ಶ್ರೀಮಂತರ ಮೇಲೆ ಕೋವಿಡ್‌ ಸೆಸ್‌?: ಪೆಟ್ರೋಲ್‌ ಮೇಲೆ ಹೆಚ್ಚುವರಿ ಸುಂಕ?

By Suvarna NewsFirst Published Jan 12, 2021, 9:31 AM IST
Highlights

ಶ್ರೀಮಂತರ ಮೇಲೆ ಕೋವಿಡ್‌ ಸೆಸ್‌?| ಪೆಟ್ರೋಲ್‌ ಮೇಲೆ ಹೆಚ್ಚುವರಿ ಸುಂಕ?| ಆರ್ಥಿಕ ನಷ್ಟಭರಿಸಲು ಕೇಂದ್ರದಿಂದ ಹೊಸ ಪ್ರಸ್ತಾಪ| ಶೀಘ್ರ ಹೊಸ ಪ್ರಸ್ತಾವ ಕುರಿತು ಘೋಷಣೆ ಸಾಧ್ಯತೆ

ನವದೆಹಲಿ(ಜ.12): ಕೋವಿಡ್‌ ನೀಡಿರುವ ಆರ್ಥಿಕ ಶಾಕ್‌ನಿಂದ ಚೇತರಿಸಿಕೊಳ್ಳಲು ಹೆಣಗಾಡುತ್ತಿರುವ ಕೇಂದ್ರ ಸರ್ಕಾರ, ಈ ಸಮಸ್ಯೆಯಿಂದ ಹೊರಬರಲು, ಭಾರೀ ಶ್ರೀಮಂತರ ಮೇಲೆ ಕೋವಿಡ್‌ ಸೆಸ್‌ ಮತ್ತು ಪೆಟ್ರೋಲ್‌, ಡೀಸೆಲ್‌ ಮೇಲೆ ಹೆಚ್ಚುವರಿ ಲೆವಿ ವಿಧಿಸುವ ಮೂಲಕ ಶಾಕ್‌ ಅನ್ನು ವರ್ಗಾಯಿಸಲು ಮುಂದಾಗಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ ಫೆ.1ರಂದು ಮಂಡನೆಯಾಗಲಿರುವ ಕೇಂದ್ರ ಬಜೆಟ್‌ಗಿಂತ ಕೆಲ ದಿನಗಳ ಮೊದಲು ಇಂಥದ್ದೊಂದು ನಿರ್ಧಾರವನ್ನು ಸರ್ಕಾರ ಪ್ರಕಟಿಸುವ ಸಾಧ್ಯತೆ ಇದೆ.

ಕೋವಿಡ್‌ನಿಂದಾಗಿ ಆರ್ಥಿಕತೆಗೆ ಬಿದ್ದ ಪೆಟ್ಟು, ತೆರಿಗೆ ಸಂಗ್ರಹ ಮೇಲೆ ಭಾರೀ ಪರಿಣಾಮ ಉಂಟು ಮಾಡಿದೆ. ಇದರಿಂದಾಗಿ ರಾಜ್ಯಗಳು ವಿವಿಧ ಯೋಜನೆಗಳಿಗೆ ಹಣ ಹೊಂದಿಸಲಾಗದೇ ಸಂಕಷ್ಟದಲ್ಲಿವೆ. ಇಂಥ ಹಂತದಲ್ಲಿ ಇದೀಗ ಲಸಿಕೆ ವಿತರಣೆ ಆರಂಭವಾಗಿದೆ. ಕೇಂದ್ರ ಸರ್ಕಾರ ಮೊದಲ ಹಂತದ 3 ಕೋಟಿ ಜನರ ಲಸಿಕೆ ವೆಚ್ಚವನ್ನು ಮಾತ್ರ ತಾನು ಭರಿಸುವುದಾಗಿ ಹೇಳುವ ಮೂಲಕ ರಾಜ್ಯಗಳಿಗೆ ಈಗಾಗಲೇ ಶಾಕ್‌ ನೀಡಿದೆ. ಹೀಗಿರುವಾಗ ದೇಶದ ಕನಿಷ್ಠ 80 ಜನರಿಗೆ ಲಸಿಕೆ ವಿತರಣೆ ದೊಡ್ಡ ಸವಾಲು ಕೇಂದ್ರ ಮತ್ತು ರಾಜ್ಯಗಳ ಮುಂದಿದೆ.

ಮೊದಲ ಹಂತದಲ್ಲಿ 30 ಕೋಟಿ ಜನರಿಗೆ ಲಸಿಕೆ ವಿತರಿಸಲು 21000- 27000 ಕೋಟಿ ರು. ಮತ್ತು 2ನೇ ಹಂತದಲ್ಲಿ 50 ಕೋಟಿ ಜನರಿಗೆ ಲಸಿಕೆ ವಿತರಿಸಲು 35000- 45000 ಕೋಟಿ ರು. ಬೇಕಾಗಬಹುದು ಎಂಬ ಅಂದಾಜಿದೆ. ಈಗಾಗಲೇ ಇರುವ ಆರ್ಥಿಕ ಸಮಸ್ಯೆ ಜೊತೆ ಹೊಸ ಆರ್ಥಿಕ ಹೊರೆ ಹೊತ್ತುಕೊಳ್ಳುವ ಹಂತದಲ್ಲಿ ಕೇಂದ್ರ ಅಥವಾ ರಾಜ್ಯ ಸರ್ಕಾರಗಳಿಲ್ಲ. ಹೀಗಾಗಿ ಆದಾಯ ಸಂಗ್ರಹಕ್ಕೆ ಹೊಸ ಹೊಸ ಮಾರ್ಗ ಹುಡುಕುತ್ತಿರುವ ಕೇಂದ್ರ ಸರ್ಕಾರ, ಭಾರೀ ಶ್ರೀಮಂತರ ಮೇಲೆ ಕೋವಿಡ್‌ ಸೆಸ್‌ ಹಾಕುವ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ. ಇದರ ಜೊತೆಗೆ ಪೆಟ್ರೋಲ್‌ ಮತ್ತು ಡೀಸೆಲ್‌ಗೆ ವಿಧಿಸುವ ಅಬಕಾರಿ ಸುಂಕದ ಮೇಲೆ ಲೆವಿ ವಿಧಿಸುವ ಪ್ರಸ್ತಾಪವನ್ನೂ ಸಿದ್ಧಪಡಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ನೇರ ಕೇಂದ್ರಕ್ಕೆ ಹಣ:

ಸೆಸ್‌ ಮತ್ತು ಲೆವಿ ರೂಪದಲ್ಲಿ ಕೇಂದ್ರ ಸರ್ಕಾರ ಸಂಗ್ರಹಿಸುವ ಹಣ ನೇರವಾಗಿ ಕೇಂದ್ರದ ಬೊಕ್ಕಸಕ್ಕೆ ಸೇರುತ್ತದೆ. ಅದನ್ನು ರಾಜ್ಯಗಳ ಜೊತೆಗೆ ಹಂಚಿಕೊಳ್ಳುವುದು ಕಡ್ಡಾಯವಲ್ಲ. ಹೀಗಾಗಿ ಆದಾಯ ಸಂಗ್ರಹ ಅಗತ್ಯವಾದಾಗಲೆಲ್ಲಾ ಸರ್ಕಾರ ಸೆಸ್‌ ಮತ್ತು ಲೆವಿಯ ಮೊರೆ ಹೋಗುತ್ತದೆ. ಒಂದು ವೇಳೆ ಹಣ ಸಂಗ್ರಹಕ್ಕಾಗಿ ರಾಜ್ಯಗಳು ಇದೇ ಕ್ರಮಕ್ಕೆ ಮುಂದಾದಲ್ಲಿ ಗ್ರಾಹಕರು ಇನ್ನಷ್ಟುಹೊರೆ ಹೊರಬೇಕಾಗಿ ಬರುವ ಸಾಧ್ಯತೆ ಇದೆ.

ಸೂಪರ್‌ ರಿಚ್‌ ಎಂದರೆ ಯಾರು?

ಕನಿಷ್ಠ 30 ದಶಲಕ್ಷ ಡಾಲರ್‌ (225 ಕೋಟಿ ರು.) ಆಸ್ತಿ ಹೊಂದಿರುವವರನ್ನು ಭಾರೀ ಶ್ರೀಮಂತರೆಂದು ಪರಿಗಣಿಸಲಾಗುತ್ತದೆ.

ಭಾರತದಲ್ಲಿ 10350 ಭಾರೀ ಶ್ರೀಮಂತರು

2019ರ ವರದಿಯೊಂದರ ಪ್ರಕಾರದಲ್ಲಿ 10354 ಭಾರೀ ಶ್ರೀಮಂತರಿದ್ದಾರೆ. 2014ಕ್ಕೆ ಹೋಲಿಸಿದರೆ ಇಂಥ ಶ್ರೀಮಂತರ ಪ್ರಮಾಣ ದ್ವಿಗುಣಗೊಂಡಿದೆ.

click me!