Karnataka Budget: ಸ್ತ್ರೀಯರು, ಮಕ್ಕಳಿಗೆ ಬಂಪರ್‌ ಕೊಡುಗೆ ನೀಡಿದ ಬೊಮ್ಮಾಯಿ

By Kannadaprabha News  |  First Published Mar 5, 2022, 8:02 AM IST

*  ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವ ಧನ, ಇಡುಗಂಟು
*  ಮಹಿಳೆಯರ ಅಭಿವೃದ್ಧಿ, ಆರ್ಥಿಕ ಸ್ವಾವಲಂಬನೆಗೆ 43,188 ಕೋಟಿ ರು.
*  ಮಕ್ಕಳ ಭವಿಷ್ಯದ ಯೋಜನೆಗಾಗಿ 40,944 ಕೋಟಿ ರು. ಅನುದಾನ
 


ಬೆಂಗಳೂರು(ಮಾ.05):  ಮಹಿಳೆಯರ(Women) ಸಂರಕ್ಷಣೆ ಮತ್ತು ಆರ್ಥಿಕ ಸ್ವಾವಲಂಬನೆಗಾಗಿ ಬಜೆಟ್‌ನಲ್ಲಿ(Budget) 43,188 ಕೋಟಿ ರು. ಅನುದಾನ ನೀಡಲಾಗಿದೆ. ಹಾಗೆಯೇ ಮಕ್ಕಳ ಭವಿಷ್ಯದ ಯೋಜನೆಗಾಗಿ 40,944 ಕೋಟಿ ರು. ಅನುದಾನ ಒದಗಿಸಲಾಗಿದೆ. ಅಂಗನವಾಡಿ(Anganwadi) ಕಾರ್ಯಕರ್ತೆಯರ ಗೌರವಧನವನ್ನು ಸೇವೆಯ ಆಧಾರದ ಮೇಲೆ ಹೆಚ್ಚಿಸಲಾಗಿದೆ. 20 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದವರಿಗೆ 1,500 ರು., 10-20 ವರ್ಷ ಸೇವೆ ಸಲ್ಲಿಸಿದವರಿಗೆ 1,250 ರು. ಮತ್ತು 10ಕ್ಕಿಂತ ಕಡಿಮೆ ವರ್ಷ ಸೇವೆ ಸಲ್ಲಿಸಿದವರಿಗೆ 1 ಸಾವಿರ ರು.ಗಳನ್ನು ಹೆಚ್ಚಿಸಲಾಗಿದೆ. ಈ ಹಿಂದೆ ಎಲ್ಲ ಅಂಗನವಾಡಿ ಕಾರ್ಯಕರ್ತೆಯರಿಗೆ ಸಮಾನ ಗೌರವಧನವಾಗಿ 10 ಸಾವಿರ ರು. ನೀಡಲಾಗುತ್ತಿತ್ತು.

2015 ಮಾರ್ಚ್‌ 31ರಿಂದ ಸ್ಥಗಿತಗೊಂಡಿದ್ದ ಎನ್‌ಪಿಎಸ್‌ಲೈಟ್‌ (Pension) ಯೋಜನೆಯಿಂದ ವಂಚಿತರಾದ ಅಂಗನವಾಡಿ ಕಾರ್ಯಕರ್ತೆಯರಿಗೆ 50 ಸಾವಿರ ರು. ಮತ್ತು ಅಂಗನವಾಡಿ ಸಹಾಯಕಿಯರಿಗೆ 30 ಸಾವಿರ ರು. ಇಡುಗಂಟು ಪಾವತಿಸಲು ನಿರ್ಧರಿಸಲಾಗಿದೆ. ರಾಜ್ಯದ(Karnataka) 5 ತಾಲೂಕುಗಳಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆ ಸಹಯೋಗದಲ್ಲಿ ಶಿಶುಪಾಲನಾ ಕೇಂದ್ರಗಳನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ.

Tap to resize

Latest Videos

Karnataka Budget 2022-23: ವಿಜಯಪುರ ಜಿಲ್ಲೆಗೆ ಸಿಹಿ-ಕಹಿ ಉಣಬಡಿಸಿದ ಬೊಮ್ಮಾಯಿ ಬಜೆಟ್‌

ಸಂಕಷ್ಟದಲ್ಲಿರುವ 18 ವರ್ಷ ಪೂರ್ಣಗೊಂಡ ಹೆಣ್ಣುಮಕ್ಕಳ ವಿದ್ಯಾಭ್ಯಾಸ(Girls Education) ಮತ್ತು ವೃತ್ತಿಪರ ಕೌಶಲ್ಯ ತರಬೇತಿಗೆ ಸ್ವಯಂ ಸೇವಾ ಸಂಸ್ಥೆಗಳ ನೆರವಿನೊಂದಿಗೆ ಪ್ರಾಯೋಗಿಕವಾಗಿ ಆರು ಹೆಣ್ಣು ಮಕ್ಕಳ ಅನುಪಾಲನಾ ಗೃಹ ಪ್ರಾರಂಭಿಸಲು ತೀರ್ಮಾನಿಸಲಾಗಿದೆ. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮಂಗಳೂರು ಹಾಗೂ ಕಲಬುರಗಿ ನಗರಗಳಲ್ಲಿ ಉದ್ಯೋಗಸ್ಥ ಮಹಿಳೆಯರಿಗೆ ವಸತಿ ನಿಲಯ ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಪರಿಶಿಷ್ಟಜಾತಿ, ಪಂಗಡ ಮತ್ತು ಅಲ್ಪಸಂಖ್ಯಾತ ಮಹಿಳೆಯರಿಗೆ ಆದ್ಯತೆ ನೀಡಲು ಉದ್ದೇಶಿಸಲಾಗಿದೆ.

ಧಾರವಾಡದ ಕರ್ನಾಟಕ ಕ್ಯಾನ್ಸರ್‌ ಇನ್ಸ್‌ಸ್ಟಿಟ್ಯೂಟ್‌, ಬಸವನಗುಡಿಯ ಅಮೃತ ಶಿಶು ನಿವಾಸ ತಾಯಿ ಮತ್ತು ಮಕ್ಕಳ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ, ಬಸವ ಕಲ್ಯಾಣದಲ್ಲಿರುವ ಶ್ರೀ ನೀರಜಿ ಭುವ ವಿಶ್ವಸ್ಥ ನಿಧಿ ಹಾಗೂ ಮೈಸೂರಿನ ಶಕ್ತಿಧಾಮ ಸಂಸ್ಥೆಗಳಿಗೆ ವಿಶೇಷ ನೆರವು ನೀಡಿಕೆ, ಬಾಲ್ಯ ವಿವಾಹಗಳನ್ನು ತಡೆಗಟ್ಟಲು ಕೊಪ್ಪಳ ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವ ‘ಸ್ಫೂರ್ತಿ’ ಯೋಜನೆ ರಾಜ್ಯಾದ್ಯಂತ ವಿಸ್ತರಣೆ, ರಾಜ್ಯದಲ್ಲಿ 3 ಲಕ್ಷ ಹೆಣ್ಣು ಮಕ್ಕಳಿಗೆ ಸ್ವಯಂ-ರಕ್ಷಣೆ ತರಬೇತಿ ನೀಡಲು ಕ್ರಮ ಕೈಗೊಳ್ಳಲು ಉದ್ದೇಶಿಸಲಾಗಿದೆ.

ಪ್ರತಿ ಜಿಲ್ಲೆಯ ಎರಡು ತಾಲೂಕು ಕೇಂದ್ರಗಳಲ್ಲಿ ಹಾಗೂ ಅತಿ ಹೆಚ್ಚು ಮಹಿಳಾ ಕಾರ್ಮಿಕರ ಸಾಂದ್ರತೆ ಇರುವ ಪ್ರದೇಶಗಳಲ್ಲಿ ಶಿಶುಪಾಲನಾ ಕೇಂದ್ರಗಳನ್ನು ಸ್ಥಾಪಿಸಲು ಹಾಗೂ ಮಹಿಳಾ ನೇತೃತ್ವದ ನಿಗಮದ ವತಿಯಿಂದ 10 ಲಕ್ಷ ರು.ಗಳ ತನಕ ನೇರ ಸಾಲವನ್ನು ಒದಗಿಸಲು ಉದ್ದೇಶಿಸಲಾಗಿದೆ.

1 ಕೇಜಿ ಪಡಿತರ ಹೆಚ್ಚಳ: ರಾಗಿ/ಜೋಳ ವಿತರಣೆ

ಬೆಂಗಳೂರು: ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಡಿಯಲ್ಲಿ ರಾಜ್ಯದ 14 ಜಿಲ್ಲೆಗಳಲ್ಲಿ ಅಕ್ಕಿಯೊಂದಿಗೆ ಪೋಷಕಾಂಶಗಳಾದ ಕಬ್ಬಿಣ, ಫೋಲಿಕ್‌ ಆಮ್ಲ, ವಿಟಮಿನ್‌ ಬಿ-12 ಸೇರ್ಪಡೆಗೊಳಿಸಿದ ಸಾರವರ್ಧಿತ ಅಕ್ಕಿಯನ್ನು 93 ಕೋಟಿ ರು.ಗಳ ವೆಚ್ಚದಲ್ಲಿ ವಿತರಿಸಲಾಗುವುದು. ಪಡಿತರದಲ್ಲಿ ಐದು ಕೆ.ಜಿ. ಅಕ್ಕಿಯ ಜೊತೆಗೆ ಹೆಚ್ಚುವರಿ 1 ಕೆ.ಜಿ. ರಾಗಿ ಅಥವಾ ಜೋಳ ವಿತರಣೆಗೆ ನಿರ್ಧರಿಸಲಾಗಿದ್ದು, ಇದರಿಂದ 4.34 ಕೋಟಿ ಫಲಾನುಭವಿಗಳಿಗೆ ಅನುಕೂಲವಾಗಲಿದೆ.

Karnataka Budget: ಹಂಪಿಯ ಪ್ರವಾಸೋದ್ಯಮ ಕಡೆಗಣಿಸಿದ ಸಿಎಂ ಬೊಮ್ಮಾಯಿ

ಅಂಗನವಾಡಿ ಕಾರ್ಯಕರ್ತರಿಗೆ ನಿರಾಸೆ

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಒಟ್ಟು 339.48 ಕೋಟಿ ರು. ಪರಿಹಾರ ಕೇಳಿದ್ದೆವು. ಆದರೆ, ಬಜೆಟ್‌ನಲ್ಲಿ ಕೊಟ್ಟಿರುವುದು ನೂರು ಕೋಟಿ ರು. ಸಹ ಇಲ್ಲ. ಪಿಂಚಣಿ ಯೋಜನೆ ವಂಚಿತರಿಗೆ 1.50 ಲಕ್ಷ ರು. ಇಡುಗಂಟು ನೀಡುವಂತೆ ಒತ್ತಾಯಿಸಿದ್ದೆವು. ಆದರೆ, ಕೇವಲ 50 ಮತ್ತು 30 ಸಾವಿರ ಮಾತ್ರ ಇಡುಗಂಟು ಇಡುವುದಾಗಿ ಹೇಳಿದೆ. ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಣೆಗೆ ಮುಂಗಡವಾಗಿ ಮೊಟ್ಟೆಗಳನ್ನು ಕೊಡುವಂತೆ ಆಗ್ರಹಿಸಿದ್ದೆವು. ಆದರೆ ಬಜೆಟ್‌ನಲ್ಲಿ ಈ ಬಗ್ಗೆ ಪ್ರಸ್ತಾಪವನ್ನೇ ಮಾಡಿಲ್ಲ. ಇದರಿಂದಾಗಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರಿಗೆ ತೀವ್ರ ನಿರಾಸೆಯಾಗಿದೆ ಅಂತ  ಸಿಐಟಿಯ  ಮುಖಂಡರು ವರಲಕ್ಷ್ಮಿ ತಿಳಿಸಿದ್ದಾರೆ.

ಗೌರವ ಧನ ಯಾರಿಗೆ ಎಷ್ಟು?

20ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದವರಿಗೆ 1500 ರು.
10-20 ವರ್ಷ ಸೇವೆ ಸಲ್ಲಿಸಿದವರಿಗೆ 1250 ರು.
10ಕ್ಕಿಂತ ಕಡಿಮೆ ವರ್ಷ ಸೇವೆ ಸಲ್ಲಿಸಿದವರಿಗೆ 1000 ರು.
ಅಂಗನವಾಡಿ ಕಾರ್ಯಕರ್ತೆಯರಿಗೆ ಇಡುಗಂಟು 50000 ರು.
ಅಂಗನವಾಡಿ ಸಹಾಯಕಿಯರಿಗೆ ಇಡುಗಂಟು 30000 ರು.
 

click me!