
ನವದೆಹಲಿ (ಜು.05): ಬಜೆಟ್ ಎಂದರೆ ನೆನಪಾಗುತ್ತಿದ್ದ ಕಂದು ಬಣ್ಣದ ಸೂಟ್‌ಕೇಸ್‌ಗೆ ವಿತ್ತೆ ಸಚಿವೆ ನಿರ್ಮಲಾ ಸೀತರಾಮನ್ ಗುಡ್ ಬೈ ಹೇಳಿದ್ದು, ಕೆಂಪು ರೇಷ್ಮೆ ಬಟ್ಟೆಯಲ್ಲಿ ಬಜೆಟ್ ಪ್ರತಿಗಳನ್ನು ತಂದಿದ್ದಾರೆ. ಆ ಮೂಲಕ ಪಾಶ್ಚಾತ್ಯ ಸಂಸ್ಕೃತಿಗೆ ಮೋದಿ ಸರಕಾರ ನಮಸ್ಕಾರ ಹೇಳಿದಂತೆ ಭಾಸವಾಗುತ್ತಿದೆ.
ಕೆಂಪು ರೇಷ್ಮೆ ವಸ್ತ್ರದಲ್ಲಿ ಹಿಂದೆ ಗ್ರಾಮ ಲೆಕ್ಕಿಗರು ಬಳಸುತ್ತಿದ್ದ ಬಾಹಿ ಖಾತಾ (ಲೆಡ್ಜರ್)ದಂತೆ ಕಾಣಿಸುತ್ತಿದ್ದು, ದೇಸಿ ಸಂಸ್ಕೃತಿಯ ಪ್ರತೀಕವಾಗಿದೆ. ಗುಲಾಮಗಿರಿಯ ಪ್ರತೀಕವಾದ ಬ್ರೀಫ್‌ಕೇಸ್‌ಗೆ ಆ ಮೂಲಕ ತಿಲಾಂಜಲಿ ಇಡಲಾಗಿದೆ. ನಿರ್ಮಲಾ ಆಯವ್ಯಪ ಪ್ರತಿ ತಂದಿರುವ ಕೆಂಪು ಬಟ್ಟೆಯ ಮೇಲೆ ರಾಷ್ಟ್ರ ಲಾಂಛನವೂ ಇದೆ. ಭಾರತದ ಸಂಸ್ಕೃತಿ ಬಜೆಟ್‌ನಲ್ಲೂ ರಾರಾಜಿಸುವಂತೆ ಮೋದಿ ಸರಕಾರ ಮಾಡಿದಂತಾಗಿದೆ. ಇದು ಬಜೆಟ್ ಅಲ್ಲ ಬಾಹಿ ಖಾತಾ ಎಂದೇ ಹೇಳಲಾಗುತ್ತಿದೆ.
ಈ ಹಿಂದೆ ರೈಲ್ವೆ ಬಜೆಟ್ ಹಾಗೂ ಸಾಮಾನ್ಯ ಬಜೆಟ್ ಬೇರೆ ಬೇರೆ ದಿನದಲ್ಲಿ ಮಂಡನೆಯಾಗುತ್ತಿತ್ತು. ಆ ಸಂಪ್ರದಾಯಕ್ಕೂ ಗುಡ್ ಬೈ ಹೇಳಿದ ಹಿಂದಿನ ಮೋದಿ ಸರಕಾರ, ರೈಲ್ವೆ ಹಾಗೂ ಸಾಮಾನ್ಯ ಬಜೆಟ್ ಒಂದೇ ದಿನ ಮಂಡಿಸಲು ಆರಂಭಿಸಿತು.
ಇಂದು ದೇಶದ ಮೊಟ್ಟ ಮೊದಲ ಪೂರ್ಣಾವಧಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಚೊಚ್ಚಲ ಬಜೆಟ್ ಮಂಡಿಸಲಿದ್ದಾರೆ. ಇದುವರೆಗೆ ನಮ್ಮ ದೇಶದಲ್ಲಿ ಇಂದಿರಾ ಗಾಂಧಿ ಒಬ್ಬರೇ ಕೇಂದ್ರ ಸರ್ಕಾರದ ಬಜೆಟ್ ಮಂಡಿಸಿದ ಮಹಿಳೆ. ಉದ್ಯೋಗ ಸೃಷ್ಟಿಸಲು ಹಲವು ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದ್ದು, ಈ ನಿಟ್ಟಿನಲ್ಲಿ ಹೊಸ ವಿತ್ತ ಸಚಿವೆ ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆಂಬುದನ್ನು ಕಾದು ನೋಡಬೇಕಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.