
ನವದೆಹಲಿ(ಜ.11): ಕೊರೋನಾ ಎಂಟ್ರಿಯಿಂದ ಇಡೀ ವಿಶ್ವಾದ್ಯಂತ ಅನೇಕ ಬದಲಾವಣೆಗಳಾಗಿವೆ. ಜನ ಸಾಮಾನ್ಯರ ಬದುಕಿನ ಮೇಲೂ ಇದು ಬಹಳಷ್ಟು ಪರಿಣಾಮ ಬೀರಿದೆ. ಸದ್ಯ ಈ ಕೊರೋನಾ ಗ್ರಹಣ ಈ ಬಾರಿಯ ಬಜೆಟ್ ಮೇಲೂ ಬೀರುವ ಲಕ್ಷಣಗಳು ಗೋಚರಿಸಿವೆ. 73 ವರ್ಷದ ಇತಿಹಾಸದಲ್ಲಿ ಇದೇ ಮೊದಲ ಬಾರಿ 2021-22 ಬಜೆಟ್ ಡಾಕ್ಯುಮೆಂಟ್‌ಗಳನ್ನು ಪ್ರಿಂಟ್ ಮಾಡುವುದಿಲ್ಲ. ಹೀಗಾಗಿ ಈ ಬಾರಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಾಫ್ಟ್ ಕಾಪಿ ಮೂಲಕವೇ ಬಜೆಟ್ ಭಾಷಣ ಮಾಡಲಿದ್ದಾರೆ.
ಕೊರೋನಾ ಸೋಂಕಿನ ಭಯದಿಂದಾಗಿಇದೇ ಮೊದಲ ಬಾರಿ ಬಜೆಟ್ ಪ್ರತಿ ಮುದ್ರಿಸಲ್ಲ. ಇದಕ್ಕಾಗಿ ಸರ್ಕಾರ ಸಂಸತ್ತಿನ ಎರಡೂ ಸದನಗಳ ಅನುಮತಿ ಪಡೆದಿದೆ. ಸಂಸತ್ ಸದಸ್ಯರಿಗೂ ಈ ಬಾರಿ ಬಜೆಟ್‌ನ ಸಾಫ್ಟ್ ಕಾಪಿ ನೀಡಲಾಗುತ್ತದೆ.
ಸಂಸತ್ತಿನ ಹೊರಗೆ ಕಾಣಿಸಿಕೊಳ್ಳಲ್ಲ ಬಜೆಟ್ ಪ್ರತಿಯ ಟ್ರಕ್
ಈ ಬಾರಿ ಸಂಸತ್ತಿನ ಆವರಣದಲ್ಲಿ ಬಜೆಟ್ ಪ್ರತಿಗಳನ್ನು ಹೊತ್ತ ಟ್ರಕ್‌ಗಳೂ ಕಾಣ ಸಿಗುವುದಿಲ್ಲ. ಕೇಂದ್ರ ಸರ್ಕಾರದ ಬಜೆಟ್ ಪ್ರತಿಗಳ ಮುದ್ರಣ ಹಣಕಾಸು ಸಚಿವಾಲಯದ ಪ್ರಿಂಟಿಂಗ್ ಪ್ರೆಸ್‌ನಲ್ಲಾಗುತ್ತದೆ. ಇದಕ್ಕಾಗಿ ಸುಮಾರು ನೂರು ಮಂದಿ ಸುಮಾರು ಎರಡು ವಾರ ಒಂದೇ ಸ್ಥಳದಲ್ಲಿ ಇರಬೇಕಾಗುತ್ತದೆ. ಆದರೆ ಕೊರೋನಾ ಮಹಾಮಾರಿಯಿಂದಾಗಿ ಇಷ್ಟು ಮಂದಿಯನ್ನು ದೀರ್ಘ ಕಾಲ ಒಟ್ಟಾಗಿಡುವುದು ಅಪಾಯವನ್ನು ಆಹ್ವಾನಿಸಿದಂತೆ. ಇದರಿಂದ ಕೊರೋನಾ ಸೋಂಕು ತಗುಲುವ ಸಾಧ್ಯತೆಗಳಿವೆ. ಹೀಗಾಗಿ ಸಂಸತ್ ಸದಸ್ಯರನ್ನೂ ಸಾಫ್ಟ್ ಕಾಪಿ ಪಡೆಯಲು ಓಲೈಸಲಾಗಿದೆ.
ಬಜೆಟ್ ಮುದ್ರಣಕ್ಕೂ ಮೊದಲು ಹಲ್ವಾ ತಯಾರಾಗುತ್ತೆ
ಸ್ವತಂತ್ರ ಭಾರತದ ಮೊದಲ ಕೇಂದ್ರ ಬಜೆಟ್ 26 ನವೆಂಬರ್ 1947ರಲ್ಲಿ ಮಂಡಿಸಲಾಗುತ್ತು. ಅಂದಿನಿಂದ ಇದರ ಪ್ರತಿಗಳು ಪ್ರತಿ ವರ್ಷ ಮುದ್ರಿಸಲಾಗುತ್ತದೆ. ಹಣಕಾಸು ಸಚಿವಾಲಯ ಈ ಡಾಕ್ಯುಮೆಂಟ್‌ಗಳನ್ನು ಮುದ್ರಿಸುವುದಕ್ಕೂ ಮುನ್ನ ಹಲ್ವಾ ಸೆರೆಮನಿ ಆಯೋಜಿಸುತ್ತದೆ. ಆದರೆ ಈ ಬಾರಿ ಈ ಸಂಪ್ರದಾಯಕ್ಕೂ ಬ್ರೇಕ್ ಹಾಕಲಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.