರಾರಾಜಿಸಲಿವೆ. ಡಿಸೆಂಬರ್ ತಿಂಗಳಿನ ಒಳಗೆ ಬೇರೆ ಬೇರೆ ನಗರಗಳಿಗೂ ಇದು ಪ್ರವೇಶ ಮಾಡಲಿದೆ ಎಂದು ತಿಳಿಸಲಾಗಿದೆ. ಇದಾಗಲೇ ಐದು ಸಾವಿರ ಚಾಲಕರು ಭಾರತ್ ಟ್ಯಾಕ್ಸಿಯಲ್ಲಿ ಸೇವೆ ಒದಗಿಸಲಿದ್ದಾರೆ.
ಭಾರತ್ ಟ್ಯಾಕ್ಸಿಯಿಂದ ಚಾಲಕರು ಮತ್ತು ಪ್ರಯಾಣಿಕರು ಇಬ್ಬರಿಗೂ ಲಾಭ ಇದೆ ಎನ್ನಲಾಗುತ್ತಿದೆ. ಇದಕ್ಕೆ ಕಾರಣ ಓಲಾ, ಊಬರ್ಗಳು ಖಾಸಗಿ ಸಂಸ್ಥೆಯಾಗಿರುವ ಕಾರಣ, ತಮ್ಮ ಲಾಭವನ್ನೂ ನೋಡಿಕೊಳ್ಳುತ್ತಿವೆ. ಇದರಿಂದ ಕ್ಯಾಬ್ ಚಾಲಕರು ತಮ್ಮ ಪ್ರತಿ ಪ್ರಯಾಣದ ಮೇಲೆ 25 ಪರ್ಸೆಂಟ್ವರೆಗೂ ಕಮಿಷನ್ ನೀಡುವುದು ಅನಿವಾರ್ಯವಾಗಿದೆ. ಇದೇ ಕಾರಣಕ್ಕೆ ಚಾಲಕರು ಈ ಕಮಿಷನ್ ಹಾವಳಿಯಿಂದಾಗಿ ಸಹಜವಾಗಿ ಪ್ರಯಾಣಿಕರ ಮೇಲೆ ಹೆಚ್ಚು ಚಾರ್ಜ್ ಮಾಡಲೇಬೇಕಿದೆ. ಆದರೆ ಭಾರತ್ ಟ್ಯಾಕ್ಸಿ ಕೇಂದ್ರ ಸರ್ಕಾರದ್ದಾಗಿರುವ ಹಿನ್ನೆಲೆಯಲ್ಲಿ, ಕಮಿಷನ್ ಇರುವುದು. ಜೀರೋ ಪರ್ಸೆಂಟ್ ಕಮಿಷನ್. ಇದೇ ಕಾರಣಕ್ಕೆ ಚಾಲಕರು ತಮ್ಮ ಲಾಭವನ್ನಷ್ಟೇ ಇಟ್ಟುಕೊಂಡು ಈಗಿರುವುದಕ್ಕಿಂತ ಕಡಿಮೆ ಮೊತ್ತವನ್ನು ಪಡೆಯುತ್ತಾರೆ. ಮಾತ್ರವಲ್ಲದೇ ಅವರಿಗೆ ಸರ್ಕಾರಿ ಬೋನಸ್, ಡಿವಿಡೆಂಟ್ಗಳು ಕೂಡ ಸಿಗುತ್ತವೆ ಎನ್ನಲಾಗಿದೆ. ಚಿಕ್ಕ ಶುಲ್ಕ ಕೊಟ್ಟು ಆ್ಯಪ್ ಖರೀದಿ ಮಾಡಿದರೆ ಮುಗಿಯಿತು. ಆದ್ದರಿಂದ ಎಲ್ಲರಿಗೂ ಇದು ತುಂಬಾ ಖುಷಿ ಕೊಡಲಿದೆ ಎನ್ನಲಾಗಿದೆ.
ರಾಷ್ಟ್ರೀಯ ಇ-ಗವರ್ನೆನ್ಸ್ ಡಿವಿಷನ್ ಟ್ಯಾಕ್ಸಿ ಸೇವೆಗೆ ಅಗತ್ಯ ತಂತ್ರಾಂಶ ಹಾಗೂ ರೂಪುರೇಷೆಯನ್ನು ಅಭಿವೃದ್ಧಿಪಡಿಸಿದೆ. ಖಾಸಗಿ ಕ್ಯಾಬ್ ಸೇವೆಗಳ ಕಮಿಷನ್ ಹಾವಳಿ, ಹಳೆಯ ಕಾರುಗಳ ಅನನುಕೂಲತೆಗಳಿಂದ ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸುವುದಕ್ಕಾಗಿ ಭಾರತ್ ಟ್ಯಾಕ್ಸಿ ಸೇವೆ ಆರಂಭಿಸಿರುವುದಾಗಿ ಸಚಿವಾಲಯವು ಹೇಳಿದೆ. ಪುರುಷರು ಮಾತ್ರವಲ್ಲದೇ ಮಹಿಳಾ ಚಾಲಕಿಯರೂ ಸೇವೆ ಒದಗಿಸಲಿದ್ದಾರೆ.
ಸಹಕಾರಿ ಸಂಸ್ಥೆಯಾದ ಸಹಕಾರ್ ಟ್ಯಾಕ್ಸಿ ಕೋಆಪರೇಟಿವ್ ಲಿಮಿಟೆಡ್ ಅನ್ನು ಸಹಕಾರಿ ಮುಖಂಡರು ಮತ್ತು ಚಾಲಕ ಪ್ರತಿನಿಧಿಗಳನ್ನು ಒಳಗೊಂಡ ಮಂಡಳಿಯು ನಿರ್ವಹಿಸುತ್ತದೆ. ಅಮುಲ್‌ನ ವ್ಯವಸ್ಥಾಪಕ ನಿರ್ದೇಶಕ ಜಯೆನ್ ಮೆಹ್ತಾ ಅಧ್ಯಕ್ಷರಾಗಿದ್ದು, ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮದ ರೋಹಿತ್ ಗುಪ್ತಾ ಉಪಾಧ್ಯಕ್ಷರಾಗಿದ್ದಾರೆ. ಈ ಉಪಕ್ರಮವು IFFCO, ಅಮುಲ್, ನಬಾರ್ಡ್ ಮತ್ತು NCDC ಸೇರಿದಂತೆ ಎಂಟು ಪ್ರಮುಖ ಸಹಕಾರಿ ಸಂಸ್ಥೆಗಳಿಂದ ಬೆಂಬಲಿತವಾಗಿದೆ.
ಹಲವರಿಂದ ಸ್ವಾಗತ
ಕೇಂದ್ರ ಸರ್ಕಾರದ ಈ ನೂತನ ಸೇವೆಯನ್ನು ವಿವಿಧ ಚಾಲಕ ಸಂಘಟನೆಗಳು ಸ್ವಾಗತಿಸಿವೆ. ಕರ್ನಾಟಕ ಚಾಲಕ ಸಂಘಟನೆಗಳಿಂದಲೂ ಖುಷಿ ವ್ಯಕ್ತವಾಗಿದೆ. ಕೇಂದ್ರದ ಈ ಯೋಜನೆಗೆ ಬೃಹತ್ ಬೆಂಗಳೂರು ಟ್ಯಾಕ್ಸಿ ಡ್ರೈವರ್ ಯೂನಿಯನ್ ಸ್ವಾಗತಿಸಿದೆ. ಹಲವಾರು ಚಾಲಕರು ಹಾಗೂ ಗ್ರಾಹಕರಿಗೆ ಅನುಕೂಲವಾಗಲಿದೆ. ಕಡಿಮೆ ದರಕ್ಕೆ ಪ್ರಯಾಣಿಕರಿಗೆ ಸಿಗಲಿ, ಬೇಗ ಜಾರಿಯಾಗಲಿ. ಸರ್ಕಾರದ ವತಿಯಿಂದ ಟ್ಯಾಕ್ಸಿ ಓದಗಿಸಬೇಕೆಂಬುದು ಬಹುದಿನದ ಬೇಡಿಕೆಯಾಗಿದೆ, ಇದ್ರಿಂದ ಚಾಲಕರಿಗೆ ಅನುಕೂಲವಾಗಲಿದೆ ಎಂದಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.