ವಿದೇಶಿ ಹಣಕಾಸು ಉಲ್ಲಂಘನೆ ಆರೋಪದಡಿ ಬೈಜುಸ್ ಎಜುಕೇಶನ್ ಕಂಪನಿಗೆ ಬರೋಬ್ಬರಿ 9,000 ಕೋಟಿ ರೂಪಾಯಿ ದಂಡ ಪಾವತಿಸುವಂತೆ ನೋಟಿಸ್ ನೀಡಲಾಗಿದೆ ಅನ್ನೋ ವರದಿ ಭಾರಿ ಸಂಚಲನ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಬೈಜುಸ್ ಕಂಪನಿ ಸ್ಪಷ್ಟನೆ ನೀಡಿದೆ.
ಬೆಂಗಳೂರು(ನ.21) ಎಜುಕೇಶನ್ ಟೆಕ್ ಕಂಪನಿ ಬೈಜುಸ್ ಇದೀಗ ಇತರ ಕಾರಣಗಳಿಂದ ಭಾರಿ ಸುದ್ದಿಯಾಗುತ್ತಿದೆ. ವಿದ್ಯಾರ್ಥಿಗಳಿಗೆ ಸುಲಭವಾಗಿ ಪಠ್ಯಗಳನ್ನು ಡಿಜಿಟಲ್ ಮೂಲಕ ತಿಳಿಸುತ್ತಿದ್ದ ಬೈಜುಸ್ ಪ್ರಕರಣಗಳೇ ಪಠ್ಯವಾಗುತ್ತಿದೆ. ವಿದೇಶಿ ಹಣಕಾಸು ನೀತಿ ಉಲ್ಲಂಘಿಸಿದ ಬೈಜುಸ್ ಕಂಪನಿಗೆ ಬರೋಬ್ಬರಿ 9,000 ಕೋಟಿ ರೂಪಾಯಿ ಪಾವತಿಗೆ ಇಡಿ ನೋಟಿಸ್ ನೀಡಿದೆ ಅನ್ನೋ ವರದಿ ಭಾರಿ ಸಂಚಲನ ಸೃಷ್ಟಿಸಿದೆ. ಮಾಧ್ಯಮದಲ್ಲಿ ಈ ವರದಿಗಳು ಬರುತ್ತಿದ್ದಂತೆ ಬೈಜುಸ್ ಕಂಪನಿ ಸ್ಪಷ್ಟನೆ ನೀಡಿದೆ. ತನಿಖಾ ಸಂಸ್ಥೆಯಿಂದ ಈ ರೀತಿಯ ಯಾವುದೇ ನೋಟಿಸ್ ಕಂಪನಿ ಪಡೆದಿಲ್ಲ ಎಂದಿದೆ.
ಬೈಜುಸ್ ಕಂಪನಿ 2011ರಿಂದ 2023ರ ನಡುವೆ 28,000 ಕೋಟಿ ರೂಪಾಯಿ ವಿದೇಶಿ ನೇರ ಹೂಡಿಕೆ ಸ್ವೀಕರಿಸಿದೆ. ಈ ವೇಳೆ ವಿದೇಶಿ ಹೂಡಿಕೆ ಹೆಸರಿನಲ್ಲಿ 9,754 ಕೋಟಿ ರೂಪಾಯಿ ಹಣವನ್ನು ವಿದೇಶಗಳಿಗೆ ರವಾನಿಸಲಾಗಿದೆ. ವಿದೇಶಿ ಹಣಕಾಸು ಕಾಯ್ದೆ ಫೆಮಾ ಉಲ್ಲಂಘನೆ ಆರೋಪವನ್ನು ಇದೀಗ ಬೈಜುಸ್ ಎದುರಿಸುತ್ತಿದೆ. ವಿದೇಶಿ ಹೂಡಿಕೆ ಹಾಗೂ ವಿದೇಶಗಳ ಹಣ ರವಾನೆಯಲ್ಲಿ ನಿಯಮ ಉಲ್ಲಂಘನೆಯಾಗಿದೆ ಎಂದು ಇಡಿ ಮೂಲಗಳು ಹೇಳುತ್ತಿದೆ.
undefined
ಇಡಿ ನೋಟಿಸ್ ಕುರಿತು ಬೈಜುಸ್ ತನ್ನ ಎಕ್ಸ್ ಖಾತೆಯಲ್ಲಿ ಸ್ಪಷ್ಟನೆ ನೀಡಿದೆ. ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ದಂಡ ಪಾವತಿ ನೋಟಿಸ್ ಸತ್ಯಕ್ಕೆ ದೂರವಾಗಿದೆ. ಫೆಮಾ ಕಾಯ್ದೆ ಉಲ್ಲಂಘನೆ ಸುದ್ದಿಯನ್ನು ಬೈಜುಸ್ ಸಾರಾಸಗಟಾಗಿ ತಳ್ಳಿ ಹಾಕುತ್ತಿದೆ. ಅಧಿಕಾರಿಗಳಿಂದ, ತನಿಖಾ ಸಂಸ್ಥೆಗಳಿಂದ ಬೈಜುಸ್ ಈ ರೀತಿಯ ಯಾವುದೇ ನೋಟಿಸ್ ಪಡೆದಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಬೈಜು ರವೀಂದ್ರನ್ ಹಾಗೂ ಪತ್ನಿ ದಿವ್ಯ ಗೋಕುಲನಾಥ್ 2011ರಲ್ಲಿ ಆನ್‌ಲೈನ್ ಶಿಕ್ಷಣ ಆರಂಭಿಸಿದ್ದರು. ಬೈಜುಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ಮೂಲಕ ಆನ್‌ಲೈನ್ ಶಿಕ್ಷಣ ಆರಂಭಗೊಂಡಿತು. 2015ರಲ್ಲಿ ಬೈಜುಸ್ ಲರ್ನಿಂಗ್ ಆ್ಯಪ್ ಲಾಂಚ್ ಆಗಿತ್ತು. ಬಳಿಕ ಮ್ಯಾಥ್ ಆ್ಯಪ್ ಲಾಂಚ್ ಮಾಡಿತ್ತು. 2018ರಲ್ಲಿ ಬೈಜು 1.5 ಕೋಟಿ ಬಳಕೆದಾರರನ್ನು ಹೊಂದುವ ಮೂಲಕ ಅತೀ ದೊಡ್ಡ ಕಂಪನಿಯಾಗಿ ಮಾರ್ಪಟ್ಟಿತ್ತು.
ಇ.ಡಿ ದಾಳಿ, ಆರ್ಥಿಕ ಸಂಕಷ್ಟ, ದುಬೈನಲ್ಲಿ ಹೂಡಿಕೆದಾರರ ಮುಂದೆ ಕಣ್ಣೀರಿಟ್ಟ ಬೈಜೂಸ್ ರವೀಂದ್ರನ್!
ವಿದೇಶಗಳಲ್ಲಿನ ಲರ್ನಿಂಗ್ ಆ್ಯಪ್ ಖರೀದಿಸಿತ್ತು. ಟೀಂ ಇಂಡಿಯಾ ಜರ್ಸಿ ಪ್ರಯೋಜಕತ್ವ, ಫಿಫಾ ಫುಟ್ಬಾಲ್‌ನಲ್ಲಿ ಪ್ರಾಯೋಜಕತ್ವ ಸೇರಿದಂತೆ ಸಾವಿರಾರು ಕೋಟಿ ರೂಪಾಯಿ ಮಾರ್ಕೆಟಿಂಗ್‍ಗೆ ಮೀಸಲಿಟ್ಟಿತು. ಕೋವಿಡ್ ಸಂದರ್ಭದಲ್ಲಿ ಬೈಜುಸ್ ಒಂದೇ ಬಾರಿ ಆದಾಯದಲ್ಲಿ ನೆಗೆತ ಕಂಡಿತ್ತು. ಆದರೆ ಅಷ್ಟೇ ವೇಗದಲ್ಲಿ ನಷ್ಟದ ಹಾದಿ ಹಿಡಿಯಿತು. 2021ರ ವೇಳೆಗೆ ಬೈಜುಸ್ ಸಂಕಷ್ಟಕ್ಕೆ ಸಿಲುಕಿತು. ಬಳಿಕ ಒಂದರ ಮೇಲೊಂದರಂತೆ ಹೊಡೆತ ಅನುಭವಿಸುತ್ತಲೇ ಇದೆ.