ಹಳೆ ವಾಹನ ಗುಜರಿಗೆ: ಬಜೆಟ್‌ನಲ್ಲಿ ಕೇಂದ್ರದಿಂದ ಯೋಜನೆ ಘೋಷಣೆ?

By Kannadaprabha News  |  First Published Jan 13, 2021, 7:42 AM IST

ಹಳೆ ವಾಹನ ಗುಜರಿಗೆ: ಬಜೆಟ್‌ನಲ್ಲಿ ಕೇಂದ್ರದಿಂದ ಯೋಜನೆ ಘೋಷಣೆ?| ಮಾಲಿನ್ಯಕಾರಕ ವಾಹನಗಳನ್ನು ರಸ್ತೆಯಿಂದ ಹಿಂದಕ್ಕೆ ಪಡೆವ ಯೋಜನೆ| ವಾಹನೋದ್ಯಮ ಚೇತರಿಕೆ, ಹೊಸ ಉದ್ಯೋಗ ಸೃಷ್ಟಿಗೂ ನೆರವು


ನವದೆಹಲಿ(ನ.13) ಭಾರೀ ಪ್ರಮಾಣದ ಪರಿಸರ ಮಾಲಿನ್ಯ ಉಂಟು ಮಾಡುತ್ತಿರುವ ವಾಹನಗಳನ್ನು ಗುಜರಿಗೆ ಹಾಕಿ, ಅದರ ಬದಲು ಹೊಸ ವಾಹನ ಖರೀದಿರುವ ಮಾಲೀಕರಿಗೆ ಪ್ರೋತ್ಸಾಹಧನ ನೀಡುವ ಹೊಸ ಯೋಜನೆಯೊಂದನ್ನು ಕೇಂದ್ರ ಸರ್ಕಾರ ಮುಂಬರುವ ಬಜೆಟ್‌ನಲ್ಲಿ ಘೋಷಿಸುವ ಸಾಧ್ಯತೆ ಇದೆ.

ಇದರಿಂದಾಗಿ ಪರಿಸರ ಮಾಲಿನ್ಯ ಕಡಿಮೆಯಾಗುವುದರ ಜೊತೆಜೊತೆಗೆ, ಕೋವಿಡ್‌ನಿಂದಾಗಿ ಸಂಕಷ್ಟಕ್ಕೆ ಸಿಕ್ಕಿಹಾಕಿಕೊಂಡ ವಾಹನೋದ್ಯಮಕ್ಕೂ ಭರ್ಜರಿ ಚೇತರಿಕೆ ಸಿಗಲಿದ್ದು, ಲಕ್ಷಾಂತರ ಹೊಸ ಉದ್ಯೋಗ ಸೃಷ್ಟಿಯ ಆಶಾಭಾವನೆ ಸರ್ಕಾರಕ್ಕಿದೆ.

Tap to resize

Latest Videos

undefined

ಏನಿದು ಗುಜರಿ ಯೋಜನೆ?:

ಯಾವುದೇ ವಾಹನದ ಆಯುಷ್ಯ 15-20 ವರ್ಷ ಎಂಬುದು ಒಂದು ಲೆಕ್ಕಾಚಾರ. ನಂತರ ದಿನಗಳಲ್ಲಿ ಅಂಥ ವಾಹನಗಳ ಬಳಕೆ ನಾನಾ ರೀತಿಯಲ್ಲಿ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತದೆ. ಹೀಗಾಗಿ ಅಂಥ ವಾಹನಗಳನ್ನು ಬಳಕೆ ಮಾಡದಂತೆ ತಡೆಯುವುದು ಯೋಜನೆ ಉದ್ದೇಶ. ಸದ್ಯ ಭಾರತದಲ್ಲಿ ಇಂಥ 1 ಕೋಟಿ ವಾಹನಗಳಿವೆ ಎಂಬ ಅಂದಾಜಿದೆ.

ಜಾರಿ ಹೇಗೆ?:

ಹಳೆ ವಾಹನ ಮಾರಿದವರಿಗೆ ಸರ್ಕಾರ ಒಂದು ಪ್ರಮಾಣ ಪತ್ರ ನೀಡುತ್ತದೆ. ಅದನ್ನು ತೋರಿಸಿದರೆ ಹೊಸ ವಾಹನ ಖರೀದಿ ವೇಳೆ, ವಾಹನ ಕಂಪನಿ ಒಂದಿಷ್ಟುರಿಯಾಯಿತಿ ಸಿಗುತ್ತದೆ. ಜೊತೆಗೆ ರಸ್ತೆ ತೆರಿಗೆ ಮತ್ತು ನೋಂದಣಿ ಶುಲ್ಕದಲ್ಲಿ ಸರ್ಕಾರದಿಂದ ರಿಯಾಯಿತಿ ಸಿಗುತ್ತದೆ. ಒಂದು ವೇಳೆ ಹಳೆಯ ವಾಹನ ಮಾರಿದವರು, ಹೊಸ ವಾಹನ ಖರೀದಿಸಲು ಬಯಸದೇ ಇದ್ದರೆ, ಅವರು ತಮಗೆ ನೀಡಿದ ಪ್ರಮಾಣಪತ್ರವನ್ನು ಹೊಸ ವಾಹನ ಖರೀದಿಸಲು ಬಯಸುವ ವ್ಯಕ್ತಿಗಳಿಗೆ ಹಣಕ್ಕೆ ಮಾರಿಕೊಳ್ಳಬಹುದು.

6 ತಿಂಗಳಿಗೊಮ್ಮೆ ನೋಂದಣಿ:

ಯೋಜನೆ ಅನ್ವಯ 15 ವರ್ಷ ಮೀರಿದ ವಾಹನಗಳನ್ನು ಪ್ರತಿ 6 ತಿಂಗಳಿಗೊಮ್ಮೆ ಫಿಟ್‌ನೆಟ್‌ ಪರೀಕ್ಷೆಗೆ ಒಳಪಡಿಸಿ ಹೊಸದಾಗಿ ನೋಂದಣಿ ಮಾಡಬೇಕು. ಜೊತೆಗೆ ಮೂರು ಬಾರಿ ಪರೀಕ್ಷೆಯಲ್ಲಿ ವಿಫಲವಾದರೆ ಅಂಥ ವಾಹನಗಳನ್ನು ನೇರವಾಗಿ ಗುಜರಿಗೆ ಹಾಕಬೇಕು. ಜೊತೆಗೆ ಮರುನೋಂದಣಿ ಶುಲ್ಕವನ್ನು ಭಾರೀ ಪ್ರಮಾಣದಲ್ಲಿ ಏರಿಸಲಾಗುವುದು. ಈ ಮೂಲಕ, ಅವುಗಳ ನಿರ್ವಹಣೆಯನ್ನು ಆರ್ಥಿಕವಾಗಿ ಭಾರೀ ಹೊರೆಯನ್ನಾಗಿ ಮಾಡಿ, ಪರೋಕ್ಷವಾಗಿ ಜನರು ಹೊಸ ವಾಹನ ಖರೀದಿ ಮಾಡುವಂತೆ ಮಾಡುವ ಅಂಶಗಳು ಸರ್ಕಾರದ ಈ ಹಿಂದಿನ ಕರಡು ವರದಿಯಲ್ಲಿತ್ತು.

ಲಾಭ ಏನು?:

ಹಳೆಯ ವಾಹನಗಳಿಗೆ ಆಗುವ ಪರಿಸರ ಮಾಲಿನ್ಯ ತಪ್ಪುತ್ತದೆ. 1 ಕೋಟಿ ಹಳೆಯ ವಾಹನ ಗುಜರಿಗೆ ಹಾಕಿದರೆ, ಅದರ ನಿರ್ವಹಣೆ ಒಂದು ಹೊಸ ಉದ್ಯಮವಾಗಿ ತಲೆ ಎತ್ತಲಿದೆ. ಲಕ್ಷಾಂತರ ಹೊಸ ಉದ್ಯೋಗ ಸೃಷ್ಟಿ. ಹೊಸ ವಾಹನ ಖರೀದಿಯಿಂದ ವಾಹನೋದ್ಯಮಕ್ಕೆ ಚೇತರಿಕೆ. ಲಕ್ಷಾಂತರ ಹೊಸ ಉದ್ಯೋಗ ಸೃಷ್ಟಿ. ಸರ್ಕಾರಕ್ಕೆ ತೆರಿಗೆ ಮೂಲಕ ಆದಾಯ ಹೆಚ್ಚಳ.

click me!