ಧಂತೇರಸ್ ಖರೀದಿಗೆ ಅತ್ಯಂತ ಶುಭ ದಿನ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ನಿನ್ನೆ ದೇಶಾದ್ಯಂತ ಮಾರುಕಟ್ಟೆಗಳಲ್ಲಿ ಖರೀದಿ ಜೋರಾಗಿ ನಡೆದಿದ್ದು, ಒಟ್ಟು 50 ಸಾವಿರ ಕೋಟಿ ರೂ.ಗಿಂತಲೂ ಹೆಚ್ಚಿನ ವ್ಯಾಪಾರ ನಡೆದಿದೆ ಎಂದು ಹೇಳಲಾಗಿದೆ.
ನವದೆಹಲಿ(ನ.11): ಧಂತೇರಸ್ ಹಬ್ಬದ ಸಮಯದಲ್ಲಿ ದೇಶಾದ್ಯಂತ ಮಾರುಕಟ್ಟೆಯಲ್ಲಿ ಖರೀದಿ ಪ್ರಕ್ರಿಯೆ ಜೋರಾಗಿ ನಡೆಯುತ್ತಿರುತ್ತದೆ. ಅದರಲ್ಲೂ ಚಿನ್ನ, ಬೆಳ್ಳಿ, ಪಾತ್ರೆಗಳು ಹಾಗೂ ಬಟ್ಟೆಗಳ ಖರೀದಿ ಜೋರಾಗಿ ನಡೆಯುತ್ತದೆ. ಧಂತೇರಸದ ವಿಶೇಷ ದಿನದಂದು ಜನರು ಮಾರುಕಟ್ಟೆಗಳಿಗೆ ತೆರಳಿ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಖರೀದಿ ಮಾಡುತ್ತಾರೆ ಕೂಡ. ನಿನ್ನೆ (ನ.11) ಧಂತೇರಸ್ ಸಂಭ್ರಮದಿಂದ ನಡೆದಿದೆ. ಜನರು ಈ ಶುಭ ದಿನದಂದು ಭಾರೀ ಪ್ರಮಾಣದಲ್ಲಿ ಖರೀದಿ ಕೂಡ ಮಾಡಿದ್ದಾರೆ. ವ್ಯಾಪಾರಿಗಳ ಒಕ್ಕೂಟ ಸಿಎಐಟಿ ಅನ್ವಯ ಧಂತೇರಸ್ ದಿನ ದೇಶಾದ್ಯಂತ 50,000 ಕೋಟಿ ರೂ.ಗಿಂತಲೂ ಅಧಿಕ ವ್ಯಾಪಾರ ನಡೆಸಲಾಗಿದೆ. ಇದರಲ್ಲಿ ಜನರು 27,000 ಕೋಟಿ ರೂ. ಮೌಲ್ಯದ ಚಿನ್ನ ಅಥವಾ ಆಭರಣಗಳನ್ನು ಖರೀದಿಸಿದ್ದಾರೆ ಕೂಡ. ಇನ್ನು ಧಂತೇರಸದ ಶುಭ ಅವಸರ ಇಂದು (ನ.11) ಮಧ್ಯಾಹ್ನದ ತನಕ ಕೂಡ ಇದೆ. ಹೀಗಾಗಿ ವ್ಯಾಪಾರದಲ್ಲಿ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಕೂಡ ಇದೆ.
ಸದರ್ ಬಜಾರ್ ಸಗಟು ಮಾರುಕಟ್ಟೆಯಲ್ಲಿ ಪಾತ್ರೆಗಳ ವ್ಯಾಪಾರ ಭರದಿಂದ ಸಾಗಿತ್ತು. ಇಲ್ಲಿ ವ್ಯಾಪಾರಿಗಳು ತಮ್ಮ ರಿಟೇಲ್ ಕೌಂಟರ್ ಗಳನ್ನು ಧಂತೇರಸದ ಅಂಗವಾಗಿ ಅಲಂಕರಿಸಿದ್ದರು. ಮಳೆಯಿದ್ದರೂ ಶುಕ್ರವಾರ ದೊಡ್ಡ ಪ್ರಮಾಣದಲ್ಲಿ ಜನರು ಈ ಮಾರುಕಟ್ಟೆಯಲ್ಲಿ ಒಟ್ಟು ಸೇರಿದ್ದರು. ತಾಮ್ರ, ಚಿನ್ನ ಹಾಗೂ ರೈನ್ ಬೋ ಸೆಟ್ ಗಳಿಗೆ ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಬೇಡಿಕೆ ಸೃಷ್ಟಿಯಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪಾತ್ರೆಗಳ ಬೆಲೆಯಲ್ಲಿ ಶೇ.10-15ರಷ್ಟು ಹೆಚ್ಚಳವಾಗಿತ್ತು. ಜನರು ತಾಮ್ರ ಹಾಗೂ ಕಂಚಿನ ಪೂಜಾ ಪ್ಲೇಟ್ ಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಿದ್ದಾರೆ ಎಂದು ಹೇಳಲಾಗಿದೆ.
ಬಂಗಾರ ಕೊಳ್ಳೋರು ಗಮನಿಸಿ; 2019ರ ದೀಪಾವಳಿಗೆ ಚಿನ್ನ ಖರೀದಿಸಿದವರಿಗೆ ಮೂರೇ ವರ್ಷದಲ್ಲಿ ಸಿಕ್ತು ಶೇ.60 ರಿಟರ್ನ್ಸ್
30,000 ಕೋಟಿ ರೂ. ಮೌಲ್ಯದ ಚಿನ್ನ, ಬೆಳ್ಳಿ ಮಾರಾಟ
ಧಂತೇರಸದ ದಿನ ಚಿನ್ನದ ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಚಿನ್ನ ಹಾಗೂ ಬೆಳ್ಳಿ ಮಾರಾಟ ನಡೆದಿದೆ. ಒಟ್ಟು 30,000 ಕೋಟಿ ರೂ. ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ಇತರ ಅಮೂಲ್ಯ ಆಭರಣಗಳ ಮಾರಾಟ ನಡೆದಿದೆ. ಇನ್ನು ಚಿನ್ನ ಹಾಗೂ ಚಿನ್ನದ ಆಭರಣಗಳ ಮಾರಾಟ 27,000 ಕೋಟಿ ರೂ. ಇದೆ. ಬೆಳ್ಳಿ ಅಥವಾ ಬೆಳ್ಳಿ ಸಾಮಗ್ರಿಗಳ ಮೌಲ್ಯ ಅಂದಾಜು 3,000 ಕೋಟಿ ರೂ. ಇತ್ತು. 2022ರಲ್ಲಿ ಧಂತೇರಸ್ ದಿನದಂದು ಚಿನ್ನ ಹಾಗೂ ಬೆಳ್ಳಿಯ 25,000 ಕೋಟಿ ರೂ. ಮೌಲ್ಯದ ವ್ಯಾಪಾರ ನಡೆದಿತ್ತು. ಅಂದರೆ ಈ ವರ್ಷ ಕಳೆದ ಸಾಲಿಗಿಂತ 10,000 ಕೋಟಿ ರೂ. ಹೆಚ್ಚಿನ ವ್ಯಾಪಾರ ನಡೆದಿದೆ. ಇಂದು ಕೂಡ ಇನ್ನಷ್ಟು ಪ್ರಮಾಣದಲ್ಲಿ ವ್ಯಾಪಾರ ನಡೆದಿರುತ್ತದೆ.
2022ರಲ್ಲಿ ಚಿನ್ನದ ಬೆಲೆ 10ಗ್ರಾಂಗೆ 52,000ರೂ. ಇತ್ತು. ಈ ಬಾರಿ ಇದು ಪ್ರತಿ 10 ಗ್ರಾಂಗೆ 62,000 ರೂ. ಇದೆ. ಒಂದು ಅಂದಾಜಿನ ಪ್ರಕಾರ ಧಂತೇರಸದ ದಿನ ಅಂದಾಜು 41 ಟನ್ ಚಿನ್ನ ಹಾಗೂ ಸುಮಾರು 400 ಟನ್ ಬೆಳ್ಳಿ ಆಭರಣಗಳನ್ನು ದೇಶದಲ್ಲಿ ಮಾರಾಟ ಮಾಡಲಾಗಿದೆ.
ಹಬ್ಬದ ಸಂಭ್ರಮದಲ್ಲಿರುವವರಿಗೆ ಗುಡ್‌ನ್ಯೂಸ್: ಚಿನ್ನದ ದರದಲ್ಲಿ ಭಾರೀ ಇಳಿಕೆ
ದೇಶಾದ್ಯಂತ 50,000 ಕೋಟಿ ರೂ. ಮೌಲ್ಯದ ವ್ಯಾಪಾರ
ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (CAIT) ಅನ್ವಯ ಧಂತೇರಸದ ದಿನ ದೇಶಾದ್ಯಂತ 50 ಸಾವಿರ ಕೋಟಿ ರೂ. ವ್ಯಾಪಾರ ನಡೆದಿದೆ. ಇನ್ನು ರಾಷ್ಟ್ರ ರಾಜ್ಯಧಾನಿ ದೆಹಲಿಯೊಂದರಲ್ಲೇ 5,000 ಕೋಟಿ ರೂ.ಗಿಂತಲೂ ಅಧಿಕ ವ್ಯಾಪಾರ ನಡೆದಿದೆ ಎಂದು ಹೇಳಲಾಗಿದೆ.
ಇಂದು ಕೂಡ ವ್ಯಾಪಾರ ಭರಾಟೆ ಜೋರು
ಈ ವರ್ಷ ಧಂತೇರಸ ನವೆಂಬರ್ 10ರ ಮಧ್ಯಾಹ್ನ 12:35ರಿಂದ ಪ್ರಾರಂಭವಾಗಿ ನವೆಂಬರ್ 11ರ ಮಧ್ಯಾಹ್ನ 1:57ಕ್ಕೆ ಅಂತ್ಯವಾಗಲಿದೆ. ಹೀಗಾಗಿ ಇಂದು ಮಧ್ಯಾಹ್ನದ ತನಕ ಕೂಡ ಧಂತೇರಸದ ಖರೀದಿ ಮುಂದುವರಿದಿದೆ.