ಮಾಸಿಕ 50 ಲಕ್ಷಕ್ಕಿಂತ ಹೆಚ್ಚು ವಹಿವಾಟಿಗೆ ಶೇ.1 ಜಿಎಸ್‌ಟಿ ನಗದು ಪಾವತಿ ಕಡ್ಡಾಯ!

By Kannadaprabha NewsFirst Published Dec 24, 2020, 8:22 AM IST
Highlights

ಮಾಸಿಕ 50 ಲಕ್ಷ ಕ್ಕಿಂತ ಹೆಚ್ಚು ವಹಿವಾಟಿಗೆ ಶೇ.1 ಜಿಎಸ್‌ಟಿ ನಗದು ಪಾವತಿ ಕಡ್ಡಾಯ| ನಕಲಿ ಬಿಲ್ಲಿಂಗ್‌ ವಂಚನೆ ತಪ್ಪಿಸಲು ಹೊಸ ಕ್ರಮ

ನವದೆಹಲಿ(ಡಿ.24): ತಿಂಗಳಿಗೆ 50 ಲಕ್ಷ ರು.ಗಿಂತ ಹೆಚ್ಚು ವಹಿವಾಟು ನಡೆಸುವ ಉದ್ದಿಮೆಗಳು ತಾವು ಪಾವತಿಸಬೇಕಾದ ಜಿಎಸ್‌ಟಿಯಲ್ಲಿ ಕನಿಷ್ಠ ಶೇ.1ರಷ್ಟುಹಣವನ್ನಾದರೂ ನಗದಿನಲ್ಲಿ ಪಾವತಿಸಬೇಕೆಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ನಕಲಿ ಬಿಲ್ಲಿಂಗ್‌ ಮಾಡಿ ತೆರಿಗೆ ವಂಚನೆ ಮಾಡುವುದನ್ನು ತಪ್ಪಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ.

ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಸುಂಕಗಳ ಮಂಡಳಿ (ಸಿಬಿಐಸಿ) ಈ ಉದ್ದೇಶಕ್ಕಾಗಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ನಿಯಮಾವಳಿಗೆ 86ಬಿ ಎಂಬ ಹೊಸ ನಿಯಮ ಸೇರಿಸಿದೆ. ಇದರಲ್ಲಿ ಜಿಎಸ್‌ಟಿ ಪಾವತಿಸಲು ಶೇ.99ರಷ್ಟುಮಾತ್ರ ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ ಬಳಕೆಗೆ ಅನುಮತಿಯಿದೆ. ಉದ್ಯಮಿಗಳು ತಮಗೆ ಲಭ್ಯವಿರುವ ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್ಟನ್ನೇ ಸಂಪೂರ್ಣ ಬಳಸಿಕೊಂಡು ಅದನ್ನೇ ಜಿಎಸ್‌ಟಿಯಾಗಿ ಪಾವತಿಸುವುದನ್ನು ತಪ್ಪಿಸಲು ಶೇ.1ರಷ್ಟಾದರೂ ಜಿಎಸ್‌ಟಿಯನ್ನು ನಗದಿನಲ್ಲಿ ಪಾವತಿಸಬೇಕು ಎಂದು ನಿಯಮ ತಿದ್ದುಪಡಿ ಮಾಡಲಾಗಿದೆ.

ಆದರೆ, ಕಂಪನಿಯ ಮಾಲಿಕರು 1 ಲಕ್ಷ ರು.ಗಿಂತ ಹೆಚ್ಚು ಆದಾಯ ತೆರಿಗೆ ಪಾವತಿಸಿದ್ದರೆ ಅಥವಾ 1 ಲಕ್ಷ ರು.ಗಿಂತ ಹೆಚ್ಚು ಆದಾಯ ತೆರಿಗೆ ರೀಫಂಡ್‌ ಪಡೆದಿದ್ದರೆ ಅವರಿಗೆ ಈ ನಿಯಮ ಅನ್ವಯಿಸುವುದಿಲ್ಲ.

click me!