ಒಂದೆಡೆ ಕೊರೋನಾ ವೈರಸ್ ವಿರುದ್ಧ ಹೋರಾಟ, ಮತ್ತೊಂದೆಡೆ ಪಾತಾಳಕ್ಕೆ ಕುಸಿದಿರುವ ಆರ್ಥಿಕತೆ ಸರಿದೂಗಿಸುವ ಹರಸಾಹಸದ ನಡುವೆ ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಸೀಮಾ ಸುಂಕ ಹೆಚ್ಚಿಸಿದೆ. ಮಂಗಳವಾರ ಮಧ್ಯ ರಾತ್ರಿಯಿಂದಲೇ(ಮೇ.06) ಸುಂಕ ಹೆಚ್ಚಳ ಆದೇಶ ಜಾರಿಯಾಗಲಿದೆ.
ನವದೆಹಲಿ(ಮೇ.06): ಕೇಂದ್ರ ಸರ್ಕಾರ ಮಂಗಳವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಪೆಟ್ರೋಲ್ ಮೇಲಿನ ಸೀಮಾ ಸುಂಕವನ್ನು ಲೀ.ಗೆ 10 ರು. ಮತ್ತು ಡೀಸೆಲ್ ಮೇಲಿನ ಸೀಮಾ ಸುಂಕವನ್ನು 13 ರು.ನಷ್ಟುಏರಿಸಿದೆ. ಆದರೆ ಇದರಿಂದ ಗ್ರಾಹಕರಿಗೆ ಯಾವುದೇ ಹೊರೆಯಾಗದು. ಕಾರಣ, ಜಾಗತಿಕವಾಗಿ ಕಚ್ಚಾತೈಲ ಬೆಲೆ ಇಳಿಕೆಯಾದ ಹಿನ್ನೆಲೆಯಲ್ಲಿ ಸರ್ಕಾರ ಇಷ್ಟುಮೊತ್ತ ಇಳಿಸಬೇಕಿತ್ತು. ಆದರೆ ಸರ್ಕಾರ ಅದರ ಬದಲು ಸೀಮಾ ಸುಂಕ ಏರಿಸಿದೆ.
ಬೈಕ್ ಪೆಟ್ರೋಲ್‌ಗಿಂತ ವಿಮಾನ ಇಂಧನ ಶೇ.70ರಷ್ಟು ಅಗ್ಗ
ಸೀಮಾ ಸುಂಕ ಹೆಚ್ಚಳದಿಂದ ಪೆಟ್ರೋಲ್, ಡೀಸೆಲ್ ದರಗಳು ಯಥಾಸ್ಥಿತಿಯಲ್ಲಿ ಮುಂದುವರೆಯಲಿವೆ. ಇದರಿಂದ ಗ್ರಾಹಕರ ಮೇಲೆ ಯಾವುದೇ ಹೊರೆಯಾಗುವುದಿಲ್ಲ. ಈ ಹಿಂದೆ ಖರೀದಿಸಿದ ದರದಲ್ಲೇ ಈಗಲೂ ಪೆಟ್ರೋಲ್ ಡೀಸೆಲ್ ಲಭ್ಯವಾಗಲಿದೆ.
ಸಬ್ಸಿಡಿ ರಹಿತ LPG ಗ್ಯಾಸ್ ದರ ದಾಖಲೆಯ ಇಳಿಕೆ!
ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಹೊಡೆತದಿಂದ ಕಚ್ಚಾ ತೈಲ ಬೇಡಿಕೆ ಕಡಿಮೆಯಾಗಿದೆ. ಇತ್ತ 1999ರ ಬಳಿಕ ಇದೇ ಮೊದಲ ಬಾರಿಗೆ ದಾಖಲೆ ಮೊತ್ತ ಇಳಿಕೆಯಾಗಿದೆ. ಜಾಗತಿಕ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್ ಮೇಲೆ 1370 ರೂಪಾಯಿ ಕಡಿಮೆಯಾಗಿದೆ. ಸದ್ಯ ಪ್ರತಿ ಬ್ಯಾರೆಲ್ ಕಚ್ಚಾ ತೈಲ ಬೆಲೆ 2119 ರೂಪಾಯಿ ಆಗಿದೆ. ಕಚ್ಚಾ ತೈಲ ಬೆಲೆ ಇಳಿಕೆಯಿಂದ ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಸುವ ನಿರ್ಧಾರ ಕೈಬಿಟ್ಟು, ಗ್ರಾಹಕರಿಗೆ ಯಾವುದೇ ಹೊರೆಯಾಗದಂತೆ ಸೀಮಾ ಸುಂಕ ಹೆಚ್ಚಿಸಿದೆ.